ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತನ್ನ ರಾಜಕೀಯ ಎದುರಾಳಿಗಳ ನೈತಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ. ಇದೀಗ, ಈ ಆರೋಪಕ್ಕೆ ಪೂರಕವೆನಿಸುವಂತಹ ಹೇಳಿಕೆಯನ್ನು ಶಿವಸೇನೆ ಶಾಸಕರೊಬ್ಬರು ನೀಡಿದ್ದಾರೆ.
ಈ ಹಿಂದೆ ಬಿಜೆಪಿಯ ಮಿತ್ರಪಕ್ಷವಾಗಿದ್ದ ಶಿವಸೇನೆ, ಬಿಜೆಪಿಯೊಂದಿಗಿನ ಸಖ್ಯ ಕಡಿದುಕೊಂಡಿರುವುದು ಹಳೆಯ ವಿಚಾರ. ಉಭಯ ಪಕ್ಷಗಳ ನಡುವೆ ಸಂಬಂಧ ಬಿರುಕು ಬಿಟ್ಟ ಮೇಲೆ ಇವೆರಡೂ ಪಕ್ಷಗಳು ಬದ್ಧ ವೈರಿಗಳಾದದ್ದನ್ನು ಮಹರಾಷ್ಟ್ರ ಕಂಡಿದೆ. ಈ ವೈರತ್ವವನ್ನು ಬಿಟ್ಟು, ಮತ್ತೆ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು ಎಂದು ಶಿವಸೇನೆ ಶಾಸಕ ಅಭಿಪ್ರಾಯ ವ್ಯಕ್ತಪಡಿಸಿರುವುದು, ಬಿಜೆಪಿಯ ಅಧಃಪತನ ರಾಜಕಾರಣಕ್ಕೆ ಸಾಕ್ಷಿಯಂತಿದೆ.
ಥಾಣೆಯ ಮಜಿವಾಡ ಕ್ಷೇತ್ರದ ಶಾಸಕ ಪ್ರತಾಪ್ ಸರ್ನಾಯಕ್ ಬಿಜೆಪಿಯೊಂದಿಗೆ ಸಖ್ಯ ಬೆಳೆಸುವ ಕುರಿತು ಮಾತನಾಡಿದವರು. ಸಖ್ಯ ಬೆಳೆಸಲು ಇವರು ನೀಡಿರುವ ಕಾರಣ ಆತಂಕಕಾರಿಯಾಗಿದೆ. ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿ ಶಿವಸೇನೆ ಶಾಸಕರನ್ನು ಬೆದರಿಸುತ್ತಿದೆ. ನಮ್ಮ ಶಾಸಕರ ಉಳಿವಿಗಾಗಿ, ಬಿಜೆಪಿಯೊಂದಿಗೆ ಶಿವಸೇನೆಯು ಮೈತ್ರಿ ಬೆಳೆಸಿಕೊಳ್ಳಬೇಕೆಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪ್ರತಾಪ್ ಬರೆದ ಪತ್ರದಲ್ಲಿ , ನಾನು ಸೇರಿದಂತೆ ಹಲವು ಶಿವಸೇನೆ ಶಾಸಕರಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ಕಿರುಕುಳ ನೀಡುತ್ತಿವೆ. ಶಿವಸೇನೆ ನಾಯಕರುಗಳಾದ ಅನಿಲ್ ಪರಬ್, ರವೀಂದ್ರ ವಾಯ್ಕರ್ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ತನಿಖಾ ಸಂಸ್ಥೆಗಳು ನಿರಂತರ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಶಿವಸೇನೆಯ ನಾಯಕರುಗಳನ್ನು ಇಂತಹ ಮಾನಸಿಕ ಹಿಂಸೆಗಳಿಂದ ರಕ್ಷಿಸಿಕೊಳ್ಳಲು ಶಿವಸೇನೆ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು. ತುಂಬಾ ತಡವಾಗುವ ಮೊದಲು ಶಿವಸೇನೆ ಉನ್ನತ ನಾಯಕರು ಈ ಕುರಿತು ಮುಂದುವರೆಯಬೇಕು, ಮೈತ್ರಿ ಅಲ್ಲದಿದ್ದರೂ ಉತ್ತಮ ಬಾಂಧವ್ಯವನ್ನು ಬೆಳೆಸಬೇಕು ಎಂದು ಆಗ್ರಹಿಸಿದ್ದಾರೆ.
ಮುಂಬೈ, ಥಾಣೆ ಮೊದಲಾದ ಕಾರ್ಪೊರೇಷನ್‌ಗಳಿಗೆ ಚುನಾವಣೆ ನಡೆಯಲಿರುವುದರಿಂದ ಈ ಪತ್ರದ ಆರೋಪಗಳು ಮಹತ್ವದ್ದೆನಿಸಿದೆ. ಕೇಂದ್ರ ಸರ್ಕಾರವು, ಚುನಾವಣೆಗಳು ಸಮೀಪಿಸುತ್ತಿದ್ದಂತೆ ತನ್ನ ರಾಜಕೀಯ ಎದುರಾಳಿಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುವುದನ್ನು ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಕಾಂಗ್ರೆಸ್ ಆಪತ್ಬಾಂಧವ ಎಂದೇ ಗುರುತಿಸಿರುವ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರದ ಎರಡು ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಚುನಾವಣೆಗಳಿಗೆ ಕೆಲವೇ ದಿನಗಳ ಮೊದಲು ನಡೆದ ಈ ದಾಳಿ ರಾಜಕೀಯ ಪ್ರೇರಿತ ಎನ್ನುವುದರಲ್ಲಿ ಯಾವುದೇ ಸಂದೇಹವೂ ಇರಲಿಲ್ಲ.
ತಮಿಳುನಾಡು ಚುನಾವಣೆಯ ಸಂಧರ್ಭದಲ್ಲೂ ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಸ್ಟಾಲಿನ್ ಕುಟುಂಬಸ್ಥರ ಮನೆಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಈ ದಾಳಿಯ ಹಿಂದೆ ಬಿಜೆಪಿಯ ಧ್ವೇಷ ರಾಜಕಾರಣವೇ ಕೆಲಸ ಮಾಡಿದೆ ಎಂದು ಸ್ಟಾಲಿನ್ ಆರೋಪಿಸಿದ್ದರು.
ಚಿನ್ನದ ಹಗರಣ ವಿಚಾರದಲ್ಲೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸಾಕ್ಷ್ಯ ನೀಡುವಂತೆ ಆರೋಪಿಗಳಿಗೆ ಕೇಂದ್ರ ತನಿಖಾಧಿಕಾರಿಗಳು ಒತ್ತಡ ಹೇರಿರುವುದೂ ಬಯಲಿಗೆ ಬಂದಿತ್ತು. ಬಿಜೆಪಿ ಹೇಗೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಕೆಲವೊಂದು ಉದಾಹರಣೆಗಳಷ್ಟೇ. ಪಟ್ಟಿ ಮಾಡುತ್ತಾ ಹೋದರೆ, ಮಮತಾ ಬ್ಯಾನರ್ಜಿ, ಪಿ ಚಿದಂಬರಂ, ರಾಜ್ ಠಾಕ್ರೇ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಕಿರುಕುಳಕ್ಕೊಳಗಾದ ದೊಡ್ಡ ಪಟ್ಟಿಯೇ ಸಿಗುತ್ತದೆ.

ಅಧಿಕಾರವನ್ನು, ಕಾನೂನನ್ನು, ತನಿಖಾ ಸಂಸ್ಥೆಗಳನ್ನು ಬಿಜೆಪಿಯು ತನ್ನ ವಿರುದ್ಧದ ದನಿಗಳಿಗೆ ಬಳಸುತ್ತಿರುವ ಕುರಿತು ಭಾರತ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟ ಹಲವು ರಾಜಕೀಯ ಚಿಂತಕರು ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ರಾಜಕೀಯ ಪಕ್ಷಗಳು ಮಾತ್ರವಲ್ಲ, ಸರ್ಕಾರದ ನೀತಿಗಳ ವಿರುದ್ಧ ವಿದ್ಯಾರ್ಥಿಗಳ, ಚಿಂತಕರ ದನಿಯನ್ನು ಕೂಡಾ ಬಿಜೆಪಿ ಇದೇ ಮಾರ್ಗದ ಮೂಲಕ ಅಡಗಿಸಲು ಪ್ರಯತ್ನಿಸಿದೆ. ವರವರ ರಾವ್, ಆನಂದ್ ತೇಲ್ತುಂಬ್ಡೆ, ಹನಿ ಬಾಬು, ಸುಧಾ ಭಾರಧ್ವಾಜ್, ರೋಣಾ ವಿಲ್ಸನ್ ಮೊದಲಾದ ಚಿಂತಕರನ್ನೂ, ನತಾಶಾ ನರ್ವಾಲ್, ದೇವಂಗನಾ ಕಲಿತಾ, ಉಮರ್ ಖಾಲಿದ್, ಕನ್ನಯ್ಯ ಕುಮಾರ್ ಮೊದಲಾದ ವಿದ್ಯಾರ್ಥಿ ನಾಯಕರನ್ನೂ ಯುಎಪಿಎ, ದೇಶದ್ರೋಹದಂತಹ ಪ್ರಕರಣ ದಾಖಲಿಸಿ ಬಂಧಿಸಿ ಆಡಳಿತ ಯಂತ್ರವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬಹುದು ಎಂಬ ಕುರಿತು ಬಿಜೆಪಿ ತೋರಿಸಿಕೊಟ್ಟಿದೆ.

ಅದೇನೆ ಇರಲಿ, ಸದ್ಯ ಮುಂಬರುವ ಪಾಲಿಕೆ ಚುನಾವಣೆಗಳ ಹಿನ್ನೆಲೆಯಲ್ಲಿ ಶಿವಸೇನೆ ಶಾಸಕನ ಈ ಆತಂಕ ನಿಜಕ್ಕೂ ಗಂಭೀರವಾದದ್ದು. ಶಾಸಕನ ಈ ಪತ್ರಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಬಿಜೆಪಿಯು, ʼಭ್ರಷ್ಟಾಚಾರದಲ್ಲಿ ಬಂಧನಕ್ಕೊಳಗಾಗುವ ಆತಂಕದಿಂದ, ಸರ್ನಾಯಕ್ ಈ ರೀತಿ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದೆ.
ಸರ್ನಾಯಕ್ ಇರಲಿ ಡಿಕೆ ಶಿವಕುಮಾರ್ ಇರಲಿ, ಭ್ರಷ್ಟಾಚಾರಿಗಳು ಅಲ್ಲವೇ ಅಲ್ಲವೆಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ, ನಿಜ. ಆದರೆ, ಸರ್ಕಾರಿ ಅಧೀನದ ಸಂಸ್ಥೆ ಪಕ್ಷಪಾತಿಯಾಗದೆ ಕರ್ತವ್ಯ ನಿರ್ವಹಿಸಬೇಕಾದುದು. ಹಾಗೆ ಭ್ರಷಾಚಾರದ ವಿರುದ್ಧ ನಿಜವಾಗಿಯೂ ಕಾರ್ಯ ನಿರ್ವಹಿಸುವುದಾದರೆ, ಹಿಮಂತ್ ಬಿಸ್ವ ಶರ್ಮ, ಶಿವರಾಜ್ ಸಿಂಗ್ ಚೌಹಾನ್ ಮೊದಲಾದ ಬಿಜೆಪಿ ನಾಯಕರು ಈ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವುದು ಏಕೆ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಭ್ರಷ್ಟಾಚಾರದಲ್ಲಿ ಹೆಸರು ತಳುಕು ಹಾಕಿಕೊಂಡ ಬಿಜೆಪಿಯ ನಾಯಕರ ಪಟ್ಟಿಯನ್ನು ಇಟ್ಟುಕೊಂಡು, ತನಿಖಾ ಸಂಸ್ಥೆಗಳು ಗುರಿ ಮಾಡಿರುವ ಇತರೆ ಪಕ್ಷಗಳ ನಾಯಕರ ಪಟ್ಟಿಯನ್ನು ಇರಿಸಿ ನೋಡಿದರೆ ಬಿಜೆಪಿ ತನ್ನ ರಾಜಕೀಯ ದುರುದ್ದೇಶಗಳಿಗೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.