ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ಇಂದು ದಾವಣಗೆರೆಯಲ್ಲಿ ಬಿ.ವೈ ವಿಜಯೇಂದ್ರ ಪರವಾಗಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆಸಲಾಗ್ತಿದೆ. ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೋರಾಟ ನಡೆಸಲು ಚರ್ಚೆ ನಡೆಸುತ್ತಿದ್ದು, ಶೀಘ್ರವೇ ಈ ಬಗ್ಗೆ ಹೈಕಮಾಂಡ್ ಭೇಟಿ ಮಾಡಲು ನಿರ್ಧಾರ ಮಾಡಲಾಗ್ತಿದೆ.ಮಾಜಿ ಸಚಿವರಾದ ಎಸ್.ಎ ರವೀಂದ್ರನಾಥ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸೋಮಶೇಖರ್ ರೆಡ್ಡಿ, ಹರತಾಳು ಹಾಲಪ್ಪ, ಸೀಮಾ ಮಸೂತಿ ಸೇರಿ 35ಕ್ಕೂ ಹೆಚ್ಚು ಮಾಜಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸಭೆಗೂ ಮುನ್ನ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಮಾಜಿ ಶಾಸಕರೆಲ್ಲ ಯತ್ನಾಳ್ ವಿರುದ್ಧ ಸಭೆ ಸೇರುತ್ತಿದ್ದೇವೆ. ನಾವು ನೂರಕ್ಕೆ ನೂರರಷ್ಟು ಅವರ ವಿರುದ್ಧ ಸಭೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತಾನಾಡೋದು ಬಿಟ್ಟು ಯತ್ನಾಳ್ ಸ್ವಪಕ್ಷದವರ ವಿರುದ್ಧ ಮಾತಾಡ್ತಿದ್ದಾರೆ. ಪಕ್ಷವನ್ನ ಕಟ್ಟಿ ಬೆಳೆಸಿದ ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತಾಡ್ತಿದ್ದಾರೆ. ಹೀಗಾಗಿ ಈ ವಿಚಾರವಾಗಿಯೇ ಚರ್ಚೆ ನಡೆಸಿ ಹೈಕಮಾಂಡ್ಗೆ ದೂರು ನೀಡುವ ಕೆಲಸ ಮಾಡ್ತೇವೆ ಎಂದಿದ್ದಾರೆ.ಇದೇ ವೇಳೆ ಮಾತನಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ರೇಣುಕಾಚಾರ್ಯ ನೇತೃತ್ವದ ಸಭೆ ಬಗ್ಗೆ ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ಸಭೆ ಮಾಡಲು ಯಾರು ಬೇಡ ಅಂತಾರೆ. ಅವರಿಗೆ ಏನೋ ಭಯ ಬಂದಿರಬೇಕು. ಯತ್ನಾಳ್ ಅವರನ್ನ ಹೊರಗೆ ಹಾಕಲು ಆಗಲಿಲ್ಲ ಎಂಬ ಕಾರಣಕ್ಕೆ ಹತಾಶರಾಗಿರಬೇಕು.ಅದಕ್ಕೆ ಸಭೆ ಮಾಡ್ತಾರೆ, ಮಾಡಲಿ..ಎಷ್ಟು ಸಭೆಯಾದ್ರು ಮಾಡಲಿ ಎಂದಿದ್ದಾರೆ. ಇನ್ನು ಯಾರ ಮೇಲೆ ಕ್ರಮ ತಗೊಂಡರೆ ಏನಾಗತ್ತೆ ಎಂಬುದು ನಮ್ಮ ಸಂಸದರು ಹಾಗು ಹೈಕಮಾಂಡ್ ಹೇಳಿದ್ದಾರೆ.ಐದೈದು, ಆರಾರು ಬಾರಿ ಗೆದ್ದ ಸಂಸದರಿದ್ದಾರೆ.ಯತ್ನಾಳ್ ಇದ್ದರೆ ಏನಾಗತ್ತೆ..? ಹೊರಗೆ ಹಾಕಿದರೆ ಏನಾಗುತ್ತೆ..? ಎಂಬುದನ್ನು ಹೇಳಿದ್ದಾರೆ. ಕೆಲವು ಲೋಕಸಭಾ ಸದಸ್ಯರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ ಅಂತಾನೂ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಬೆಂಬಲಿಗರ ಸಭೆ ನಡೆಸುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ರೀತಿ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಇಂಥ ಸಭೆಯಿಂದ ಬೇರೆ ಸಂದೇಶ ಹೋಗಲಿದೆ ಹೀಗಾಗಿ, ಸಭೆ ಮಾಡಬೇಡಿ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.