ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೂ ಬಿಜೆಪಿ 2017ರಲ್ಲಿ ಮಾಡಿದಂತೆ ಗುಜರಾತ್ ಚುನಾವಣೆಯನ್ನು ಲಘುವಾಗಿ ಪರಿಗಣಿಸದಿರಲು ನಿರ್ಧರಿಸಿದೆ. 2017ರ ಚುನಾವಣೆಯ ಕೊನೆಯ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪೂರ್ಣ ಗಮನವನ್ನು ನೀಡದೆ ಇದ್ದರೆ ಬಿಜೆಪಿಗೆ ಅಲ್ಲಿ ಸರ್ಕಾರ ರಚಿಸಲು ತುಂಬಾ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಗುಜರಾತ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.
ಗುಜರಾತ್ ರಾಜ್ಯ ಕೈತಪ್ಪಿ ಹೋಗುವುದನ್ನು ಬಯಸದ ಬಿಜೆಪಿಯ ಉನ್ನತ ನಾಯಕತ್ವವು ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಧಾನ ಮಂತ್ರಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವುದರಿಂದ ಬಿಜೆಪಿಗೆ ಗುಜರಾತ್ ಚುನಾವಣೆ ಗೆಲ್ಲುವುದು ನಿರ್ಣಾಯಕವಾಗಿದೆ. ಇದೇ ಹಿನ್ನೆಲೆಯಲ್ಲಿ ಈಗಾಗಲೇ ಮೋದಿ ಮತ್ತ ಅಮಿತ್ ಶಾ ರಾಜ್ಯಕ್ಕೆ ಹಲವು ಸಲ ಭೇಟಿ ನೀಡಿದ್ದಾರೆ. ರ್‍ಯಾಲಿ, ರೋಡ್‌ಶೋಗಳನ್ನು ನಡೆಸುತ್ತಿದ್ದಾರೆ. ಚುನಾವಣಾ ರಣತಂತ್ರ ರೂಪಿಸಲು ದೆಹಲಿ ಮತ್ತು ಗುಜರಾತ್‌ನಲ್ಲಿ ನಿರಂತರವಾಗಿ ಸಭೆ-ಸಂವಾದಗಳನ್ನು ನಡೆಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ ಗುಜರಾತ್ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ.

ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ಬಿಜೆಪಿ ಈ ಬಾರಿ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ಹೊಂದಿದೆ. ಏಕೆಂದರೆ 1995ರ ಚುನಾವಣೆಯಿಂದಲೂ ಬಿಜೆಪಿ ಗುಜರಾತಿನಲ್ಲಿ ಗೆಲ್ಲುತ್ತಿದೆಯಾದರೂ ಈವರೆಗೆ 127ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿಲ್ಲ. 1995ರಿಂದ ಐದು ವಿಧಾನಸಭಾ ಚುನಾವಣೆಗಳಲ್ಲಿ, ಬಿಜೆಪಿ ಒಟ್ಟು 182ರಲ್ಲಿ 115ರಿಂದ 127 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸುತ್ತಿದೆ. ಆದರೆ 2017ರ ಚುನಾವಣೆಯಲ್ಲಿ ಪಕ್ಷವು 100 ಅಂಕಿಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ಬಿಜೆಪಿ ಸಣ್ಣ ರಿಸ್ಕ್ ತೆಗೆದುಕೊಳ್ಳುವುದಕ್ಕೂ ಸಿದ್ದವಿಲ್ಲ.
150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿಯು ಈ ಬಾರಿ ತನ್ನ ಸಾಂಪ್ರದಾಯಿಕ ನಗರದ ಮತದಾರರನ್ನು ಮಾತ್ರವಲ್ಲದೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಆದಿವಾಸಿಗಳು, ಒಬಿಸಿಗಳು, ದಲಿತರು ಮತ್ತು ಪಾಟಿದಾರ್‌ಗಳನ್ನು ತನ್ನತ್ತ ಸೆಳೆಯುವ ತಂತ್ರವನ್ನು ರೂಪಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬುಡಕಟ್ಟು ಪ್ರಾಬಲ್ಯದ ಪ್ರದೇಶವಾದ ದಾಹೋದ್‌ಗೆ ಮೋದಿ ಭೇಟಿ ನೀಡಿದ್ದರು. ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ 27 ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ. ಬನಸ್ಕಾಂತ, ಸಬರ್ಕಾಂತ, ಅರಾವಳಿ, ಮಹಿಸಾಗರ್, ಪಂಚಮಕಲ್ ದಾಹೋದ್, ಛೋಟೌದೇಪುರ್, ನರ್ಮದಾ, ಭರೂಚ್, ತಾಪಿ, ವಲ್ಸಾದ್, ನವಸಾರಿ ಮುಂತಾದ ಹಲವಾರು ಜಿಲ್ಲೆಗಳಲ್ಲಿ ಬುಡಕಟ್ಟು ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಡ್ಯಾಂಗ್ ಮತ್ತು ಸೂರತ್ ಸೇರಿ ಹದಿಮೂರು ವಿಧಾನಸಭಾ ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ.

ರಾಜ್ಯದಲ್ಲಿ ಶೇಕಡಾ 12ರಷ್ಟಿರುವ ಪಾಟಿದಾರ್ ಮತಗಳ ಮೇಲೆ ಕಣ್ಣಿಟ್ಟು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಹಾರ್ದಿಕ್ ಪಟೇಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದಲ್ಲದೆ ಪಾಟೀದಾರ್ ಸಮುದಾಯವನ್ನು ಓಲೈಸಲು ಮುಂದೆ ಇನ್ನಷ್ಟು ನಾಯಕರನ್ನು ಬಿಜೆಪಿ ತನ್ನತ್ತ ಸೆಳೆಯಲಿ ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇತ್ತೀಚೆಗೆ ದೆಹಲಿಯಲ್ಲಿ ವಿವಿಧ ಸಮುದಾಯಗಳ ಜೊತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ನಿರ್ದಿಷ್ಟ ಸಮುದಾಯವನ್ನು ಹೇಗೆ ತಲುಪಬೇಕು ಎಂದು ಚರ್ಚಿಸಿದ್ದಾರೆ. ಇನ್ನೊಂದೆಡೆ ಮೋದಿ ಮತ್ತು ಅಮಿತ್ ಶಾ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಆಗಾಗ್ಗೆ ರಾಜ್ಯಕ್ಕೆ ಹೋಗುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಭೇಟಿಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.
2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 99 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಬಿಜೆಪಿಯು ಶೇಕಡಾ 49ರಷ್ಟು ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇಕಡಾ 41.5ರಷ್ಟು ಮತಗಳನ್ನು ಗಳಿಸಿತ್ತು. ಈ ಬಾರಿ ಮತ್ತೆ ಗುಜರಾತ್ ಅನ್ನು ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿಯು ತನ್ನ ಸರ್ಕಾರದ ಮೇಲಿರುವ ಆಡಳಿತ ವಿರೋಧಿ ಅಲೆಯನ್ನು ತಡೆಯಲು ಮುಖ್ಯಮಂತ್ರಿ ಮತ್ತು ಇಡೀ ಸಂಪುಟವನ್ನೇ ಬದಲಾಯಿಸಿದೆ. ಆದರೂ ಆಡಳಿತ ವಿರೋಧಿ ಅಲೆ ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡಬಹುದು ಎಂಬ ಹಿನ್ನೆಲೆಯಲ್ಲಿ ಹಾಗೂ 150 ಸೀಟುಗಳನ್ನು ಗೆಲ್ಲಬೇಕು ಎಂಬ ದೃಷ್ಟಿಯಲ್ಲಿ ಬಿಜೆಪಿ ಗುಜರಾತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕೆ ಆಮ್ ಆದ್ಮಿ ಪಕ್ಷ ಕೂಡ ಕಾರಣವಾಗಿದೆ. ಆಮ್ ಆದ್ಮಿ ಪಕ್ಷ ಗುಜರಾತಿನಲ್ಲಿ ಪ್ರಮುಖವಾಗಿ ಚರ್ಚೆ ಮಾಡುತ್ತಿರುವುದು ಆಡಳಿತ ವಿರೋಧಿ ಅಲೆಯ ಬಗ್ಗೆ.