ಕೋಲಾರ : ಏ.16: ಕೋಲಾರ ಬಂಗಾರದ ಜಿಲ್ಲೆ. ದೇಶದಲ್ಲಿ ಮೂರು ಬಂಗಾರದ ನಿಕ್ಷೇಪಗಳಿದ್ದೂ, ಅವುಗಳು ಕರ್ನಾಟಕದಲ್ಲಿವೆ. ಕೋಲಾರ, ತುಮಕೂರು, ರಾಯಚೂರಿನಲ್ಲಿವೆ. ಕೋಲಾರದಲ್ಲಿ ಬರಗಾಲಕ್ಕೆ ತುತ್ತಾಗಿ ನೀರಾವರಿಗೆ ಸಮಸ್ಯೆ ಇತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ ನೀಡಿ ನೂರಾರು ಕೆರೆ ತುಂಬಿ ಲಕ್ಷಾಂತರ ಎಕರೆ ನೀರಾವರಿ ಆಗಿದೆ. ಹಿಂದೆ ಕೃಷ್ಣಪ್ಪನವರು ಕಂದಾಯ ಸಚಿವರಾಗಿದ್ದರು. ಅವರ ಕಾಲದಲ್ಲಿ ಡೈರಿ ಆರಂಭವಾಯಿತು. ರೇಷ್ಮೆ ಉದ್ದಿಮೆ ಆರಂಭವಾಯಿತು. ಹಾಲು, ರೇಷ್ಮೆ, ನೀರು, ಬಂಗಾರಕ್ಕೆ ಈ ಜಿಲ್ಲೆ ಪ್ರಸಿದ್ಧವಾಗಿದೆ. ಈ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭ ಮಾಡಿದ್ದು, ಪಕ್ಷಕ್ಕೆ ಗೆಲುವು ಖಚಿತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಕೋಲಾರದದಲ್ಲಿ ನಡೆದ ಜೈ ಭಾರತ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನ ಮೋದಿ ಸರ್ಕಾರಕ್ಕೆ ಬೇಸತ್ತಿದ್ದು, ಅದಕ್ಕಿಂತ ಹೆಚ್ಚಾಗಿ 40% ಕಮಿಷನ್ ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿದ್ದು, ಜನ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಗೆಲ್ಲಿಸಲು ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದೆ. ಈ ಕಮಿಷನ್ ಭ್ರಷ್ಟಾಚಾರವನ್ನು ಮೋದಿ ಅಮಿತ್ ಶಾ ಮೌನವಾಗಿ ಸಮರ್ಥಿಸಿಕೊಳ್ಳುತ್ತಾ, ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಇಲ್ಲಿ ಬಿಇಎಲ್, ಬಿಹೆಚ್ ಇಎಲ್ ಗಳನ್ನು ಮೋದಿ ಆರಂಭಿಸಿದರಾ? ಕೋಲಾರದಲ್ಲಿ ವಿದ್ಯುತ್, ರಸ್ತೆ ಮಾಡಿದ್ದು ಮೋದಿಯೇ? ದೇಶದಲ್ಲಿ ವಿದ್ಯುತ್ ಮೊದಲು ಬಂದಿದ್ದು, ಕೋಲಾರದ ಕೆಜಿಎಫ್ ನಲ್ಲಿ. ಆದರೂ ನಮ್ಮನ್ನು ಪದೇ ಪದೆ ಕೇಳುತ್ತಾರೆ. ಈ ಡಬಲ್ ಇಂಜಿನ್ ಸರ್ಕಾರ ರಾಜ್ಯಕ್ಕೆ ಏನು ಮಾಡಿದೆ? ನೆಹರೂ, ಕೆ.ಸಿ ರೆಡ್ಡಿ ಕಾಲದಲ್ಲಿ ಸಾರ್ವಜನಿಕ ವಲಯ ಉದ್ದಿಮೆ ಆರಂಭ ಮಾಡಲಾಯಿತು. ಇವರ ಕಾಲದಲ್ಲಿ ಏನು ಬಂದಿದೆ?

ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. 9 ವರ್ಷಗಳಲ್ಲಿ 18 ಕೋಟಿ ಉದ್ಯೇಗ ನೀಡಬೇಕಿತ್ತು. ಆದರೆ ಈ ಸರ್ಕಾರ ಸಾರ್ವಜನಿಕ ಉದ್ದಿಮೆ ಖಾಸಗಿಯವರಿಗೆ ಮಾರಿ ಯುವಕರನ್ನು ಬೀದಿಗೆ ತಳ್ಳಿದ್ದಾರೆ. ಸಂಸತ್ತಿನಲ್ಲಿ ನಾನು 1.28 ಗಂಟೆ ಮಾತನಾಡಿದ್ದು, ಅದರಲ್ಲಿ ಬಿಜೆಪಿ ಅವರು ಗಲಾಟೆ ಮಾಡಿದ್ದಾರೆ. ಆಗ ಮೇದಿ ಅವರು ಉಪಸ್ಥಿತರಿದ್ದರೂ ಅವರ ಸಂಸದರನ್ನು ತಡೆಯುವ ಪ್ರಯತ್ನ ಮಾಡಲೇ ಇಲ್ಲ. ಕಾರಣ ಅವರೇ ಗಲಾಟೆ ಮಾಡಿಸಿದರು. ಇಡೀ ಅಧಿವೇಶನ ಅದಕ್ಕೆ ಬಲಿಯಾಯಿತು. ಈ ಅಧಿವೇಶನದಲ್ಲಿ ನಾವು ಕೆಲವು ಪ್ರಶ್ನೆ ಕೇಳಿದ್ದೆವು. ಮೋದಿ ಹಾಗೂ ಅದಾನಿ ಅವರ ನಡುವೆ ಇರುವ ಸಂಬಂಧವೇನು? 2014ರಲ್ಲಿ 50 ಸಾವಿರ ಕೋಟಿ ಇದ್ದ ಆಸ್ತಿ, 2020ರಲ್ಲಿ ಅದು 2 ಲಕ್ಷ ಕೋಟಿಗೆ ಏರುತ್ತದೆ, 2023ರಲ್ಲಿ ಅದು 12 ಲಕ್ಷ ಕೋಟಿ ಆಗಿದ್ದು ಹೇಗೆ?
ಪ್ರಧಾನಿಗಳು ವಿದೇಶಕ್ಕೆ ಹೋದಾಗ ಅದಾನಿ ಎಷ್ಟು ಬಾರಿ ಬಂದಿದ್ದರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಆದರೆ ಅವರ ವಿರುದ್ಧ ಇದೇ ಕೋಲಾರದಲ್ಲಿ ಮಾತನಾಡಿದ್ದ ಭಾಷಣದ ವಿಚಾರವಾಗಿ ಗುಜರಾತಿನಲ್ಲಿ ಎಫ್ಐಆರ್ ದಾಖಲಿಸಿ ಕೇವಲ 22 ದಿನಗಳಲ್ಲಿ ತೀರ್ಪು ಮಾಡಿ, 24 ತಾಸಿನಲ್ಲಿ ಅನರ್ಹತೆ ಮಾಡಿ, ಮನೆ ಖಾಲಿ ಮಾಡಲು ನೊಟೀಸ್ ನೀಡಿದ್ದಾರೆ. ಇದು ಬಿಜೆಪಿಯ ಸರ್ವಾಧಿಕಾರಿ ಧೋರಣೆ. ಹೀಗಾಗಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮುಂದೆ ಸಾಗಬೇಕು. ಧೈರ್ಯವಾಗಿ ಮಾತನಾಡುವ ವ್ಯಕ್ತಿ ಎಂದರೆ ಅದು ರಾಹುಲ್ ಗಾಂಧಿ. ಅನ್ಯಾಯವಾಗಿರುವುದರ ವಿರುದ್ಧ ಹೋರಾಟ ಮಾಡುವ ಶಕ್ತಿ ಇಲ್ಲದಿದ್ದರೆ, ಬದುಕಲು, ಸಂವಿಧಾನ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇವು ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.

ನಿಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ನನಗೆ ಲೆಕ್ಕವಿಲ್ಲ. ಇಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಜನಪರ ಕಾರ್ಯಕ್ರಮ ಮತ್ತೆ ಜಾರಿ ಆಗಬೇಕು. ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನದಂತೆ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ನೀವು ಜನರ ಬಗ್ಗೆ ಯೋಚಿಸಿ, ಮಿಕ್ಕ ವಿಚಾರ ಹೈಕಮಾಂಡ್ ಗೆ ಬಿಟ್ಟುಬಿಡಿ. ನೀವೆಲ್ಲ ಆಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ 150-160 ಸೀಟು ನೀಡಬೇಕು. ಈ ಹಿಂದೆ ನಾವು ಈ ಸಾಧನೆ ಮಾಡಿದ್ದೇವೆ. ಈ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.
ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಒಂದು ಯೋಜನೆ ನೀಡುತ್ತಿಲ್ಲ. ನಮ್ಮ ಕಾರ್ಯಕ್ರಮದ ಯೋಜನೆ, ರೈಲು ಮಾರ್ಗಕ್ಕೆ ಇವರು ಹಸಿರು ಬಾವುಟ ತೋರಿಸಿ ನಮ್ಮ ಯೋಜನೆ ಎಂದು ಹೇಳುತ್ತಿದ್ದಾರೆ. ಹಳೇ ಡಬ್ಬಿಗೆ ಹೊಸ ಬಣ್ಣ ಬಳಿದು ತಮ್ಮ ಸಾಧನೆ ಎಂದು ಹೇಳುತ್ತಿದ್ದಾರೆ. ಈ ಸರ್ಕಾರ ಕಿತ್ತೊಗೆಯದಿದ್ದರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಬೆಂಗಳೂರು ಬೆಳೆದಿದ್ದು ಕಾಂಗ್ರೆಸ್ ಸರ್ಕಾರ ಇದ್ದಾಗ. ಹೀಗಾಗಿ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು.