ಬೆಂಗಳೂರು:ಮಾ.24: ಭಾರತೀಯ ಜನತಾ ಪಾರ್ಟಿ ಟಿಕೆಟ್ ಘೋಷಣೆಗೂ ಮುನ್ನವೇ ಭಾರೀ ಪೈಪೋಟಿ ಶುರುವಾಗಿದ್ದು, ಈಗಾಗಲೇ ಸೋಮಣ್ಣ ವರ್ಸಸ್ ಬಿ.ವೈ ವಿಜಯೇಂದ್ರ ಹಾಗು ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹಾಗು ಈಶ್ವರಪ್ಪ ವೈಮನಸ್ಸಿನ ಬಗ್ಗೆ ಮಾಹಿತಿ ಕೊಟ್ಟಿತ್ತು ಪ್ರತಿಧ್ವನಿ. ಇದೀಗ ಚಿಕ್ಕಮಗಳೂರಲ್ಲಿ ಸಿ.ಟಿ ರವಿ ಪ್ರಾಬಲ್ಯ ಸಾಧಿಸುವುದಕ್ಕೆ ಯೋಜನೆ ರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ ಮೂಡಿಗೆರೆಯಲ್ಲಿ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟುವುದಕ್ಕೆ ಶುರು ಮಾಡಿದ್ದು, ತನ್ನ ಆಪ್ತನಿಗೆ ಟಿಕೆಟ್ ಕೊಡಿಸಬೇಕು ಎನ್ನುವ ಕಸರತ್ತು ನಡೆಸಿದ್ದಾರೆ. ಇದರ ಭಾಗವಾಗಿ ಮೊನ್ನೆ ಬಿ.ಎಸ್ ಯಡಿಯೂರಪ್ಪ ಮೂಡಿಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಂಪಿ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿಸುವ ಯೋಜನೆ ರೂಪಿಸಿ ಯಶಸ್ವಿಯಾಗಿದ್ದರು. ಇನ್ನು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಯಡಿಯೂರಪ್ಪ ವಿರೋಧಿ ಬಣದಲ್ಲಿರುವ ಸಿ.ಟಿ ರವಿ, ಯಡಿಯೂರಪ್ಪ ಆಪ್ತನಾಗಿರುವ ಎಂಪಿ ಕುಮಾರಸ್ವಾಮಿಗೆ ಠಕ್ಕರ್ ಕೊಡಬೇಕು ಎನ್ನುವ ಯೋಜನೆಯಲ್ಲಿ ನಿರತರಾಗಿದ್ದಾರೆ.
ಗಡಿನಾಡು ಬೆಳಗಾವಿಯಲ್ಲಿ ಸಾಹುಕಾರ್ ವರ್ಸಸ್ ಸವದಿ..!
ಬೆಳಗಾವಿಯ ಅಥಣಿ ಕ್ಷೇತ್ರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿತ್ತು. ಆದರೆ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಶಾಸಕ ಮಹೇಶ್ ಕುಮಟಹಳ್ಳಿ ರಮೇಶ್ ಜಾರಕಿಹೊಳಿ ಪಟ್ಟ ಶಿಷ್ಯ. ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಅನ್ನೋ ತೀರ್ಮಾನವನ್ನೂ ಸಹ ರಮೇಶ್ ಜಾರಕಿಹೊಳಿ ತೆಗೆದುಕೊಳ್ಳಬಹುದಾದ ಮಟ್ಟಕ್ಕೆ ರಮೇಶ್ ಜಾರಕಿಹೊಳಿ ನಿರ್ಧಾರಕ್ಕೆ ಅವಲಂಭಿತರಾಗಿದ್ದಾರೆ. ಆದರೆ ಅಥಣಿ ಕ್ಷೇತ್ರದಿಂದ ಸೋಲುಂಡಿದ್ದ ಲಕ್ಷ್ಮಣ ಸವದಿ ಪರಿಷತ್ಗೆ ಆಯ್ಕೆಯಾಗಿ ಡಿಸಿಎಂ ಕೂಡ ಆಗಿದ್ದರು. ಆದರೆ ಇದೀಗ ಜಿಲ್ಲೆಯಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮಾರ್ಚ್ 27ರಂದು ನಾನು ಸ್ವಾಭಿಮಾನದ ನಿರ್ಧಾರ ಘೋಷಣೆ ಮಾಡ್ತೇನೆ ಎನ್ನುವ ಮೂಲಕ ಒಂದು ವೇಳೆ ಟಿಕೆಟ್ ಸಿಗದಿದ್ದರೆ ನನ್ನ ದಾರಿ ನನಗೆ ಎನ್ನುವ ಸಂದೇಶವನ್ನು ಸವದಿ ನೀಡಿದ್ದಾರೆ. ಜೊತೆಗೆ ಮುಸ್ಲಿಂ ಸಮುದಾಯದ ನಾಯಕರ ಜೊತೆಗೆ ಸಭೆ ನಡೆಸುವ ಮೂಲಕ ಸದಾ ಕಾಲ ಹಿಂದುತ್ವ ಅಜೆಂಡಾ ಎನ್ನುವ ಬಿಜೆಪಿಯಲ್ಲಿ ಮುಸ್ಲಿಮರ ಮತಕ್ಕೆ ಸೆರಗೊಡ್ಡಿದ್ದಾರೆ.
ಬೆಂಗಳೂರಿನಲ್ಲೂ ಬಿಜೆಪಿ ನಾಯಕರ ಬಡಿದಾಟ..!
ರಾಜ್ಯದ ಪ್ರಮುಖ ಸ್ಥಾನ ಬೆಂಗಳೂರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಯಾರು ಪ್ರಾಬಲ್ಯ ಸಾಧಿಸುತ್ತಾರೋ ಅವರ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಒಟ್ಟು 28 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು ಅನ್ನೋ ಲೆಕ್ಕಾಚಾರದಲ್ಲಿ ಇರುವ ಬಿಜೆಪಿಗೆ ಬಂಡಾಯದ ಬಿಸಿ ತಾಕಿದೆ. ಕಳೆದ ಬಾರಿ ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಬಂದಿರುವ ಭೈರತಿ ಬಸವರಾಜು ಸಹಜವಾಗಿಯೇ ಟಿಕೆಟ್ ಬಯಸಿದ್ದಾರೆ. ಆದರೆ ಕಳೆದ ಬಾರಿ ಸೋಲುಂಡ ನಂದೀಶ್ ರೆಡ್ಡಿ ಕೂಡ ಕೆ.ಆರ್ ಪುರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಬ್ಬರಿಗೆ ಟಿಕೆಟ್ ಕೊಟ್ಟರೂ ಒಬ್ಬರು ಬಂಡಾಯ ಏಳುವುದು ಶತಸಿದ್ಧ. ಸಚಿವ ಭೈರತಿ ಬಸವರಾಜ್ಗೆ ಟಿಕೆಟ್ ಕೊಟ್ಟರೆ, ನಂದೀಶ್ ರೆಡ್ಡಿ ಪಕ್ಷೇತರ ಅಥವಾ ಬೇರೊಂದು ಪಕ್ಷದ ಟಿಕೆಟ್ ಪಡೆದು ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ.
ಮುಂಬೈ ಕರ್ನಾಟಕದಲ್ಲೂ ಕೇಸರಿ ಪಾಳಯಕ್ಕೆ ಕಂಟಕ..!
ವಿಜಯಪುರದಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಲಿ ಶಾಸಕರಿದ್ದಾರೆ. ಬಿ.ಎಸ್ ಯಡಿಯೂರಪ್ಪ ಹಾಗು ಬಿ.ವೈ ವಿಜಯೇಂದ್ರ ಅವರನ್ನೇ ಟಾರ್ಗೆಟ್ ಮಾಡಿದ್ದ ಯತ್ನಾಳ್, ಕಳೆದ ಮೂರೂವರೆ ವರ್ಷಗಳ ಕಾಲ ಇನ್ನಿಲ್ಲದಂತೆ ಯಡಿಯೂರಪ್ಪ ಅವರನ್ನು ಕಾಡಿಸಿದ್ದರು. ಆದರೂ ಯತ್ನಾಳ್ ಮೇಲೆ ಹೈಕಮಾಂಡ್ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಿಲ್ಲ. ಅಂದರೆ ಯತ್ನಾಳ್ರನ್ನು ಮುಂದೆ ಬಿಟ್ಟು ಯಡಿಯೂರಪ್ಪ ಹಾಗು ವಿಜಯೇಂದ್ರ ಅವರನ್ನು ಅಣಿಯಾಯ್ತು ಅನ್ನೋದು ತೆರೆದಿಟ್ಟ ಸತ್ಯ. ಇದೀಗ ಸಂಸದೀಯ ಮಂಡಳಿಯಲ್ಲಿರುವ ಯಡಿಯೂರಪ್ಪ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ವೇದಿಕೆಯಲ್ಲಿ ಮಾತನಾಡುವ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಿ ಮುಜುಗರ ಉಂಟು ಮಾಡಿದ್ದಾರೆ. ವಿಜಯಪುರದಲ್ಲಿ ಪಕ್ಷದ ಯಾವುದೇ ನಾಯಕ ಗೆದ್ದು ಬರುತ್ತಾರೆ, ಹೀಗಾಗಿ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ 150 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ರಾಜ್ಯಾದ್ಯಂತ ಬಿಕ್ಕಟ್ಟು ಎದುರಾಗಿದೆ. ಈ ಬಿಕ್ಕಟ್ಟು ಶಮನ ಮಾಡಿ ಗೆದ್ದು ಬರುತ್ತಾ..? ಅಥವಾ ಈ ಬಿಕ್ಕಟ್ಟಿನ ಕಾರಣದಿಂದಲೇ ಸೋತು ಸುಣ್ಣವಾಗುತ್ತಾ ಕಾದು ನೋಡಬೇಕು.
ಕೃಷ್ಣಮಣಿ