ಬೆಂಗಳೂರು : ಮೇ.೨೭: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಹಲವು ಹಿರಿಯ ನಾಯಕರಿಗೆ ಸ್ಥಾನ ಸಿಕ್ಕಿಲ್ಲ. ಇದ್ರಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದ್ರೆ ಅವರಿಗೆ ಸ್ಥಾನ ಮೀಸ್ ಆಗಿದೆ. ಸೈದ್ಧಾಂತಿಕವಾಗಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತ ಬಂದಿರುವ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನಿರಾಸೆ ಮೂಡಿಸಿದ್ದು, ಇದ್ರ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳು ಸುಳ್ಳು ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಹರಿಪ್ರಸಾದ್, ತಾವು ಯಾವುದೇ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿಲ್ಲ. ಇದೆಲ್ಲ ವಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಹುಟ್ಟಿಕೊಂಡಿರುವ ವಿಷಯ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸಿಎಂ ಸಿದ್ದು ಪರೋಕ್ಷವಾಗಿ ಟಾಂಗ್ ಕೊಟ್ಟ ಬಿಕೆ ಹರಿಪ್ರಸಾದ್
ನಾನೂ ಕಾಂಗ್ರೆಸ್ ಪಕ್ಷ ಕಟ್ಟಿ, ಬೆಳೆಸಿದವನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತಗೊಂಡು ಬಂದವನು ಅಲ್ಲ. ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ನಾನು ಯೋಚನೆ ಮಾಡುವ ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಹಕ್ಕು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು. ಅಹಿಂದ ಅಂತ ನಾನು ಯೋಚನೆ ಮಾಡಲ್ಲ. ಕಾಂಗ್ರೆಸ್‌ನ ಸಿದ್ದಾಂತ ಸರ್ವಧರ್ಮ ಸಮಾನ ಎಂದು ನಂಬಿದವನು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರೇಳದೆ ಹರಿಪ್ರಸಾದ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಕಾಲ ಬಂದಾಗ ಹೇಳ್ತೀನಿ
ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ವಿಚಾರ ನಡೆಯುತ್ತಿರುತ್ತೆ. ಕಾಲ ಬಂದಾಗ ಅದನೆಲ್ಲ ಹೇಳ್ತೀನಿ. ಅಧಿಕಾರ ಹಂಚಿಕೆ ಗೊತ್ತಿರುವುದು ಕೇವಲ ಏಳು ಜನರಿಗೆ ಮಾತ್ರ. ಉಳಿದವರುಹೇಳುತ್ತಿರುವುದು ಸುಳ್ಳು ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ವಿಚಾರವಾಗಿ ಪ್ರತಿಕ್ರಿಯಿಸಿ ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಲ್ಲರೂ ಅವರವರ ರೀತಿಯಲ್ಲಿ ಪಕ್ಷಕ್ಕಾಗಿ ದುಡಿದಿರುತ್ತಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಟೈಮ್ ಇಸ್ ದ ಮೆಡಿಸಿನ್ ಕಾಲ ಬಂದಾಗ ಎಲ್ಲ ಹೇಳ್ತೀನಿ. ಪಕ್ಷದಲ್ಲಿ ಸಕ್ರಿಯ ವಾಗಿರುವವರಿಗೆ ಮಣೆ ಹಾಕುವುದು ಪದ್ದತಿ. ಸಾಂಧರ್ಬಿಕವಾಗಿ ನಾನು ಹೇಳ ಬೇಕಾದಾಗ ಹೇಳ್ತೀನಿ ಎಂದು ಬಿ.ಕೆ. ಹರಿಪ್ರಸಾದ್ ಅವರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.