.ವಿಧಾನಸಭಾ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳುಗಳಷ್ಟೇ ಬಾಕಿ ಇರುವಂತೆ ಪಕ್ಷಾಂತರ ಚರ್ಚೆ ಭಾರಿ ಸದ್ದಿ ಮಾಡುತ್ತಿದೆ. ಹೌದು,ಬಿಜೆಪಿ ಸರ್ಕಾರದ ಹಾಲಿ ಸಚಿವ ಸೇರಿದಂತೆ ತುಮಕೂರಿನ ಇಬ್ಬರು ಪ್ರಮುಖ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ ಎಂದು PeepalMedia.com ವರದಿ ಮಾಡಿದೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎನ್.ರಾಜಣ್ಣ, ಹಾಲಿ ಸಚಿವ ಮಾಧುಸ್ವಾಮಿ ಕಾಂಗ್ರೆಸ್ ಸೇರುವ ಇಚ್ಛೆಯನ್ನ ತಮ್ಮ ಬಳಿ ಹೇಳಿಕೊಂಡಿದ್ದಾರೆ. ತಿಪಟೂರಲ್ಲಿ ಸೀಟ್ ಕೊಡ್ಸಿ ನಾನು ಕಾಂಗ್ರೆಸ್‌ಗೆ ಬರ್ತಿನಿ ಎಂದು ಅವರೇ ನನ್ನ ಬಳಿ ಹೇಳಿದ್ದಾರೆ. ಅವರು ಮಂತ್ರಿಯಾಗಿದ್ದಾಗಲೇ ನನ್ನ ಬಳಿ ಈ ಮಾತನ್ನು ಹೇಳಿದ್ದರು. ಅವರು ಕಾಂಗ್ರೆಸ್‌ಗೆ ಬಂದ್ರೆ ನಾನು ಸ್ವಾಗತ ಮಾಡುತ್ತೇನೆ ಎಂದುರಾಜಣ್ಣ ಹೇಳಿದ್ದಾರೆ.
ಮಾಧುಸ್ವಾಮಿ ಮಾತ್ರವಲ್ಲ, ತುಮಕೂರಿನ ಬಿಜೆಪಿ ನಾಯಕ, ಮಾಜಿ ಶಾಸಕ ಸುರೇಶ್ ಗೌಡ ಕೂಡ ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ. ನನ್ನದೊಂದು ಕೇಸ್ ಇದೆ. ಆ ಕೇಸ್ ಇತ್ಯರ್ಥವಾದ ಮೇಲೆ ನಾನು ಕಾಂಗ್ರೆಸ್‌ಗೆ ಬರ್ತೀನಿ ಎಂದು ಹೇಳಿದ್ದಾರೆ ಎಂದು ರಾಜಣ್ಣ ಮಾತನಾಡಿದರು.