2024ರ ಲೋಕಸಭೆಯಲ್ಲಿ ಬಿಜೆಪಿಯನ್ನು ಮಣಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೊಂಕ ಕಟ್ಟಿ ನಿಂತಿದ್ದು, ಶುಕ್ರವಾರ 17 ವಿಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ. ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸುವಲ್ಲಿ ಈ ಸಭೆ ಕರೆದಿದ್ದು, 17 ವಿಪಕ್ಷಗಳ ಪೈಕಿ 16 ಪಕ್ಷಗಳು ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಲು ನಿರ್ಣಯಿಸಿವೆ. ಇನ್ನಷ್ಟುರಣನೀತಿ ರೂಪಿಸಲು ಜುಲೈನಲ್ಲಿ ಶಿಮ್ಲಾದಲ್ಲಿ 2ನೇ ಸುತ್ತಿನ ಸಭೆ ನಡೆಯಲಿದೆ.
ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಆಪ್, ಟಿಎಂಸಿ ಸೇರಿದಂತೆ 17 ವಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಜೆಡಿಯು), ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (ಆರ್‌ಜೆಡಿ), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ (ಕಾಂಗ್ರೆಸ್), ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಟಿಎಂಸಿ), ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (ಆಪ್), ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ (ಆಪ್), ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (ಡಿಎಂಕೆ), ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ (ಜೆಎಂಎಂ), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (ಎಸ್‌ಪಿ), ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (ಶಿವಸೇನೆ ಉದ್ಧವ್ ಬಣ), ಶರದ್ ಪವಾರ್ (ಎನ್‌ಸಿಪಿ) ಹಾಗೂ ಪಿಡಿಪಿ, ಸಿಪಿಐ (ಎಂ), ಸಿಪಿಐ, ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರು ಪಾಲ್ಗೊಂಡಿದ್ದರು.
ಆದರೆ ಆಮ್ ಆದ್ಮಿ ಪಕ್ಷ (ಆಪ್) ಮಾತ್ರ ಈ ಒಡಂಬಡಿಕೆಯಿಂದ ದೂರ ಉಳಿದಿದ್ದು, ‘ದಿಲ್ಲಿ ಸುಗ್ರೀವಾಜ್ಞೆ’ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದೊಂದಿಗೆ ಜಟಾಪಟಿಗೆ ಇಳಿದಿದೆ. ಸದ್ಯಕ್ಕೆ ಈ ಕುರಿತು ನಿರ್ಣಯ ತೆಗೆದುಕೊಳ್ಳದ ಆಪ್ ಒಮ್ಮತದ ಹೋರಾಟದ ನಿರ್ಣಯದಿಂದ ಹಿಂದೆ ಸರಿದಿದ್ದು, ಉಳಿದ 16 ಪಕ್ಷಗಳು ಬಿಜೆಪಿ ವಿರುದ್ಧ ಸಮರ ಸಾರಲು ಸನ್ನದ್ಧ ವಾಗಿವೆ.
ಸಭೆಯ ಬಳಿಕ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಈ ಸಭೆ ಬಹಳ ಪರಿಣಾಮಕಾರಿಯಾಗಿದ್ದು, ಉತ್ತಮ ಚರ್ಚೆ ನಡೆದಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ 2024ರ ಲೋಕಸಭೆ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮುಂದಿನ ಲೋಕಸಭೆ ಚುನಾವಣೆಗೆ ನಾವು ರಣತಂತ್ರ ರೂಪಿಸುತ್ತಿದ್ದೇವೆ. ಬಿಹಾರವನ್ನು ಗೆದ್ದರೆ ಇಡೀ ದೇಶವನ್ನೇ ಗೆಲ್ಲುವ ಮನೋಸ್ಥೈರ್ಯ ನಮ್ಮಲಿದೆ. ಜುಲೈನಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಇದನ್ನು ಶಿಮ್ಲಾದಲ್ಲಿ ಆಯೋಜಿಸಲಾಗುವುದು. ಆಗ ಮತ್ತಷ್ಟು ವಿಸ್ತೃತ ರಣತಂತ್ರ ರೂಪಿಸಲಾಗುವುದು. ವಿಪಕ್ಷಗಳು ಒಟ್ಟಾದರೆ ಬಿಜೆಪಿಯನ್ನು ಸೋಲಿಸಲು ಅಸಾಧ್ಯವೇನಲ್ಲ’ ಎಂದರು. ರಾಹುಲ್ ಗಾಂಧಿ ಕೂಡ ‘ಒಗ್ಗಟ್ಟಿನಿಂದ ಬಿಜೆಪಿ ಸೋಲಿಸಲು ಸಾಧ್ಯ’ ಎಂದರು.
ಇದೇ ವೇಳೆ, ‘ಬಿಜೆಪಿ ಇತಿಹಾಸವನ್ನು ಅಳಿಸಲು ಹೊರಡಿದೆ. ಆದರೆ ನಾವು ಇತಿಹಾಸವನ್ನು ಉಳಿಸಲಿದ್ದೇವೆ. ಬಿಹಾರದಿಂದ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಆವೇಶಭರಿತ ಭಾಷಣದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಾವು ಒಗ್ಗಟ್ಟಾಗಿದ್ದೇವೆ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ. ಇತಿಹಾಸ ಇಲ್ಲಿಂದ ಪ್ರಾರಂಭವಾಗಿದ್ದು, ಇತಿಹಾಸವನ್ನು ಬದಲಾಯಿಸಬೇಕೆಂದು ಬಿಜೆಪಿ ಬಯಸುತ್ತದೆ. ಬಿಹಾರದಿಂದ ಇತಿಹಾಸವನ್ನು ಉಳಿಸಬೇಕು ಎಂದು ನಾವು ಬಯಸುತ್ತೇವೆ. ಈ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಮಾತನಾಡುವುದು ನಮ್ಮ ಉದ್ದೇಶ” ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.
“ಸಭೆಯಲ್ಲಿ ಹಲವು ಸಿಎಂಗಳು, ಮಾಜಿ ಸಿಎಂಗಳು ಉಪಸ್ಥಿತರಿದ್ದರು. ಸಭೆಯನ್ನು ಚೆನ್ನಾಗಿ ಆಯೋಜಿಸಲಾಗಿತ್ತು. ಎಲ್ಲ ಹಿರಿಯ ನಾಯಕರು ಇಲ್ಲಿ ಇದ್ದಾರೆ. ಪಾಟ್ನಾದಲ್ಲಿ ಸಭೆ ನಡೆಸುವಂತೆ ನಾನೇ ಸೂಚಿಸಿದ್ದೆ. ನಾವು ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ನಮ್ಮನ್ನು ವಿರೋಧ ಪಕ್ಷ ಎಂದು ಕರೆಯಬೇಡಿ. ನಾವೂ ದೇಶಪ್ರೇಮಿಗಳು, ಮಣಿಪುರ ಹೊತ್ತಿ ಉರಿಯುತ್ತಿದ್ದರೆ ನಮಗೆ ನೋವಾಗುತ್ತದೆ” ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ರಾಜಭವನವನ್ನು ಪರ್ಯಾಯ ಸರ್ಕಾರವನ್ನಾಗಿ ಮಾಡುವ ಬಿಜೆಪಿಯ ದುಷ್ಕೃತ್ಯ. ಅದಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಯಾರಾದರೂ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳವನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಮತ್ತೆ ಗೆದ್ದರೆ ಭಾರತ ನಾಶವಾಗುತ್ತದೆ” ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ದೆಹಲಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಕೇಂದ್ರ ಸರ್ಕಾರದ ವಿವಾದಿತ ಸುಗ್ರೀವಾಜ್ಞೆಗೆ ಕಾಂಗ್ರೆಸ್ ಬಹಿರಂಗವಾಗಿ ವಿರೋಧಿಸದಿದ್ದರೆ ವಿಪಕ್ಷಗಳ ಮುಂದಿನ ಸಭೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ಎಚ್ಚರಿಕೆ ನೀಡಿದೆ. ಅಲ್ಲದೇ ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಿಂದಲೂ ಹೊರಗುಳಿದಿದೆ.