ಮಾಜಿ ಸಿಎಂ ಕುಮಾರಸ್ವಾಮಿ ಕಳೆದ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಉನ್ನತ ಶಿಕ್ಷಣ ಸಚಿವರೇ ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಬೆಂಗಳೂರಿನ BMS ಟ್ರಸ್ಟ್ ಸಾರ್ವಜನಿಕರ ಸ್ವತ್ತಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗ್ತಿದೆ. ಇದು ಅಕ್ಷಮ್ಯ ಅಪರಾಧ. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಈ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ನಾನು ಸಾರ್ವಜನಿಕರ ಹಿತದೃಷ್ಟಿಯಿಂದ ಅರ್ಜಿಯನ್ನು ತಿರಸ್ಕಾರ ಮಾಡಿದ್ದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, 1957 ಶ್ರೀನಿವಾಸಯ್ಯ, ನಾರಾಯಣ್ ಎಂಬುವರು ನೋಂದಾಯಿಸಿದ್ದ ಟ್ರಸ್ಟ್ ಅನ್ನು ಖಾಸಗಿಯವರ ಪಾಲಾಗುವಂತೆ ಮಾಡಿದ್ದಾರೆ. ಇದರಲ್ಲಿ ಅಶ್ವತ್ಥ ನಾರಾಯಣ ಕಿಕ್ಬ್ಯಾಕ್ ಕೂಡ ಪಡೆದಿದ್ದಾರೆ. ನನಗೂ ಹಣದ ಆಮೀಷ ಒಡ್ಡಲಾಗಿತ್ತು. ನಾನು ಖಡಾಖಂಡಿತವಾಗಿ ನಿರಾಕರಿಸಿದ್ದೆ. ಅಶ್ವತ್ಥನಾರಾಯಣ್ ಅವರಿಗೆ ಎಷ್ಟು ಬಂದಿದೆ ಅಂತಾನೂ ನಾನು ಹೇಳಬಲ್ಲೆ ಎಂದಿದ್ದರು. ಆ ಬಳಿಕ ಅಶ್ವತ್ಥ ನಾರಾಯಣ ಜೆಡಿಎಸ್ ಬಗ್ಗೆ ಟೀಕೆ ಮಾಡಿದ್ರು ಅನ್ನೋ ಕಾರಣಕ್ಕೆ ಬಿಎಂಎಸ್ ಟ್ರಸ್ಟ್ನ ಟ್ರಸ್ಟಿ ನಿವಾಸದಲ್ಲಿ ಬೆಳ್ಳಿ ತಟ್ಟೆಯಲ್ಲಿ ಕುಟುಂಬ ಸಮೇತ ಊಟ ಮಾಡುವ ಫೋಟೋ ಬಿಡುಗಡೆ ಮಾಡಿದ್ದರು. ಇದೀಗ ಪ್ರಧಾನಿಗೇ ಪತ್ರ ಪರೆದಿದ್ದಾರೆ.
ದಾಖಲೆ ಸಮೇತ ಪ್ರಧಾನಿಗೆ ಕುಮಾರಸ್ವಾಮಿ ಪತ್ರ..!

ಬಿಎಂಎಸ್ ಶಿಕ್ಷಣ ಸಂಸ್ಥೆಯನ್ನು ಅಕ್ರಮವಾಗಿ ಖಾಸಗಿಯವರ ಪಾಲಾಗುವಂತೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ದಾಖಲೆ ಸಮೇತ 7 ಪುಟಗಳ ಪತ್ರ ಬರೆದಿದ್ದಾರೆ. ಜನರಿಗೋಸ್ಕರ BMS ಟ್ರಸ್ಟ್ ಹೆಸರಲ್ಲಿ ಕಾಲೇಜುಗಳ ಸ್ಥಾಪನೆ ಮಾಡಲಾಗಿತ್ತು. ಇದು ಸ್ವಂತ ಲಾಭಕ್ಕಾಗಿ ಅಥವಾ ಕುಟುಂಬದ ಹಿತಕ್ಕಾಗಿ ಟ್ರಸ್ಟ್ ಮಾಡಿಲ್ಲ. 1968ರಿಂದ ಸರ್ಕಾರಗಳು ಟ್ರಸ್ಟ್ಗೆ ₹100 ಕೋಟಿ ಅನುದಾನ ಕೊಟ್ಟಿವೆ. ಈಗ BMS ಟ್ರಸ್ಟ್ನ ಒಟ್ಟು ಆಸ್ತಿ ಬೆಲೆ 10 ಸಾವಿರ ಕೋಟಿಯಷ್ಟಿದೆ. ವಂಶಸ್ಥರು ನಡೆಸಬೇಕು, ಇಲ್ಲದಿದ್ರೆ ಸರ್ಕಾರಕ್ಕೆ ಸೇರಬೇಕು. ಆದರೆ ಟ್ರಸ್ಟ್ ಡೀಡ್ ತಿದ್ದುಪಡಿಗೆ BMS ಟ್ರಸ್ಟ್ನವರು ನನ್ನ ಬಳಿಗೆ ಬಂದಿದ್ರು. 2018ರಲ್ಲಿ ನಾನು ಸಿಎಂ ಆಗಿದ್ದಾಗ ತಿರಸ್ಕರಿಸಿದ್ದೆ. ಆದರೆ ದಯಾನಂದ ಪೈ ಕುಟುಂಬಕ್ಕೆ 2021ರಲ್ಲಿ ಖಾತೆ ಮಾಡಿಕೊಡಲಾಗಿದೆ. ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿ ಅನುಮೋದನೆ ಕೊಟ್ಟಿದ್ದು, ಸಚಿವ ಡಾ.ಅಶ್ವತ್ಥ ನಾರಾಯಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿ ಭಾಗಿಯಾಗಿದ್ದಾರೆ. ಸಾರ್ವಜನಿಕ ಸ್ವತ್ತು ಖಾಸಗಿ ಪಾಲಾಗುವುದನ್ನು ನೀವು ತಪ್ಪಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಯ ನಿಮ್ಮ ಬದ್ಧತೆ ಪ್ರದರ್ಶಿಸುತ್ತೀರಿ ಎಂದು ನಂಬಿದ್ದೇನೆ ಎಂದು ಪತ್ರ ಬರೆದಿದ್ದಾರೆ.
ಟ್ರಸ್ಟ್ ಖಾಸಗಿ ಪಾಲಾಗುವ ಹಿಂದೆ ಬಿ.ಎಲ್ ಸಂತೋಷ್..!
ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ BMS ಸಂಸ್ಥೆಯವರ ಜೊತೆ ಸಚಿವ ಅಶ್ವತ್ಥ ನಾರಾಯಣ, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಲ್ ಸಂತೋಷ್ ಸೇರಿದಂತೆ ಪ್ರಮುಖ ನಾಯಕರು ಉಭಯ ಕುಶಲೋಪರಿ ವಿಚಾರ ಮಾಡುತ್ತಿರುವ ಫೋಟೋಗಳನ್ನೂ ಹಾಕಿ ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದರು. ಕುಮಾರಸ್ವಾಮಿ ಆರೋಪಕ್ಕೆ ಟ್ವಿಟ್ಟರ್ನಲ್ಲೇ ಉತ್ತರಿಸಿದ ಬಿಜೆಪಿ ವಿಕ್ಸ್ ಹಚ್ಚಿಕೊಂಡು ಕಣ್ಣೀರು ಸುರಿಸುವ ಕುಮಾರಸ್ವಾಮಿಗೆ ಫೋಟೋ ಇಟ್ಟುಕೊಂಡು ಕಥೆ ಕಟ್ಟುವುದು ದೊಡ್ಡ ಕೆಲಸವಲ್ಲ. ಈ ಕಥೆಯಲ್ಲಿ ಕುಮಾರಸ್ವಾಮಿ ಫೋಟೋ ಮಿಸ್ ಆಗಿದ್ದು ಹೇಗೆ ಅಂತ ಹಳೇ ಫೋಟೋ ಹಾಕಿ ಪ್ರಶ್ನೆ ಎತ್ತಿದೆ. ಕುಮಾರಸ್ವಾಮಿ ಮಾತ್ರವಲ್ಲದೆ ದೇವೇಗೌಡರನ್ನು ಭೇಟಿ ಮಾಡಿರುವ ಫೋಟೋ ಕೂಡ ಬಿಡುಗಡೆ ಮಾಡಲಾಗಿದೆ. ಇಷ್ಟೆಲ್ಲಾ ರಂಪಾಟದ ನಡುವೆ ವಿಧಾನಸಭಾ ಕಲಾಪದಲ್ಲಿ ಬಿಎಂಎಸ್ ವಿಧೇಯಕ ಮಂಡನೆಯಾಗಿದೆ.

ವಿಧಾನಸಭೆಯಲ್ಲಿ ಬಿಎಂಎಸ್ ವಿವಿ ವಿಧೇಯಕ ಪಾಸ್..!
ಬಿಎಂಎಸ್ ಖಾಸಗಿ ವಿವಿ ವಿಧೇಯಕ ಬಿಲ್ ಮಂಡಿಸಿದ್ದಾರೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್. ವಿಧೇಯಕ ಅಂಗೀಕಾರಕ್ಕೂ ಮನವಿ ಮಾಡಿದ್ದಾರೆ. ಆದರೆ ಈ ವಿಧೇಯಕ ಅಂಗೀಕಾರ ಮಾಡದಂತೆ ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪುರ್ ಮನವಿ ಮಾಡಿದ್ದಾರೆ. ಈ ಟ್ರಸ್ಟ್ ಬಗ್ಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇದು ಬೇನಾಮಿ ಮತ್ತು ಅಕ್ರಮ ಟ್ರಸ್ಟ್ ಆಗಿದೆ. ಹಾಗಾಗಿ ಇದನ್ನ ಜಾರಿಗೆ ತರಲು ಬಿಡಬೇಡಿ ಅಂತ ಮನವಿ ಮಾಡಿದ್ದಾರೆ ಜೆಡಿಎಸ್ ಶಾಸಕರು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ನಾನು ಇಲ್ಲಿ ಪರ ವಿರೋಧ ಇಲ್ಲ. ಟ್ರಸ್ಟ್ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಟ್ರಸ್ಟ್ ಯಾರದ್ದು ಅಂತ ನಿರ್ಧಾರ ಆದ ಮೇಲೆ ವಿವಿ ಯಾರಿಗೆ ಸೇರಬೇಕು ಅನ್ನೋದು ನಿರ್ಧಾರ ಆಗಲಿದೆ. ಆ ವಿವಾದಕ್ಕೂ, ಇದಕ್ಕೂ ಸಂಬಂಧ ಇಲ್ಲ. 20 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಯೂನಿವರ್ಸಿಟಿ ಆಗಿ ಮಾನ್ಯತೆ ಕೊಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು. ಈ ಟ್ರಸ್ಟ್ ವಿವಾಧದಲ್ಲಿದೆ ಇದಕ್ಕೆ ಅವಕಾಶ ನೀಡಬಾರದು ಅಂತ ಜೆಡಿಎಸ್ ಶಾಸಕರ ಆಗ್ರಹ ಮಾಡಿದ್ರು. ಜೆಡಿಎಸ್ ವಿರೋಧದ ನಡುವೆಯೂ ಬಿಎಂಎಸ್ ವಿವಿ ಬಿಲ್ ಅಂಗೀಕಾರ ಪಡೆದಿದೆ. ಸಭಾತ್ಯಾಗ ಮಾಡಿ ಜೆಡಿಎಸ್ ಶಾಸಕರು ಹೊರ ನಡೆದಿದ್ದಾರೆ. ಇದೀಗ ಪ್ರಧಾನಿ ಅಂಗಳಕ್ಕೆ ತಲುಪಿರುವ ಟ್ರಸ್ಟ್ ಖಾಸಗೀಕರಣ ಏನಾದ್ರು ಟ್ವಿಸ್ಟ್ ಪಡೆಯುತ್ತಾ ಕಾದು ನೋಡ್ಬೇಕು.












