ಭಾರತೀಯ ಜನತಾ ಪಕ್ಷದ (ಬಿಜೆಪಿ) ರಿತು ಖಂಡೂರಿ ಅವರು ಶನಿವಾರ ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು, ಉತ್ತರಾಖಂಡ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಮಹಿಳಾ ಸ್ಪೀಕರ್ ಆಯ್ಕೆಯಾಗಿದ್ದು, ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉತ್ತರಾಖಂಡ ವಿಧಾನಸಭೆಯ ಐದನೇ ಸ್ಪೀಕರ್ ಆಗಿ ಶ್ರೀಮತಿ ರಿತು ಖಂಡೂರಿ ಆಯ್ಕೆಯಾದರು. ಅವರು ಬಿಜೆಪಿಯ ಪ್ರೇಮಚಂದ್ ಅಗರ್ವಾಲ್ ಅವರ ಸ್ಪೀಕರ್ ಅವಧಿ ಮಾರ್ಚ್ 10 ರಂದು ಕೊನೆಗೊಂಡಿದ್ದು, ಉತ್ತರಾಧಿಕಾರಕ್ಕೆ ರಿತು ಖಂಡೂರಿ ಆಯ್ಕೆಯಾಗಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶ್ರೀಮತಿ ಖಂಡೂರಿ ಅವರನ್ನು ಅಭಿನಂದಿಸಿದರು ಮತ್ತು ಅವರ ನಾಯಕತ್ವದಲ್ಲಿ ರಾಜ್ಯ ವಿಧಾನಸಭೆಯು “ಹೊಸ ಇತಿಹಾಸ” ರಚಿಸಲಿದೆ ಎಂದು ಹೇಳಿದರು.

ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿ. ಇತ್ತೀ ಚೆಗಷ್ಟೇ ಮುಕ್ತಾಯಗೊಂಡಿದ್ದ ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಸಿಂಗ್ ನೇಗಿಯನ್ನು 3,687 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
“ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ಆಯ್ಕೆಯಾಗಿರುವ ರಿತು ಖಂಡೂರಿ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಅವರು ಸದನವನ್ನು ಉತ್ತಮವಾಗಿ ನಡೆಸುತ್ತಾರೆ ಮತ್ತು ಅವರ ನೇತೃತ್ವದಲ್ಲಿ ನಮ್ಮ ವಿಧಾನಸಭೆಯು ಹೊಸ ಇತಿಹಾಸವನ್ನು ಸೃಷ್ಟಿಸುತ್ತದೆ” ಎಂದು ಧಾಮಿ ANI ಗೆ ತಿಳಿಸಿದ್ದಾರೆ.
 
			
 
                                 
                                 
                                
