ಪಟೇಲರ ಬಳಿಕ ಈಗ ಚೌಕಿದಾರನ ನೇತೃತ್ವದ ಭಾಜಪ ಸುಭಾಸ್ ಚಂದ್ರ ಬೋಸ್ ಅವರ ಕುರಿತು ಚರಿತ್ರೆಯ ಫೋಟೋ ಶಾಪ್ ಆರಂಭಿಸಿದೆ. ಅವರ ಪ್ರತಿಮೆ ಸ್ಥಾಪಿಸಿ ಅವರ ವಿಚಾರ, ರಾಜಕಾರಣಗಳ ಬಗ್ಗೆ ಚರ್ಚೆಯೇ ಇಲ್ಲದಂತೆ ಆಟ ಕಟ್ಟುತ್ತಿದೆ. ಇಂದಿಗೂ ಆರೆಸ್ಸೆಸ್ ಅಥವಾ ಭಾಜಪ ಸ್ವಾತಂತ್ರ್ಯ ಸಮರದ ನೇತಾರರನ್ನು ನೆಹರೂ , ಗಾಂಧಿ ವಿರುದ್ಧ ಎತ್ತಿಕಟ್ಟಲು ಗಾಸಿಪ್ ಚರಿತ್ರೆ ಹರಡುತ್ತಾ ಪ್ರತಿಮಾ ರಾಜಕಾರಣದಲ್ಲೇ ಮುಳುಗಿದೆ. ಇತ್ತೀಚೆಗೆ ಭಗತ್ ಸಿಂಗ್ ಅವರನ್ನು ಕೈ ಬಿಟ್ಟಿದೆ. ಯಾಕೆಂದರೆ ಭಗತ್ ಸಿಂಗ್ ಕಮ್ಯುನಿಸ್ಟ್ ಅಂತ ದೇಶಕ್ಕೆ ಗೊತ್ತಾಗಿದೆ. ಇರಲಿ.
ನೇತಾಜಿ ಅವರ ಬಗ್ಗೆ ಕೆಲವು ವಿವರಗಳನ್ನು ಗಮನಿಸೋಣ…
೧. ಗಾಂಧಿಜಿಯ ಅಹಿಂಸಾತ್ಮಕ ಚಳವಳಿ ಸಾಲದು ಎಂಬ ಕಾರಣಕ್ಕೆ ನೇತಾಜಿ ಸೈನ್ಯ ಸಹಿತ ಯುದ್ಧ ಸಾರುವ ನಿರ್ಧಾರ ಮಾಡಿದರು. ಆದರೆ ಅವರಿಗೆ ನೆಹರೂ, ಗಾಂಧಿ ಮತ್ತಿತರ ನಾಯಕರ ಬಗ್ಗೆ ಇದ್ದ ಗೌರವ ಅಪಾರ. ಗಾಂಧಿಯನ್ನು ರಾಷ್ಟ್ರಪಿತ ಎಂದು ಮೊದಲು ಕರೆದಿದ್ದು ಈ ನೇತಾಜಿ.
೨.ಐ.ಎನ್.ಎ.ಯ ನಾಲ್ಕು ತುಕಡಿಗಳಿಗೆ ಗಾಂಧಿ, ನೆಹರೂ ಮತ್ತು ಆಜಾದ್ ಹೆಸರು ಇಟ್ಟು ತಮ್ಮಗೌರವ ಸೂಚಿಸಿದ್ದರು.
೩. ಜನಗಣಮನ ಹಾಡನ್ನು ರಾಷ್ಟ್ರಗೀತೆ ಎಂದು ಮೊದಲು ಘೋಷಿಸಿದ್ದು ನೇತಾಜಿ. ಈ ಹಾಡಿನ ಬಗ್ಗೆ ಇಲ್ಲ ಸಲ್ಲದ ಕಟ್ಟುಕತೆಗಳ ಮೂಲಕ ಅಪಪ್ರಚಾರ ಮಾಡಿದ್ದು ಆರೆಸ್ಸೆಸ್. ಒಂದು ಕತೆ, ಒಂದು ವ್ಯಥೆ ಎಂಬ ರಾಷ್ಟ್ರೋತ್ಥಾನದ ಕೃತಿ ಈ ಬಗ್ಗೆ ಇದೆ.
೪. ರಾಜಕೀಯ, ಸೈದ್ಧಾಂತಿಕ ನಿಲುಮೆಯ ದೃಷ್ಟಿಯಿಂದ ನೇತಾಜಿ ಮರಣದ ತರುವಾಯ ಬಹುತೇಕ ಐ.ಎನ್. ಎ. ಯೋಧ ನಾಯಕರು ಕಾಂಗ್ರೆಸ್ ಸೇರಿದ್ದರು. ಒಬ್ಬನೇ ಒಬ್ಬ ನೇತಾಜಿ ಅನುಯಾಯಿ ಆರೆಸ್ಸೆಸಿನ ಕಂಗಾರೂ ಮರಿಯಾಗಿದ್ದ ಜನಸಂಘ / ಭಾಜಪವನ್ನು ಸೇರಲಿಲ್ಲ.
೫. ನೇತಾಜಿ ಸ್ಥಾಪಿಸಿದ್ದ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಬಂಗಾಲದಲ್ಲಿ ಎಡ ಪಕ್ಷಗಳ ಮೈತ್ರಿ ಕೂಟದಲ್ಲಿ ಇಂದಿಗೂ ಇದೆ.

೬. ನೇತಾಜಿ ಅವರ ಐ.ಎನ್ ಎ. ಯ ಮಹಿಳಾ ತುಕಡಿಯ ಮುಖ್ಯಸ್ಥೆಯಾಗಿದ್ದ ಲಕ್ಷ್ಮಿ ಸೆಹಗಲ್ ತರುವಾಯ ಎಡ ಪಕ್ಷಗಳ ಬೆಂಬಲದೊಂದಿಗೆ ಭಾರತದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ಗದಾಗ ಇದೇ ಮೋದಿ ಸಹಿತ ವಾಜಪೇಯಿ ನಾಯಕತ್ವದ ಭಾಜಪ ಅವರನ್ನು ಸೋಲಿಸಿ ಕಲಾಂ ಅವರನ್ನು ಆರಿಸಿತ್ತು. ನೇತಾಜಿ ಗೆ ಭಾಜಪ ಕೊಟ್ಟ ಗೌರವ ನೋಡಿ
೭. ವೈಯಕ್ತಿಕ ನೆಲೆಯಲ್ಲಿ, ನೆಹರೂ ಕಾಂಗ್ರೆಸ್ ಒಳಗಿನ ಸಮಾಜವಾದಿಗಳ ನೇತೃತ್ವ ವಹಿಸಬೇಕು ಎಂದು ಬೋಸ್ ಆಗ್ರಹಿಸಿದ್ದರು. ಕಮಲಾ ನೆಹರೂ ತೀವ್ರ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆಗೆ ಸ್ವಿಜರ್ ಲ್ಯಾಂಡ್ ಗೆ ಹೋಗಬೇಕಾದಾಗ ನೆಹರೂ ಜೈಲಿನಲ್ಲಿದ್ದರು. ಆಗ ತಮ್ಮನಂತೆ ಆಕೆಯನ್ನು ಸ್ವಿಜರ್ಲಾಂಡಿಗೆ ಕರೆದೊಯ್ದು ನೆಹರೂ ಬರುವ ವರಗೆ ಆಕೆಯನ್ನು ನೋಡಿಕೊಂಡಿದ್ದು ಬೋಸ್.
೮. ಬ್ರಿಟಿಶರು ಐ.ಎನ್ ಎ. ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ಆರಂಭವಾದಾಗ ( ಪ್ರಸಿದ್ಧ ಕೆಂಪುಕೋಟೆ ವಿಚಾರಣೆ) ಮತ್ತೆ ವಕೀಲರ ಕೋಟು ಧರಿಸಿ ನೆಹರೂ ಈ ಸ್ವಾತಂತ್ರ್ಯ ಯೋಧರ ಪರವಾಗಿ ವಾದಿಸಿದ್ದಷ್ಟೇ ಅಲ್ಲ, ಅಷ್ಟೂ ವಕೀಲರ ನೇತೃತ್ವ ವಹಿಸಿದ್ದರು. (ಈ ಸಮಯದಲ್ಲಿ ಗೋಲ್ವಾಲ್ಕರ್ ಈ ಬ್ರಿಟಿಶ್ ವಿರುದ್ಧ ಹೋರಾಡಿ ಸಮಯ ವೇಸ್ಟ್ ಮಾಡಬೇಡಿ, ಮುಸ್ಲಿಮರು, ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಕೇಂದ್ರೀಕರಿಸಬೇಕು ಎಂದಿದ್ದರು!)
೯. ಹಿಂದೂ ಮಹಾಸಭಾದ ಮುಖ ಭಂಗ ಮಾಡಲು ಸ್ವತಃ ಬೋಸ್ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿದ್ದರು.
ಸುಭಾಸ್ ಬೋಸ್ ಅವರ ಬರಹ, ಭಾಷಣ, ರಾಜಕೀಯ ಜೀವನ, ಅವರ ಪರಂಪರೆ, ಅನಯುಯಾಯಿಗಳು – ಹೀಗೆ ಯಾವ ವಿವರ ನೋಡಿದರೂ ಭಾಜಪಕ್ಕಾಗಲೀ, ಆರೆಸ್ಸೆಸ್ಸಿಗಾಗಲೀ ಎಳ್ಳಿನ ಸಾದೃಷ್ಯವೂ ಇಲ್ಲ; ಅಷ್ಟೇಕೆ, ಆರೆಸ್ಸೆಸ್ಸನ ನಿಲುವನ್ನುಇಡೀ ಬೋಸ್ ಪರಂಪರೆ ನಖಶಿಖಾಂತ ವಿರೋಧಿಸಿತ್ತು.
ಈಗ ಈ ನಕಲಿ ದೇಶಭಕ್ತರು ಪ್ರತಿಮೆ ಸ್ಥಾಪಿಸಿ ಬೋಸ್ ಅವರನ್ನು ಗಾಂಧಿ, ನೆಹರೂ ವಿರುದ್ಧ ಎತ್ತಿಕಟ್ಟಿ ಬೋಸ್ ತಮ್ಮವರು ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಪ್ರತಿಮಾ ನಾಟಕದ ಬದಲು ಅವರ ರಾಜಕೀಯ, ವಿಚಾರಗಳಬಗ್ಗೆ ಚರ್ಚಿಸಲು ಈ ಚೌಕಿದಾರ ಆಕಸ್ಮಾತ್ ತಯಾರಾದರೆ ಈ ಪ್ರತಿಮಾ ನಾಟಕವೂ ಬರಕಾಸ್ತಾಗುತ್ತದೆ!








