ಬೀದರ: ವಿಜಯ ಸಂಕಲ್ಪ ಯಾತ್ರೆಯ ನಿಮಿತ್ತ ಪಶು ಸಂಗೋಪನೆ ಸಚಿವರು ಹಾಗೂ ಯಾತ್ರೆಯ ಜಿಲ್ಲಾ ಸಂಚಾಲಕರಾದ ಪ್ರಭು.ಬಿ ಚವ್ಹಾಣ ಅವರ ಕ್ಷೇತ್ರದ ವಡಗಾಂವ್, ಸಂತಪೂರ ಹಾಗೂ ಔರಾದ(ಬಿ) ಪಟ್ಟಣದಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಯಿತು.
ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯ ರಥಕ್ಕೆ ಸಚಿವ ಪ್ರಭು ಚವ್ಹಾಣ ಅವರು ವಡಗಾಂವ ಗ್ರಾಮದ ಕನಕದಾಸ ವೃತ್ತದ ಬಳಿ ಸ್ವಾಗತಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವರಾದ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ ಸೇರಿದಂತೆ ಇತರ ಗಣ್ಯರಿಗೆ ಕಂಬಳಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಂಡರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಯಾತ್ರೆಯು ವಡಗಾಂವನಿಂದ ಆರಂಭವಾಗಿ ಸಂತಪೂರ ಬಳಿಕ ಔರಾದ(ಬಿ) ಪಟ್ಟಣದಲ್ಲಿ ಸಂಚರಿಸಿತು. ಔರಾದ ಪಟ್ಟಣದಲ್ಲಿ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಹಾಗೂ ಗೋಪೂಜೆ ನೆರವೇರಿಸಿ ಯಾತ್ರೆಗೆ ಚಾಲನೆ ನೀಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮಾರ್ಗವಾಗಿ ಕನ್ನಡಾಂಬೆ (ಎಪಿಎಂಸಿ) ವೃತ್ತದ ವರೆಗೆ ಸಂಚರಿಸಿ ಬೀದರನತ್ತ ಪ್ರಯಾಣಿಸಿತು.
ರೋಡ್ ಶೋ ವೇಳೆ ಅಮರೇಶ್ವರ ದೇವಸ್ಥಾನದಿಂದ ಎಪಿಎಂಸಿ ವೃತ್ತದ ವರೆಗೆ ಜನಸಾಗರ ಕಂಡುಬಂತು. ಯಾತ್ರೆಯಲ್ಲಿ ಕೈಯಲ್ಲಿ ಬಿಜೆಪಿ ಧ್ವಜ ಹಿಡಿದ ಯುವಕರು, ‘ಭಾರತ ಮಾತಾ ಕೀ ಜೈ’ ‘ವಂದೇ ಮಾತರಂ’, ‘ಭಾರತೀಯ ಜನತಾ ಪಕ್ಷಕ್ಕೆ ಜಯವಾಗಲಿ, ‘ಪ್ರಭು ಚವ್ಹಾಣ’ ಅವರಿಗೆ ಜಯವಾಗಲಿ ಎನ್ನುವ ಜಯಘೋಷಗಳನ್ನು ಕೂಗುವುದು, ತಮಟೆ ವಾದನ, ಡೊಳ್ಳು ಕುಣಿತ ಹಾಗೂ ಧ್ವನಿವರ್ಧಕಗಳ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಬಿಜೆಪಿ ಧ್ವಜಗಳು ಮತ್ತು ಕೇಸರಿ ಬಣ್ಣದಿಂದ ಅಲಂಕೃತಗೊಂಡ ರಸ್ತೆಗಳಲ್ಲಿ ಬಣ್ಣ ಬಣ್ಣದ ಉಡುಗೆ ಧರಿಸಿ ತಲೆಯ ಮೇಲೆ ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ತಮಟೆ ವಾದನ, ಕೋಲಾಟ, ಬಂಜಾರಾ ಮಹಿಳೆಯರ ನೃತ್ಯ ಯಾತ್ರೆಯ ಮೆರಗನ್ನು ಹೆಚ್ಚಿಸಿತು.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವರಾದ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಕರ್ನಾಟಕ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾರುತಿರಾವ ಮುಳೆ, ಮಾಜಿ ಸಚಿವ ಮಾಲಿಕಯ್ಯಾ ಗುತ್ತೆದಾರ, ಔರಾದ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಧಾನ ಕಾರ್ಯದರ್ಶಿ ಹಣಮಂತ ಸುರನಾರ, ಖಂಡೋಬಾ ಕಂಗಟೆ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಶಿವರಾಜ ಗಂದಗೆ, ಗುರುನಾಥ ಜ್ಯಾಂತಿಕರ್, ವೀರಣ್ಣಾ ಕಾರಬಾರಿ, ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮ ನರೋಟೆ, ಶಿವರಾಜ ಅಲ್ಮಾಜೆ, ಪ್ರತೀಕ ಚವ್ಹಾಣ, ಶರಣಪ್ಪ ಪಂಚಾಕ್ಷರಿ, ಸಚಿನ ರಾಠೋಡ, ಶಕುಂತಲಾ ಮುತ್ತಂಗೆ, ಪ್ರಕಾಶ ಮೇತ್ರೆ, ವಿಜಯಕುಮಾರ ಪಾಟೀಲ ಗಾದಗಿ, ಪ್ರಕಾಶ ಅಲ್ಮಾಜೆ, ಸತೀಷ ಪಾಟೀಲ, ರಮೇಶ ಬಿರಾದಾರ, ಕಿರಣ ಪಾಟೀಲ, ಶಿವಾಜಿರಾವ ಕಾಳೆ, ದೊಂಡಿಬಾ ನರೋಟೆ, ರಂಗರಾವ ಜಾಧವ, ಶಿವಾಜಿ ಪಾಟೀಲ ಮುಂಗನಾಳ ಸೇರಿದಂತೆ ಮುಖಂಡರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು.
ಅಮರೇಶ್ವರರ ದರ್ಶನ ಪಡೆದ ಗಣ್ಯರು: ಜನಸಂಕಲ್ಪ ಯಾತ್ರೆಗೂ ಮುನ್ನ ಔರಾದ(ಬಿ) ಜನರ ಆರಾಧ್ಯದೈವ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಎಲ್ಲ ಗಣ್ಯರು ಅಮರೇಶ್ವರರ ದರ್ಶನ ಪಡೆದರು. ಇದೇ ವೇಳೆ ಸಚಿವರು ಎಲ್ಲ ಗಣ್ಯರನ್ನು ಬಿದ್ರಿ ಕಲಾಕೃತಿಗಳನ್ನು ನೀಡಿ ಗೌರವಿಸಿದರು.