BJP-JDS ಅಪವಿತ್ರ ಮೈತ್ರಿ..ಚುನಾವಣೆ ನಂತರ ಸರ್ಕಾರ ಪತನ ಎಂಬುದೆ ಭ್ರಮೆ : CM ಸಿದ್ದರಾಮಯ್ಯ
ಕೋಲಾರ : ಈ ಚುನಾವಣೆಯಲ್ಲಿ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಅದು ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೋಲಾರದ ಚೊಕ್ಕoಡಹಳ್ಳಿ ಗೇಟ್ ಬಳಿ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಕೆವಿ ಗೌತಮ್ ಇವರ ಪರ ಮತಯಾಚನೆ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಲೋಕಸಭಾ ಚುನಾವಣೆ ಬಹಳ ಮಹತ್ತರವಾದ ಚುನಾವಣೆ ಎಂದು ಭಾವಿಸಬೇಕು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿಯವರು 28ಕ್ಕೆ 28 ಸ್ಥಾನಗಳನ್ನು ಗೆಲ್ಲು ವುದಾಗಿ ಹೇಳಿಕೊಳ್ಳುತ್ತಿದ್ದು, ಜೆಡಿಎಸ್ ಕೂಡ ಅದಕ್ಕೆ ಧ್ವನಿಗೂಡಿಸುತ್ತಿದೆ. ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಸೋಲುತ್ತದೆ ಎನ್ನುವ ಭಯದಿಂದ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಕೂಡ ಕೋಲಾರ, ಮಂಡ್ಯ ಹಾಗೂ ಹಾಸನ ಸೇರಿ ಮೂರು ಸ್ಥಾನಗಳನ್ನು ಮಾತ್ರ ಸ್ಪರ್ಧಿಸುತ್ತಿದೆ. ಉಳಿದ ಕಡೆ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಕೋಲಾರದ ಜನ ಕಾಂಗ್ರೆಸ್ ಗೆ ಬೆಂಬಲಿಸುತ್ತದೆ ಎಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ತಿಳಿಯುತ್ತದೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಗೆಲ್ಲು ತ್ತಾರೆ ಎಂಬ ವಿಶ್ವಾಸವಿದೆ ಎಂದರು.
20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಈ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ಹೆಚ್ .ಡಿ. ದೇವೇಗೌಡ ಹಾಗೂ ಹೆಚ್ .ಡಿ.ಕುಮಾರಸ್ವಾಮಿಯವರು ಮೊನ್ನೆಯವರೆಗೂ ದ್ವೇಷದ ಪಕ್ಷ, ಕ್ರಿಮಿನಲ್ ಪಕ್ಷ, ನರೇಂದ್ರ ಮೋದಿ ಯವರು ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದರು. ಈಗ ನರೇಂದ್ರ ಮೋದಿ ಯವರನ್ನು ಸೇರಿಕೊಂಡಿದ್ದಾರೆ. ದೇವೇಗೌಡರು ನರೇಂದ್ರ ಮೋದಿ ಯವರನ್ನು ಬಹಳ ಹೊಗಳುತ್ತಿದ್ದಾರೆ. ಅಲ್ಲದೆ ಚುನಾವಣೆಯಾದ ಮೇಲೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣಾವಧಿ ಮುಗಿಸಲಿದೆ
ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣಾವಧಿ ಮುಗಿಸಿ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂದರು. ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂದು ಗೊತ್ತಾಗಿ ಸಹಿಸದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ . ಇದು ಅವರ ಭ್ರಮೆ ಎಂದರು.