
ಮಂಗಳೂರಿನಲ್ಲಿ ಸಲೂನ್‌ನಲ್ಲಿ ಬಾಡಿ ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸ್ತಿದ್ದಾರೆ ಎಂದು ಜನವರಿ 23ರಂದು ರಾಮಸೇನೆ ನೇತೃತ್ವದಲ್ಲಿ ದಾಳಿ ನಡೆದಿತ್ತು. ದಾಳಿ ವೇಳೆ ಸಾಕಷ್ಟು ಪೀಠೋಪಕರಣ ಧ್ವಂಸ ಮಾಡಲಾಗಿತ್ತು. ಆ ಪ್ರಕರಣದಲ್ಲಿ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಸೇರಿದಂತೆ 13 ಜನರನ್ನು ಅರೆಸ್ಟ್ ಮಾಡಿ ಮೊಬೈಲ್ ಪರಿಶೀಲನೆ ಮಾಡಲಾಯ್ತು. ಈ ವೇಳೆ ಭಯಾನಕ ಸತ್ಯವೊಂದು ಹೊರಬಿದ್ದಿದೆ. ಮುಡಾ ಕೇಸ್‌ನಲ್ಲಿ ಸಿಎಂ ವಿರುದ್ಧ ಹೋರಾಟ ಮಾಡ್ತಿದ್ದವರಿಗೆ ಶಕ್ತಿ ಬರಬೇಕು, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌ನಲ್ಲಿ ಹಿನ್ನಡೆ ಆಗ್ಬೇಕು ಅನ್ನೋ ರೀತಿಯಲ್ಲಿ ಪೂಜೆ ಮಾಡಿದ್ದಾರೆ.

ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ಸಾಕಷ್ಟು ವಿಡಿಯೋಗಳು ಸಿಕ್ಕಿದ್ದು, ಅದರಲ್ಲಿ ಶಕ್ತಿದೇವತೆಗಳ ಮುಂದೆ ಸರಣಿ ಪ್ರಾಣಿ ಬಲಿ ಕೊಟ್ಟು ಪ್ರಾಣಿಗಳ ರಕ್ತವನ್ನು RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಅಭಿಷೇಕ ಮಾಡಿದ್ದಾರೆ. ಇನ್ನು ಈ ರೀತಿಯ ರಕ್ತದ ಅಭಿಷೇಕದ ಮೂಲಕ ಇಬ್ಬರಿಗೂ ಮುಡಾ ಕೇಸ್‌ನಲ್ಲಿ ಬಲ ತುಂಬಿದ್ದಾರೆ ಎನ್ನಲಾಗ್ತಿದೆ. ಮೊಬೈಲ್‌ನಲ್ಲಿ ವಿಡಿಯೋ ನೋಡಿದ ಮಂಗಳೂರಿನ ಬರ್ಕೆ ಪೊಲೀಸರು, ಪ್ರಸಾದ್ ಅತ್ತಾವರ್ ಮತ್ತು ಅನಂತ್ ಭಟ್ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಪ್ರಾಣಿ ಬಲಿಕೊಟ್ಟು ರಕ್ತಾಭಿಷೇಕ ಮಾಡಿದ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸ್ನೇಹಮಯಿ ಕೃಷ್ಣ, ಮಂಗಳೂರು ಪೊಲೀಸರು, ಮೈಸೂರು ಕಮೀಷನರ್‌ಗೆ ಈ ಬಗ್ಗೆ ದೂರು ನೀಡ್ತೀನಿ. ಕಾನೂನು ಪ್ರಕಾರ ಕಾನೂನು ಹೋರಾಟ ಮಾಡುತ್ತೇನೆ. ನನ್ನ ಫೋಟೋ ಇಟ್ಟು ಪೂಜೆ ಮಾಡಿಸಿರುವುದಕ್ಕೆ ಭಯವಿಲ್ಲ. ನನ್ನ ಹೋರಾಟ ಹತ್ತಿಕ್ಕುವ ಷಡ್ಯಂತ್ರ ಮೊದಲಿನಿಂದ ನಡೆಯುತ್ತಿದೆ ಎಂದಿದ್ದಾರೆ.

ಆದರೆ, ಪ್ರಸಾದ್ ಅತ್ತಾವರ ಫೋನ್ನಲ್ಲಿ ಅನೇಕ ವಿಡಿಯೋಗಳು ಪತ್ತೆಯಾಗಿದ್ದು, ಸರಣಿ ಪ್ರಾಣಿ ಬಲಿ ನೀಡಿರುವ ವಿಡಿಯೋ ಮೊಬೈಲ್ನಲ್ಲಿದೆ. ಅನಂತ್ ಭಟ್ ಎನ್ನುವವರು ಈ ವಿಡಿಯೋವನ್ನು ವಾಟ್ಸಾಪ್ನಲ್ಲಿ ಹಂಚಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಹರ್ಷ, ಶ್ರೀನಿಧಿ, ಸ್ನೇಹಮಯಿ ಹಾಗೂ ಗಂಗರಾಜು ಭೇಟಿ ಆಗಿದ್ದಾರೆ ಎನ್ನಲಾಗ್ತಿದೆ. ಸುಮಾ ಹಾಗೂ ಪ್ರಶಾಂತ್ಗೆ ಹಣ ತುಂಬಿದ ಚೀಲದ ಫೋಟೋವನ್ನ ಪ್ರಸಾದ್ ಅತ್ತಾವರ ಕಳುಹಿಸಿದ್ದಾರೆ. ಡಿಸೆಂಬರ್ 9ರಂದು ಈ ವಿಡಿಯೋವನ್ನ ಶ್ರೀನಿಧಿ ಎಂಬವರು ಪ್ರಸಾದ್ ಅತ್ತಾವರಗೆ ಕಳುಹಿಸಿದ್ದಾರೆ. ಅನಂತ್ ಭಟ್ ಎನ್ನುವವರು ಪ್ರಾಣಿ ಬಲಿ ನೀಡಿದ್ದು, ದೇವರ ಮೇಲೆ ಸ್ನೇಹಮಯಿ ಕೃಷ್ಣ, ಪ್ರಸಾದ್ ಅತ್ತಾವರ, ಗಂಗರಾಜು, ಶ್ರೀನಿಧಿ, ಸುಮಾ ಹೆಸರು ನಮೂದು ಮಾಡಿ ಪ್ರಾಣಿ ಬಲಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತ್ ಭಟ್ ವಾಮಾಚಾರದ ದುಷ್ಟ ಪದ್ದತಿ ಆಚರಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಫೋಟೋಗೆ ಪ್ರಾಣಿಬಲಿ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಇತಿಹಾಸಕಾರ ಶಲ್ವಪಿಳ್ಳೆ ಅಯ್ಯಂಗಾರ್, ತಂತ್ರ, ಮಂತ್ರಗಳು ಪ್ರಾಣಿಬಲಿ ಹಿಂದಿನಿಂದಲೂ ಬಂದಿದೆ. ಯಾಕೆ ಮಾಡ್ತಾರೆ..? ಯಾವ ಉದ್ದೇಶಕ್ಕೆ ಮಾಡ್ತಾರೆ..? ಅನ್ನೋದು ಮಾಡಿದವರಿಗೆ ಮಾತ್ರ ಗೊತ್ತು. ನಾವು ಭಕ್ತಿ ಮಾರ್ಗದಲ್ಲಿ ನಡೆಯುವವರು. ಈ ರೀತಿ ಮಾಡಿದರೆ ದೇವರು ಒಲಿಯುತ್ತೆ ಅನ್ನೋದು ಸುಳ್ಳು. ಈಗ ಫೋಟೋ ಇಟ್ಟು ಪ್ರಾಣಿ ಬಲಿ ಕೊಟ್ಟಿದ್ದಾರೆ. ಫೋಟೋಗೆ ರಕ್ತ ಹಾಕಿದ್ದಾರೆ. ಅದು ಒಳ್ಳೆದಕ್ಕೆ ಮಾಡಿದ್ದಾರಾ..? ಕೆಟ್ಟದಕ್ಕೆ ಮಾಡಿದ್ದಾರಾ..? ಗೊತ್ತಿಲ್ಲ ಎಂದಿದ್ದಾರೆ.
