ರಾಜ್ಯದಲ್ಲಿ ದಿನದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಈ ಮಧ್ಯೆ ಸರ್ಕಾರ ಜನರು ಗುಂಪು ಗೂಡುವುದು ಹಾಗೂ ಸಾರ್ವಜನಿಕ ಉತ್ಸವಗಳಿಗೆ ನಿರ್ಬಂಧ ಹೇರಿದೆ. ಈ ಮಧ್ಯೆ ಬನಶಂಕರಿ ಜಾತ್ರೆಗೆ ಸರ್ಕಾರ ನಿರ್ಬಂಧ ಹೇರಿದ ಕಾರಣ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ದೇವರ ಶಾಪ, ರೈತರ ಶಾಪದಿಂದ ಬಿಜೆಪಿ ಹೋಗುವ ಕಾಲ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಬಾದಾಮಿಯಲ್ಲಿ ಮಾತನಾಡಿದ ಅವರು, “ಬಾದಾಮಿ ಬನಶಂಕರಿ ದೇವಿ ಜಾತ್ರೆ ಶತಮಾನದ ಇತಿಹಾಸ ಹೊಂದಿದೆ ಬನಶಂಕರಿ ದೇವಿ ಜಾತ್ರೆಗೆ ನಿರ್ಬಂಧ ಮತ್ತು ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ” ಎಂದು ಕಿಡಿಕಾರಿದ್ದಾರೆ.
ಭಾರತ ದೇಶ ನಂಬಿಕೆ ಮೇಲೆ, ಧಾರ್ಮಿಕ ಭಾವನೆ ಮೇಲೆ ಪರಂಪರೆಯನ್ನ ಹೊಂದಿರುವ ರಾಷ್ಟ್ರ ಎರಡು ವರ್ಷಗಳಿಂದ ಕೋವಿಡ್ ನೆಪ ಹೇಳಿ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರೈತರ ಮೇಲೆ ದಾಳಿ ನಡೆಸಿ ಶೋಚನೀಯ ಪರಿಸ್ಥಿತಿ ತಲಪುವಂತೆ ಮಾಡಿದೆ. ಕಾನೂನು ಕಟ್ಟಳೆ ಮಾಡಿ ರೈತರನ್ನ ಮತ್ತು ಧಾರ್ಮಿಕ ಕಾರ್ಯಕ್ರಮವನ್ನ ತುಳಿಯುತ್ತಿದ್ದಾರೆ. ಧಾರ್ಮಿಕ ಆಚರಣೆ ಮಾಡಿ ದೇವಿ ಹತ್ರ ಕೇಳಿದ್ರೆ, ಸಂಪೂರ್ಣ ಕೋವಿಡ್ ನಿಯಂತ್ರಣ ಮಾಡುವ ಶಕ್ತಿ ದೇವಿಯಲ್ಲಿದೆ. ಬನಶಂಕರಿ ಜಾತ್ರೆಯಲ್ಲಿ ಭಕ್ತರನ್ನ ಹೊಡೆಯುವುದನ್ನು ನೋಡಿದ್ರೆ, ದೇವಿ ಶಾಪದಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗಲಿದೆ ಎಂದಿದ್ದಾರೆ.
ಧರ್ಮದ ಆಧಾರದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಲ್ಲರೂ ಅವರನ್ನ ನಂಬಿ ಓಟ್ ಹಾಕಿದ್ದಾರೆ. ಆದರೆ, ಹಿಂದೂಗಳ ದೇವಸ್ಥಾನಗಳನ್ನ ಕೆಡವಿದ್ದು ನಮಗೆ ನೋವಾಗಿದೆ ನೂರಕ್ಕೆ ನುರಾವೊಂದು ಪರ್ಸೆಂಟ್ ಹಿಂದೂಗಳ ಶಾಪ ಅವರನ್ನು ತಟ್ಟದೆ ಬಿಡವುದಿಲ್ಲ. ದೇವರನ್ನ ವಿರೋಧ ಮಾಡಿದರು ಇವತ್ತಿನವರೆಗೂ ಬೆಳೆದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಭಾರತ ದೇಶ ಧರ್ಮದ ತಳಹದಿಯ ಮೇಲೆ ನಿಂತಿದೆ. ಕಳೆದ ಬಾರಿ ಕೋವಿಡ್ ನಲ್ಲಿ ಕೆರಕಲಮಟ್ಟಿ ಮತ್ತು ಬೆಳಗಾವಿಗೆ ಅಮಿತ್ ಶಾ ಬಂದು ಹೋಗಿದ್ರು. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಮಂತ್ರಿಗಳು ಬಂದಾಗ ಲಕ್ಷ ಗಟ್ಟಲೆ ಜನ ಬಂದ್ರೆ ಕೊರೊನಾ ಬರೋದಿಲ್ವ? ಆದ್ರೆ ಬನಶಂಕರಿ ಜಾತ್ರೆಯಲ್ಲಿ ಜನ ಬಂದ್ರೆ ಕೊರೊನಾ ಬರುತ್ತೆ ಎಂದು ಭಕ್ತರ ಮೇಲೆ ಶೋಚನೆ ಮಾಡೋದು ನೋವಾಗಿದೆ ಎಂದು ಅಸಮಾಧಾನ ತೋರ್ಪಡಿಸಿದ್ದಾರೆ.