ಬೆನ್ನ ಮೇಲೆ ಕೂಸುಮರಿ ಮಾಡಿಕೊಂಡು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಬಿಜೆಪಿ ಶಾಸಕನಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಸ್ಸಾಂನಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ. 27 ಜಿಲ್ಲೆಗಳಲ್ಲಿ 2.2 ಲಕ್ಷ ಜನರು ಸಿಲುಕಿದ್ದಾರೆ. ಇದುವರೆಗೆ 9 ಮಂದಿ ಮಳೆಗೆ ಬಲಿಯಾಗಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲು ಹೋಗಿದ್ದ ಲುಬ್ಡಿಂಗ್ ಕ್ಷೇತ್ರದ ಬಿಜೆಪಿ ಶಾಸಕ ಸಿಬು ಮಿಶ್ರಾ ಹೊಜಾಯ್ ಜಿಲ್ಲೆಯಲ್ಲಿ ಮಳೆ ನೀರಿನಲ್ಲಿ ಬೋಟ್ ಏರಲು ನಡೆದುಕೊಂಡು ಹೋಗುವ ಬದಲು ಮತ್ತೊಬ್ಬ ವ್ಯಕ್ತಿಯ ಬೆನ್ನ ಮೇಲೇರಿ ಸವಾರಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊಜಾಯ್ ಜಿಲ್ಲೆ ಮಳೆಯಿಂದ ಹೆಚ್ಚು ಹಾನಿಗೀಡಾದ ಜಿಲ್ಲೆಯಾಗಿದ್ದು, 2000 ಜನರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ಸುಮಾರು 1 ಲಕ್ಷ ಜನರು ಸಿಲುಕಿದ್ದಾರೆ.