ಬ್ಲಾಕ್ ಫಂಗಸ್ ಅನ್ನೋದು ಸಾಂಕ್ರಾಮಿಕ ರೋಗವಲ್ಲ, ಯಾರೋ ಕೂಡ ಹೆದರುವ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ಹೇಳಿಕೊಟ್ಟಿದ್ದಾರೆ. ಆದರೆ ಈಗಾಗಲೇ ಕೆಲವು ರಾಜ್ಯಗಳು ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಸಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ಗೆ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಇದು ಸಾಂಕ್ರಾಮಿಕ ರೋಗವಲ್ಲ,ಯಾರು ಕೂಡ ಭಯಪಡುವ ಅವಶ್ಯಕತೆಯಿಲ್ಲ, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿ ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಸಚಿವ ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ ರಾಜಸ್ಥಾನ ಮತ್ತು ತೆಲಂಗಾಣ ಸರ್ಕಾರ ಈಗಾಗಲೇ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರವನ್ನು (ಮ್ಯೂಕೋರ್ಮೈಕೋಸಿಸ್) ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಪತ್ತೆಯಾದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದೆ. ರೋಗ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಬೇಕು” ಎಂದು ಅಧಿಸೂಚನೆ ಹೇಳಿದೆ.
ರಾಜ್ಯದಲ್ಲಿ ಬ್ಲಾಕ್ ಫಂಗಸ್ ರೋಗವನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಸಿ
ರಾಜ್ಯದ ವಿರೋಧ ಪಕ್ಷದ ಅನೇಕ ನಾಯಕರು ಬ್ಲಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಸಿ ಉಚಿತ ಚಿಕಿತ್ಸೆ ಕೊಡಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು.
ಕಪ್ಪು ಶಿಲೀಂಧ್ರ ರೋಗವನ್ನು ಸರ್ಕಾರ ಕೂಡಲೇ ಸಾಂಕ್ರಾಮಿಕ ರೋಗ ಎಂದು ಘೋಷಿಸಬೇಕು. ಈ ಕಾಯಿಲೆಯ ಚಿಕಿತ್ಸೆಗೆ ಬೇಕಿರುವ ಔಷಧಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕು. ಇದರ ವಿರುದ್ಧ ಹೋರಾಡಲು ಅಗತ್ಯವಿರುವ ನೇತ್ರ ತಜ್ಞರು, ಇಎನ್ಟಿ ಪರಿಣತರು, ಜನರಲ್ ಸರ್ಜನ್ಗಳು, ನರರೋಗ ತಜ್ಞರು, ದಂತವೈದ್ಯರನ್ನು ಸರ್ಕಾರ ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದರು.
ಕಪ್ಪು ಶಿಲೀಂಧ್ರ ಸೋಂಕನ್ನು (ಮ್ಯೂಕರ್ ಮೈಕೊಸಿಸ್) ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಒಡಿಶಾ, ಗುಜರಾತ್, ಚಂಡೀಗಢದಲ್ಲಿ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರವೂ ಇದನ್ನು ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯಗಳಿಗೆ ಸದ್ಯ ಹೇಳಿದೆ. ರಾಜ್ಯವೂ ಈ ಮಾರಕ ಕಾಯಿಲೆಯನ್ನು ಈ ಕೂಡಲೇ ‘ಸಾಂಕ್ರಾಮಿಕ’ ಎಂದು ಘೋಷಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದರು.
ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಈಗಾಗಾಲೇ ಬಹಳಷ್ಟು ಜನರು ಬ್ಲಾಕ್ ಫಂಗಸ್ಸಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೆ, ಅಂಥವರ ಕುಟುಂಬ ಸೂಕ್ತ ಪರಿಹಾರ ನೀಡಬೇಕು. ಈ ರೋಗವು ಇನ್ನಷ್ಟು ಅಮೂಲ್ಯ ಜೀವಗಳನ್ನು ಹೊತ್ತೊಯ್ಯುವ ಮೊದಲು ಕೂಡಲೇ ಉಚಿತ ಚಿಕಿತ್ಸೆ ನೀಡಲು ಆರಂಭಿಸಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದರು.
ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಉಳಿಯುವ ಜೀವಗಳು ಪ್ರಾಣಬಿಟ್ಟಿವೆ. ಇದರ ಮಧ್ಯೆ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, ಈ ಕುರಿತು ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಇದೊಂದು ಅಪಾಯಕಾರಿ ಸೋಂಕೆಂದು ತಜ್ಞರು ಎಚ್ಚರಿಸಿದ್ದಾರೆ. ಯಾರೂ ಹೆದರುವ ಅವಶ್ಯಕತೆಯಿಲ್ಲ ಇದೊಂದು ಸಾಂಕ್ರಾಮಿಕ ರೋಗವೇ ಅಲ್ಲ ಎಂದ ಆರೋಗ್ಯ ಸಚಿವ ಸುಧಾಕರ್ ಅವರ ಧಿಡೀರ್ ಹೇಳಿಕೆ ಸಾಕಷ್ಟು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ.