ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಜಾತಿ ರಾಜಕಾರಣದ ಕಾರ್ಡನ್ನು ಮುನ್ನೆಲೆಗೆ ತಂದಿದೆ. ಈಗಾಗಲೇ ಹಿಂದುಳಿದ ವರ್ಗಗಳಿಗೆ 27% ನೀಟ್ ಮೀಸಲಾತಿ ಘೋಷಿಸಿ ತಳ ಸಮುದಾಯಗಳ ಓಲೈಕೆಗೆ ಮುಂದಾಗಿರುವ ಬಿಜೆಪಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಚುನಾವಣಾ ದಾಳ ಉರುಳಿಸಿದೆ. ಉತ್ತರದ ಪ್ರದೇಶದ ಮೋಹನ್ ಲಾಲ್ಗಂಜ್ ಕ್ಷೇತ್ರದಿಂದ ಆಯ್ಕೆಯಾಗಿ ಬಂದ ಸಂಸದ ಕೌಶಲ್ ಕಿಶೋರ್ ಮುಂದಿಟ್ಟುಕೊಂಡು ದಲಿತರ ಮತ ಸೆಳೆಯುವ ಹುನ್ನಾರ ಮಾಡುತ್ತಿದೆ. ಕೌಶಲ್ ಕಿಶೋರ್ ಮೂಲತಃ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸದ್ಯ ಮೋದಿ ಕ್ಯಾಬಿನೆಟ್ನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.
2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಇದೇ ವೇಳೆ ಕೊರೋನಾ ನಿರ್ವಹಣಾ ವೈಫಲ್ಯ, ರಫೇಲ್ ಹಗರಣ, ಯೋಗಿ ಆದಿತ್ಯನಾಥ್ ಆಡಳಿತ ವೈಫಲ್ಯ ಮುಂದಿಟ್ಟುಕೊಂಡು ಬಿಎಸ್ಪಿ, ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಈ ಬಾರಿ ಚುನಾವಣಾ ಕಣಕ್ಕಿಳಿಯಲಿದೆ. ಇದೇ ಕಾರಣಕ್ಕೆ ದಲಿತ ಸಮುದಾಯದ ಓಲೈಕೆ ಮಾಡಿ ನಾಗಲೋಟ ಮುಂದುರೆಸುವ ಲೆಕ್ಕಾಚಾರ ಬಿಜೆಪಿಯದ್ದು.
ಮುಖ್ಯವಾಗಿ ಈ ಬಾರಿ ಸಮಾಜವಾದಿ ಪಕ್ಷ ಹಾಗೂ ಮಾಯವಾತಿ ನೇತೃತ್ವದ ಬಿಎಸ್ಪಿಯನ್ನು ಗುರಿ ಮಾಡಿಕೊಂಡಂತಿದೆ ಭಾಜಪ. ಇದೇ ಕಾರಣಕ್ಕೆ ದಲಿತ ಅಸ್ಮಿತವಾದವನ್ನು ಮುಂದಿಟ್ಟುಕೊಂಡು ಈಗಲೇ ಪ್ರಚಾರ ಶುರುಮಾಡಿಕೊಂಡಿದೆ. ರಾಷ್ಟ್ರೀಯ ಸುದ್ದಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಕೌಶಲ್ ಕಿಶೋರ್ ಹೇಳಿಕೊಂಡಿದ್ದು ಈ ಬಾರಿ ದಲಿತರೇ ನಮ್ಮ ಟಾರ್ಗೆಟ್ ಎನ್ನುವಂತಿತ್ತು ಅವರ ಮಾತು. ಮುಖ್ಯವಾಗಿ ಬಿಎಸ್ಪಿ ಬಳಸಿಕೊಳ್ಳುವ ʻಜೈ ಭೀಮ್ʼ ಘೋಷಣೆಗೆ ಸೆಡ್ಡುಹೊಡೆಯುವಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ʻಜೈ ಅಂಬೇಡ್ಕರ್ʼ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗೆ ಸಿದ್ಧಗೊಂಡಿದೆ.
ಈ ಬಗ್ಗೆ ಕೌಶಲ್ ಕಿಶೋರ್, ಜೈ ಭೀಮ್ ಎನ್ನುವುದು ಕೇವಲ ಬಿಎಸ್ಪಿ ಪಕ್ಷದ ಮಾತ್ರ ಧ್ಯೇಯ ವಾಕ್ಯವಾಗಿದ್ದು ಅದರಿಂದ ದಲಿತರ ಉದ್ದೇರ ಮತ್ತು ಇಡೀ ಸಮುದಾಯವನ್ನು ಒಳಗೊಳ್ಳಲು ಸಾಧ್ಯವಾಗಿಲ್ಲ. ಜೈ ಭೀಮ್ ಮಾಯಾವತಿಯ ಒಂದು ಪೊಲಿಟಿಕಲ್ ಗಿಮಿಕ್ ಹೊರತು ಅದರಿಂದ ಈ ಸಮಾಜದ ಒಳಗೊಳ್ಳುವಿಕೆಯಿಂದ ದಲಿತರು ದೂರ ಉಳಿದಿದ್ದಾರೆ. ಆದರೆ ಬಿಜೆಪಿ ಪ್ರಮಾಣಿಕವಾಗಿ ದಲಿತರನ್ನು ಈ ಸಮಾಜದ ಜೊತೆ ಬೆರೆಸುವ ಕೆಲಸ ಮಾಡಿಕೊಂಡಿದೆ. ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ಕೊಟ್ಟು ಮುಂದು ತರುತ್ತಿದೆ. ಇದಕ್ಕೆ ಜ್ವಲಂತ ಸಾಕ್ಷಿ ನಾನು. ದಲಿತ ಸಮುದಾಯದಿಂದ ಬಂದ ನಾನು ಬಿಜೆಪಿಯಲ್ಲಿ ಈಗ ಸಚಿವನಾಗಿದ್ದೇನೆ. ನನಗಿಂತ ಒಳ್ಳೆಯ ಉದಾಹರಣೆ ಬೇರೊಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇದೇ ವೇಳೆ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇತ್ತ ಬಿಜೆಪಿ ಬಿಎಸ್ಪಿಯ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಮಾಯಾವತಿ ʻಬ್ರಾಹ್ಮಣ ಸಮಾವೇಶʼಗಳನ್ನು ನಡೆಸಿ ಬಿಜೆಪಿಯ ಮತಗಳನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಇತ್ತೇಚೆಗೆ ಕೆಲ ಮಾಧ್ಯಮಗಳು ವರದಿ ಮಾಡಿತ್ತು.
ಅಂಬೇಡ್ಕರ್ ತತ್ವಗಳನ್ನು ಕಟ್ಟಿದ ಜೈ ಭೀಮ್ ಎಂಬ ಪರಂಪರೆಯನ್ನೇ ಕೆಡವಲು ಈ ಮೂಲಕ ಬಿಜೆಪಿ ಸಜ್ಜಾಗಿದೆ. ಯಾವುದೇ ಸಂಶಯವಿಲ್ಲದೆಯೇ ಇದೊಂದು ಬಿಜೆಪಿಯ ಚುನಾವಣಾ ತಂತ್ರ ಎಂಬುವುದು ಸತ್ಯ. ಜೈ ಭೀಮ್ ಬದಲಿಗೆ ಜೈ ಅಂಬೇಡ್ಕರ್ ಎಂಬ ಘೋಷವಾಕ್ಯವನ್ನು ಈಗಾಗಲೇ ಮುನ್ನೆಲೆಗೆ ತಂದು ಚುನಾವಣಾ ಅಖಾಡಕ್ಕಿಳಿದಿರುವ ಬಿಜೆಪಿ ಅಪ್ನಾ ಬೂತ್ ಕೊರೋನಾ ಮುಕ್ತ್ ಎಂಬ ಮತ್ತೊಂದು ಗಿಮಿಕ್ನೊಂದಿಗೆ ಬಂದಿದೆ. ಆದರೆ ಈ ಬಾರಿಯ ರಾಜಕೀಯ ಲೆಕ್ಕಾಚಾರಗಳು ಮೊದಲಿನಂತಿಲ್ಲ ಎಂಬುವುದು ದಿಟ. ಇದೇ ಕಾರಣಕ್ಕೆ ತಮ್ಮ ಸಂಪ್ರಾದಾಯಿಕ ಮತವನ್ನು ಗಳಿಸಿಕೊಳ್ಳುವುದು ಮಾತ್ರವಲ್ಲದೆ, ವಿರೋಧ ಪಕ್ಷಗಳ ಮತ್ರವನ್ನು ಕೆಡಿಸಿವುದು ಕೂಡ ಅಷ್ಟೇ ಮುಖ್ಯವಾಗಿದೆ. ಇದೇ ಕಾರಣಕ್ಕೆ ಈ ಬಾರಿ ದಲಿತ ಅಸ್ಮಿತಾವಾದಕ್ಕೆ ಹೊಸ ವ್ಯಾಖ್ಯಾನ ನೀಡಿ ಮತ್ತೊಂದು ಹೊಸ ನಾಟಕಕ್ಕೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿದೆ.