ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿದ, ತನ್ನ ಹೆಸರಿಗೆ ಮಸಿ ಬಳಿದುಕೊಂಡು ಆಪರೇಷನ್ ಕಮಲ ಮಾಡಿ ಒಂದಲ್ಲ, ಎರಡು ಬಾರಿ ಬಿಜೆಪಿಗೆ ಅಧಿಕಾರದ ಸವಿಯುಣಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವರ ರಾಜಕೀಯ ಜೀವನದ ಅತ್ಯಂತ ದೊಡ್ಡ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೂ ಪುತ್ರ ಬಿ.ವೈ. ವಿಜಯೇಂದ್ರಗೆ ಯಕಶ್ಚಿತ್ ಒಂದು ವಿಧಾನ ಪರಿಷತ್ ಸ್ಥಾನ ಕೊಡಿಸಲು ‘ರಾಜಹುಲಿ’ ಖ್ಯಾತಿಯ ಯಡಿಯೂರಪ್ಪ ಅವರಿಗೆ ಸಾಧ್ಯವಾಗಿಲ್ಲ. ಮೊದಲ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ‘ಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು’ ಎಂದು ಯಡಿಯೂರಪ್ಪ ಕಣ್ಣೀರು ಸುರಿಸಿದ್ದರು. ಈಗಲೂ ಯಡಿಯೂರಪ್ಪ ಅವರಿಗೆ ಅವಮಾನ ಆಗಿರುವುದು ಅದೇ ಬಿಜೆಪಿ ನಾಯಕರಿಂದ.
ಯಾವ ಮುಖ್ಯ ವಾಹಿನಿ ಪತ್ರಿಕೆಗಳು, ಟಿವಿ ಚಾನಲ್ ಗಳು ಹೇಳದಿದ್ದರೂ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಡುವಿನ ದ್ವೇಷ ದಶಕಗಳಿಗೂ ಮೀರಿದ್ದು. ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ತೆಗೆದುಕೊಳ್ಳುವಾಗಲೂ ಸಂತೋಷ್ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಆಗ ಅವರು ರಾಜ್ಯಕ್ಕೆ ಮಾತ್ರ ಸೀಮಿತರಾಗಿದ್ದರಿಂದ ಹಾಗೂ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ವಿಷಯವನ್ನು ಅಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನಿರ್ಧರಿಸಿದ್ದರಿಂದ ಸಂತೋಷ್ ಯಶಸ್ವಿಯಾಗಿರಲಿಲ್ಲ.
ಮುಂದೆ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಪ್ರಯತ್ನಪಟ್ಟಾಗ ಸಂತೋಷ್ ವಿರೋಧಿಸಿದರು. ಅಂತಿಮವಾಗಿ ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿ ಆಗುವಲ್ಲಿ ಯಶಸ್ವಿಯಾದರೆ ನಂತರ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಸಂತೋಷ್ ಯಶಸ್ಸು ಕಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ಕೆಳಕ್ಕೆ ಇಳಿಯುವಾಗ ಕಟ್ಟ ಕಡೆಯ ಆಸೆ ಎಂಬಂತೆ ಯಡಿಯೂರಪ್ಪ ಹೈಕಮಾಂಡ್ ಮುಂದೆ ಕೇಳಿಕೊಂಡಿದ್ದು ಒಂದೇ; ಮಗ ಬಿ.ವೈ. ವಿಜಯೇಂದ್ರನನ್ನು ಮಂತ್ರಿ ಮಾಡಿ ಅಂತಾ.
ವಿಜಯೇಂದ್ರಗೆ ಮಂತ್ರಿ ಸ್ಥಾನ ಕೊಡಲು ಹೈಕಮಾಂಡ್ ಹಿಂದೇಟು ಹಾಕಿರಲಿಲ್ಲ. ನಿರಾಕರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಸಾಧ್ಯವಿರಲಿಲ್ಲ. ಆದರೆ ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಬಿ.ಎಲ್. ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಡ್ಡಗಾಲು ಹಾಕಿದರು.

ಇದರಿಂದ ಬೇಸತ್ತಿದ್ದ ಯಡಿಯೂರಪ್ಪ ಒಂಭತ್ತು ತಿಂಗಳ ಬಳಿಕ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸ್ವತಃ ಪುತ್ರನನ್ನು ವಿಧಾನ ಪರಿಷತ್ ಅಭ್ಯರ್ಥಿ ಮಾಡಬೇಕೆಂದು ಪ್ರಸ್ತಾಪಿಸಿದರು. ಸಚಿವರಾದ ಗೋವಿಂದ ಕಾರಜೋಳ ಮತ್ತು ಆರ್. ಅಶೋಕ್ ಅನುಮೋದಿಸಿದರು. ವಿಧಿ ಇಲ್ಲದೆ ವಿಜಯೇಂದ್ರ ಹೆಸರು ಹೈಕಮಾಂಡಿಗೆ ಶಿಫಾರಸು ಆಯಿತು. ಆದರೆ ಹೈಕಮಾಂಡ್ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಲು ಅಂಕಿತ ಹಾಕಿಲ್ಲ. ವಿಜಯೇಂದ್ರಗೆ ಅವಕಾಶ ಕೈತಪ್ಪುವುದರಲ್ಲಿ ಸಂತೋಷ್ ಪ್ರಭಾವ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ತಾವು ಮುಖ್ಯಮಂತ್ರಿ ಆಗಿದ್ದು ಮಾತ್ರವಲ್ಲ ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಹಲವಾರು ನಾಯಕರನ್ನು ಶಾಸಕ, ಸಂಸದ, ಮಂತ್ರಿಗಳನ್ನಾಗಿಯೂ ಮಾಡಿದ್ದಾರೆ. ಆದರೆ ಮಗ ವಿಜಯೇಂದ್ರಗೆ ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪ್ರಭಾವವನ್ನು ಕೊನೆಗಾಣಿಸಬೇಕು ಎಂದು ಪ್ರಯತ್ನಿಸುತ್ತಿದ್ದ ಬಿ.ಎಲ್. ಸಂತೋಷ್ ಗೆದ್ದಿದ್ದಾರೆ. ಬಹುಶಃ ಯಡಿಯೂರಪ್ಪ ಮತ್ತೆ ರಾಜಕೀಯವಾಗಿ ಮೇಲೇಳುವುದು ಬಹಳ ಕಷ್ಟ.
ಬಿ.ಎಲ್. ಸಂತೋಷ್ ದ್ವೇಷಕ್ಕೆ ಮತ್ತೊಂದು ನಿದರ್ಶನ ತೇಜಸ್ವಿನಿ ಅನಂತಕುಮಾರ್. ಅನಂತಕುಮಾರ್ ಇರುವವರೆಗೂ ರಾಜ್ಯ ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್ ಆಟ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಸಂತೋಷ್ ಗೆ ಎಲ್ಲಾ ಹಂತಗಳಲ್ಲಿ ಅನಂತಕುಮಾರ್ ಅಂಕುಶ ಹಾಕಿದ್ದರು. ಇದರ ಪರಿಣಾಮವಾಗಿ ಅನಂತಕುಮಾರ್ ಸಾವಿನ ಬಳಿಕ ಅವರ ಮಡದಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಟೆಕೆಟ್ ತಪ್ಪಿಸಿದರು. ಈಗ ತೇಜಸ್ವಿನಿ ಅನಂತಕುಮಾರ್ ಹೆಸರು ವಿಧಾನ ಪರಿಷತ್ ಸ್ಥಾನಕ್ಕೂ ಕೇಳಿಬಂದಿತ್ತು. ಕಡೆಗೆ ಮತ್ತೊಮ್ಮೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಆಗಿದ್ದು ಅದೇ ಅವಮಾನ. ತೇಜಸ್ವಿನಿ ಅನಂತಕುಮಾರ್ ವಿಚಾರದಲ್ಲೂ ಸಂತೋಷ್ ಗೆದ್ದಿದ್ದಾರೆ. ಹಲವು ಬಾರಿ ಗೆದ್ದಿದ್ದ ಯಡಿಯೂರಪ್ಪ, ಅನಂತಕುಮಾರ್ ಅವರಿಗೆ ಇಂದು ಅವಮಾನ ಆಗುತ್ತಿದೆ. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಬಿ.ಎಲ್. ಸಂತೋಷ್ ಸರದಿ ಬರುವುದಿಲ್ಲ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ.