ಯುವತಿಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಹಿರಿಯ ಮುಖಂಡನ ಪುತ್ರನನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ತಂದೆಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ರೆಸಾರ್ಟ್ ನಲ್ಲಿ ರಿಸಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ ಎಂಬಾಕೆಯನ್ನು ಕೊಂದ ಆರೋಪದಲ್ಲಿ ಉತ್ತರಾಖಂಡ್ ನ ಹಿರಿಯ ಬಿಜೆಪಿ ಮುಖಂಡನ ಪುತ್ರ ಹಾಗೂ ರೆಸಾರ್ಟ್ ಮಾಲೀಕ ಪುಲ್ಕಿಟ್ ಆರ್ಯಾ ನನ್ನು ಪೊಲೀಸರು ಬಂಧಿಸಿದ್ದಾರೆ.
ಪುಲ್ಕಿಟ್ ತಂದೆ ವಿನೋದ್ ಆರ್ಯಾ ಬಿಜೆಪಿ ಹಾಗೂ ಆರ್ ಎಸ್ ಎಸ್ ಹಿರಿಯ ಮುಖಂಡರಾಗಿದ್ದು ಅವರ ವಾಹನವನ್ನು ಸ್ಥಳೀಯರು ಹಾನಿಗೊಳಿಸಿದ್ದಾರೆ. ಘಟನೆ ಬೆನ್ನಲ್ಲೇ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ.

ಆರೋಪಿಯನ್ನು ಬಂಧಿಸಿದ್ದರೂ ಯುವತಿಯ ಶವ ಇನ್ನೂ ಪತ್ತೆಯಾಗಿಲ್ಲ. ಪುಲ್ಕಿಟ್ ಆರ್ಯಾ ರಿಸಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಕೊಂದು ಪಕ್ಕದ ನದಿಯಲ್ಲಿ ಎಸೆದಿದ್ದಾನೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ರೆಸಾರ್ಟ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಪೌರಿ ಜಿಲ್ಲೆಯ ರಿಷಿಕೇಶ್ ಬಳಿ ಇರುವ ರೆಸಾರ್ಟ್ ಇದಾಗಿದ್ದು, ಸೋಮವಾರ ಈ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಸ್ವತಃ ಪುಲ್ಕಿಟ್ ಆರ್ಯಾ ಮತ್ತು ಆಕೆಯ ಕುಟುಂಬದವರು ದೂರು ನೀಡಿದ್ದರು. ನಂತರ ತನಿಖೆ ನಡೆಸಿದ ಪೊಲೀಸರಿಗೆ ದೂರು ನೀಡಿದ್ದ ಪುಲ್ಕಿಟ್ ಕೊಲೆ ಮಾಡಿರುವುದು ಪತ್ತೆ ಹಚ್ಚಿದ್ದಾರೆ.
ತನಿಖೆಗೆ ಪುಲ್ಕಿಟ್ ಸಹಕರಿಸದೇ ಇರುವ ಬಗ್ಗೆ ಕುಟುಂಬದವರು ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದರು. ಯುವತಿ ಕೊಲೆಯಾಗಿದ್ದು ದೃಢಪಟ್ಟರೂ ಇದುವರೆಗೆ ಶವ ದೊರೆತಿಲ್ಲ.