ಬೆಂಗಳೂರು : ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ಬಿಜೆಪಿ ನಿರಂತರವಾಗಿ, ಚರಿತ್ರೆಯುದ್ದಕ್ಕೂ ಜನದ್ರೋಹ ಎಸಗುತ್ತಿರುವ ಬಿಜೆಪಿ ಕಾವೇರಿ ನೀರಿನ ವಿಚಾರದಲ್ಲಿ ಮೊಸಳೆ ಕಣ್ಣೀರು ಹರಿಸುತ್ತಿದೆ ಎಂದು ಎಐವೈಸಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಖಂಡಿಸಿದ್ದಾರೆ.ಬಿಜೆಪಿ ಕಾರ್ಯಕರ್ತರೊಬ್ಬರು ಇಂದು ಬಾಯಿಗೆ ಮಣ್ಣು ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕಳೆದ 9 ವರ್ಷಗಳಿಂದ ಕೇಂದ್ರ ಸರ್ಕಾರ ಕನ್ನಡಿಗರ ಬಾಯಿಗೆ ಮಣ್ಣು ಹಾಕುವ, ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಾ ಬಂದಿರುವುದನ್ನು ಬಿಜೆಪಿ ಕಾರ್ಯಕರ್ತ ಸಾಂಕೇತಿಕವಾಗಿ ಆಚರಿಸಿದ್ದಾನೆ ಎಂದು ಬಿ.ವಿ.ಶ್ರೀನಿವಾಸ್ ಟೀಕಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾದರು. ಆದರೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗದಂತೆ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತಂತೆ ದೆಹಲಿಯಲ್ಲಿ ನಡೆದ ಸರ್ವ ಪಕ್ಷದ ಸಂಸದರು ಮತ್ತು ಸದಸ್ಯರ ಸಭೆಗೆ ನಿರ್ಮಲಾ ಸೀತಾರಾಮನ್ ಅವರು ನೆಪಕ್ಕಾದರೂ ಭಾಗವಹಿಸಲಿಲ್ಲ. ರಾಜ್ಯಕ್ಕೆ ಬರಬೇಕಾದ GST ಪಾಲಿನಲ್ಲಿ, 15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆದಾಗ ರಾಜ್ಯವನ್ನು ಪ್ರತಿನಿಧಿಸುವ 25 ಮಂದಿ ಬಿಜೆಪಿ ಸಂಸದರು ಬಾಯಿ ಬಿಡಲೇ ಇಲ್ಲ.
ರಾಜ್ಯಕ್ಕೆ ಬರ ಬಂದಾಗ, ಅತಿವೃಷ್ಠಿ-ಪ್ರವಾಹದಿಂದ ಸಂಕಷ್ಟ ಎದುರಾದಾಗಲೂ ಈ ಸಂಸದರಾಗಲಿ, ರಾಜ್ಯದವರೇ ಆದ ಕೇಂದ್ರ ಸಚಿವರಾಗಲೀ ರಾಜ್ಯದ ನೆರವಿಗೆ ಬರಲೇ ಇಲ್ಲ. ಈ ಸಂಸದರಾಗಲೀ, ಕೇಂದ್ರ ಸಚಿವರಾಗಲೀ ಇವರ್ಯಾರೂ ನೆಪಕ್ಕೂ ಕೂಡ ಪ್ರಧಾನಿ ಮೋದಿ ಅವರ ಬಳಿ ಹೋಗಿ ರಾಜ್ಯದ ಪಾಲಿನ ಹಕ್ಕನ್ನು ಕೇಳುವ ಧೈರ್ಯ ಮಾಡಲಿಲ್ಲ. ಪಾರ್ಲಿಮೆಂಟಿನಲ್ಲೂ ರಾಜ್ಯದ ಪರವಾಗಿ ಸಮರ್ಥ ಧ್ವನಿ ಎತ್ತಿದ ಉದಾಹರಣೆಗಳಿಲ್ಲ. ಈ ರೀತಿ ನಿರಂತರವಾಗಿ ಜನದ್ರೋಹವನ್ನು ಮತ್ತು ಹೊಣೆಗೇಡಿತನವನ್ನು ಆಚರಿಸುತ್ತಾ ಬರುತ್ತಿರುವ ಬಿಜೆಪಿ ಸಂಸದರು ಮತ್ತು ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಕಾವೇರಿ ವಿಚಾರದಲ್ಲಿ ಮಾತ್ರ ಪ್ರತಿಭಟನೆಯ ಸೋಗು ಹಾಕುತ್ತಿದ್ದಾರೆ ಎಂದು ಬಿ.ವಿ.ಶ್ರೀನಿವಾಸ್ ಖಂಡಿಸಿದ್ದಾರೆ.