ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯ ಪ್ರಹಸನದಲ್ಲಿ ‘ಯಡಿಯೂರಪ್ಪ ರಾಜೀನಾಮೆ ನೀಡುವುದು ಯಾವಾಗ? ಮತ್ತು ಮುಂದಿನ ಮುಖ್ಯಮಂತ್ರಿ ಯಾರು?’ ಎಂಬ ಎರಡು ಪರ್ವಗಳು ಮಾತ್ರ ಬಾಕಿ ಉಳಿದಿವೆ. ಶಿಕಾರಿಪುರ ಪುರಸಭೆ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಗದ್ದುಗೆವರೆಗೆ ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ರಾಜೀನಾಮೆಗೆ ಕ್ಷಣಗಣನೆ ಶುರುವಾಗಿದೆ. ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರಾದರೂ ಒಮ್ಮೆಯೂ ಐದು ವರ್ಷಗಳ ಅವಧಿ ಪೂರೈಸದ ಯಡಿಯೂರಪ್ಪ ಅವರೀಗ ನೇಪಥ್ಯಕ್ಕೆ ಸರಿಯುವ ಕಾಲ ಸನ್ನಿಹಿತವಾಗುತ್ತಿದೆ.
ಯಡಿಯೂರಪ್ಪ ‘ಆಪರೇಷನ್ ಕಮಲ’ದಂತಹ ಅನೈತಿಕ ಮಾರ್ಗ ಹಿಡಿಯದಿದ್ದರೆ, ಶಾಸಕರನ್ನು ದುಡ್ಡು ಕೊಟ್ಟು ಕರತರದಿದ್ದರೆ ಬಹುಶಃ ಇವತ್ತಿಗೂ ಬಿಜೆಪಿ ರಾಜ್ಯದಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಮೊದಲಿಗೆ ಅಧಿಕಾರದ ಸವಿ ಉಣ್ಣಲು ಸಾಧ್ಯವಾಗುತ್ತಲೇ ಇರಲಿಲ್ಲ. ಈಗ ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿ ಆದ ಪ್ರಹಸನವಂತು ಇನ್ನೂಂದು ಹಂತದ ಅನೈತಿಕ ಹಾದಿಗೆ ಮುನ್ನುಡಿ ಬರೆದ ಅಧ್ಯಾಯವಾಗಿದೆ. ಹೀಗೆ ಉದ್ದಕ್ಕೂ ತಾವು ಕಹಿ ಉಂಡು ಬಿಜೆಪಿಗೆ ಮತ್ತು ಅದರ ಮಾತೃ ಸಂಸ್ಥೆ ಆರ್ ಎಸ್ ಎಸ್ ಗೆ ಅಧಿಕಾರ ಎಂಬ ಸಿಹಿ ಬಡಿಸಿದವರು ಯಡಿಯೂರಪ್ಪ.
ಇಂಥ ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಗಳಿಗೆಯಿಂದಲೂ ಅವರನ್ನು ಕೆಳಗಿಳಿಸುವ ಕುತಂತ್ರ ಜಾರಿಯಲ್ಲೇ ಇತ್ತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು, ಮಂತ್ರಿ ಮಂಡಳ ರಚಿಸಿಕೊಳ್ಳಲು ಕಾಡಿ ಬೇಡಿ ಹೈಕಮಾಂಡ್ ನಾಯಕರ ಅನುಮತಿ ಪಡೆಯಬೇಕಾಯಿತು. ತಮಗಿಂತ ಕಿರಿಯರಾದ ಒಕ್ಕೂಟ ಸರ್ಕಾರದ ಗೃಹ ಸಚಿವ (ಆಗ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ಅಮಿತ್ ಶಾ ಕಾಲಿಗೆ ಎರಗಬೇಕಾಯಿತು. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಹಣಕ್ಕಾಗಿ ಬಹಿರಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೆದುರು ಕಣ್ಣೀರು ಸುರಿಸಬೇಕಾಯಿತು. ತನ್ನನ್ನು ನಂಬಿ ಬಿಜೆಪಿಗೆ ಬಂದು ಪಕ್ಷಕ್ಕೆ ಮರಳಿ ಅಧಿಕಾರ ತಂದುಕೊಟ್ಟವರನ್ನು ಸಚಿವ ಸ್ಥಾನ ನೀಡಲು ಪಡಿಪಾಟಲು ಪಡಬೇಕಾಯಿತು. ಕಡೆಗೀಗ ಗೌರವಯುತ ನಿರ್ಗಮನವೂ ಇಲ್ಲದಂತಾಗಿದೆ.
‘ಯಡಿಯೂರಪ್ಪ ಗುಡುಗಿದರೆ ವಿಧಾನಸೌದ ನಡುಗುವುದು’ ಎಂಬ ಮಾತು ಹುಸಿಯಾಗಿದೆ. ‘ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಮಾತು ಸುಳ್ಳಾಗುತ್ತಿದೆ. ‘ಛಲದೋಳ್ ಯಡಿಯೂರಪ್ಪ…’ ಎಂಬ ಮಾತು ಮರೆಯಾಗಿದೆ. ‘ಹೋರಾಟಗಾರ ಯಡಿಯೂರಪ್ಪ ಎಂಬ ಮಾತು ಮರೆತು ಹೋಗಿದೆ. ಕಳೆದ ವಾರ ದಿಢೀರನೆ ದೆಹಲಿಗೆ ಹೋಗಿಬಂದ ಯಡಿಯೂರಪ್ಪ ಅವರೀಗ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ ನಾಯಕರಾದ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ರಾಜ್ಯದ ವಿವಿಧ ಮಠಾಧೀಶರು, ಅದರಲ್ಲೂ ರಂಭಾಪುರಿ, ಸಿದ್ದಗಂಗಾದಂತಹ ದೊಡ್ಡ ದೊಡ್ಡ ಮಠಾಧಿಪತಿಗಳೇ ಯಡಿಯೂರಪ್ಪ ಅವರನ್ನೇ ಮುಂದುವರೆಯಬೇಕು ಎಂದು ಹೇಳುತ್ತಿದ್ದರೂ ‘ಸಾಕು, ನಾನಿನ್ನು ವಿರಮಿಸುವೆ’ ಎಂದು ಧ್ವನಿಸುತ್ತಿದೆ ಯಡಿಯೂರಪ್ಪ ಅವರ ದಿವ್ಯಮೌನ.
ಹೌದು, ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಗಳಿಗೆಯಿಂದಲೂ ಅವರನ್ನು ಕೆಳಗಿಳಿಸುವ ಕುತಂತ್ರ ಜಾರಿಯಲ್ಲೇ ಇತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಬಂದವರಿಗೆಲ್ಲ ಮಂತ್ರಿ ಸ್ಥಾನ ಕೊಡಲು ಸಾಧ್ಯವಾಗಿರಲಿಲ್ಲ. ಬಿಜೆಪಿಯಲ್ಲಿ ಎಲ್ಲಾ ರೀತಿಯಲ್ಲಿ ಅರ್ಹರಾಗಿದ್ದವರಿಗೂ ಅವಕಾಶ ನೀಡುವ ಸ್ಥಿತಿಯಲ್ಲಿರಲಿಲ್ಲ. ಜಾತಿ ಮತ್ತು ಜಿಲ್ಲೆಗಳ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವೊಂದು ಸಂಗತಿಯೂ ಯಡಿಯೂರಪ್ಪ ಅವರಿಗೆ ಪೂರಕವಾಗಿರಲಿಲ್ಲ.
ಆದರೂ, ಶಿಕಾರಿಪುರ ಪುರಸಭಾ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಗದ್ದುಗೆವರೆಗೆ ಬೆಳಸಿದ ಜನರಿಗೆ ಆಪರೇಷನ್ ಕಮಲ, ಅನೈತಿಕ ರಾಜಕಾರಣ, ಸಿಡಿ ರಾಜಕಾರಣದಂತಹ ಕಹಿ ಉಣಿಸಿ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರಿಗೆ ಸಿಹಿ ಬಡಿಸಿದ ಯಡಿಯೂರಪ್ಪ ಕಡೆಯ ಅವಧಿಯಲ್ಲಾದರೂ, ಕರೋನಾದಂತಹ ಕಡುಕಷ್ಟದ ಸಮಯದಲ್ಲಾದರೂ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರುಣಿದ ಕಹಿಯನ್ನು ತಾವೊಬ್ಬರೆ ಉಂಡು ನಾಲ್ಕು ದಶಕಗಳ ಕಾಲ ತಮ್ಮನ್ನು ಆಧರಿಸಿದ, ಆರಾಧಿಸಿದ, ಅನುಸರಿಸಿದ, ಬೆಳಸಿದ ಜನರಿಗೆ ಒಂದಿಷ್ಟಾದರೂ ಒಳ್ಳೆಯ ಕೆಲಸ ಮಾಡಿ ‘ಇವ ನಮ್ಮವ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ’ ಸಿಹಿ ಉಣಿಸಬೇಕಾಗಿತ್ತು. ಮುಂಗೋಪಿ, ಸಿಡುಕ ಆದರೂ ಹೃದಯ ವೈಶಾಲ್ಯವುಳ್ಳ ನಾಯಕ ಎಂದು ಕರೆಸಿಕೊಳ್ಳುವ ಯಡಿಯೂರಪ್ಪ ತಮ್ಮವರೇ ಮಾಡಿದ ಕುತಂತ್ರದಿಂದ ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಗಳನ್ನು ಬಿಡಿಸಿ ಹೋಗುತ್ತಿದ್ದಾರೆ.