ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಚಿವರ ರಮೇಶ್ ಜಾರಕಿಹೊಳಿ ವಿರುದ್ಧ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದು ವ್ಯಕ್ತಿಯೊಬ್ಬನ ತೆವಲಿಗೆ ಪಕ್ಷ ಮಣೆ ಹಾಕುವ ಅಗತ್ಯವಿಲ್ಲ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಗೋಕಾಕ್ ತಾಲೂಕಿನ ಘಟ್ಟಿ ಬಸವಣ್ಣ ಆಣೆಕಟ್ಟು ನಿರ್ಮಾಣದ ಭೂಮಿ ಪೂಜೆಯ ಸಂದರ್ಭದಲ್ಲಿ ಆಹ್ವಾನ ನೀಡದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಾರ್ಕಂಡೇಯ ನದಿಗೆ ಯೋಗಿಕೊಳ್ಳದ ಬಳಿಯಲ್ಲಿ ಡ್ಯಾಂ ನಿರ್ಮಾಣವಾಗುತ್ತಿದ್ದು ಈ ಡ್ಯಾಂನ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.
ವಿರೋಧಿ ಪಕ್ಷದವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಾರೆ ಎಂದು ಆರೋಪಿಸುವ ನೀವು ತಮ್ಮದೇ ಪಕ್ಷದ ಸಂಸದನನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಜೊತೆಗೂಡಿಸಿಕೊಂಡು ಹೋಗದ ನಿಮ್ಮ ಹೃದಯ ವೈಶ್ಯಾಲ್ಯತೆ ಬಗ್ಗೆ ಜನ ಏನಂದಾರು ಎಂಬುದರ ಬಗ್ಗೆ ಕನಿಷ್ಟ ಜ್ಞಾನ ಇರಬೇಕು. ಪರಿವಾರ ವಾದವನ್ನು ವಿರೋಧಿಸುವಂತಹ ಮೌಲ್ಯವನ್ನು ಹೊಂದಿರುವ ಒಂದು ಪಕ್ಷಕ್ಕೆ ನಾವು ಕಳಂಕ ತರಬಾರದು. ವ್ಯಕ್ತಿಯೊಬ್ಬರ ತೆವಲಿಗೆ ಪಕ್ಷ ಮಣೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡತನ ತೋರುವ ನಮ್ಮ ನಾಯಕರು ಮುಂದೆ ಭಾರೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.