ನೆಲಮಂಗಲ – ತುಮಕೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವ ಕುಲುಮೆ ಪಾಳ್ಯ ಮತ್ತು ಚೊಕ್ಕೇನಹಳ್ಳಿಯದಲ್ಲಿ ಇರುವ ಎರಡು ಟೋಲ್ ಪ್ಲಾಜಾಗಳ ಟೆಂಡರ್ ಅವಧಿ 21.06.2021ಕ್ಕೆ ಮುಕ್ತಾಯಗೊಂಡಿದೆ. ಈಗಿದ್ದರೂ ಟೋಲ್ ಪ್ಲಾಜಾ ಮುಚ್ಚದೆ ಹಣ ವಸೂಲಿ ಮಾಡಲಾಗುತ್ತಿದೆ.
ವಿಧಾನಸಭಾ ಅಧಿವೇಶನಗಳಲ್ಲಿ ಚರ್ಚೆಯಾದರೂ ಮುಗಿಯದ ಟೋಲ್ ರಗಳೆ !
2021ರ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ, ಗುತ್ತಿಗೆ ಅವಧಿ ಮುಗಿದರೂ ಹಣ ವಸೂಲಿ ಮಾಡುತ್ತಿರುವ ಟೋಲ್‍ಗಳ ಬಗ್ಗೆ ಶಾಸಕ ಕೆ.ಟಿ.ಶ್ರೀ ಕಂಠೇಗೌಡ ಅವರು ಪ್ರಶ್ನಿಸಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಬೆಂಗಳೂರಿ ನಿಂದ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಟೋಲ್‍ಗಳಲ್ಲಿ ವಾಹನಗಳಿಂದ ಹಣ ಸಂಗ್ರಹ ಅವಧಿ ಮುಗಿದ್ದರೂ, ವಸೂಲಿ ಮಾಡುತ್ತಿರುವ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ ಎಂದು ಹೇಳಿದ್ದರು.
ಬಳಿಕ ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಕೆ.ಟಿ.ಶ್ರೀ ಕಂಠೇಗೌಡ, ಈ ವ್ಯಾಪ್ತಿಯ ಟೋಲ್ ಅವಧಿ ಮುಗಿದು 6 ತಿಂಗಳಾದರೂ, ಏಕೆ ಸುಲಿಗೆಮಾಡಲಾಗುತ್ತಿದೆ. ಇದನ್ನು ತೆರವು ಮಾಡಲು ಮುಂದಾಗಬೇಕು. ಅಷ್ಟೇ ಅಲ್ಲದೆ, ಒಂದು ದಿನಕ್ಕೆ 50 ಲಕ್ಷರೂ. ವಸೂಲಿಮಾಡಲಾಗುತ್ತಿದೆ ಎಂದು ಸದನದ ಗಮನ ಸೆಳೆದರು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಒಂದು ದಿನಕ್ಕೆ 50 ಲಕ್ಷ ವಸೂಲಿ ಮಾಡಲಾಗುತ್ತಿದೆ ಎಂದರೆ ಗಂಭೀರ ವಿಚಾರ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸದನಕ್ಕೆ ಉತ್ತರಿಸಿ ಎಂದರು. ಇದಕ್ಕೆ ಸಚಿವರು ಸಮ್ಮತಿಸಿದರು.
ಮಾರ್ಚ್ 2022ರ ವಿಧಾನಸಭೆಯಲ್ಲೂ ಮತ್ತದೇ ಟೋಲ್ ಚರ್ಚೆ!
2022ರ ಮಾರ್ಚ್ ನಲ್ಲಿ ನಡದ ವಿಧಾನಸಭೆ ಅಧಿವೇಶನದಲ್ಲೂ ಇದೇ ಟೋಲ್ ರಗಳೆ ಪ್ರತಿಧ್ವನಿಸಿತ್ತು. ಈ ಬಾರಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಬರುವ ಎರಡು ಟೋಲ್ ಕೇಂದ್ರಗಳಲ್ಲಿ ಟೆಂಡರ್ ಅವಧಿ ಮುಗಿದಿದ್ದರೂ ಟೋಲ್ ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದೆ. ಸ್ಥಳೀಯ ವೈಯಕ್ತಿಕ ಸಂಚಾರ ಮತ್ತು ಸ್ಥಳೀಯ ವಾಣಿಜ್ಯ ಸಂಚಾರ ಸೋರಿಕೆಯಿಂದ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಅರ್ಬಿಟ್ರೇಷನ್‌ಗಾಗಿ ಮೊರೆ ಹೋಗಿದ್ದು, ಅರ್ಬಿಟ್ರೇಷನ್ ವೇಳೆ ಟೋಲ್ ವಸೂಲಾತಿಗಾಗಿ 474 ದಿನಗಳ ವಿಸ್ತರಣಾ ಅವಧಿ ನೀಡಲಾಗಿದೆ. ಕೋರ್ಟ್ಗೆ ಹೋಗಿ ಆರ್ಬಿಟ್ರೇಷನ್ ಅವಧಿ ಮೇಲೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಅಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ ಮತ್ತದೇ ಸಬೂಬು ನೀಡಿದ್ದರು.
ಟೋಲ್ ಗಳ ಅಕ್ರಮ ಸುಂಕ ವಸೂಲಾತಿ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಮೀನಾಮೇಷ !
ನೆಲಮಂಗಲ ತುಮಕೂರು ತನಕ ಅಷ್ಟಪಥ, ದಶಪಥ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ. ಆದರೆ ಈ ಮಾರ್ಗವನ್ನು ಆರು ಪಥದ ರಸ್ತೆಯನ್ನಾಗಿ ಉನ್ನತೀಕರಿಸಲಾಗಿದ್ದು, ಈಗಾಗಲೇ ಟೆಂಡರ್ ಮಾಡಲಾಗಿದೆ. ಆದಷ್ಟು ಬೇಗ ರಸ್ತೆ ಅಗಲೀಕರಣ ಆಗಲಿದೆ. ಅಲ್ಲದೇ ಅವಧಿ ಮುಗಿದರೂ ತುಮಕೂರು ಟೋಲ್ನಲ್ಲಿ ಶುಲ್ಕ ಪಡೆಯಲಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಳೆದ ಮಾರ್ಚ್ 23ರಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಮೂರು ತಿಂಗಳು ಕಳೆದಿದ್ದರೂ ಇನ್ನು ಯಾವುದೇ ತರಹದ ಕ್ರಮ ಕೈಗೊಳ್ಳದೇ ಸಚಿವರು ಹಾಗೂ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಒಟ್ಟು 81 ಟೋಲ್ ಸಂಗ್ರಹ ಕೇಂದ್ರಗಳಿದ್ದು, ಈ ಪೈಕಿ ಗುತ್ತಿಗೆ ಅವಧಿ ಮೀರಿದರೂ ಇನ್ನೂ ಕೆಲವೆಡೆ ವಾಹನ ಸವಾರರಿಂದ ಸುಂಕ ವಸೂಲಾತಿ ಮಾಡಲಾಗುತ್ತಿದೆ. ಹಲವು ಈ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದರೂ ಕೂಡ ಬಿಜೆಪಿ ಸರ್ಕಾರ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದೆ.