ಕಾಂಗ್ರೆಸ್-ಜೆಡಿಎಸ್ ಶಾಸಕರುಗಳನ್ನು ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರಕ್ಕೆ 26-7-2021 ಎರಡು ವರ್ಷಗಳಾದವು. ಹುಟ್ಟುತ್ತಲೇ ಹುಣ್ಣಾಗಿದ್ದ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುವುದರೊಳಗೆ “ಭ್ರಷ್ಟಾಚಾರಿ ಜನರ ಪಕ್ಷ” ಎಂದು ಮತ್ತೊಮ್ಮೆ ಸಾಭೀತಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಕರ್ನಾಟಕದಲ್ಲಿ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಭ್ರಮೆ ಸೃಷ್ಟಿಸಿ ಅಧಿಕಾರಕ್ಕೇರಿದ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ನಾಡಿನ ಜನ ಭ್ರಮನಿರಸನಗೊಂಡು ಛೀಮಾರಿ ಹಾಕುತ್ತಿದ್ದಾರೆ ಎಂದು ಕುಮಾರಕೃಪಾ ನಿವಾಸದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಕುಮಾರಕೃಪಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರ ಮತ್ತು ಕಪ್ಪುಹಣದ ಮೂಲಕವೇ ರಚಿತವಾದ ಸರ್ಕಾರ ಎರಡು ವರ್ಷಗಳುದ್ದಕ್ಕೂ ಆಚರಿಸಿದ್ದು ದುರಾಡಳಿತ, ಅನೀತಿ ಮತ್ತು ಭ್ರಷ್ಟಾಚಾರವನ್ನೆ. ಭ್ರಷ್ಟಾಚಾರದ ನೆಪದಲ್ಲಿ ಮುಖ್ಯಮಂತ್ರಿ ಬದಲಾಗುವ ಮೂರು ದಿನದ ಮೊದಲು ಬಡವರ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸುವುದಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಈ ಸರ್ಕಾರ ನುಂಗಿ ಹಾಕಿದೆ. ತಮ್ಮದೇ ಸರ್ಕಾರದ ಬಗ್ಗೆ ಬಿಜೆಪಿಯ ಸದಸ್ಯರುಗಳು, ಶಾಸಕರೇ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಹೊರಿಸುತ್ತಲೇ ಇದ್ದಾರೆ. ಹಲವು ಸಚಿವರುಗಳ ಹಗರಣಗಳ ಕುರಿತು ಜನ ಮತ್ತು ಇಲಾಖೆಯ ನೌಕರರೇ ನನಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಒಬ್ಬರನ್ನು ಬದಲಾಯಿಸಿ ಸರ್ಕಾರದ ಘನತೆ ಉಳಿಸಿಕೊಳ್ಳಬಹುದು ಎನ್ನುವ ಬಿಜೆಪಿ ಹೈ ಕಮಾಂಡ್ ಭ್ರಮಿಸಿದಂತಿದೆ. ಈ ನಾಟಕ ನಾಡಿನ ಜನತೆಗೆ ಅರ್ಥ ಆಗಿದೆ. ಹಲವಾರು ಸಚಿವರುಗಳು, ಶಾಸಕರುಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಮ್ಮ ಮಾನ ಉಳಿಯಿತು ಎಂದು ಓಡಾಡಿಕೊಂಡಿದ್ದಾರೆ. ಪ್ರತೀ ಇಲಾಖೆಯ ಒಂದಲ್ಲಾ ಒಂದು ವೈಫಲ್ಯಗಳು, ಭ್ರಷ್ಟಾಚಾರಗಳು ಹೊರಗೆ ಬರುತ್ತಲೇ ಇವೆ ಎಂದಿದ್ಧಾರೆ.
ಮುಗಿಲು ಮುಟ್ಟಿದ ಬಿಜೆಪಿ ಭ್ರಷ್ಟಾಚಾರ, ಬಿಜೆಪಿಯ ಆಡಳಿತದ ಕುರಿತು ಸಾಲು ಸಾಲು ಆರೋಪ ಮಾಡದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ: ಸಂಪೂರ್ಣ ವಿವರ ಕೆಳಕಂಡತ್ತಿದೆ.
೧.ಕೋವಿಡ್ ಸೋಂಕು ಮತ್ತು ಕೋವಿಡ್ ಹೆಣಗಳ ಮೇಲೆಯೂ ಭ್ರಷ್ಟಾಚಾರ ನಡೆಸಿದ್ದು ಎರಡು ವರ್ಷಗಳ ಬೃಹತ್ ಸಾಧನೆ.
೨.ಹಿಂದೆ ಗಣಿ ಹಗರಣ. ಈಗ ಭೂ ಸುಧಾರಣಾ ಕಾಯ್ದೆ. ಈ ಕಾಯ್ದೆಯಡಿ ಬಾಕಿ ಇದ್ದ ಹಳೆಯ ಕೇಸುಗಳನ್ನೂ ರದ್ದು ಮಾಡಿ ಕಾಯಿದೆಗೆ ತಿದ್ದುಪಡಿ ತಂದಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡ ಹಗರಣವಾಗಿದೆ. ಲೇಔಟು ಮಧ್ಯದಲ್ಲಿರುವ ಸರ್ಕಾರಿ ಜಮೀನುಗಳನ್ನು ರಿಯಲ್ ಎಸ್ಟೇಟ್ದಾರರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಬಿಡಿಎ, ಕೆಐಎಡಿಬಿಗಳ ಡಿನೋಟಿಫಿಕೇಷನ್ ಮತ್ತು ಫೋರ್ಜರಿ ದಾಖಲೆಗಳ ಸೃಷ್ಟಿ ವಿಚಾರದಲ್ಲಿ ಸ್ವತಃ ಮಾಜಿ ಮುಖ್ಯಮಂತ್ರಿ ಹಾಗೂ ಇತರೆ ಕೆಲವು ಸಚಿವರು ಅನೇಕ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
೩.ನೀರಾವರಿ, ಇಂಧನ ಇಲಾಖೆಗಳ ಕಾಮಗಾರಿಗಳು ಹಾಗೂ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಅಲ್ಪಾವಧಿ ಟೆಂಡರ್ ಗಳನ್ನು ಕರೆದು ಕಾರ್ಯಾದೇಶ ನೀಡುವ ಮೊದಲೆ ೧೦ ಪರ್ಸೆಂಟ್ ಲಂಚ ಹೊಡೆಯುತ್ತಿದ್ದಾರೆ, ಲಂಚದ ಪ್ರಮಾಣ ೩೫ ಪರ್ಸೆಂಟ್ ಮೀರುತ್ತಿದೆ ಎಂದು ಭ್ರಷ್ಟಾಚಾರದ ಕುರಿತು ಆಡಳಿತ ಪಕ್ಷದ ಸದಸ್ಯರುಗಳೆ ಆರೋಪಿಸುತ್ತಿದ್ದಾರೆ. ಬಿಎಂಪಿಯ ವೈಟ್ ಟಾಪಿಂಗ್ ಕಾಮಗಾರಿಗಳನ್ನು ನಮ್ಮ ಸರ್ಕಾರವಿದ್ದಾಗ ಒಂದು ಕಿ.ಮೀಗೆ ೮ ರಿಂದ ೧೦ ಕೋಟಿ ದರಕ್ಕೆ ನೀಡುತ್ತಿದ್ದೆವು. ಈಗ ಒಂದು ಕಿ.ಮೀ.ಗೆ ೧೪ ಕೋಟಿಗೆ ಏರಿಸಿಕೊಂಡಿದ್ದಾರೆ ಎಂದರು.
೪.ಕೋವಿಡ್ ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಕವಿದಿರುವಾಗಲೇ, ಮಕ್ಕಳ ಪೌಷ್ಠಿಕಾಂಶವನ್ನು ಹೆಚ್ಚಿಸುವ ಮೊಟ್ಟೆಗಳಿಗಾಗಿ ಮೀಸಲಿಟ್ಟ ಹಣವನ್ನೂ ತಿಂದು ಭ್ರಷ್ಟಾಚಾರದಲ್ಲಿ ಹೊಸ ದಾಖಲೆ ಬರೆದ ಸಚಿವರೂ ಈ ಸರ್ಕಾರದಲ್ಲಿದ್ದಾರೆ.
ಕೊರೋನ ಕಾಲದ ಭೀಕರತೆ- ಜನರನ್ನು ಬೀದಿಗಳಲ್ಲಿ ಕೊಂದ ಸರ್ಕಾರ
೫.ಆಕ್ಸಿಜನ್ ಇಲ್ಲದೆ ಚಾಮರಾಜನಗರ, ಬೆಂಗಳೂರು, ಕಲ್ಬುರ್ಗಿ, ಕೋಲಾರ ಮುಂತಾದ ಕಡೆ ಜನ ಮರಣ ಹೊಂದಿದರು. ಆದರೆ ಕೇಂದ್ರ ಸರ್ಕಾರ “ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೊಬ್ಬರೂ ಮರಣ ಹೊಂದಿಲ್ಲ” ಎಂದು ಹೇಳುತ್ತಿದೆ. ಚಾಮರಾಜನಗರ ದುರಂತದ ಬಗ್ಗೆ, ಆಕ್ಸಿಜನ್ ಇಲ್ಲದೆ ಜನರು ಮರಣ ಹೊಂದುತ್ತಿರುವ ಬಗ್ಗೆ ದೇಶದ ನ್ಯಾಯಾಲಯಗಳು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದಎ. ತಜ್ಞರುಗಳು ನವೆಂಬರ್ ೩೦-೨೦೨೦ ರಂದೆ ಎರಡನೆ ಅಲೆಯ ಕುರಿತು ವರದಿ ನೀಡಿದ್ದರು. ಆದರೆ ಸರ್ಕಾರ ಯಾವುದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕ್ರಮ ಕೈಗೊಳ್ಳಲು ಕನಿಷ್ಠ ೫ ತಿಂಗಳು ಕಾಲಾವಕಾಶವಿತ್ತು ಎಂದಿದ್ದಾರೆ.
೬.ವೆಂಟಿಲೇಟರುಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆದು ವೆಂಟಿಲೇಟರುಗಳಲ್ಲಿ ಬಹುತೇಕ ಕಳಪೆಯಾಗಿದ್ದಕ್ಕೆ ಆಸ್ಪತ್ರೆಗೆ ವಿತರಿಸದೆ ಕರ್ನಾಟಕದಲ್ಲಿ ೯೦೯ ವೆಂಟಿಲೇಟರುಗಳು ಗೋದಾಮುಗಳಲ್ಲೆ ಧೂಳಿಡಿಯುವಂತೆ ಮಾಡಿ ಅಸಂಖ್ಯಾತ ಜನ ವೆಂಟಿಲೇಟರುಗಳಿಲ್ಲದೆ ಸಾಯುವಂತಾಯಿತು. ರಾಜ್ಯದ ರೋಗಿಗಳು ಆಕ್ಸಿಜನ್ಗಾಗಿ ಬೀದಿ ಬೀದಿಗಳಲ್ಲಿ ಪರಿತಪಿಸುತ್ತಿದ್ದಾಗ, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರವು ಕಿತ್ತುಕೊಂಡು ಬೇರೆ ಕಡೆ ಕೊಂಡು ಹೋದರು. ನಂತರ ರಾಜ್ಯದ ಗೌರವಾನ್ವಿತ ಉಚ್ಛನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಛೀಮಾರಿ ಹಾಕಿದ ಮೇಲೆ ೧೨೦೦ ಟನ್ ಆಕ್ಸಿಜನ್ ಅನ್ನು ರಾಜ್ಯಕ್ಕೆ ನೀಡಲಾಯಿತು ಎಂದಿದ್ದಾರೆ.
೭.ಮೋದಿಯವರು ಕೋವಿಡ್ ಔಷಧಗಳ ಆಮದಿನ ಮೇಲೂ ಜಿಎಸ್ಟಿ ವಿಧಿಸಿದರು. ಜನ ತಮ್ಮವರ ಜೀವ ಉಳಿಸಿಕೊಳ್ಳಲು ಹೆಣ್ಣು ಮಕ್ಕಳ ತಾಳಿ-ಬಳೆಗಳನ್ನೂ ಒತ್ತೆ ಇಟ್ಟರು. ಶವಸಂಸ್ಕಾರಕ್ಕೂ ಜನ ಕನಿಷ್ಠ ೫೦೦೦೦ ರೂಗಳವರೆಗೂ ಖರ್ಚು ಮಾಡಬೇಕಾಯಿತು. ದೇಶದ ಮಕ್ಕಳಿಗೆ ಲಸಿಕೆ ಇಲ್ಲದಿದ್ದಾಗ ಹೊರ ದೇಶಗಳಿಗೆ ಕೇವಲ ೩ ಡಾಲರ್ಗಳ ಬೆಲೆಗೆ ರಫ್ತು ಮಾಡಿ, ನಮ್ಮ ದೇಶದ ಜನರಿಗೆ ೧೨೦೦ ರೂಗಳ ವರೆಗೆ ಬೆಲೆ ನಿಗಧಿ ಪಡಿಸಲಾಗಿದೆ. ನಮ್ಮ ದೇಶದ ಪ್ರಧಾನಿಗಳು ಮನೆಗೆ ಮಾರಿ ಊರಿಗೆ ಉಪಕಾರಿ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ.
೮.ಕೋವಿಡ್ನ ೩ ನೆ ಅಲೆಯ ಭೀತಿ ಜನರನ್ನು ಕಾಡುತ್ತಿದೆ. ಈಗಾಗಲೆ ಕೇರಳ ಮತ್ತು ಮಹಾರಾಷ್ಟç ರಾಜ್ಯಗಳಲ್ಲಿ ಮೂರನೆ ಅಲೆ ಪ್ರಾರಂಭವಾಗಿದೆಯೆAದು ಹೇಳಲಾಗುತ್ತಿದೆ. ಆದರೆ ರಾಜ್ಯದಲ್ಲಿ ಜುಲೈ ೨೦ ರವರೆಗೆ ಎರಡನೆ ಡೋಸ್ ಲಸಿಕೆ ನೀಡಿರುವುದು ಕೇವಲ ೫೪,೦೮,೩೨೫ (ಶೇ೮.೩೭)ಜನರಿಗೆ ಮಾತ್ರ. ದೇಶದಲ್ಲಿ ೮,೫೪,೫೩,೬೧೮ (ಶೇ೬.೨೮) ಜನರಿಗೆ ಎರಡನೆ ಲಸಿಕೆ ನೀಡಲಾಗಿದೆ. ಪರಿಸ್ಥಿತಿ ಹೀಗಾದರೆ ಮೂರನೇ ಅಲೆಯಿಂದ ಜನರನ್ನು ರಕ್ಷಿಸುವುದು ಹೇಗೆ ?
೯.ಕೊರೋನ ನೈಸರ್ಗಿಕ ವಿಪತ್ತು ಇರಬಹುದು, ಅದನ್ನು ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾ ಶಕ್ತಿಯ ಮೂಲಕ ನಿಭಾಯಿಸಬಹುದಾಗಿತ್ತು. ಜಗತ್ತಿನ ಅನೇಕ ದೇಶಗಳು ಈ ಕೆಲಸವನ್ನು ಮಾಡಿದರು. ನಮ್ಮ ಅಕ್ಕ ಪಕ್ಕದ ಕೆಲವು ರಾಜ್ಯ ಸರ್ಕಾರಗಳು ಕರ್ನಾಟಕಕ್ಕಿಂತ ಅತ್ಯುತ್ತಮವಾಗಿ ನಿಭಾಯಿಸಿದರು. ಉದಾಹರಣೆಗೆ ಕೇರಳದಲ್ಲಿ ೩೨.೨ ಲಕ್ಷ ಜನರಿಗೆ ಕೋವಿಡ್ ಸೋಂಕು ತಗುಲಿತು. ಆದರೆ ಮರಣ ಹೊಂದಿದವರ ಸಂಖ್ಯೆ ೧೫೭೩೯ ಮಾತ್ರ. ಕರ್ನಾಟಕದಲ್ಲಿ ೨೮.೯ ಲಕ್ಷ ಜನರು ಕೋವಿಡ್ ಸೋಂಕಿಗೆ ತುತ್ತಾದರು. ಅವರಲ್ಲಿ ಸರ್ಕಾರಿ ಲೆಕ್ಕದ ಪ್ರಕಾರವೇ ೩೬೨೯೩ ಜನ ದಿನಾಂಕ ೨೩-೪-೨೦೨೧ ರವರೆಗೆ ಮರಣ ಹೊಂದಿದ್ದಾರೆ. ವಾಸ್ತವದಲ್ಲಿ ಇದರ ೧೦ ಪಟ್ಟು ಹೆಚ್ಚು ಜನ ಮರಣ ಹೊಂದಿದ್ದಾರೆ. ನಮ್ಮ ರಾಜ್ಯದ ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ನೋಡಿದರೆ ತಿಂಗಳಿಗೆ ಸರಾಸರಿ ೪೦ ಸಾವಿರ ಜನ ಮರಣ ಹೊಂದಿದ್ದಾರೆ. [ಇದರಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಿರುತ್ತಿತ್ತು] ಆದರೆ ಈ ವರ್ಷ ಜನವರಿಯಿಂದ ಜೂನ್ ವರೆಗೆ ೩,೯೭,೩೦೨ ಜನ ಮರಣ ಹೊಂದಿದ್ದಾರೆ. ತಿಂಗಳಿಗೆ ಸರಾಸರಿ ೬೬ ಸಾವಿರ ಜನ ಮರಣ ಹೊಂದಿದ್ದಾರೆ ಅಂದಾಯಿತು. ಈ ಹೆಚ್ಚುವರಿ ಮರಣಗಳೆಲ್ಲ ಕೋವಿಡ್ ಮರಣಗಳೆಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
2020 ಮತ್ತು 2021 ರ ಕೋವಿಡ್ ಪ್ಯಾಕೇಜ್ ಮತ್ತು ಖರ್ಚು
೧೦.ಕಳೆದ ವರ್ಷ ೩ ಹಂತಗಳಲ್ಲಿ ಕೋವಿಡ್ ಪ್ಯಾಕೇಜನ್ನು ಘೋಷಿಸಲಾಗಿತ್ತು. 2020 ರಲ್ಲಿ ಎರಡು ಹಂತದಲ್ಲಿ ೧೭೭೨ ಕೋಟಿ ಪ್ಯಾಕೇಜ್ ಘೊಷಣೆ ಆಯಿತು. ಇದರಲ್ಲಿ ಮುಸುಕಿನ ಜೋಳ ಬೆಳೆಗಾರರಿಗೆ ತಲಾ ೫೦೦೦ ರೂಗಳಂತೆ ೫೦೦ ಕೋಟಿ ಮತ್ತು ೪೦೨೫೦ ಆಶಾ ಕಾರ್ಯಕರ್ತೆಯರಿಗೆ ತಲಾ ೩೦೦೦ ರೂಗಳಂತೆ ೧೨.೫ ಕೋಟಿರೂ ಘೊಷಣೆಯಾಯಿತು. ಇದರಲ್ಲಿ ಕಟ್ಟಡ ಕಾರ್ಮಿಕರ ೮೨೪ ಕೋಟಿ ರೂಗಳನ್ನು ಕಳೆದರೆ ಉಳಿದದ್ದು ೧೪೬೦.೫೨ ಕೋಟಿ ಮಾತ್ರ. ಜನರಿಗೆ ತಲುಪಿದ್ದು ಕೇವಲ ೮೦೦ ಕೋಟಿ ಮಾತ್ರ. ಮಡಿವಾಳರು, ಕ್ಷೌರಿಕರಿಗೆ, ಸವಿತಾ ಸಮಾಜದವರಿಗೆ, ಆಟೋ, ಟ್ಯಾಕ್ಸಿ ಚಾಳಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಹೂ-ಹಣ್ಣು-ತರಕಾರಿ ಬೆಳೆಗಾರರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ ಈ ದುಡಿಯುವ ವರ್ಗಗಳ ಅರ್ಧದಷ್ಟು ಮಂದಿಗೂ ಪರಿಹಾರ ತಲುಪಲಿಲ್ಲ.
೧೧. ೨೦೨೧ ರಲ್ಲಿ ೧೨೫೦ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಆಯಿತು. ಆದರೆ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಅAಶ ಗಮನಿಸಿದರೆ ಪ್ಯಾಕೇಜ್ ಮೊತ್ತ ೧೧೧೧.೮೨ ಕೋಟಿ ಮಾತ್ರ. ಬೀದಿ ಬದಿ ವ್ಯಾಪಾರಿಗಳು ಮತ್ತಿತರಿಗೆ ೩೩ ಕೋಟಿ, ಕೋವಿಡ್ ನಿಂದ ಮರಣ ಹೊಂದಿದದವರ ಕುಟುಂಬದ ಸದಸ್ಯರಿಗೆಂದು ೨೫೦-೩೦೦ ಕೋಟಿ ರೂಪಾಯಿಗಳು ಇದಿಷ್ಟೆ ಈ ಬಾರಿಯ ಕೋವಿಡ್ ಪ್ಯಾಕೇಜು. ಕಟ್ಟಡ ಕಾರ್ಮಿಕರ ಪರಿಹಾರ ಕೈ ಬಿಟ್ಟರೆ ಉಳಿಯವುದು ೬೧೭.೮೨ ಕೋಟಿ ರೂ. ಮಾತ್ರ.
ಬೆಲೆ ಏರಿಕೆಯ ಶೂಲ
೧೨. ರಾಜ್ಯ ಮತ್ತು ರಾಷ್ಟçದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನ ಭೀಕರವಾದ ಬೆಲೆ ಏರಿಕೆ ನರಕದಲ್ಲಿದ್ದಾರೆ. ೨೦೧೯ ರಲ್ಲಿದ್ದ ಬೆಲೆಗಳು ೨೦೨೧ ರಲಿ ಶೇ.೨೦೦ ರಷ್ಟು ಏರಿಕೆಯಾಗಿವೆ. ಬಿಜೆಪಿ ಸರ್ಕಾರ ಹೇಳುವ ಪ್ರಕಾರ ಹಣದುಬ್ಬರದ ಪ್ರಮಾಣ ಶೇ. ೩೯ ರ ವರೆಗೂ ಇದೆ. ೨೦೧೯ ರಲ್ಲಿ ಅಡುಗೆ ಎಣ್ಣೆ ಬೆಲೆ ೮೫ ರೂಪಾಯಿಗಳಷ್ಟಿದ್ದದ್ದು ಈಗ ೨೦೦-೨೨೦ ರೂಪಾಯಿಗಳಷ್ಟಾಗಿದೆ. ಕಾಳುಗಳು, ಬೇಳೆ ಕಾಳುಗಳ ಬೆಲೆ ೨೦೧೯ ರಲ್ಲಿ ೭೫-೮೦ ರೂಗಳಿದ್ದರೆ ಈಗ ಸರಾಸರಿ ೧೪೫ ರೂಗಳಷ್ಟಾಗಿದೆ. ೨೦೧೬ ರಲ್ಲಿ ೬೬ ರೂ ಇದ್ದ ಪೆಟ್ರೋಲ್ ಈಗ ೧೦೫ ರೂಗಳಾಗಿದೆ. ಡೀಸೆಲ್ ೫೯.೮೬ ರೂಗಳಿದ್ದದ್ದು ಈಗ ೧೦೦ ರೂಪಾಯಿಗಳ ಹತ್ತಿರ ಬಂದಿದೆ. ೪೫೦ ರೂಗಳಿದ್ದ ಅಡುಗೆ ಸಿಲಿಂಡರಿನ ಬೆಲೆ ೮೫೦ ರೂಪಾಯಿಗಳಾಗಿವೆ. ಹೋಟೆಲ್ಗಳೂ ತಿಂಡಿಗಳ ಬೆಲೆ ಹೆಚ್ಚಿಸಿವೆ. ೨೦೧೯ ರಲ್ಲಿ ಒಂದು ಎಕರೆ ಹೊಲ ಉಳಲು ಗಂಟೆಗೆ ೭೫೦ ರೂ ತೆಗೆದುಕೊಳ್ಳುತ್ತಿದ್ದ ಟ್ರಾö್ಯಕ್ಟರಿನವರು ಈಗ ೧೨೫೦ ರೂಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೊಯ್ಲು ಮಾಡುವ ಖರ್ಚು ಕೂಡ ಎರಡರಷ್ಟು ಹೆಚ್ಚಾಗಿದೆ. ೩೫ ಸಾವಿರ ರೂಗಳಿದ್ದ ಟನ್ ಕಬ್ಬಿಣದ ಬೆಲೆ ಈಗ ೭೦ ಸಾವಿರ ರೂ. ಸಿಮೆಂಟು ೨೮೦ ರೂನಿಂದ ೫೦೦ ರೂ ತಲುಪುತ್ತಿದೆ. ಬಡವರು ಹೇಗೆ ಬದುಕುವುದು? ಎಂದಿದ್ದಾರೆ.
ಮಾರಣಾಂತಿಕ ಕಾಯ್ದೆಗಳು
೧೩.ಜನ ಕೊರೋನ ಭೀತಿಯಲ್ಲಿ ನರಳುತ್ತಿರುವಾಗ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ಕೃಷಿ ಒಪ್ಪಂದ ಕಾಯ್ದೆ, ಎಪಿಎಂಸಿಗಳನ್ನು ನಿಷ್ಕಿçಯಗೊಳಿಸುವ ಕಾಯ್ದೆ, ಅಗತ್ಯವಸ್ತುಗಳ ಕಾಯ್ದೆಯನ್ನು ನಿಷ್ಕಿçಯಗೊಳಿಸುವ ಕಾಯ್ದೆ, ಜಾನುವಾರು ಹತ್ಯಾ ನಿಷೇಧ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದರು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತ,ರೈತ, ಕಾರ್ಮಿಕರ ವಿರೋಧಿಗಳು;
೧೪. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅನುದಾನಕ್ಕೆ ಕತ್ತರಿ ಬಿದ್ದಿದೆ. ೨೦೧೮-೧೯ ಕ್ಕಿಂತ ೨೦೨೦-೨೧ ರಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ೨೦೨೪.೦೬ ಕೋಟಿಗಳನ್ನು, ಪರಿಶಿಷ್ಟ ವರ್ಗಗಳ ಇಲಾಖೆಗೆ ೨೯೭.೪ ಕೋಟಿಗಳನ್ನು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರೂ.೯೪೪.೮೮ ಕೋಟಿಗಳಷ್ಟು ಅನುದಾನವನ್ನು ಕಡಿಮೆ ಮಾಡಲಾಗಿದೆ.
೧೫. ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಖರ್ಚುಮಾಡುವ ಶಾಸನಬದ್ಧವಾದ ಅನುದಾನಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ೨೦೧೮ ರಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ನಾನು ೨.೨ ಲಕ್ಷ ಕೋಟಿಗಳ ಬಜೆಟ್ ಅನ್ನು ಮಂಡಿಸಿದ್ದೆ. ಅದರಲ್ಲಿ ಎಸ್ ಸಿಪಿ ಮತ್ತು ಟಿ ಎಸ್ ಪಿ ಯೋಜನೆಗಾಗಿ ೨೯೬೯೧.೫ ಕೋಟಿರೂಗಳನ್ನು ಮೀಸಲಿರಿಸಿದ್ದೆ. ಈ ವರ್ಷ [೨೦೨೧-೨೨ಕ್ಕೆ] ಯಡಿಯೂರಪ್ಪನವರು ೨೪೬೨೦೭ ಕೋಟಿರೂಗಳ ಬಜೆಟ್ ಮಂಡಿಸಿದ್ದಾರೆ, ಆದರೆ ಈ ಯೋಜನೆಗೆ ನಿಗಧಿಗೊಳಿಸಿರುವ ಮೊತ್ತ ೨೬೦೦೫ ಕೋಟಿ ಮಾತ್ರ.
೧೬.ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನೀಡುತ್ತಿದ್ದ ಅನುದಾನ ಕಡಿತಗೊಳಿಸಿದಂತೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ವಾರ್ಷಿಕ ರೂ.೧.೦೦ ಲಕ್ಷಗಳಿಗೆ ಕಡಿತಗೊಳಿಸಲಾಗಿದೆ. ಅಂದರೆ ತಿಂಗಳಿಗೆ ರೂ.೨೫,೦೦೦/- ಗಳ ಬದಲಿಗೆ ರೂ.೮,೨೫೦/- ಗಳು ಮಾತ್ರ ನೀಡಲು ಆದೇಶ ಮಾಡಲಾಗಿದೆ. ೨೦೧೯-೨೦ನೇ ಸಾಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ರೂ.೭,೧೨೫ ಕೋಟಿ ಬಜೆಟ್ನಲ್ಲಿ ಬೇಡಿಕೆ ಇದ್ದರೆ ನೀಡಿದ್ದು, ರೂ.೨,೯೨೬.೮೨ ಕೋಟಿಗಳು ಮಾತ್ರ. ಇದರಿಂದಾಗಿ ರೂ.೪,೧೯೮.೧೮ ಕೋಟಿಗಳ ಕೊರತೆಯಾಯಿತು. ಇತರೆ ಹಿಂದುಳಿದ ವರ್ಗಗಳ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ರೂ.೨,೫೦೦ ಕೋಟಿಗಳಷ್ಟು ಬೇಡಿಕೆ ಇದ್ದರೆ ನೀಡಿದ್ದು ರೂ.೧,೩೬೦ ಕೋಟಿಗಳು ಮಾತ್ರ. ಅಂದರೆ ರೂ.೧,೧೪೦ ಕೋಟಿಗಳ ಕೊರತೆಯಾಯಿತು.
ಬಡಜನರ ಮನೆ ಕಟ್ಟಿಕೊಳ್ಳುವ ಕನಸಿಗೆ ಎಳ್ಳು-ನೀರು
೧೭.ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ೨೦೧೩-೨೦೧೮ ರವರೆಗೆ ೧೫ ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ, ೫ ವರ್ಷಗಳ ಅವಧಿಯಲ್ಲಿ ರೂ.೧೬,೭೭೩ ಕೋಟಿ ಹಣವನ್ನು ಸೂರು ನಿರ್ಮಿಸಲು ಖರ್ಚು ಮಾಡಿದ್ದೆವು. ೨೦೦೮-೨೦೧೩ ರವರೆಗೆ ಬಿಜೆಪಿ ಸರ್ಕಾರ ವಸತಿ ಫಲಾನುಭವಿಗಳಿಗೆ ನೀಡಿದ್ದ ಸಾಲದ ಹಣ ರೂ.೨೭೬೫ ಕೋಟಿರೂಗಳನ್ನು ನಾವು ಮನ್ನಾ ಮಾಡಿದ್ದೆವು. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟುವವರಿಗೆ ಹಿಂದೆ ಇದ್ದ ಸಾಲ ರೂ.೧.೫೦ ಲಕ್ಷಕ್ಕೆ ಬದಲಾಗಿ ರೂ.೧.೭೫ ಲಕ್ಷಗಳಿಗೆ ಏರಿಸಿದ್ದೆವು. ನಗರ ಪ್ರದೇಶಗಳಲ್ಲಿ ರೂ.೧.೮೦ ಲಕ್ಷಗಳಿಂದ ರೂ.೨.೦೦ ಲಕ್ಷಕ್ಕೆ ಹೆಚ್ಚಿಸಿದ್ದೆವು. ಈ ಬಿಜೆಪಿ ಸರ್ಕಾರ ೨೦೧೯-೨೦ ಮತ್ತು ೨೦೨೦-೨೧ ರಲ್ಲಿ ಕೇವಲ ೨,೦೫,೬೭೨ (ಸರ್ಕಾರದ ಜಾಹಿರಾತಿನ ಪ್ರಕಾರ ೨,೨೨,೫೮೩ ಲಕ್ಷ ಮನೆಗಳು) ಮನೆಗಳನ್ನು ನಿರ್ಮಿಸಿ ಕೇವಲ ರೂ.೩,೬೧೯ ಕೋಟಿಗಳನ್ನು ವಿನಿಯೋಗಿಸಿದೆ. ನಮ್ಮ ಅವಧಿಯಲ್ಲಿ ಪ್ರತಿ ವರ್ಷವೂ ಸರಾಸರಿ ೩ ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಸರಾಸರಿ ರೂ.೩,೬೦೦ ಕೋಟಿಗಳನ್ನು ವಿನಿಯೋಗಿಸಿದ್ದೆವು. ಕಳೆದ ವರ್ಷದ ಅತ್ಯಂತ ಕಳಪೆ ಸಾಧನೆ ಮಾಡಿದ ಇಲಾಖೆಗಳಲ್ಲಿ ವಸತಿ ಇಲಾಖೆಯೂ ಸೇರಿದೆ.
೧೮.೨೦೨೦-೨೧ ರ ಪರಿಷ್ಕೃತ ಆಯವ್ಯಯದಲ್ಲಿ ೪೩೩೪.೧೪ ಕೋಟಿ ನಿಗಧಿಪಡಿಸಿದ್ದರು. ಬಿಡುಗಡೆ ಮಾಡಿದ್ದು ಕೇವಲ ೨೩೫೫.೯೬ ಕೋಟಿ ಮಾತ್ರ.
ಕಲ್ಯಾಣ ಕರ್ನಾಟಕ
೧೯. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅತ್ಯಂತ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಆರ್ಟಿಕಲ್ ೩೭೧ಜೆ ಅಡಿ ವಿಶೇಷ ಸ್ಥಾನಮಾನ ನೀಡಿತು. ನಮ್ಮ ಸರ್ಕಾರ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆಂದು ಪ್ರತಿ ವರ್ಷ ೧೦೦೦ ಕೋಟಿ ರೂಪಾಯಿಗಳನ್ನು ನೀಡುತ್ತಾ ಬಂತು. ೨೦೧೮ ರ ಬಜೆಟ್ ನಲ್ಲಿ ೧೫೦೦ ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದೆವು. ಆರ್ಟಿಕಲ್ ೩೭೧ಜೆ ತಂದ ಕಾರಣಕ್ಕಾಗಿ ನಾವು ಕಲ್ಯಾಣ ಕರ್ನಾಟಕ ಭಾಗದ ೩೦೦೦೦ ಯುವಕರಿಗೆ ಉದ್ಯೋಗ ನೀಡಿದೆವು. ಸಾವಿರಾರು ಜನರಿಗೆ ಮುಂಬಡ್ತಿ ನೀಡಿದೆವು. ಆದರೆ ಬಿಜೆಪಿ ಸರ್ಕಾರವು ವರ್ಷಕ್ಕೆ ಒಂದು ಸಾವಿರ ಕೋಟಿಯನ್ನೂ ನೀಡುತ್ತಿಲ್ಲ. ಒಂದೆ ಒಂದು ಉದ್ಯೋಗವನ್ನು ನೀಡಲಾಗಿಲ್ಲ. ಕೊರೋನಾ ನೆಪದಲ್ಲಿ ಈ ಭಾಗದ ಎಲ್ಲ ನೇಮಕಾತಿಗಳನ್ನು ನಿಲ್ಲಿಸುವಂತೆ ಆದೇಶ ಮಾಡಿದೆ ಎಂದಿದ್ದಾರೆ.
ನಿರುದ್ಯೋಗದ ಜನಕರು
೨೦. ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿಯವರು ಇದ್ದಬದ್ದ ಹುದ್ದೆಗಳನ್ನೆಲ್ಲ ನಾಶ ಮಾಡಿದರು. ಉದ್ಯೋಗ ಕೊಡಿ ಪ್ರಧಾನಿಗಳೆ ಎಂದರೆ ವಿದ್ಯಾವಂತ ಯುವಜನರಿಗೆ ಪಕೋಡ ಮಾರಿ ಎಂದರು. ಕರ್ನಾಟಕದಲ್ಲೂ ಎರಡು ವರ್ಷಗಳಿಂದ ಒಂದೆ ಒಂದು ಉದ್ಯೋಗವನ್ನು ಸೃಷ್ಟಿಸಲಾಗದ ದಿವಾಳಿ ಪರಿಸ್ಥಿತಿಗೆ ರಾಜ್ಯವನ್ನು ಕೊಂಡೊಯ್ಯಲಾಗಿದೆ ಎಂದಿದ್ದಾರೆ.
೨೧. ದಲಿತ, ದಮನಿತ ವರ್ಗಗಳ ನಿರುದ್ಯೋಗಿ ಯುವಕರಿಗೆ ಅನುಕೂಲ ಮಾಡಿಕೊಡಲೆಂದು ನಮ್ಮ ಸರ್ಕಾರವಿದ್ದಾಗ ಕಾಮಗಾರಿಗಳ ಗುತ್ತಿಗೆಗಳಲ್ಲಿ ಮೀಸಲಾತಿ ತಂದಿದ್ದೆವು. ಈಗ ಕೆಆರ್ಐಡಿಎಲ್ಗೆ ಕಾಮಗಾರಿಗಳನ್ನು ವಹಿಸಿಕೊಡುವುದರ ಮೂಲಕ ಟೆಂಡರ್ ಕರೆಯುವುದನ್ನೆ ನಿಲ್ಲಿಸಲಾಗುತ್ತಿದೆ. ಮಾತೆತ್ತಿದರೆ ತಾವು ದಲಿತರ, ಹಿಂದುಳಿದವರ ಪರ ಎಂದು ಮಾತನಾಡುವ ಬಿಜೆಪಿಯು ಸರ್ಕಾರಿ ಕಂಪೆನಿಗಳನ್ನು ಖಾಸಗೀಕರಿಸಿ ಯುವಜನರ ಕನಸುಗಳಿಗೆ ಎಳ್ಳು ನೀರು ಬಿಡುತ್ತಿದೆ. ಬಿಜೆಪಿ ಸರ್ಕಾರವು ಟೆಂಡರ್ಗಳನ್ನೆ ಕರೆಯದೆ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ದಲಿತ ಯುವಕರ ಬದುಕನ್ನು ಕಿತ್ತುಕೊಳ್ಳುತ್ತಿದೆ.
೨೨. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಎರಡು ಲಕ್ಷ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದ್ದೆವು. ಲಕ್ಷಾಂತರ ಜನರಿಗೆ ಖಾಸಗಿ ಕಂಪೆನಿಗಳ ಮೂಲಕ ಉದ್ಯೋಗ ಸೃಷ್ಟಿಸಿದ್ದೆವು. ಕಳೆದೆರಡು ವರ್ಷಗಳಿಂದ ನಿರುದ್ಯೋಗದ ಪ್ರಮಾಣ ರಾಜ್ಯದ ಇತಿಹಾಸದಲ್ಲಿ ಯಾವ ಕಾಲದಲ್ಲೂ ಇಲ್ಲದಷ್ಟು ಪ್ರಮಾಣದಲ್ಲಿ ಬೆಳೆದು ನಿಂತಿದೆ. ನಮ್ಮ ಯುವತಿಯರು ಮುಖದ ಮೇಲೆ ನಿರಾಶೆಯ ಕಾರ್ಮೋಡಗಳನ್ನು ಹೊತ್ತುಕೊಂಡು ಓಡಾಡುತ್ತಿದ್ದಾರೆ. ಹಾಗಾಗಿ ಯುವ ಜನತೆಯ ಪಾಲಿಗೆ ಬಿಜೆಪಿ ಎಂದರೆ “ಭರವಸೆಗಳನ್ನು ಜಗಿದು ನುಂಗುವ ಪಕ್ಷ”ವಾಗಿದೆ.
ಕನ್ನಡ ವಿರೋಧಿ, ನಾಡ ವಿರೋಧಿ, ಒಕ್ಕೂಟ ವ್ಯವಸ್ಥೆಯ ಧ್ವಂಸಕರು
೨೩. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಪರಿಸರದ ವಿಚಾರದಲ್ಲಿ ನಾಡಿನ ಹಿತ ಕಾಯಲಿಲ್ಲ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ನಾಡ ಧ್ವಜ ಹಾರಿಸುವುದನ್ನು ವಿರೋಧಿಸಿದರು.
೨೪. ಕೇಂದ್ರವು ಪ್ರತಿ ವರ್ಷ ಜಿಎಸ್ಟಿ, ಐಟಿ, ಕಸ್ಟಮ್ಸ್ ತೆರಿಗೆ, ವಿವಿಧ ಸೆಸ್ಸುಗಳು, ಪೆಟ್ರೋಲ್, ಡೀಸೆಲ್ ಮೇಲಿನ ಅಡಿಷನಲ್ ಎಕ್ಸೈಜ್ ಡ್ಯೂಟಿ ಮುಂತಾದವುಗಳಿAದಲೆ ಕನ್ನಡಿಗರಿಂದ ಸುಮಾರು ೨.೫ ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸುತ್ತಿದೆ. ಕರ್ನಾಟಕವು ಐಟಿ-ಬಿಟಿ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಶೇ.೪೦ ರಷ್ಟು ಕೊಡುಗೆಯನ್ನು ನೀಡುತ್ತಿದೆ. ಆದರೆ ರಾಜ್ಯಕ್ಕೆ ೨೦೨೦-೨೧ ರಲ್ಲಿ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ಮಾಡಿರುವುದು ಕೇವಲ ೨೧ ಸಾವಿರ ಕೋಟಿ ರೂಗಳು ಮಾತ್ರ. ೧೫ ನೇ ಹಣಕಾಸು ಆಯೋಗವು ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿತು. ಅದರಿಂದಾಗಿ ೩೯ ಸಾವಿರ ಕೋಟಿ ರೂಗಳಷ್ಟು ಬರುತ್ತಿದ್ದ ತೆರಿಗೆ ಪಾಲಿನಲ್ಲಿ ಈ ವರ್ಷ ಸುಮಾರು ೧೮ ಸಾವಿರ ಕೋಟಿ ಕಡಿಮೆಯಾಯಿತು ಎಂದಿದ್ದಾರೆ.
ಪ್ರವಾಹ
೨೦೧೯ ಮತ್ತು ೨೦೨೦ ರ ಅತಿವೃಷ್ಟಿಯಿಂದಾಗಿ ಸಂಭವಿಸಿದ ಹಾನಿಯ ವಿವರ
೨೫. ಬೆಳೆ ನಾಶವಾಗಿದ್ದು ೩೭.೨೯ + ೨೫.೮೬ = ೬೩ ಲಕ್ಷ ಎಕರೆ ಪ್ರದೇಶದಲ್ಲಿ. ಸರ್ಕಾರ ಶೇ.೩೩ ಕ್ಕಿಂತ ಹೆಚ್ಚು ನಷ್ಟವಾದರೆ ಮಾತ್ರ ಪರಿಹಾರ, ೨ ಹೆಕ್ಟೇರ್ ಪ್ರದೇಶಕ್ಕಿಂತ ಒಳಗಿದ್ದರೆ ಮಾತ್ರ ಪರಿಹಾರ ಎಂದು ಘೋಷಿಸಿತು. ಸರ್ಕಾರದ ಲೆಕ್ಕದ ಪ್ರಕಾರ ಆದ ನಷ್ಟ ೧೮೧೯೭.೯೭ ಕೋಟಿ + ೧೭೨೩೦ ಕೋಟಿ = ೩೫೪೨೭.೯೭ ಕೋಟಿ. ವಾಸ್ತವದಲ್ಲಿ ಆದ ನಷ್ಟ ೪೦,೦೦೦ + ೫೦,೦೦೦ = ೯೦,೦೦೦ ಕೋಟಿ. ಆದರೆ ಸರ್ಕಾರ ನೀಡಿದ ಪರಿಹಾರ = ೨೧೩೪.೮೫ ಕೋಟಿ ಮಾತ್ರ ಎಂದಿದ್ದಾರೆ.
ಮನೆಗಳಿಗೆ ಆದ ಹಾನಿ (ಸರ್ಕಾರದ ಲೆಕ್ಕದ ಪ್ರಕಾರ):
೨೬. ೨೪೭೬೨೮ + ೪೮೩೬೭ = ೨೯೫೯೯೫ ಮನೆಗಳು ಹಾನಿಯಾಗಿದೆ. ೯೬೨೧.೮೭ ಕೋಟಿ + ೬೧೭೪.೫೪ ಕೋಟಿ = ೧೫೭೯೬.೪೧ ಕೋಟಿಗಳಷ್ಟು ನಷ್ಟವಾಗಿದೆ. ಘೋಷಿಸಿದ ಪರಿಹಾರ: ೧೯೦೧.೪೫ ಕೋಟಿ + ೪೨೩ ಕೋಟಿ = ೨೩೨೪.೪೫ ಕೋಟಿ ಮಾತ್ರ. ಆದರೆ ಪರಿಹಾರ ನೀಡಿದ್ದು ೧ ಲಕ್ಷದ ೫ ಸಾವಿರ ಮನೆಗಳಿಗೆ ಮಾತ್ರ. ಅದರ ಮೊತ್ತ ಕೇವಲ ರೂ. ೧೯೦೧.೪೫ ಕೋಟಿ (ಸರ್ಕಾರದ ಎರಡು ವರ್ಷಗಳ ಸಾಧನೆ ಕುರಿತು ಬಿಡುಗಡೆ ಮಾಡಿರುವ ಪುಸ್ತಕದ ಮಾಹಿತಿಯಂತೆ)
ಸರ್ಕಾರಿ ಆಸ್ತಿ ಪಾಸ್ತಿಗಳಿಗೆ ಆದ ಹಾನಿ (ಸರ್ಕಾರದ ಲೆಕ್ಕದ ಪ್ರಕಾರ)
೨೭. ೬೧೭೪.೫೪ ಕೋಟಿ + ೯೬೪೨.೬೭ ಕೋಟಿ = ೧೫೮೧೭.೨೧ ಕೋಟಿ. ಇದರ ಅಂದಾಜು ನಷ್ಟ = ೧,೫೦,೦೦೦ ಲಕ್ಷ ಕೋಟಿ. ನೀಡಿದ ಪರಿಹಾರ: ೬೧೦೨.೬೦ ಕೋಟಿ + ೧೬೨೦.೩೦ ಕೋಟಿ = ೭೭೨೨.೯೦ ಕೋಟಿ. ಸರ್ಕಾರ ಲೆಕ್ಕದ ಪ್ರಕಾರ ಈ ಮೂರು ಬಾಬತ್ತುಗಳಿಂದಲೇ ಸುಮಾರು ರೂ.೬೭೦೪೧.೫೯ ಗಳಷ್ಟು ನಷ್ಟವಾಗಿದೆ. ಆದರೆ ವಾಸ್ತವದಲ್ಲಿ ೧.೫ ಲಕ್ಷ ಕೋಟಿಗಳಿಗೂ ಹೆಚ್ಚು ನಷ್ಟವಾಗಿದೆ. ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ ರೂ.೭೭೨೨.೦೯ ಕೋಟಿ ಮಾತ್ರ. ಇದರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ೨೦೧೯ ರಲ್ಲಿ ರೂ. ೧೬೫೨ ಕೋಟಿ. ೨೦೨೦ ರಲ್ಲಿ ರೂ. ೬೮೯ ಕೋಟಿ ಮಾತ್ರ ಎಂದಿದ್ದಾರೆ.
೨೦೨೧ರ ಪ್ರವಾಹ ಪರಿಸ್ಥಿತಿ
೨೮. ೨೦೨೧ ರ ಮೇ ತಿಂಗಳ ೧೪ ರಿಂದ ೧೮ ರವರೆಗೆ ರಾಜ್ಯಕ್ಕೆ ಕಾಡಿದ ತೌಕ್ತೆ ಚಂಡ ಮಾರುತದಿಂದ ಕರಾವಳಿ ಜಿಲ್ಲೆಗಳು ತೀವ್ರ ನಷ್ಟವನ್ನು ಅನುಭವಿಸಿದ್ದವು. ಪ್ರಧಾನ ಮಂತ್ರಿಗಳು ತೀವ್ರ ಪ್ರವಾಹ ಪೀಡಿತವಾಗಿದ್ದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟç ರಾಜ್ಯಗಳನ್ನು ಬಿಟ್ಟು ಗುಜರಾತಿಗೆ ಮಾತ್ರ ಭೇಟಿ ನೀಡಿ, ಆ ರಾಜ್ಯಕ್ಕೆ ಮಾತ್ರ ಪರಿಹಾರ ಘೋಷಿಸಿದರು ಎಂದಿದ್ದಾರೆ.
ಈ ವರ್ಷ ಮುಂಗಾರು ಮತ್ತು ಪ್ರವಾಹ ಪೀಡಿತ
೨೯. ಜುಲೈ-೨೪ ರವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ ಜುಲೈ-೨೧ ರಲ್ಲಿ ಮತ್ತೆ ರಾಜ್ಯವನ್ನು ಪ್ರವಾಹದ ಭೀತಿ ಕಾಡುತ್ತಿದೆ. ರಾಜ್ಯದ ೪೫ ತಾಲ್ಲೂಕುಗಳು ಪ್ರವಾಹ ಪೀಡಿತವಾಗಿವೆ. ಪ್ರಾಥಮಿಕ ಅಂದಾಜು ಪ್ರಕಾರ ೧.೫ ಲಕ್ಷ ಎಕರೆ ಜಮೀನುಗಳ ಬೆಳೆಗಳು ಹಾನಿಯಾಗಿವೆ. ಸುಮಾರು ೪ ರಿಂದ ೫ ಸಾವಿರ ಸರ್ಕಾರಿ ಆಸ್ತಿ ಪಾಸ್ತಿಗಳು ಹಾಳಾಗಿವೆ. ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಹಾವೇರಿ ಜಿಲ್ಲೆಗಳ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ದಾವಣಗೆರೆ, ಹಾಸನ, ಬಾಗಲಕೋಟೆ ಜಿಲ್ಲೆಗಳಲ್ಲೂ ವ್ಯಾಪಕ ಹಾನಿಯಾಗಿವೆ. ಆದರೂ ರಾಜ್ಯ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ. ೨೦೧೯ ರಲ್ಲಿ ಬಿ.ಎಸ್. ಯಡಿಯೂರಪ್ಪ ರವರು ಮುಖ್ಯಮಂತ್ರಿಗಳಾದಾಗ ಸರ್ಕಾರ ಅಸ್ತಿತ್ವದಲ್ಲಿರಲಿಲ್ಲ, ಸಚಿವರುಗಳೂ ಇರಲಿಲ್ಲ. ಕಳೆದ ವರ್ಷ ಕೊರೋನಾ ಅವಧಿಯಲ್ಲಿ ಬಹಳ ಜನ ಸಚಿವರುಗಳು ಜಿಲ್ಲೆಗಳಿಗೆ ಭೇಟಿಯನ್ನು ನೀಡಿರಲಿಲ್ಲ. ಈ ವರ್ಷ ಮತ್ತೆ ಪ್ರವಾಹ ಬಂದಿದೆ. ಕಳೆದ ಅನೇಕ ದಿನಗಳಿಂದ ಮುಖ್ಯಮಂತ್ರಿ ಬದಲಾವಣೆಯಲ್ಲೇ ಕಾಲ ಕಳೆದರು. ಒಟ್ಟಾರೆ ಬಿ.ಜೆ.ಪಿ.ಗೆ ರಾಜ್ಯದ ಜನರ ಕುರಿತಂತೆ ಯಾವ ಕಾಳಜಿಯೂ ಇಲ್ಲ ಎಂದಿದ್ದಾರೆ.
ಕರಾವಳಿಯ ಮತ್ತು ರಾಜ್ಯದ ಹೆಮ್ಮೆಯ ಬ್ಯಾಂಕುಗಳನ್ನು ಕೊಂದು ಹಾಕಿದರು.
೩೦. ಸುಮಾರು ೮.೫ ಲಕ್ಷ ಕೋಟಿಗಳಷ್ಟು ಆಸ್ತಿ ಹೊಂದಿದ್ದ ಕರಾವಳಿ ಜನಕಟ್ಟಿ ಬೆಳೆಸಿದ್ದ ಕಾರ್ಪೊರೇಶನ್, ಕೆನರಾ, ವಿಜಯಾ ಮತ್ತು ಸಿಂಡಿಕೇಟ್ ಬ್ಯಾಂಕುಗಳನ್ನು ಉತ್ತರದ ಬರೋಡ, ಯೂನಿಯನ್, ಪಂಜಾಬ್ ನ್ಯಾಶನಲ್ ಬ್ಯಾಂಕುಗಳ ಜತೆ ವಿಲೀನಗೊಳಿಸಿದರು. ಅವರನ್ನು ಬದುಕಿಸಲಿಕ್ಕಾಗಿ ನಮ್ಮ ಬ್ಯಾಂಕುಗಳನ್ನು ಮುಳುಗಿಸಿದರು. ರಾಜ್ಯ ಸರ್ಕಾರ ಪ್ರತಿಭಟನೆಯನ್ನೆ ಮಾಡದೆ ಒಪ್ಪಿಗೆ ನೀಡಿತು. ಇದರಿಂದ ಕನ್ನಡದ ಯುವಕರಿಗೆ ಬ್ಯಾಂಕಿAಗ್ ಉದ್ಯೋಗಾವಕಾಶಗಳು ತಪ್ಪಿ ಹೋದವು ಎಂದಿದ್ದಾರೆ.
ಮಲೆನಾಡಿಗೆ ಮಂಕು ಕವಿದಿದೆ
೩೧. ಸದಾ ಚಟುವಟಿಕೆಯಲ್ಲಿರುವ ಮಲೆನಾಡಿನಲ್ಲಿ ೨೦೧೯ ರ ಆಗಸ್ಟ್ನಿಂದ ಪ್ರತಿ ವರ್ಷ ಪ್ರವಾಹದೋಪಾದಿಯಲ್ಲಿ ಮಳೆ ಸುರಿದು ಬೆಟ್ಟಗಳು ಕುಸಿದು ಬೀಳುತ್ತಿವೆ. ಅಡಿಕೆ, ಕಾಫಿ, ಮೆಣಸಿಗೆ ಕೊಳೆರೋಗ ಕಾಡುತ್ತಿದೆ. ಅಡಿಕೆಯನ್ನು ಹಳದಿ ರೋಗ ಆಪೋಷನ ತೆಗದುಕೊಳ್ಳುತ್ತಿದೆ. ಅಡಿಕೆ, ಕಾಫಿ, ಮೆಣಸನ್ನು ನಂಬಿದ್ದ ಮಲೆನಾಡಿಗರು ಬಸವಳಿದು ಹೋಗಿದ್ದಾರೆ. ಮೆಣಸಿನ ಬೆಲೆ ಕೆಜಿಗೆ ೭೫೦ ರೂಪಾಯಿಗಳಿಂದ ೨೫೦ ರೂಗಳಿಗೆ ಕುಸಿದಿದೆ ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಹೊರಿಸಿದ ಸಾಲದ ಹೊರೆ
೩೨.ಮೋದಿಯವರು ಮತ್ತು ಯಡಿಯೂರಪ್ಪನವರು ಪೈಪೋಟಿಗೆ ಬಿದ್ದಂತೆ ಸಾಲ ಮಾಡುತ್ತಿದ್ದಾರೆ. ಮಾರ್ಚ್- ೩೧, ೨೦೧೪ ಕ್ಕೆ ೫೩.೧೧ ಲಕ್ಷ ಕೋಟಿ ಇದ್ದ ದೇಶದ ಸಾಲ ಈ ವರ್ಷದ ಕಡೆಗೆ ೧೩೫.೮೭ ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗುತ್ತಿದೆ. ಅಂದರೆ ೬ ವರ್ಷಗಳಲ್ಲಿ ದೇಶದ ಸಾಲ ೮೨.೭೬ ಲಕ್ಷ ಕೋಟಿಗೂ ಹೆಚ್ಚು. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಿಂದ ಇಳಿದಾಗ ರಾಜ್ಯದ ಸಾಲ ೨.೪೨ ಲಕ್ಷಕೋಟಿ ಇತ್ತು. ಈ ವರ್ಷದ ಕಡೆಗೆ ರಾಜ್ಯದ ಸಾಲ ೪.೫೭ ಲಕ್ಷ ಕೋಟಿರೂಗಳಾಗುತ್ತಿದೆ ಎಂದಿದ್ದಾರೆ.
ಕೃಷಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ.
೩೩. ಜನರ ಜೀವನಾಡಿಯಾದ ಕೃಷಿಯನ್ನು ಬಿಜೆಪಿ ಸಂಪೂರ್ಣ ನಿರ್ಲಕ್ಷಿಸುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರವಿದ್ದ ೨೦೧೩ ರಿಂದ ೨೦೧೮ ರವರೆಗೆ ೧೯೫೬೧ ಕೋಟಿ ರೂಗಳನ್ನು ಕೃಷಿ ಕ್ಷೇತ್ರಕ್ಕೆಂದು ವಿನಿಯೋಗಿಸಿದ್ದೆವು. ೧.೯ ಲಕ್ಷ ಕೃಷಿಹೊಂಡಗಳನ್ನು ನಿರ್ಮಿಸಿದ್ದೆವು. ಕೃಷಿಕರ ಬದುಕನ್ನು ಸುಧಾರಿಸುವುದಕ್ಕಾಗಿಯೆ ಕೃಷಿಭಾಗ್ಯ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದೆವು ಎಂದಿದ್ದಾರೆ.
೩೪. ತೋಟಗಾರಿಕೆ ಪ್ರದೇಶವನ್ನು ೧೯.೨೨ ಲಕ್ಷ ಹೆಕ್ಟೇರಿನಿಂದ ೨೧.೩೬ ಲಕ್ಷ ಹೆಕ್ಟೇರಿಗೆ ಹೆಚ್ಚಿಸಿದ್ದರಿಂದ ೧೬೨.೫೬ ಲಕ್ಷ ಟನ್ನುಗಳಷ್ಟಿದ್ದ ತೋಟಗಾರಿಕೆಯ ಉತ್ಪನ್ನ ೧೯೧.೨೪ ಟನ್ನುಗಳಿಗೆ ಹೆಚ್ಚಿತು. ಆದರೆ ಈ ಸರ್ಕಾರ ರಾಜ್ಯದ ರೈತರಿಗೆ ಸಮರ್ಪಕವಾದ ಬಿತ್ತನೆ ಬೀಜ, ರಸಗೊಬ್ಬರ, ಔಷಧ ನೀಡಲಾಗದ ಅತಿಗೆ ತಲುಪಿದೆ. ಈ ಬಾರಿ ರೈತರು ಮೆಣಸಿನ ಬೀಜಕ್ಕೆ , ಹೆಸರುಕಾಳಿಗೆ ಪ್ರತಿಭಟನೆ ನಡೆಸುವಂತಾಯಿತು. ಗೊಬ್ಬರದ ಬೆಲೆಯನ್ನು ಕ್ವಿಂಟಾಲಿಗೆ ೧೪೦೦ ರೂಗಳಷ್ಟು ಏರಿಸಿ, ನಾವು ಪ್ರತಿಭಟನೆ ಮಾಡಿದ ಮೇಲೆ ಬೆಲೆ ಏರಿಕೆಯನ್ನು ಹಿಂಪಡೆದರು.
ಬಿಜೆಪಿ ಅಲ್ಲ ಬ್ಲೂಜೆಪಿ
೩೫. ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿಯವರು ಮತ್ತು ಅವರ ಪಕ್ಷ ಮಾತೆತ್ತಿದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ದುಡಿಯುವ ಜನರನ್ನು ನಿರಂತರ ಅವಮಾನಿಸುತ್ತಲೆ ಇದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಕನಾಟಕದ ಮಾನವನ್ನು ಬೀದಿ ಪಾಲು ಮಾಡುವ ಕೆಲಸ ಮಾಡುತ್ತಲೆ ಇದ್ದಾರೆ. ಸದನದಲ್ಲೆ ಬ್ಲೂಫಿಲಂ ನೋಡಿ ಹಲವು ಮಂತ್ರಿಗಳು ರಾಜೀನಾಮೆ ಕೊಟ್ಟರು. ತನ್ನ ಗಳೆಯನ ಹೆಂಡತಿಯ ಅತ್ಯಾಚಾರ ಮಾಡಿದರು. ಹಲವಾರು ಜನ ಅಕ್ರಮ ಸಂಬAಧಗಳ ಮೂಲಕ ಬೀದಿ ಮಾತಾದರು. ಕಳೆದೊಂದು ವರ್ಷದಿಂದ ಮತ್ತದೆ ಪುನರಾವರ್ತನೆಯಾಗುತ್ತಿದೆ. ಹಾಗಾಗಿ ಇದು ಬಿಜೆಪಿ ಅಲ್ಲ ಬ್ಲೂಜೆಪಿ ಎಂದು ಜನ ಆಡಿಕೊಳ್ಳುವಂತಾಗಿದೆ. ಬಿಜೆಪಿಯ ಹಲವಾರು ಜನ ಸಚಿವರುಗಳು, ಶಾಸಕರುಗಳು ಇಂದಿಗೂ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆಗಳನ್ನು ತಂದು ಓಡಾಡುತ್ತಿದ್ದಾರೆ ಎಂದಿದ್ದಾರೆ.
ನೀರಾವರಿ ಯೋಜನೆಗಳೆಲ್ಲ ನೆನೆಗುದಿಗೆ
೩೬.ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇವಲ ೨೦೧೩-೧೪ ರಿಂದ ೨೦೧೭-೧೮ ರವರೆಗೆ ೫೮೩೯೩ ಕೋಟಿ ರೂಪಾಯಿಗಳನ್ನು ಖರ್ಚುಮಾಡಿ ೬.೫೪ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದ್ದೆವು. ಸಣ್ಣ ನೀರಾವರಿ ಇಲಾಖೆಯಿಂದ ೬೨೮೩ ಕೋಟಿ ರೂಗಳನ್ನು ಖರ್ಚು ಮಾಡಿ ೩.೪೩ ಲಕ್ಷ ಎಕರೆ ಭೂಮಿಗೆ ನೀರಾವರಿ ಕಲ್ಪಿಸಿದ್ದೆವು. ಈ ಎರಡನ್ನು ಸೇರಿಸಿದರೆ ಒಟ್ಟಾರೆ ೬೪೬೭೬ ಕೋಟಿ ರೂಗಳನ್ನು ಖರ್ಚು ಮಾಡಿ ಸುಮಾರು ೧೦ ಲಕ್ಷ ಎಕರೆ ಪ್ರದೇಶಕ್ಕೆ ಹೊಸದಾಗಿ ನೀರಾವರಿ ಸೌಲಭ್ಯ ಕಲ್ಪಿಸಿದ್ದೆವು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ಮರುಬಳಕೆ ನೀರನ್ನು ತುಂಬಿಸುವ ಕಾರ್ಯವನ್ನು ಅನುಷ್ಠಾನ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ಎತ್ತಿನ ಹೊಳೆ, ಕಳಸಾ- ಬಂಡೂರಿ, ಭದ್ರಾ ಮೇಲ್ದಂಡೆ, ಮೇಕೆದಾಟು ಮುಂತಾದ ಯೋಜನೆಗಳು ಕೂತಲ್ಲೆ ಕೂತಿವೆ ಎಂದಿದ್ದಾರೆ.
ಮಳೆಯಲ್ಲಿ ಮುಳುಗಿದ ಮುಂಬೈ ಕರ್ನಾಟಕ
೩೭.ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ೩ ವರ್ಷಗಳಿಂದ ಪ್ರವಾಹದಿಂದಾಗಿ ಲಕ್ಷಾಂತರ ಮನೆಗಳು ಹಾನಿಗೀಡಾದವು. ಅವುಗಳನ್ನು ನಿರ್ಮಿಸಿಯೂ ಇಲ್ಲ, ಮನೆಯನ್ನು ಕಳೆದುಕೊಂಡವರಿಗೆ, ಬೆಳೆಗಳಿಗೆ ಸಮರ್ಪಕ ಪರಿಹಾರವನ್ನು ನೀಡಿಲ್ಲ. ಹಾಳಾದ ಶಾಲೆಗಳು, ರಸ್ತೆಗಳು, ಸೇತುವೆಗಳನ್ನು ಈವರೆವಿಗೂ ದುರಸ್ತಿ ಮಾಡಲಿಲ್ಲ. ಪ್ರವಾಹಕ್ಕೆ ತುತ್ತಾದ ದ್ರಾಕ್ಷಿ, ದಾಳಿಂಬೆ, ಮಾವು ಮುಂತಾದ ತೋಟದ ಬೆಳೆಗಳಿಗೆ ಸಮರ್ಪಕ ಪರಿಹಾರವನ್ನೇ ನೀಡಲಿಲ್ಲ. ಕೋವಿಡ್ ವಿಚಾರದಲ್ಲೂ ಉತ್ತರ ಕರ್ನಾಟಕ ಭಾಗದ ೮೦% ಜನರಿಗೆ ಪರಿಹಾರವನ್ನೇ ನೀಡಲಿಲ್ಲ. ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ನೇಕಾರರು, ಪಶುಪಾಲಕರು, ರೈತರೇ ಇದ್ದಾರೆ. ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆ ಇಲ್ಲದೆ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಪಶುಪಾಲಕರೂ ಕಷ್ಟದಲ್ಲಿದ್ದಾರೆ ಇವರಿಗೆ ನೀಡುತ್ತಿದ್ದ ಸವಲತ್ತುಗಳನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ.
೩೮. ಆಕಸ್ಮಿಕ ಮರಣಕ್ಕೆ ತುತ್ತಾದ ಹಸು, ಕುರಿಗಳಿಗೆ ಪರಿಹಾರ ನೀಡಲು ‘ಅನುಗ್ರಹ ಯೋಜನೆಯನ್ನು’ ರೂಪಿಸಿ ಕುರಿ ಮೇಕೆಗಳು ಸತ್ತರೆ ೫ ಸಾವಿರ, ಹಸು ಎಮ್ಮೆಗಳು ಸತ್ತರೆ ೧೦ ಸಾವಿರ ನೀಡುತ್ತಿದ್ದೆವು. ಕಳೆದ ಎರಡು ವರ್ಷದಿಂದ ಒಬ್ಬ ಪಶುಪಾಲಕರಿಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಕ್ಷೀರಧಾರೆ ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ ೫ ರೂಪಾಯಿ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ನಾವು ಪ್ರಾರಂಭಿಸಿದ್ದೆವು. ಅದನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ಹಾಲು ಉತ್ಪಾದಕ ಸಂಸ್ಥೆಗಳು ಹಾಲಿನ ದರವನ್ನು ಒಂದೇ ಸಮನೆ ಕಡಿಮೆ ಮಾಡುತ್ತಿವೆ. ಹಾಲಿನ ದರ ಕಡಿಮೆಯಾಗಿದೆ. ಹಿಂಡಿ, ಬೂಸಗಳ ಬೆಲೆ ಗಗನಕ್ಕೇರಿದೆ ಎಂದಿದ್ದಾರೆ.
ಮಕ್ಕಳ ಪಾಲಿನ ಮೊಟ್ಟೆಯಲ್ಲೂ ಭ್ರಷ್ಟಾಚಾರ ಮಾಡಿದ ಸರ್ಕಾರ
೩೯. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೩೭.೫೨ ಲಕ್ಷ ಮಕ್ಕಳಿಗೆ ವಾರದಲ್ಲಿ ೫ ದಿನ ಕೆನೆಭರಿತ ಹಾಲನ್ನು ನೀಡುತ್ತಿದ್ದೆವು. ೩-೬ ವರ್ಷದ ಮಕ್ಕಳಿಗೆ ವಾರಕ್ಕೆ ೨ ಬಾರಿ ಮೊಟ್ಟೆ ನೀಡುತ್ತಿದ್ದೆವು. ೮.೭೧ ಲಕ್ಷ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶವುಳ್ಳ ಬಿಸಿಯೂಟವನ್ನು ನೀಡುತ್ತಿದ್ದೆವು. ಮಕ್ಕಳಿಗಾಗಿ ಕ್ಷೀರ ಭಾಗ್ಯ ಯೋಜನೆ ತಂದಿದ್ದೆವು. ಇದರಿಂದ ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಶೇ.೦.೪೩ ಕ್ಕೆ ಇಳಿದಿತ್ತು. ಇಂದು ೧೮ ವರ್ಷದ ಒಳಗಿನ ಶೇ.೬೫ ರಷ್ಟು ಮಕ್ಕಳಿಗೆ ಹಿಮೊಗ್ಲೋಬಿನ್ ಮಟ್ಟ ೧೧ ಕ್ಕಿಂತ ಕಡಿಮೆ ಇದೆ. ಇದು ತೀರಾ ಅನಾರೋಗ್ಯದ ಲಕ್ಷಣ. ಈ ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಿಸಲು ಸರ್ಕಾರ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಬದಲಿಗೆ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸುವ ಸಲುವಾಗಿ ಮೀಸಲಿಟ್ಟಿದ್ದ ಮೊಟ್ಟೆಯ ಹಣವನ್ನೂ ಕಬಳಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರದಲ್ಲಿ ಹೊಸ ಸಾಧನೆ ಮಾಡಿದ್ದಾರೆ ಎಂದಿದ್ದಾರೆ.
೪೦. ಜನರ ಹಸಿವು ನೀಗಿಸಲು ಬೆಂಗಳೂರಿನಲ್ಲಿ ೧೯೩, ರಾಜ್ಯದ ಇತರೆಡೆಗಳಲ್ಲಿ ಸೇರಿ ಒಟ್ಟಾರೆ ೪೪೦ ಇಂದಿರಾ ಕ್ಯಾಂಟಿನ್ ಗಳನ್ನು ಪ್ರಾರಂಭಿಸಿದ್ದೆವು. ಬಡವರ ಹಸಿವನ್ನು ಸಂಭ್ರಮಿಸುವ ಬಿಜೆಪಿಯವರು ಇಂದಿರಾ ಕ್ಯಾಂಟಿನ್ಗಳಿಗೆ ನೀಡುವ ಅನುದಾನವನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿ
೪೧. ನಮ್ಮ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆಂದು ಒಂದೆ ಬಾರಿ ೭೩೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜನ್ನು ನೀಡಲಾಗಿತ್ತು. ಮೆಟ್ರೋ ಯೋಜನೆಗೆ ಆದ್ಯತೆಯ ಮೇಲೆ ಅನುದಾನ ಒದಗಿಸಿ ಯೋಜನೆಯನ್ನು ವೇಗಗೊಳಿಸಿದ್ದೆವು. ನಾವು ಪ್ರಾರಂಭಿಸಿದ್ದ ಸೇತುವೆ, ರಸ್ತೆಗಳ, ಕುಡಿಯುವ ನೀರಿನ ಯೋಜನೆಗಳ ವ್ಯಾಪ್ತಿಯ ರಸ್ತೆ, ಚರಂಡಿಗಳು ಕೆಸರುಗದ್ದೆಗಳಾಗಿವೆ. ಆದರೆ ತೆರಿಗೆ ವಸೂಲಿ, ತೆರಿಗೆ ಏರಿಕೆ ಪ್ರಕ್ರಿಯೆಗಳು ನಡೆಯುತ್ತಲೆ ಇವೆ. ಮೆಟ್ರೋ ಹೆಸರಲ್ಲಿ ಸಾವಿರಾರು ಮರಗಳನ್ನು ಕಡಿದುರುಳಿಸಲಾಗುತ್ತಿದೆ. ತುರಹಳ್ಳಿ ಅರಣ್ಯಕ್ಕೂ ಗರಗಸ ಹಾಕಿದ್ದಾರೆ. ಆದರೂ ನಮ್ಮ ಸರ್ಕಾರದ ಅವಧಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಅನೇಕರು ಮೌನವಾಗಿದ್ದಾರೆ. ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿತು. ಇದಕ್ಕೆ ರಾಜ್ಯದ ಬಿಜೆಪಿ ಶೂರರೆಲ್ಲ ಸಂಭ್ರಮಿಸಿದ್ದು ಬಿಟ್ಟರೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಟ್ಟಿದ್ದನ್ನೂ ಕಾಣೆವು. ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಬೇಕಾದ ಭೂಮಿಯ ಸ್ವಾಧೀನ ಕೆಲಸಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ. ಒಟ್ಟಾರೆ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರಗಳು ರಾಹು-ಕೇತುಗಳಂತೆ ರಾಜ್ಯವನ್ನು ಬಾಧಿಸುತ್ತಿವೆ ಎಂದಿದ್ದಾರೆ.