ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ನೀಡಿದ ದೂರಿನನ್ವಯ ಸುದ್ದಿ ಮಾಧ್ಯಮ ದಿ ವೈರ್ ಹಾಗೂ ಅದರ ಸಂಸ್ಥಾಪಕರು ಸೇರಿದಂತೆ ಸಂಪಾದಕರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದಲ್ಲಿ (ಫೇಸ್‌ಬುಕ್ ಮಾತೃಸಂಸ್ಥೆ) ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು 700 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ದಿ ವೈರ್, ಅದರ ಸಂಸ್ಥಾಪಕ ಮತ್ತು ಸಂಪಾದಕರ ವಿರುದ್ಧ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವಂಚನೆ, ನಕಲಿ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ದಿ ವೈರ್ ವಿರುದ್ಧ ಶುಕ್ರವಾರ ಮಾಳವಿಯಾ ಅವರು ವಿಶೇಷ ಪೊಲೀಸ್ ಆಯುಕ್ತರಿಗೆ (ಅಪರಾಧ) ದೂರು ನೀಡಿದ್ದರು. ಅದರನ್ವಯ ದಿ ವೈರ್ ಸಂಸ್ಥಾಪಕ ಸಿದ್ಧಾರ್ಥ್ ವರದರಾಜನ್ ಮತ್ತು ಸಂಪಾದಕರಾದ ಸಿದ್ಧಾರ್ಥ್ ಭಾಟಿಯಾ, ಎಂ ಕೆ ವೇಣು ಮತ್ತು ಜಾಹ್ನವಿ ಸೇನ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಅವರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ನಕಲಿ ಸೃಷ್ಟಿ), 469 (ಪ್ರತಿಷ್ಠೆಗೆ ಹಾನಿ ಮಾಡಲು ನಕಲಿ ದಾಖಲೆ), 471 (ನಕಲಿ ದಾಖಲೆ ಬಳಕೆ), 500 (ಮಾನನಷ್ಟ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“ದಿ ವೈರ್ ಮತ್ತು ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಖ್ಯಾತಿಯನ್ನು ಕೆಡಿಸುವ ಉದ್ದೇಶದಿಂದ ಕ್ರಿಮಿನಲ್ ಷಡ್ಯಂತ್ರವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ, ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು (ದಿ ವೈರ್) ವರದಿಯಲ್ಲಿ ಸೇರಿಸಿದೆ. ನನ್ನನ್ನು ಸಿಲುಕಿಸಲು (ನಕಲಿ) ಪುರಾವೆಗಳನ್ನು ಸೃಷ್ಟಿಸಿದೆ. ಹಾಗಾಗಿ, ದಿ ವೈರ್ ಮತ್ತು ಅದರ ನಿರ್ವಹಕರ/ವರದಿಗಾರರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಹುಡುಕುವುದಕ್ಕಿಂತ ನನಗೆ ಬೇರೆ ಆಯ್ಕೆಗಳಿಲ್ಲ.” ಎಂದು ಮಾಳವಿಯಾ ಶುಕ್ರವಾರ ತಿಳಿಸಿದ್ದರು.
ತನ್ನ ಪ್ರತಿಷ್ಠೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿಗಳನ್ನು ವೈರ್ ಪ್ರಕಟಿಸಿದೆ ಎಂದು ಮಾಳವೀಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.












