ಬೆಂಗಳೂರು ನಗರ ಉಸ್ತುವಾರಿಗಾಗಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗಾಗಲೇ ಬೀದಿಗೆ ಬಂದಿದೆ. ಈಗ ಇದೇ ಉಸ್ತುವಾರಿ ಜಟಾಪಟಿ ಸಂಪುಟವನ್ನೇ ಹೋಳಾಗಿಸುವ ಸೂಚನೆ ನೀಡಿದೆ. ಏಕೆಂದರೆ, ಈಗಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಮತ್ತೊಬ್ಬ ಸಚಿವರು ತುಪ್ಪ ಸುರಿದಿದ್ದಾರೆ. ಇದರ ಜೊತೆ ಬಿಜೆಪಿಯಲ್ಲಿ ಮೂಲ-ವಲಸಿಗ ಚರ್ಚೆಯೂ ಮತ್ತೆ ಮುನ್ನಲೆಗೆ ಬಂದಿದೆ.
ಹೌದು, ಕಳೆದೊಂದು ವಾರದಿಂದ ಬೆಂಗಳೂರು ನಗರ ಉಸ್ತುವಾರಿಗಾಗಿ ಸಚಿವರಾದ ವಿ. ಸೋಮಣ್ಣ ಮತ್ತು ಆರ್.ಅಶೋಕ್ ಮಧ್ಯೆ ವಾತಿನ ಯುದ್ಧ ಆರಂಭವಾಗಿತ್ತು. ಮಹಾನಗರದ ಪಟ್ಟವನ್ನ ನನಗೆ ನೀಡಿ ಎನ್ನವಂತೆ ವಿ.ಸೋಮಣ್ಣ ನೇರವಾಗಿ ಬೇಡಿಕ ಇಟ್ಟಿದ್ದರು. ಆದರೆ, ಆರ್. ಅಶೋಕ್ ನಾನೇನು ಬೆಂಗಳೂರು ಉಸ್ತುವಾರಿಗಾಗಿ ಕಾಯುತ್ತಿಲ್ಲ ಎನ್ನುತ್ತಲೇ ಸಿಎಂ ಬಳಿ ತನಗೆ ನೀಡುವಂತೆ ಮಸಲತ್ತು ನಡೆಸುತ್ತಿದ್ದರು.
ಬೆಂಗಳೂರು ನಗರದ ಮೇಲೆ ಆಧಿಪತ್ಯ ಸ್ಥಾಪಿಸಲು ಪೈಪೋಟಿ ನಡೆಯುತ್ತಿದೆ. ಹಿರಿಯ ಸದಸ್ಯ ಆಗಿರುವ ವಿ. ಸೋಮಣ್ಣ ಹಾಗೂ ಆರ್ ಅಶೋಕ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾದಿ ಬೀದಿ ರಂಪಾಟ ಕೂಡ ಮಾಡಿಕೊಂಡಿದ್ದಾರೆ. ಆರ್. ಅಶೋಕ್ ಬಗ್ಗೆ ನೇರ ವಾಗ್ದಾಳಿ ನಡೆಸಿರುವ ಸೋಮಣ್ಣ, ನಾನು ಸಚಿವನಾದಾಗ ಸಾಮ್ರಾಟ್ ಆರ್ ಅಶೋಕ್ ಇನ್ನೂ ಶಾಸಕನಾಗಿ ಇರಲಿಲ್ಲ. ಹಿರಿಯನಿದ್ದೇನೆ, ಬೆಂಗಳೂರು ಉಸ್ತುವಾರಿ ಕೊಟ್ಟರೆ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಹಿರಿಯ ಸಚಿವ ವಿ. ಸೋಮಣ್ಣರ ಹೇಳಿಕೆಗೆ ಸಾವಧಾನದಿಂದಲೇ ಉತ್ತರ ಕೊಟ್ಟಿರುವ ಆರ್. ಅಶೋಕ್, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ನಾನು ಯಾವುದೇ ಹೇಳಿಕೆ ನೀಡುವುದಿಲ್ಲ.
ನಾನು ಯಾವುದೇ ಜಿಲ್ಲಾ ಉಸ್ತುವಾರಿ ಸ್ಥಾನಬೇಕೆಂದು ಕೇಳಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು. ಅಲ್ಲಿ ಕೆಲಸ ಮಾಡಿದ್ದೆ. ಅದನ್ನು ಎಂಟಿಬಿ ನಾಗರಾಜ್ ಕೇಳಿದ ಕಾರಣಕ್ಕೆ ಬಿಟ್ಟುಕೊಟ್ಟಿದ್ದೆ. ನಾನು ಉಸ್ತುವಾರಿ ಮಂತ್ರಿ ಆಗದಿದ್ದರೂ ಕೆಲಸ ಮಾಡಿದ್ದೇನೆ ಎಂದಿದ್ದರು. ಈ ವಿವಾದವೇ ಇನ್ನೇನು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಬೆಂಗಳೂರು ಉಸ್ತುವಾರಿ ಬೇಗುದಿಗೆ ಮತ್ತೊಂದು ತಿರುವು ಸಿಕ್ಕಿದೆ.
ಬೆಂಗಳೂರನ್ನ ಇಬ್ಭಾಗ ಮಾಡಿ ನನಗೆ ಅರ್ಧ ಅಶೋಕ್ಗೆ ಅರ್ಧ ಉಸ್ತುವಾರಿ ನೀಡಿ ಎಂದು ವಿ. ಸೋಮಣ್ಣ ಈಗಾಗಲೇ ಹೇಳಿಕೆ ನೀಡಿದ್ದಾರೆ. ಅಲ್ಲದೇ ಅಶೋಕ್ ಶಾಸಕನಾಗುವ ಸಮಯಕ್ಕೆ ನಾನು ಮಂತ್ರಿಯಾಗಿದ್ದೇ ಎಂದು ಕೆಂಡಕಾರಿದ್ದರು. ಹೀಗಿರುವಾಗಲೇ ಸಚಿವ ಎಸ್.ಟಿ ಸೋಮಶೇಖರ್ ಆರ್. ಅಶೋಕ್ ವಕಾಲತ್ತು ವಹಿಸಿದ್ದಾರೆ. ಅಶೋಕ್ ಉಸ್ತುವಾರಿ ಕೇಳೋದರಲ್ಲಿ ತಪ್ಪೇನಿದೆ? ಈತ ಮೂಲ ಬಿಜೆಪಿಗ. ನಾನು ಕಾಂಗ್ರೆಸ್ನಿಂದ ಬಿಜೆಪಿಗೆ ಬಂದವನು, ನಾನು ಕೇಳಲು ಸಾಧ್ಯವೇ ಎನ್ನುವ ಮೂಲಕ ಮೂಲ- ವಲಸಿಗ ಎಂಬ ವರಸೆಯನ್ನ ಮುನ್ನೆಲೆಗೆ ತಂದಿದ್ದಾರೆ.
ಸದ್ಯ ಬೆಂಗಳೂರು ಉಸ್ತುವಾರಿಗಾಗಿ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಸಿ.ಎನ್ ಅಶ್ವತ್ಥ್ ನಾರಾಯಣ್ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಹೀಗಾಗಿ ಬೆಂಗಳೂರು ಉಸ್ತುವಾರಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ತಮ್ಮಲ್ಲೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಉಸ್ತುವಾರಿ ಸಿಎಂ ಬಳಿಯೇ ಇಟ್ಟುಕೊಳ್ಳಲು ಒತ್ತಾಯ ಕೇಳಿಬಂದಿದೆ. ಹಣಕಾಸು ಇಲಾಖೆ ಇರುವವರೇ ಬೆಂಗಳೂರು ಉಸ್ತುವಾರಿ ಆಗಿರಲಿ ಎನ್ನಲಾಗಿದೆ. ಸದ್ಯ ಹಣಕಾಸು ಇಲಾಖೆ ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಇದೆ. ಹೀಗಾಗಿ ಅವರೇ ಬೆಂಗಳೂರು ಉಸ್ತುವಾರಿ ನೋಡಿಕೊಂಡರೆ ಉತ್ತಮ. ಇದರಿಂದ ಬೆಂಗಳೂರಲ್ಲಿ ಅಭಿವೃದ್ಧಿಯೂ ವೇಗ ಪಡೆದುಕೊಳ್ಳುತ್ತದೆ.
ಅಭಿವೃದ್ಧಿ ಯೋಜನೆಗಳಿಗೆ ಬೇಗ ಹಣವೂ ಬಿಡುಗಡೆ ಮಾಡಬಹುದು. ಹೀಗಾಗಿ ನೀವೇ ಉಸ್ತುವಾರಿ ನೋಡಿಕೊಳ್ಳಿ ಅಂತ ಬೆಂಗಳೂರಿನ ಇತರೆ ಸಚಿವರು, ಶಾಸಕರು ಬೊಮ್ಮಾಯಿಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ನಾನೇ ಉಸ್ತುವಾರಿ ಇಟ್ಟುಕೊಳ್ಳಬೇಕೋ? ಇಲ್ಲವೇ ಯಾರಿಗಾದರೂ ಕೊಡಬೇಕೋ ಅನ್ನೋದನ್ನ ಈಗಲೇ ಹೇಳೋಕಾಗುತ್ತಾ ಅಂತಾ ಪ್ರಶ್ನಿಸಿರೋದು ಮತ್ತೂ ಕುತೂಹಲ ಮೂಡಿಸಿದೆ.
ಬೆಂಗಳೂರಿನ ಬೇಗುದಿ ಶಮನವನ್ನ ಆದಷ್ಟು ಬೇಗ ಬಗೆಹರಿಸ್ತೀನಿ ಎಂದು ಸಿಎಂ ಹೇಳುತ್ತಲೇ ಇದ್ದಾರೆ. ಸಂಪುಟದಲ್ಲಿರೋ ಸಚಿವರು ಮಾತ್ರ ದಿನಕ್ಕೊಂದು ಹೇಳಿಕೆ ನೀಡುತ್ತಾ ಬಿರುಗಾಳಿ ಎಬ್ಬಿಸ್ತಿದ್ದಾರೆ. ಇದು ಇಲ್ಲಿಗೆ ನಿಲ್ಲುತ್ತಾ ಅಥವಾ ಮತ್ತೇನಾದರೂ ಅವಂತಾರ ಸೃಷ್ಟಿಸುತ್ತಾ ಕಾದು ನೋಡಬೇಕಿದೆ.