ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿ ಕಾಮಕುಮಾರರ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಜೈನ ಸಮುದಾಯದ ಜನರು ಮುನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೂ ಸರ್ಕಾರ ಹಾಗು ಪೊಲೀಸರ ಕೆಲಸವನ್ನು ಜೈನ ಮುನಿಗಳು ಸೇರಿದಂತೆ ಜೈನ ಸಮುದಾಯ ಮೆಚ್ಚಿಕೊಂಡಿದೆ. ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ ದೂರು ನೀಡಲಾಗಿತ್ತು. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ, ಸತ್ಯವನ್ನು ಬಹಿರಂಗ ಮಾಡಿದ್ದಾರೆ. ಪೊಲೀಸರು ಯಾವುದೇ ಸಮಸ್ಯೆ ಮಾಡ್ತಿಲ್ಲ. ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾತನಾಡಿದ್ದಾರೆ. ಆದರೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಜೈನಮುನಿ ಕಾಮಕುಮಾರ ಚಿಕ್ಕೋಡಿಯ ನಂದಿ ಹಿರೇಕೋಡಿ ಆಶ್ರಮಕ್ಕೆ ಭೇಟಿ ನೀಡಿ ಜೈನು ಮುನಿಗಳ ಹತ್ಯೆ, ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. ಜೈನ ಮುನಿಗಳ ಹತ್ಯೆ ಬಗ್ಗೆ ಬಿಜೆಪಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಬಟಾಬಯಲಾಗಿದೆ. ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲೇ ಈ ರೀತಿಯ ಘಟನೆಯೊಂದು ನಡೆದಿರುವುದು, ಬಿಜೆಪಿ ನಾಯಕರ ಮೂಗಿನ ನೇರದಲ್ಲೇ ರಾಜಕೀಯ ಲಾಭದ ಸಂಚು ಅನಾವರಣ ಆಗಿದೆ.
ಕಟೀಲ್ ಎದುರು ಶಾಸಕ ಸಂಜಯ್ ಪಾಟೀಲ್ ಹೇಳಿದ್ದೇನು..?

ನಳೀನ್ ಕುಮಾರ್ ಕಟೀಲ್ ಜೊತೆಗೆ ಆಶ್ರಮಕ್ಕೆ ತೆರಳಿದ್ದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಟ್ರಸ್ಟ್ ಕಮಿಟಿ ಅಧ್ಯಕ್ಷರನ್ನು ಕರೆದಿದ್ದು, ಮಾತುಕತೆ ಹೀಗಿದೆ ‘ಹೇ ಅಧ್ಯಕ್ಷರೇ.. ತನಿಖೆ ಹೇಗೆ ನಡೀತಿದೆ..?’ ‘ನಾಲ್ಕು ತಾಸಿನಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವಿಚಾರದಲ್ಲಿ ರಾಜ್ಯ ಪೊಲೀಸರು ಒಳ್ಳೇ ಕೆಲಸ ಮಾಡ್ತಿದ್ದಾರೆ. ಪಾರದರ್ಶಕವಾಗಿ ತನಿಖೆ ಆಗ್ತಿದೆ. ಏನೂ ಸಮಸ್ಯೆ ಇಲ್ಲ’ ಎಂದು ಟ್ರಸ್ಟ್‌ನ ಅಧ್ಯಕ್ಷರಾಗಿರುವ ಭೀಮಪ್ಪ ಉಗಾರೆ ಮಾತಿಗೆ ಸಿಡಿಮಿಡಿಗೊಂಡಿರುವ ಶಾಸಕ ಸಂಜಯ್ ಪಾಟೀಲ್, ನಿಮಗೆ ಸಮಾಧಾನ ತಂದಿದೆ ಅಂದ್ರೆ ಇಲ್ಲಿಗೆ ಬಂದು ನಾವೇನು ಮಾಡೋಣ..? ಅವರು ಹೇಗೆ ಹೇಳ್ತಾರೆ ಹಾಗೆ ಹೇಳಬೇಕು, ತನಿಖೆ ಮುಗಿಲಿ ಎಂದು ಹೇಳಬೇಕು, ಹಿಂಗೆ ಅಂದು ಬಿಟ್ರಲ್ಲಪ್ಪಾ…!? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಡೆಗೆ ಕೈ ತೋರಿಸಿ, ಅವರು ಹೇಗೆ ಹೇಳ್ತಾರೆ ಹಾಗೆ ಹೇಳ್ಬೇಕು ಎಂದು ತಾಕೀತು ಮಾಡಿದ್ದಾರೆ. ಅಂದರೆ ಅಂದು ಸಂಜಯ ಪಾಟೀಲ್ ಮುಸ್ಲಿಂ ವ್ಯಕ್ತಿ ಬಗ್ಗೆ ಪೊಲೀಸ್ರು ಮುಚ್ಚಿಟ್ಟಿದ್ದರು, ಆ ಬಳಿಕ ಪ್ರತಿಭಟನೆ ಮಾಡ್ತೇವೆ ಎನ್ನುವ ಕಾರಣಕ್ಕೆ ಹೆಸರು ಬಿಡುಗಡೆ ಮಾಡಲಾಯ್ತು ಎಂದಿದ್ದರು ಬಿಜೆಪಿ ಶಾಸಕ. ಇನ್ನು ಹಣಕಾಸಿನ ವಿಚಾರಕ್ಕೆ ಕೊಲೆ ನಡೀತು ಎಂದಿದ್ದ ಮುನಿಗಳ ಮಾತಿಗೆ ಉಲ್ಟಾ ಹೊಡೆದಿದ್ದರು. ಹಣಕಾಸು ವಿಚಾರ ಹೇಳಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ವಿರೋಧ ಪಕ್ಷದ ನಾಯಕನ ಮುಜುಗರ ತಪ್ಪಿಸುವ ಲೆಕ್ಕ..!

ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಹಾಗು ರಾಜ್ಯ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ವರವಾಗಿದ್ದು, ಬಿಜೆಪಿ ನಾಯಕರು ಸದನದಲ್ಲಿ ಬಾಯಿ ಬಿಡುವಂತಿಲ್ಲ ಎನ್ನುವ ಹಾಗೆ ಆಗಿದೆ. ಬಿಜೆಪಿ ನಾಯಕರು ಏನಾದರೂ ಮಾಡಲು ಮುಂದಾದರೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡೋದಕ್ಕೆ ಇನ್ನೂ ಸಾಧ್ಯವಾಗಿಲ್ಲ, ನೀವು ನಮಗೆ ಬುದ್ಧಿ ಹೇಳುತ್ತೀರಿ ಎಂದು ಹಂಗಿಸಯವ ಮಾತುಗಳು ಕಾಂಗ್ರೆಸ್ ಪಾಳದಿಂದ ಹೊರ ಬೀಳುತ್ತವೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಸದನದಿಂದ ಹೊರಗೆ ಹೆಚ್ಚು ಹೋರಾಟದ ಕಿಚ್ಚು ಹೊತ್ತಿಸುವ ನಿರ್ಧಾರ ಮಾಡಿದ್ದಾರೆ. ಬೆಳಗಾವಿ ಜೊತೆಗೆ ಟಿ ನರಸೀಪುರ ವಿಚಾರದಲ್ಲೂ ಸಾಧ್ಯವಾದಷ್ಟು ರಾಜಕೀಯ ಹೋರಾಟ ರೂಪಿಸುವ ಬಗ್ಗೆ ಚರ್ಚೆ ಆಗಿದೆ ಎನ್ನಲಾಗಿದೆ. ಆದರೂ ಜೈನ ಮುನಿಗಳ ವಿಚಾರದಲ್ಲಿ ಬಿಜೆಪಿ ನಡಾವಳಿಕೆ ಸರಿಯಾಗಿಲ್ಲ ಎನ್ನಬಹುದು.
ಕೃಷ್ಣಮಣಿ



