ದೆಹಲಿಗೆ ಹೋಗಿ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೆರಡು ವಾರದಲ್ಲಿ ಸಚಿವ ಸಂಪುಟ ರಚಿಸಲಾಗುವುದು ಎಂದು ಹೇಳಿದ್ಧಾರೆ.
ಈ ನಡುವೆ ಬಿಜೆಪಿಯಲ್ಲಿ ಸಂಪುಟ ಸೇರುವ ನಿಟ್ಟಿನಲ್ಲಿ ಸಾಲುಸಾಲು ಮಂದಿ ಪೈಪೋಟಿಗೆ ಬಿದ್ದು ಲಾಬಿ ನಡೆಸತೊಡಗಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿ, ಆ ಸ್ಥಾನಕ್ಕೆ ತಮ್ಮ ನಿರೀಕ್ಷೆಯ ನಾಯಕರನ್ನು ತರುವ ಬಗ್ಗೆ ಸಾಕಷ್ಟು ಲಾಬಿ ಮಾಡಿದ್ದ ಮತ್ತು ಸ್ವತಃ ತಮಗೇ ಅಂತಹದ್ದೊಂದು ಅವಕಾಶಕ್ಕಾಗಿ ಇನ್ನಿಲ್ಲದ ಯತ್ನ ನಡೆಸಿದವರಲ್ಲಿ ಕೆಲವರು ಈಗಾಗಲೇ ರೆಡ್ ಅಲರ್ಟ್ ಘೋಷಿಸಿದ್ದಾರೆ.
ಬೊಮ್ಮಾಯಿ ಅವರ ಸಂಪುಟಕ್ಕೆ ತಾವು ಸೇರುವುದೇ ಇಲ್ಲ ಎಂದು ಅಂತಹ ಕೆಲವರು ಈಗಾಗಲೇ ಘಂಟಾಘೋಷವಾಗಿ ಘೋಷಿಸಿದ್ದರೆ, ಮತ್ತೆ ಕೆಲವರು ಎಂಥೆಂಥವರನ್ನೋ ಸಂಪುಟದಿಂದ ಕೈಬಿಡಲಾಗಿದೆ. ನಾನು ಯಾವ ಊರ ದಾಸಯ್ಯ ಎಂಬ ಹೇಳಿಕೆ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಇನ್ನೂ ಕೆಲವರು ದೆಹಲಿಯ ಅಧಿಕಾರದ ಪಡಸಾಲೆಯ ಕಂಬಗಳನ್ನು ಸುತ್ತುತ್ತಲೇ ಇದ್ದಾರೆ.
ಕರ್ನಾಟಕದಲ್ಲಿ ಈವರೆಗೆ ಬಿಜೆಪಿ, ಯಡಿಯೂರಪ್ಪ ಅವರಂಥ ಪಕ್ಷದ ಮೂಲ ನಾಯಕರಲ್ಲಿ ಒಬ್ಬರಾದಂಥ ನಾಯಕರ ನೇತೃತ್ವದಲ್ಲಿ ರಚಿಸಿದ ಸರ್ಕಾರಕ್ಕೂ, ಇದೀಗ ಬೊಮ್ಮಾಯಿ ಅವರಂಥ ಹಲವು ರೀತಿಯಲ್ಲಿ ಮೊದಲ ತಲೆಮಾರಿನ ಪಕ್ಷದ ಹಿರಿಯ ನಾಯಕರಿಗಿಂತ ಭಿನ್ನವಾದ ನಾಯಕರ ನೇತೃತ್ವದಲ್ಲಿ ಸರ್ಕಾರ ರಚಿಸುವುದಕ್ಕೂ ಇರುವ ವ್ಯತ್ಯಾಸವೇನು ಎಂಬುದಕ್ಕೆ ಸದ್ಯದ ಆ ಪಕ್ಷದ ಬೆಳವಣಿಗೆಗಳು ಸಾಕ್ಷಿಯಾಗುತ್ತಿವೆ.
ಯಡಿಯೂರಪ್ಪ ಅವರಂಥ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರ ಸಂಪುಟ ರಚನೆಯ ಸವಾಲುಗಳು ಬೇರೆ. ಆದರೆ, ಎರಡನೇ ಹಂತದ ನಾಯಕ, ಅದರಲ್ಲೂ ಮೂಲ ಬಿಜೆಪಿಗರಲ್ಲ, ಆರ್ ಎಸ್ ಎಸ್ ಬೈಟೆಕ್ ಮೂಲಕ ಬೆಳೆದವರಲ್ಲ; ಜೊತೆಗೆ ಕೇಂದ್ರದ ವರಿಷ್ಠರೊಂದಿಗೆ ಈವರೆಗೆ ನೇರ ಸಂಪರ್ಕವನ್ನೂ ಹೊಂದಿರದವರು ಬೊಮ್ಮಾಯಿ. ಆ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರಿಗೆ ಸಂಪುಟ ರಚನೆಗೆ ಇರುವ ಸವಾಲಿನಂತೆಯೇ, ಬಹಳಷ್ಟು ಬಿಜೆಪಿ ಮೂಲ ನಾಯಕರಿಗೆ ಅವರಿಗೆ ಮುಖ್ಯಮಂತ್ರಿಗಿರಿ ಕೊಟ್ಟ ಬಗ್ಗೆಯೇ ಅಸಮಾಧಾನ ಇರುವುದರಿಂದ ಅವರ ಸಂಪುಟದಲ್ಲಿ ಗುರುತಿಸಿಕೊಳ್ಳಲೂ ಬಹಳಷ್ಟು ಮಂದಿ ಹಿಂದೇಟು ಹಾಕುತ್ತಿರುವಂತಿದೆ. ಹಾಗಾಗಿ, ಸಂಪುಟ ಸೇರಲು ತಮ್ಮದೇ ಒಂದೊಂದು ಕಾರಣಕ್ಕಾಗಿ ಮುನಿಸು ತೋರುತ್ತಿರುವ ಹಿರಿಯರ ಅಸಮಾಧಾನವನ್ನು ಶಮನಗೊಳಿಸುವ, ವಿಶ್ವಾಸಕ್ಕೆ ಪಡೆಯುವ ಜೊತೆಗೆ ಸಂಪುಟ ಸೇರಲು ಮುಗಿಬಿದ್ದಿರುವ, ಇನ್ನಿಲ್ಲದ ಲಾಬಿ ನಡೆಸಿರುವ ಎರಡನೇ ಹಂತದ ನಾಯಕರನ್ನು ನಿಯಂತ್ರಣದಲ್ಲಿಟ್ಟುಕೊಂಡು, ಬೇಕಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸವಾಲು ಕೂಡ ಬೊಮ್ಮಾಯಿ ಅವರ ಮುಂದಿದೆ.
ಅಷ್ಟಕ್ಕೂ ಈ ಬಾರಿಯಂತೂ ಇಡೀ ಸಂಪುಟದಲ್ಲಿ ಯಾರೆಲ್ಲಾ ಇರಬೇಕು, ಯಾರಿಗೆ ಯಾವ ಖಾತೆ ಸಿಗಬೇಕು ಎಂಬುದನ್ನು ಕೂಡ ದೆಹಲಿಯ ವರಿಷ್ಠರೇ ನಿರ್ಧರಿಸಲಿದ್ದಾರೆ ಎಂಬ ಹೇಳಿಕೆಗಳ ಹೊರತಾಗಿಯೂ, ಆಯ್ಕೆಯ ಅವಕಾಶ ಸಿಎಂ ಬೊಮ್ಮಾಯಿ ಅವರಿಗೇ ಸಿಕ್ಕರೂ ಅವರ ತಲೆನೋವು ಇನ್ನಷ್ಟು ಹೆಚ್ಚಲಿದೆ ಎಂಬುದನ್ನು ಅನುಮಾನವಿಲ್ಲ!
ಬಸನಗೌಡ ಪಾಟೀಲ್ ಯತ್ನಾಳ್, ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಅವರಂಥ ಹಿರಿಯ ನಾಯಕರು ಮಾತ್ರವಲ್ಲದೆ, ಎಂ ಪಿ ರೇಣುಕಾಚಾರ್ಯ, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್, ಮುನಿರತ್ನ, ಡಾ ಸುಧಾಕರ್ ಮತ್ತಿತರು ನಾಯಕರು ಕೂಡ ಸಂಪುಟ ಸೇರ್ಪಡೆಯ ಬಗ್ಗೆ ಹಲವು ಹೇಳಿಕೆ, ಪ್ರತಿಕ್ರಿಯೆಗಳ ಮೂಲಕ ಸುದ್ದಿಯಲ್ಲಿದ್ದಾರೆ. ಸಚಿವ ಸ್ಥಾನಕ್ಕಾಗಿ ಶಾಸಕರು ನಡೆಸುತ್ತಿರುವ ಲಾಬಿ ಮತ್ತು ಅದಕ್ಕೆ ಪೂರಕವಾಗಿ ಮಠಮಾನ್ಯಗಳು, ಜಾತಿ ಸಂಘಟನೆಗಳು ಬೀದಿ ಬರುತ್ತಿರುವುದನ್ನು ಗಮನಿಸಿದರೆ; ಶಾಸಕಾಂಗ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರನ್ನು ಇದೀಗ ಬಸವರಾಜ ಬೊಮ್ಮಾಯಿ ಬದಲಾಯಿಸಿದ್ದಾರೆ. ಯಡಿಯೂರಪ್ಪ ಸ್ಥಾನದಲ್ಲಿ ಬೊಮ್ಮಾಯಿ ಬಂದಿದ್ದಾರೆ. ಯಡಿಯೂರಪ್ಪ ಅವರ ‘ರಬ್ಬರ್ ಸ್ಟಾಂಪ್’ ಎಂಬ ಟೀಕೆಗಳು ಪ್ರತಿಪಕ್ಷಗಳು ಮತ್ತು ಸ್ವಪಕ್ಷೀಯರಿಂದಲೂ ಕೇಳಿಬಂದಿವೆ. ಅಂತಹ ಮಾತುಗಳನ್ನು ಬೊಮ್ಮಾಯಿ ಎಷ್ಟರ ಮಟ್ಟಿಗೆ ತಮ್ಮ ಕಾರ್ಯಶೈಲಿ ಮತ್ತು ನೀತಿ-ನಿಲುವುಗಳ ಮೂಲಕ ತಳ್ಳಿಹಾಕುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಆದರೆ, ಸದ್ಯಕ್ಕೆ ಒಂದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದು ಏನೆಂದರೆ, ಬಿಜೆಪಿಯಲ್ಲಿ ಸದ್ಯ ಬಹುದಿನಗಳ ಬೇಡಿಕೆಯಂತೆ ನಾಯಕತ್ವ ಬದಲಾಗಿದೆ. ಆದರೆ, ಆ ಪಕ್ಷದ ಶಾಸಕರು ಬದಲಾಗಿಲ್ಲ. ಹಾಗಾಗಿ ಸಚಿವರು, ನಿಗಮಮಂಡಳಿ ಸೇರಿದಂತೆ ಅಧಿಕಾರದ ಕುರ್ಚಿಗಾಗಿ ಸ್ವಾಮೀಜಿಗಳು, ಜಾತಿ ಸಂಘಗಳನ್ನು ಬೀದಿಗೆ ತರುವ ಮತ್ತು ಸಂಘಪರಿವಾರದ ಮಂದಿಯ ಕೈಕಾಲು ಹಿಡಿದು ಲಾಬಿ ನಡೆಸುವ ಅವರ ವರಸೆ ಕೂಡ ಬದಲಾಗಿಲ್ಲ.
ಅದರಲ್ಲೂ ಪಕ್ಷದ ಹಿರಿಯ ನಾಯಕರಾಗಿದ್ದ ಯಡಿಯೂರಪ್ಪ ಮುಂದೆ ಅಧಿಕಾರದ ಬೇಡಿಕೆ ಇಟ್ಟು ವಾಗ್ವಾದ ಮಾಡಲು ಹಿಂಜರಿಯುತ್ತಿದ್ದ ಎರಡನೇ ತಲೆಮಾರಿನ ನಾಯಕರು, ಇದೀಗ ಬೊಮ್ಮಾಯಿ ಅವರೊಂದಿಗೆ ನೇರ ವಾಗ್ವಾದ ಮಾಡಬಲ್ಲರು. ಜೊತೆಗೆ ಎರಡು ವರ್ಷಗಳ ನಿರಂತರ ಪ್ರಯತ್ನಗಳ ಮೂಲಕ ಕೊನೆಗೂ ಯಡಿಯೂರಪ್ಪ ಅವರನ್ನು ಬದಲಾಯಿಸುವಲ್ಲಿ ಯಶಸ್ವಿಯಾದರೂ, ಹೋದೆಯಾ ಎಂದರೆ ಬಂದೆ ಗವಾಕ್ಷಿಯಲಿ ಎಂಬಂತೆ ಯಡಿಯೂರಪ್ಪ ಅವರ ಅತ್ಯಾಪ್ತ ನಾಯಕರ ಬೊಮ್ಮಾಯಿ ಸಿಎಂ ಕುರ್ಚಿಗೆ ಏರಿರುವುದು ಕೂಡ ಬಹಳಷ್ಟು ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ, ಯಡಿಯೂರಪ್ಪ ಸಿಎಂ ಆಗಿರುವಾಗಲಿನ ಸಂದರ್ಭಕ್ಕಿಂತ ಕಠಿಣ ಸವಾಲು ಈಗ ಇದೆ ಮತ್ತು ಅದನ್ನು ಎದುರಿಸಲು ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಅವರ ಹಿರಿತನ, ಅನುಭವ ಮತ್ತು ರಾಜಕೀಯ ತಂತ್ರಗಾರಿಕೆಯ ಬಲವೂ ಇಲ್ಲ. ಆ ಅರ್ಥದಲ್ಲಿ ಬೊಮ್ಮಾಯಿ ಅವರ ಎದುರು ಯಡಿಯೂರಪ್ಪ ಅವಧಿಗಿಂತ ದೊಡ್ಡ ಸವಾಲು ಇದೆ.
ಒಟ್ಟಾರೆ, ಕೇವಲ ಸಚಿವ ಸಂಪುಟದ ವಿಷಯ ಮಾತ್ರವಲ್ಲ, ಉಳಿದ ಮುಂದಿನ ಒಂದೂಮುಕ್ಕಾಲು ವರ್ಷದ ಆಡಳಿತದಲ್ಲಿ ಕೂಡ ಬೊಮ್ಮಾಯಿ ಅವರಿಗೆ ಹೆಜ್ಜೆಹೆಜ್ಜೆಗೂ ಇಂತಹ ಸವಾಲುಗಳ ಸರಣಿಯೇ ಎದುರಾಗಲಿದೆ. ಏಕೆಂದರೆ, ಅಂತಿಮವಾಗಿ ಬಿಜೆಪಿಯಲ್ಲಿ ಬದಲಾಗಿರುವುದು ನಾಯಕತ್ವವೇ ವಿನಃ ಪಕ್ಷವಲ್ಲ!