ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭ ಅಲ್ಲ ಅನ್ನೋದು ಈಗಾಗಲೇ ದೆಹಲಿ ನಾಯಕರಿಗೆ ಅರಿವಾಗಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಯಡಿಯೂರಪ್ಪ ಅವರಿಂದ ಆಡಳಿತ ಕಿತ್ತುಕೊಂಡಿದ್ದೂ ಇರಬಹುದು. ಇನ್ನೊಂದು ಕಾರಣ ಎಂದರೆ ರಾಜ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಯಾವುದೇ ನಾಯಕರು ಇಲ್ಲ. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಚುನಾವಣಾ ಪ್ರಚಾರಕ್ಕೆ ತೆರಳಿದ್ದರೆ ಚುನಾವಣೆಯನ್ನು ಗೆದ್ದು ಬರುತ್ತಾರೆ ಎನ್ನುವ ನಂಬಿಕೆ ಇತ್ತು. ಯಡಿಯೂರಪ್ಪಗೆ ಸರಿಸಮನಾದ ಯಾವುದೇ ಮುಖ ಕೇಸರಿ ಪಾಳಯದಲ್ಲಿ ಇಲ್ಲದಿರುವುದು ಬಿಜೆಪಿ ಹೈಕಮಾಂಡ್ ನಾಯಕರ ಚಿಂತೆಗೆ ಕಾರಣವಾಗಿದೆ ಇದೇ ಕಾರಣಕ್ಕೆ ಅಮಿತ್ ಷಾ ನೇತೃತ್ವದ ನಾಯಕರು ಕರ್ನಾಟಕವನ್ನು ಗೆಲ್ಲುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ನಾಲ್ಕೂ ದಿಕ್ಕುಗಳಿಗೂ ದಿಕ್ಪಾಲಕರ ನೇಮಕ ಮಾಡಲು ಮುಂದಾಗಿದ್ದಾರೆ.
ಅಮಿತ್ ಷಾ ಸೇರಿ ನಾಲ್ಕು ದಿಕ್ಕುಗಳಿಗೆ 4 ನಾಯಕರು..!

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಈಗಾಗಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಹ ಚುನಾವಣಾ ಉಸ್ತುವಾರಿಯಾಗಿ ಮನ್ಸೂಕ್ ಮಾಂಡವೀಯ ಹಾಗು ಅಣ್ಣಾ ಮಲೈ ಅವರನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಅರುಣ್ ಸಿಂಗ್ ಕೂಡ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕರ್ನಾಟಕ ಚುನಾವಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಇದೇ ಕಾರಣಕ್ಕಾಗಿ ಎಲ್ಲಾ ನಾಯಕರಿಗೂ ಮನೆ ನೋಡುವ ಕೆಲಸಕ್ಕೆ ಕೇಸರಿ ಪಡೆ ಕೈ ಹಾಕಿದೆ. ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಮಿತ್ ಷಾ ಕೂಡ ಮನೆ ಮಾಡಲಿದ್ದು, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವ ಯೋಜನೆ ಬಿಜೆಪಿ ನಾಯಕರಲ್ಲಿ ಮನೆ ಮಾಡಿದೆ.
ಕರ್ನಾಟಕದಲ್ಲೇ ತಾತ್ಕಾಲಿಕ ಮನೆ, ಇಲ್ಲೇ ವಾಸ್ತವ್ಯ..!

ರಾಜ್ಯದ ನಾಯಕತ್ವ ನೋಡಿಕೊಂಡು ಜನರು ಮತ ಹಾಕುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ಅಮಿತ್ ಷಾ, ಮೂವರು ಚುನಾವಣಾ ಉಸ್ತುವಾರಿ ಹಾಗು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆಗೆ ಚುನಾವಣಾ ತಂತ್ರಗಾರಿಕೆ ಮಾಡಲು ಬೆಂಗಳೂರಿನಲ್ಲೇ ಕೆಲವು ದಿನಗಳ ಕಾಲ ವಾಸ್ತವ್ಯ ಹೂಡುವ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ. ಉತ್ತರ ದಕ್ಷಿಣ, ಪೂರ್ವ ಪಶ್ಚಿಮದಲ್ಲಿ ಒಬ್ಬೊಬ್ಬರು ಉಸ್ತುವಾರಿ ನಾಯಕರೂ ಕೂಡ ಮನೆ ಮಾಡಿಕೊಂಡು ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರು ಕೇಂದ್ರಿತವಾಗಿ ಮಾರ್ಗದರ್ಶನ ಮಾಡಲಿರುವ ಅಮಿತ್ ಷಾ ನಾಲ್ವರು ಇಂತಿಷ್ಟು ಕ್ಷೇತ್ರಗಳನ್ನು ಹಂಚಿಕೆ ಮಾಡಿ, ಯಾವ ಕ್ಷೇತ್ರದ ಪ್ರಚಾರ ಹೇಗಿರಬೇಕು. ಯಾರೆಲ್ಲಾ ಪ್ರಚಾರ ಮಾಡ್ಬೇಕು. ಮತದಾರರನ್ನು ಸೆಳೆಯುವುದು ಹೇಗೆ ಎನ್ನುವ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗ್ತಿದೆ.
ಗುಜರಾತ್’ನಲ್ಲೂ ವರ್ಕ್ ಆಗಿತ್ತು ಸೆಂಟ್ರಲ್ ಸ್ಟ್ರಾಟಜಿ..!
ಕರ್ನಾಟಕದಲ್ಲೇ ವಾಸ್ತವ್ಯ ಹೂಡುವ ಯೋಜನೆ ಗುಜರಾತ್ನಲ್ಲೇ ಜಾರಿ ಮಾಡಲಾಗಿತ್ತು. ಕರ್ನಾಟಕದಂತೆ ಗುಜರಾತ್ನಲ್ಲೂ ರಾಜ್ಯ ಮಟ್ಟದಲ್ಲಿ ಪ್ರಭಾವ ಬೀರುವಂತಹ ನಾಯಕತ್ವ ಇಲ್ಲದಿದ್ದರೂ ಕೇಂದ್ರದಿಂದ ಸಚಿವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಅಮಿತ್ ಷಾ ತವರಲ್ಲೇ ಉಳಿದುಕೊಂಡು ಚುನಾವಣಾ ರಣತಂತ್ರ ರೂಪಿಸಿದ್ದರು. ಗುಜರಾತ್ನಲ್ಲಿ ಯಶಸ್ಸು ಕಂಡ ಬಳಿಕ ಗುಜರಾತ್ನಂತೆ ಕರ್ನಾಟಕವನ್ನು ಗೆಲ್ಲಲು ಬಿಜೆಪಿ ಹೈಕಮಾಂಡ್ ಪಣ ತೊಟ್ಟಿದೆ. ಗುಜರಾತ್ನಲ್ಲಿ ಸೆಂಟ್ರಲ್ ಟೀಮ್ನಿಂದಲೇ ಮೋಡಿ ಮಾಡಿ ಗೆದ್ದ ರೀತಿ ಕರ್ನಾಟಕ ರಾಜ್ಯದಲ್ಲೂ ಗೆಲ್ಲಲು ತಂತ್ರಗಾರಿಕೆ ಮಾಡಲಾಗ್ತಿದೆ.
ಯಡಿಯೂರಪ್ಪನನ್ನು ಕಂಡರೆ ಕೇಸರಿ ಪಾಳಯಕ್ಕೇ ಭಯ..!

ಮಾಜಿ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲಿ ಅಂತಿಮ ದಿನ ಭಾಷಣ ಮಾಡಿ, ನಾನು ಬಿಜೆಪಿ ಪ್ರಚಾರ ಮಾಡ್ತೇನೆ ಎಂದಿದ್ದಾರೆ. ಅಧಿಕಾರಕ್ಕೆ ತರ್ತೇನೆ ಎನ್ನುವ ಭರವಸೆಯನ್ನೂ ಕೊಟ್ಟಿದ್ದಾರೆ. ಆದರೂ ಬಿಜೆಪಿ ಹೈಕಮಾಂಡ್ಗೆ ಯಡಿಯೂರಪ್ಪರನ್ನು ಕಂಡರೆ ಕೊಂಚ ಭಯ. ಯಡಿಯೂರಪ್ಪ ಬಿಜೆಪಿಯಲ್ಲೇ ಇರಬೇಕು, ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಅನ್ನೋ ಯೋಜನೆ ಹೈಕಮಾಂಡ್ ನಾಯಕರದ್ದು. ಒಂದು ವೇಳೆ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೆ ಯಡಿಯೂರಪ್ಪ ಹೇಳಿದವರೇ ಸಿಎಂ ಆಗಬೇಕು. ಒಂದು ವೇಳೆ ಯಡಿಯೂರಪ್ಪ ಹೇಳಿದವರನ್ನು ಹೈಕಮಾಂಡ್ ಪರಿಗಣಿಸದಿದ್ದರೆ ಯಡಿಯೂರಪ್ಪ ಗುಟುರು ಹಾಕಿ ಬಿಜೆಪಿಯನ್ನೇ ಇಬ್ಭಾಗ ಮಾಡಿದರೂ ಅಚ್ಚರಿಯಿಲ್ಲ. ಹೀಗಾಗಿ ಯಡಿಯೂರಪ್ಪ ಇದ್ದಂತಿರಬೇಕು. ಪಕ್ಷದ ಪ್ರಮುಖ ನಿರ್ಧಾರಗಳು ದೆಹಲಿ ಮಟ್ಟದಲ್ಲೇ ಆಗಬೇಕು. ಗೆಲುವಿನ ಶ್ರೇಯ ಯಡಿಯೂರಪ್ಪಗೆ ಸಿಗಬಾರದು. ಇದು ಬಿಜೆಪಿ ಹೈಕಮಾಂಡ್ ಸ್ಟ್ರಾಟಜಿ ಎನ್ನುವ ಮಾತುಗಳು ಬಿಜೆಪಿಯಲ್ಲೇ ಕೇಳಿಬರುತ್ತಿದೆ.