ರಾಜಕೀಯ ನಾಯಕರ ಅಬ್ಬರದ ಪ್ರಚಾರ, ಸೋಲು ಗೆಲವಿನ ಲೆಕ್ಕಾಚಾರ, ಗೆಲುವಿಗಾಗಿ ನಾನಾ ತಂತ್ರ, ಸೋಲಿಸಲು ರಣತಂತ್ರ, ಇಷ್ಟೆಲ್ಲಾ ಅಬ್ಬರ ಹಾರಾಟದ ಬಳಿಕ ಕೊನೆಗೂ ಉಪಚುನಾವಣೆಯ ಫಲಿತಾಂಶ ಬಂದಿದೆ. ಸಿಂದಗಿಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಆದ್ರೆ, ಸಿಎಂ ತವರಲ್ಲೇ ಕೇಸರಿ ಪಾಳಯ ಮಕಾಡೆ ಮಲಗಿದೆ. ಹಾಗಾದ್ರೆ ಹೀಗಾಗಲು ಕಾರಣಗಳೇನು? ಇಲ್ಲಿದೆ ಒಂದು ರಿಪೋರ್ಟ್.
ಸಿಂದಗಿ ಕ್ಷೇತ್ರದ ಮತದಾರ ಬಿಜೆಪಿಗೆ ದೀಪಾವಳಿಯ ಗಿಫ್ಟ್ ನೀಡಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎನ್ನುತ್ತಿದ್ದ ರಾಜಕೀಯ ನಾಯಕರ ಲೆಕ್ಕಾಚಾರಗಳು ಬುಡಮೇಲಾಗಿವೆ. ಅನುಕಂಪದ ಅಲೆಯ ಬಗ್ಗೆ ಮತದಾರ ತಲೆಕೆಡಿಸಿಕೊಳ್ಳದೇ ಬಿಜೆಪಿಯ ಅಲೆಗೆ ತಲೆಬಾಗಿದ್ದಾನೆ. ಹೀಗಾಗಿ ಕಮಲ ಅಭ್ಯರ್ಥಿ ರಮೇಶ್ ಬೂಸನೂರ ಕಾಂಗ್ರೆಸ್, ಜೆಡಿಎಸ್‌ಗೆ ಮಣ್ಣುಮುಕ್ಕಿಸಿ ಭರ್ಜರಿ ಜಯಗಳಿಸಿದ್ದಾರೆ.
ಬಿಜೆಪಿ ಗೆಲುವಿಗೆ ಕಾರಣಗಳು
ಕಾರಣ 1: ಸಿಎಂ ಬೊಮ್ಮಾಯಿ ಇಡೀ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗಳಿಗೆ ತೆರಳಿ ರೋಡ್ ಶೋ
ಕಾರಣ 2: ಮತದಾರರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದ ಸಿಎಂ ಬೊಮ್ಮಾಯಿ
ಕಾರಣ 3: ಗಾಣಿಗ ಸಮುದಾಯದ ಮತಗಳನ್ನ ಸೆಳೆಯುವಲ್ಲಿ ಭೂಸನೂರ್ ಯಶಸ್ವಿ
ಕಾರಣ 4: ಬಣ ರಾಜಕಾರಣದ ಕಾರಣ ಜನರ ಮನ ಗೆಲ್ಲುವಲ್ಲಿ ಕಾಂಗ್ರೆಸ್ ವಿಫಲ
ಕಾರಣ 5: ಕಾಂಗ್ರೆಸ್ ಹೋರಾಟದ ಚಟುವಟಿಕೆಗಳು ಮತವಾಗಿ ಪರಿವರ್ತನೆ ಆಗಿಲ್ಲ
ಕಾರಣ 6: ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿದ್ದು ಬಿಜೆಪಿ ಗೆಲುವು ಸುಗಮ
ಖುದ್ದು ಸಿಂದಗಿ ಉಪಕದನದ ಅಖಾಡಕ್ಕಿಳಿದಿದ್ದ ಸಿಎಂ ಬೊಮ್ಮಾಯಿ ಇಡೀ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗಳಿಗೆ ತೆರಳಿ ರೋಡ್ ಶೋ ಮಾಡಿದ್ರು. ಈ ಮೂಲಕ ಮತದಾರರ ಮನ ಮುಟ್ಟುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
ಅಲ್ಲದೇ ಗಾಣಿಗ ಸಮುದಾಯದ ಮತಗಳನ್ನ ಸೆಳೆಯುವಲ್ಲಿ ಅಭ್ಯರ್ಥಿ ರಮೇಶ್ ಭೂಸನೂರ್ ಯಶಸ್ವಿಯಾಗಿದ್ದಾರೆ. ಬಣ ರಾಜಕಾರಣದ ಕಾರಣ ಜನರ ಮನ ಗೆಲ್ಲುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಹೋರಾಟದ ಚಟುವಟಿಕೆಗಳು ಕೈಗೆ ಮತವಾಗಿ ಪರಿವರ್ತನೆ ಆಗಿಲ್ಲ ಇದು ಬಿಜೆಪಿಗೆ ಪ್ಲಸ್ ಆಗಿದೆ. ಮತ್ತೊಂದು ಪ್ಲಸ್ ಪಾಯಿಂಟ್ ಎಂದ್ರೆ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿದ್ದು ಬಿಜೆಪಿ ಗೆಲುವಿನ ಹಾದಿ ಸುಗಮವಾಗಲು ಪ್ರಮುಖ ಕಾರಣವಾಗಿದೆ.
ಸಿಂದಗಿಯಲ್ಲಿ ಗೆದ್ರೂ ಹಾನಗಲ್ನಲ್ಲಿ ಮುದುಡಿದ ‘ಕಮಲ’
ಅತ್ತ ಸಿಂದಗಿಯಲ್ಲಿ ಗೆದ್ದು ಬೀಗಿದ್ರೂ, ಇತ್ತ ಸಿಎಂ ತವರಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ತಮ್ಮದೇ ಶಾಸಕನಿದ್ದ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸುವಲ್ಲಿ ಬಿಜೆಪಿ ಎಡವಿದೆ. ಇಡೀ ಸರ್ಕಾರದ ಘಟಾನುಘಟಿ ನಾಯಕರು ಹಾನಗಲ್‌ನಲ್ಲಿ ಅಬ್ಬರದ ಪ್ರಚಾರ ಮಾಡಿದ್ರು ಜಯದ ಹಾದಿ ಮಾತ್ರ ಸಿಗದಾಗಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇದು ಹಾನಗಲ್ನಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು ಎಂಬ ಲೆಕ್ಕಾಚಾರ ಮಾಡುವಂತಾಗಿದೆ.
ಹಾನಗಲ್ ಸೋಲಿಗೆ ಕಾರಣಗಳು?
1. ಕ್ಷೇತ್ರಕ್ಕೆ ಸಂಬಂಧಿಸದ ಅಭ್ಯರ್ಥಿ ಕಣಕ್ಕಿಳಿಸಿದ್ದೇ ಬಿಜೆಪಿಗೆ ಹೊಡೆತ
2. ಜನರಿಗೆ ಶಿವರಾಜ್ ಸಜ್ಜನರ್ ಮೇಲೆ ಅಷ್ಟೊಂದು ಒಲವಿಲ್ಲದೇ ಇದ್ದದ್ದು
3. ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜ ಕಡೆಗಣಿಸಿದ್ದು
4. ಕಳೆದ ಮೂರುವರೆ ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ
5. ಮೂಲ ಬಿಜೆಪಿಗರನ್ನು ಚುನಾವಣಾ ಅಖಾಡದಿಂದಲೇ ದೂರವಿಟ್ಟಿದ್ದು
6. ಬೈ ಎಲೆಕ್ಷನ್ ಪ್ರಚಾರದಲ್ಲಿ ವಲಸೆ ಬಂದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು
7. ಪ್ರಮುಖ ಮಠಗಳ ಮಠಾಧೀಶರು ದೂರವುಳಿದು, ತಟಸ್ಥ ನಿಲುವು ತಾಳಿದ್ದು
ಹಾನಗಲ್ ಕ್ಷೇತ್ರಕ್ಕೆ ಸಂಬಂಧಿಸದ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇ ಬಿಜೆಪಿಗೆ ಹೊಡೆತ ಕೊಟ್ಟಿದೆ ಎನ್ನಲಾಗ್ತಿದೆ. ಅಲ್ಲದೇ ಜನರಿಗೆ ಶಿವರಾಜ್ ಸಜ್ಜನರ್ ಮೇಲೆ ಅಷ್ಟೊಂದು ಒಲವಿಲ್ಲದೇ ಇದ್ದದ್ದು ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ. ಇತ್ತ ಹಾನಗಲ್‌ನಲ್ಲಿ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜವನ್ನ ಕಡೆಗಣಿಸಿದ್ದು ಕಮಲ ಅರಳದಿರಲು ಕಾರಣವಾಗಿದೆ. ಇನ್ನು ಕಳೆದ ಮೂರುವರೆ ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಅನ್ನೋದು ಸರ್ಕಾರದ ವಿರುದ್ಧದ ಸಿಟ್ಟಾಗಿದೆ. ಅಲ್ಲದೇ ಮೂಲ ಬಿಜೆಪಿಗರನ್ನು ಚುನಾವಣಾ ಅಖಾಡದಿಂದಲೇ ದೂರವಿಟ್ಟು, ವಲಸೆ ಬಂದ ಸಚಿವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಕೇಸರಿ ಸೋಲಿಗೆ ಕಾರಣ ಎನ್ನಲಾಗ್ತಿದೆ. ಅಲ್ಲದೇ ಪ್ರಮುಖ ಮಠಗಳ ಮಠಾಧೀಶರು ಬಿಜೆಪಿಯಿಂದ ದೂರವುಳಿದು, ತಟಸ್ಥ ನಿಲುವು ತಾಳಿದ್ದು ಕಮಲಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಎಂಬುದು ರಾಜಕೀಯವಲಯದಲ್ಲಿ ರಿಂಗಣಿಸುತ್ತಿದೆ.
ತವರಲ್ಲೇ ಸಿಎಂ ಬಸವರಾಜ ಬೊಮ್ಮಾಯಿಗೆ ಮುಖಭಂಗ
ಸಿಂದಗಿಯಲ್ಲಿ ವರ್ಕೌಟ್ ಆದ ಕೇಸರಿ ಕಲಿಗಳ ರಣವ್ಯೂಹ, ಹಾನಗಲ್‌ನಲ್ಲಿ ಠುಸ್ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಜಿಲ್ಲೆಯಲ್ಲಿ ಗೆಲುವಿನ ಸಾರಥ್ಯ ವಹಿಸುವಲ್ಲಿ ವಿಫಲಾಗಿದ್ದಾರೆ. ಅಲ್ಲದೇ ಸಚಿವರಾದ ಡಾ.ಕೆ. ಸುಧಾಕರ್ ಮತ್ತು ಮುನಿರತ್ನ ಹೆಣೆದಿದ್ದ ಗೆಲುವಿನ ಪ್ಲಾನ್ ಮಕಾಡೆ ಮಲಗಿದೆ. ಹೀಗಾಗಿ ಹಾನಗಲ್‌ನ ಬಿಜೆಪಿ ಕಳೆದುಕೊಂಡಿದೆ ಅನ್ನೋದು ಸದ್ಯದ ರಾಜಕೀಯ ಚರ್ಚೆ.
ತವರಲ್ಲೇ ಸಿಎಂಗೆ ಮುಖಭಂಗ
1. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯೇ ಪ್ರಮುಖ ಕಾರಣ
2. ಬದಲಾವಣೆ ಬಳಿಕ ಬಿ.ಎಸ್.ಯಡಿಯೂರಪ್ಪರ ಕಡೆಗಣನೆ
3. ಬಿಎಸ್ವೈ ಸಮಯ ಮೀಸಲಿಟ್ಟಿದ್ರೂ ಸಿಎಂ ಬೊಮ್ಮಾಯಿ ನಿರ್ಲಕ್ಷ್ಯ
5. ಬೊಮ್ಮಾಯಿ ಹೊಸ ತಂತ್ರಗಾರಿಕೆಯನ್ನು ಹೆಣೆಯಲು ಮುಂದಾಗಿದ್ದು
6. ಕಳೆದ ಎರಡು ವರ್ಷಗಳ ಹಿಂದಿನ ಸಾಧನೆಯನ್ನ ಪ್ರಸ್ತಾಪಿಸದೆ ಇದ್ದದ್ದು
7. ಯಡಿಯೂರಪ್ಪರ ಅವಧಿಯ ಸಾಧನೆ ಬಗ್ಗೆ ಉಲ್ಲೇಖಿಸದೇ ಇದ್ದದ್ದು
8. ಬಿಎಸ್ವೈ ಇಲ್ಲದಿದ್ರೂ ಗೆದ್ದೇ ಗೆಲ್ತೇವೆ ಎಂಬ ವಿಶ್ವಾಸದಲ್ಲಿದ್ದ ಸಿಎಂ
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯೇ ಹಾನಗಲ್ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ನಾಯಕತ್ವ ಬದಲಾವಣೆ ಬಳಿಕ ಬಿ.ಎಸ್.ಯಡಿಯೂರಪ್ಪರನ್ನ ಸಿಎಂ ಕಡೆಗಣಿಸಿದ್ದಾರೆ ಅನ್ನೋದು ಸೋಲಿಗೆ ಕಾರಣವಾಗಿದೆಯಂತೆ. ಇನ್ನು ಬಿಎಸ್ವೈ ಸಮಯ ಮೀಸಲಿಟ್ಟಿದ್ರೂ ಸಿಎಂ ಬೊಮ್ಮಾಯಿ ಅವರನ್ನ ನಿರ್ಲಕ್ಷ್ಯಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೊಮ್ಮಾಯಿಯೇ ಸ್ವತಃ ಹೊಸ ತಂತ್ರಗಾರಿಕೆಯನ್ನು ಹೆಣೆಯಲು ಮುಂದಾಗಿದ್ದು, ಕಳೆದ ಎರಡು ವರ್ಷಗಳ ಹಿಂದಿನ ಸಾಧನೆಯನ್ನ ಪ್ರಸ್ತಾಪಿಸದೇ ಇದ್ದದ್ದು ಗೆಲುವಿನ ಹಾದಿಗೆ ಮುಳ್ಳಾಗಿದೆ ಎನ್ನಲಾಗಿದೆ. ಅಲ್ಲದೇ ಕರ್ನಾಟಕದ ಬಿಜೆಪಿ ಭೀಷ್ಮ ಯಡಿಯೂರಪ್ಪರ ಅವಧಿಯ ಸಾಧನೆಗಳನ್ನ ಸಿಎಂ ಪ್ರಚಾರದ ವೇಳೆ ಉಲ್ಲೇಖಿಸದೇ ಬಿಎಸ್ವೈ ಇಲ್ಲದಿದ್ರೂ ಗೆದ್ದೇ ಗೆಲ್ತೇವೆ ಎಂಬ ಅತಿಯಾದ ವಿಶ್ವಾಸವೂ ಹಾನಗಲ್ ಕಮಲದ ಕೈ ತಪ್ಪಲು ಕಾರಣ ಎನ್ನಲಾಗುತ್ತಿದೆ.
ಒಟ್ಟಾರೆ, ಮತದಾರ ಬರೆದಿದ್ದ ಅಭ್ಯರ್ಥಿಗಳ ಹಣೆಬರಹ ಈಗ ಬಹಿರಂಗವಾಗಿದೆ. ಅಲ್ಲದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಿಹಿ-ಕಹಿ ರುಚಿಯನ್ನೂ ತೋರಿಸಿದ್ದಾನೆ. ಅದೇನೆ ಇರ್ಲಿ ಮಿನಿಕದನದ ರಿಸಲ್ಟ್‌ನಿಂದ 2023ರ ಚುನಾವಣೆ ಬಗ್ಗೆ ಮೂರು ಪಕ್ಷಗಳಿಗೆ ಒಂದು ಲೆಕ್ಕಾಚಾರ ಸಿಕ್ಕಂತಾಗಿದೆ. ಇದನ್ನೇ ಆಧರಿಸಿ ರಾಜ್ಯದ ಮತದಾರರನ್ನ ಒಲಿಸಿಕೊಳ್ಳಲು ಮೂರು ಪಕ್ಷಗಳು ಕಾರ್ಯೋನ್ಮುಖವಾಗೋದಂತೂ ಸತ್ಯ.