ಕಾಂಗ್ರೆಸ್ ಬದಲಿಗೆ ಆಮ್ ಆದ್ಮಿ ಎಲ್ಲೆಡೆ ವಿರೋಧ ಪಕ್ಷ ಆಗುವುದನ್ನು ತಡೆಯಲು ಕಾರ್ಯತಂತ್ರಗಳನ್ನು ರೂಪಿಸುವಂತೆ ಬಿಜೆಪಿ ರಾಜ್ಯ ಘಟಕಗಳಿಗೆ ನಿರ್ದೇಶಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಆಮ್ ಆದ್ಮಿ ಪಕ್ಷದ ವಿಸ್ತರಣಾ ಯೋಜನೆ ಬಗ್ಗೆ ಬಿಜೆಪಿಗೆ ಚಿಂತೆ ಶುರುವಾಗಿದೆಯೇ? ಎಂಬ ಅನುಮಾನ ಶುರುವಾಗಿದೆ. ‘ಕಾಂಗ್ರೆಸ್ 70 ವರ್ಷದಿಂದ ಏನೂ ಮಾಡಿಲ್ಲ, ವಂಶಪಾರಂಪರ್ಯ ರಾಜಕಾರಣ ಮಾಡಿದರು, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದರು’ ಎಂಬಿತ್ಯಾದಿ ಆರೋಪಗಳನ್ನು ಮಾಡಿ ಚುನಾವಣೆಗಳನ್ನು ಗೆಲ್ಲುತ್ತಿದ್ದ ಬಿಜೆಪಿಗೆ ಆಮ್ ಆದ್ಮಿ ಪಕ್ಷದ ಬಗ್ಗೆ ಆರೋಪ ಮಾಡಲು ಸದ್ಯಕ್ಕೆ ಏನೂ ಇಲ್ಲ. ಹಾಗಾಗಿ ಭಯ ಉಂಟಾಗಿರಬಹುದು.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಆಮ್ ಆದ್ಮಿ ಪಕ್ಷ ಈಗ ತನ್ನ ಗಮನವನ್ನು ಇದೇ ವರ್ಷದ ಕೊನೆಗೆ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳತ್ತ ನೆಟ್ಟಿದೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳ ಮೇಲೂ ನಿಗಾ ಇಟ್ಟಿದೆ. ಜೆಡಿಎಸ್ ಪಾಲು ಹೊಂದಿರುವ ಕರ್ನಾಟಕವನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಡೆಸುತ್ತಿವೆ.
ಇದೇ ಹಿನ್ನೆಲೆಯಲ್ಲಿ ಮೂರನೇ ಪಕ್ಷದ ಆಗಮನದ ಬಗ್ಗೆ ಬಿಜೆಪಿ ಚಿಂತಾಕ್ರಾಂತವಾಗಿರುವಂತೆ ಕಾಣುತ್ತಿದೆ. ಬಿಜೆಪಿ ಆಡಳಿತ ಹಾಗೂ ಭದ್ರ ನೆಲೆ ಇರುವ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಬೇರೂರದಂತೆ ಕಾರ್ಯತಂತ್ರ ರೂಪಿಸಿ. ಆಮ್ ಆದ್ಮಿ ಪಕ್ಷಕ್ಕೆ ಸಂಘಟನೆಯ ನೆಲೆಯನ್ನು ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಬಿಜೆಪಿ ರಾಜ್ಯಗಳಿಗೆ ಸಂದೇಶ ರವಾನಿಸಿದೆ. ಜಿಲ್ಲೆಯಿಂದ ರಾಜ್ಯ ಮಟ್ಟದವರೆಗೆ ಸಂಘಟನಾ ಜವಾಬ್ದಾರಿ ಹೊಂದಿರುವ ಆಪ್ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆದುಕೊಳ್ಳುವಂತೆ ಗುಜರಾತ್ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಪಕ್ಷವನ್ನು ವಿಸ್ತರಿಸುವ ಸಾಮರ್ಥ್ಯವುಳ್ಳ ಹಲವು ಆಮ್ ಆದ್ಮಿ ಪಕ್ಷದ ನಾಯಕರನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಎಎಪಿಯ ಮಹತ್ವಾಕಾಂಕ್ಷೆಯ ಯೋಜನೆಗೆ ದೊಡ್ಡ ಆಘಾತ ನೀಡಿತ್ತು. ಇದೇ ರೀತಿ ಬೇರೆಡೆ ಕೂಡ ಆಮ್ ಆದ್ಮಿ ಪಕ್ಷದ ಓಟಕ್ಕೆ ತಡೆಯೊಡ್ಡಲು ರಾಜ್ಯ ಘಟಕಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಗುಜರಾತ್‌ನಲ್ಲಿ, ವಿವಿಧ ಹಂತಗಳಲ್ಲಿ 500ಕ್ಕೂ ಹೆಚ್ಚು ಎಎಪಿ ನಾಯಕರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಉತ್ತರಾಖಂಡದಲ್ಲಿ, ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಇತರರು ಬಿಜೆಪಿ ಸೇರಿದರು. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಅಥವಾ ಉತ್ತರಾಖಂಡದಲ್ಲಿ ಹಿರಿಯ ಎಎಪಿಯನ್ನು ಸೇರ್ಪಡೆಗೊಳಿಸುವ ಮೂಲಕ ಬಿಜೆಪಿ ಪಂಜಾಬ್‌ನಲ್ಲಿ ಐತಿಹಾಸಿಕ ವಿಜಯದ ನಂತರ ಹೊಸ ರಾಜ್ಯದಲ್ಲಿ ಪಕ್ಷವನ್ನು ವಿಸ್ತರಿಸುವ ಕೇಜ್ರಿವಾಲ್ ಯೋಜನೆಗೆ ದೊಡ್ಡ ಹೊಡೆತ ನೀಡಿದೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಅವರು ‘ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ದಿಷ್ಟ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ, ಅಭಿವೃದ್ಧಿ ಮಾಡೆಲ್ ಮೂಲಕ ಆಮ್ ಆದ್ಮಿ ಪಕ್ಷದ ಉಚಿತ ಯೋಜನೆಗಳನ್ನು ನೀಡುವ ಕಾರ್ಯತಂತ್ರವನ್ನು ಎದುರಿಸಬೇಕು. ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿಲ್ಲ, ಆದರೆ ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಬೇಕು. ಜೊತೆಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ವಿಫಲವಾಗಿರುವ ಮಾದರಿಯ ವಿರುದ್ಧ ಅಭಿಯಾನ ನಡೆಸಬೇಕು. ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಸರ್ಕಾರದ ವಿರುದ್ಧ ಮನೆ ಮನೆಗೆ ‘ಚುನಾವಣೆ ಖೋಲ್’ ಅಭಿಯಾನ ಕೂಡ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಆಮ್ ಆದ್ಮಿ ಪಕ್ಷವು ನೆಲೆ ಕಂಡುಕೊಳ್ಳದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಆಮ್ ಆದ್ಮಿ ಪಕ್ಷದ ಬಗ್ಗೆ ಬಿಜೆಪಿ ಈ ಪರಿ ಗಂಭೀರವಾಗಿರುವುದು ಕುತೂಹಲಕಾರಿಯಾಗಿದೆ.
ಇದೇ ವೇಳೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ನ ಜನರಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾಪವು ಬಿಜೆಪಿ ಪಕ್ಷಕ್ಕೆ ಏಕೆ ತೊಂದರೆಯಾಗಿದೆ ಎಂದು ಕೇಳಿದ್ದಾರೆ. ಉಚಿತ ವಿದ್ಯುತ್ ಸರಬರಾಜು ವಿಷಯ ಈಗ ಹೊಸ ವಾಗ್ಯುದ್ದಕ್ಕೂ ಎಡೆ ಮಾಡಿಕೊಟ್ಟಿದೆ. ‘ಕೆಲವು ನಾಯಕರು’ ನೀಡುತ್ತಿರುವ ಉಚಿತ ಕೊಡುಗೆಗಳು ಅಭಿವೃದ್ಧಿ ವಿರೋಧಿ ಎಂದು ಅರವಿಂದ ಕೇಜ್ರಿವಾಲ್ ಹೆಸರು ಹೇಳದೆ ಗುಜರಾತಿನ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್ ‘ಉಚಿತ ವಿದ್ಯುತ್ ನೀಡಲು ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು’ ಎಂದು ತಿರುಗೇಟು ನೀಡಿದ್ದಾರೆ. ಗುಜರಾತ್ ಚುನಾವಣೆ ಗರಂ ಆಗತೊಡಗಿದೆ.