ಬೆಂಗಳೂರು: ಜನರಿಗಾಗಿ, ಜನರಿಗೋಸ್ಕರ, ಜನರ ಆಶೋತ್ತರಗಳಿಗೆ ತಕ್ಕಂತೆ ಬಿಜೆಪಿಯ ಪ್ರಣಾಳಿಕೆ ತಯಾರಾಗಲಿದೆ. ವಿರೋಧ ಪಕ್ಷಗಳಂತೆ ಜನರ ದಿಕ್ಕು ತಪ್ಪಿಸುವ ಪ್ರಣಾಳಿಕೆ ಮಾಡುವುದಿಲ್ಲ, ಜನರ ಬದುಕು ಕಟ್ಟಿಕೊಡುವ ಯೋಜನೆಗಳಿರುವ ಪ್ರಣಾಳಿಕೆ ತಯಾರಾಗಲಿದೆ ಎಂದು ಬಿಜೆಪಿ ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಸಂಚಾಲಕರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿ ಪ್ರಣಾಳಿಕೆ ಅಭಿಯಾನ ಸಮಿತಿಯ ಮೊದಲ ಸಭೆ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ಸೋಮವಾರ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ 200 ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಲಿದ್ದಾರೆ. ಇಂದಿನ ಚರ್ಚೆಯಲ್ಲಿ ಉತ್ತಮ ಸಲಹೆ ದೊರೆತಿದ್ದು, ಪ್ರಣಾಳಿಕೆಯ ಶೀರ್ಷಿಕೆಯನ್ನು ಕೂಡ ಇಂದು ಅಥವಾ ನಾಳೆಯೇ ಅಂತಿಮ ಮಾಡಲಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷಗಳಂತೆ ನಮ್ಮದು ಜನರ ದಿಕ್ಕು ತಪ್ಪಿಸುವ ಪ್ರಣಾಳಿಕೆ ಆಗಿರುವುದಿಲ್ಲ. ಆದರೆ ಜನರ ಬದುಕನ್ನು ಕಟ್ಟಿಕೊಡುವ ಪ್ರಣಾಳಿಕೆ ಆಗಲಿದೆ ಎಂದರು.
ಕಾಂಗ್ರೆಸ್ ನಾಯಕರು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟು ಗಂಟೆ ನಿರಂತರವಾಗಿ ವಿದ್ಯುತ್ ನೀಡಿದ್ದಾರೆ ಎಂಬುದನ್ನು ರೈತರಿಗೆ ಕೇಳಿದರೆ ಗೊತ್ತಾಗುತ್ತದೆ ಎಂದು ಸಚಿವರು ಹೇಳಿದರು.
ಮುಸಲ್ಮಾನರನ್ನು ಸಿಎಂ ಮಾಡಲಿ
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಮಾತಿಗೆ ಪ್ರತಿಕ್ರಿಯೆ ನೀಡಬೇಕಿಲ್ಲ. ಆದರೆ ಅವರಿಗೆ ತಾಕತ್ತಿದ್ದರೆ ಮುಸಲ್ಮಾನರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಸಚಿವ ಡಾ.ಕೆ.ಸುಧಾಕರ್ ಸವಾಲೆಸೆದರು.
ಕುಮಾರಸ್ವಾಮಿ ಅವರ ಮಾತು ಅಗತ್ಯವೇ ಇರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉತ್ತಮ ಆಡಳಿತಗಾರರು. ಬಿಜೆಪಿಯು ಕುಮಾರಸ್ವಾಮಿಯವರ ಸಲಹೆ ಕೇಳುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೆಡಿಎಸ್’ನಿಂದ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ. ಅವರು ಬಿಜೆಪಿಗೆ ಸವಾಲು ಹಾಕುವ ಮುನ್ನ, ಅವರಿಗೆ ಅವರೇ ಸವಾಲು ಹಾಕಿಕೊಳ್ಳಲಿ ಎಂದರು.