ಬೆಂಗಳೂರು: ನಾನು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದಾರೆ. ನಮ್ಮ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಸುಳ್ಳು ಸುದ್ದಿಗಳು ನಂಬಬೇಡಿ ಎಂದು ಹೇಳಿದ್ದಾರೆ. ‘ನನ್ನ ಅವಧಿ ಮುಕ್ತಾಯವಾಗಿದೆ. ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುತ್ತದೆ. ನೈತಿಕವಾಗಿ ಜವಾಬ್ದಾರಿ ಹೊತ್ತು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ.
ನಿರ್ಧಾರದ ಬಗ್ಗೆ ಮೌಖಿಕವಾಗಿಯೂ ತಿಳಿಸಿದ್ದೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದರು.
![](https://pratidhvani.com/wp-content/uploads/2023/06/download-2023-06-24T123348.325-1.jpg)
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ನಳಿನ್ ಕುಮಾರ್ ಕಟೀಲ್ ಉಲ್ಟಾ ಹೊಡೆದಿದ್ದಾರೆ. ‘ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು’ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
![](https://pratidhvani.com/wp-content/uploads/2023/06/WhatsApp-Image-2023-06-24-at-3.16.40-PM-863x1024.jpeg)
![](https://pratidhvani.com/wp-content/uploads/2023/06/ಷನಚಷಚಹಷಸಹಸ-compressed.jpg)
ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದೆ. ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.