
ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ ಹರೀಶ್ ಮಾಧ್ಯಮಗಳ ಜೊತೆಗೆ ಮಾತನಾಡಿ ಮಾಜಿ ಶಾಸಕ ರೇಣುಕಾಸ್ವಾಮಿ ಬಗ್ಗೆ ಟೀಕಾಪ್ರಹಾರ ಮಾಡಿದ್ರು. ಇದೀಗ ಹರೀಶ್ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಅವರು ಹಾಲಿ ಶಾಸಕರು.. ದೊಡ್ಡವರು.. ಬಹಳ ಆದರ್ಶ ವ್ಯಕ್ತಿ.. ಮರ್ಯಾದಾ ಪುರುಷ.. ಹಾಗಾಗಿ ಮಾತಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಹೆಸರು ಹೇಳೋಕೂ ಅಸಹ್ಯ ಅಂತೀರಲ್ಲ, ಹಿಂದೆ ಹೀನಾಯವಾಗಿ ಸೋತಾಗ ಪ್ರತಿ ದಿನ ನಮ್ಮ ಮನೆಯಲ್ಲಿ ಬಂದು ಇರ್ತಿದ್ರಿ.. ಇದು ದಾವಣಗೆರೆ ಜನರಿಗೇ ಗೊತ್ತಿದೆ ಎಂದು ಅಣಕಿಸಿದ್ದಾರೆ. ಮಿಸ್ಟರ್.. ನಿನಗಿಂತ ಬಹಳ ಚೆನ್ನಾಗಿ ಭಾಷೆ ಬಳಸೋಕೆ ಬರುತ್ತದೆ ಎಂದಿರುವ ರೇಣುಕಾಚಾರ್ಯ, ಐದು ವರ್ಷಗಳ ಕಾಲ ಎಲ್ಲಾ ಕೆಲಸಗಳನ್ನು ನಾನೇ ಮಾಡಿಸಿಕೊಟ್ಟೆ. ಈಗ ಸತ್ಯ ಹರಿಶ್ಚಂದ್ರನಂತೆ ಮಾತಾಡ್ತೀಯಾ..? ಸತ್ಯ ಹರಿಶ್ಚಂದ್ರ ನಿಮ್ಮ ಮನೆಯಲ್ಲೇ ಹುಟ್ಟಿದ್ದನಾ..? ಇನ್ಮೇಲೆ ಹೀಗೆ ಮಾತಾಡಿದ್ರೆ ಉತ್ತರ ಕೊಡ್ತೇನೆ ಎಂದು ಎಚ್ಚರಿಸಿದ್ದಾರೆ.
ನಿನ್ನ ಪರವಾಗಿ ಭರ್ಜರಿ ಭಾಷಣ ಮಾಡಿ ಹರೀಶ್ ಗೆಲ್ಲಿಸಿ ಅಂದಿದ್ದೆ. ಅದರ ವಿಡಿಯೋ ಕೂಡ ಇದೆ.. ಅವತ್ತು ನಿನ್ನ ಹುಟ್ಟು ಹಬ್ಬಕ್ಕೆ ಯಾಕೆ ಆಹ್ವಾನಿಸಿದ್ದೆ..? ಗಣೇಶೋತ್ಸವಕ್ಕೆ ಕರೆದಿದ್ದೆ.. ಎಸ್‌ಪಿ, ಡಿಸಿಪಿ, ಸಿಇಒ ಅವರಿಗೆ ಹೇಳಬೇಕಿದ್ದಾಗ ನಾನು ಹೇಳಿದ್ದೇನೆ. ನಿನಗೆ ವರ್ಗಾವಣೆಗಳನ್ನ ಮಾಡಿಸಿ ಕೊಟ್ಡಿದ್ದೇನೆ. ಲೂಸ್ ಟಾಕಿಂಗ್ಸ್ ಮಾತಾಡ್ತಿಯಾ ? ನೀನು ಹಿಂದೆ ಕಾಂಗ್ರೆಸ್‌ನವರಿಗೆ ಸೇಲ್ ಆಗಿದ್ದೆ. ಆಗ ಸಿದ್ದೇಶ್ವರ ಅವರನ್ನ ನಾವು ಗೆಲ್ಲಿಸಿದ್ದು. ಜೋಗಿ ಮಟ್ಟದ ಸರ್ಕ್ಯೂಟ್ ಹೌಸ್‌ನಲ್ಲಿ ಎಲ್ರೂ ಸೇರಿದ್ವಿ.. ಸುಳ್ಳಾ..? ಎಂದು ನೆನಪಿಸಿದ್ದಾರೆ.
2014ರಲ್ಲಿ ಚುನಾವಣೆಯಲ್ಲಿ ಎಂಪಿಗೆ ನಿಲ್ಲಬೇಡಿ ಸೋಲ್ತೀರಿ ಅಂದಿದ್ದರು.. ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ.. ಆಗ ನಾನು ಸಿದ್ದೇಶ್ವರ ಅವರ ಗೆಲುವಿಗೆ ಶ್ರಮಿಸಿದವನು. ಸಿದ್ದೇಶ್ವರ ಅವರು ಕೊಟ್ಟ ಕಾರ್ ಬಳಸಿಕೊಂಡು, ನಾಳೆ ನಾಮಪತ್ರ ಸಲ್ಲಿಕೆ ಅನ್ನೋವಾಗ ಬಿಟ್ಟು ಕಾಂಗ್ರೆಸ್ ಪರ ಹೋದೆ ನೀನು. ಇದಕ್ಕೆ ಉತ್ತರ ಕೊಡು.. 2024ರ ಚುನಾವಣೆಯಲ್ಲಿ ನಿನಗೆ ಅಧಿಕಾರ ಬಂತು.ನಿಮ್ಮ ಕ್ಷೇತ್ರ ಹರಿಹರದಲ್ಲಿ 5000 ಮತಗಳು ಲೀಡ್ ಆದ್ವು ಕಾಂಗ್ರೆಸ್‌ಗೆ ಯಾಕೆ ? ಮೊನ್ನೆಯೂ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪ ಮಾಡಿದ್ದಾರೆ. ನನ್ನ ಬಗ್ಗೆ ಮಾತಾಡಿದ್ರೆ ಹುಷಾರ್ ಎಂದಿರುವ ರೇಣುಕಾಚಾರ್ಯ, 2014 ರ ಲೋಕಸಭಾ ಚುನಾವಣೆ ಸಿದ್ದೇಶ್ವರ ಗೆಲ್ಲಬಾರದು ಎಂದಿದ್ದು ಹರೀಶ್. ನೀನು ಹೇಳಿಲ್ಲ ಅಂದರೆ ಧರ್ಮಸ್ಥಳ ಬಾ ಪ್ರಮಾಣ ಮಾಡು. ನೀನು ಬರಬೇಕು ಧರ್ಮಸ್ಥಳಕ್ಕೆ ನಾನು ಸುಮ್ನೆ ಬಿಡಲ್ಲ ಎಂದು ಗುಡುಗಿದ್ದಾರೆ.