ರಾಜ್ಯದಲ್ಲಿ ಕೇಳಿ ಬಂದಿರುವ ಬಿಟ್ ಕಾಯಿನ್ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದಲ್ಲಿ ಬಿಟ್ ಕಾಯಿನ್ ಹ್ಯಾಕ್ ಮಾಡಲಾಗಿದೆ ಎಂದು ಅಮೆರಿಕದ ಎಫ್ಬಿಐ (Federal Bureau of Investigation) ಪ್ರಧಾನಿ ನರೇಂದ್ರ ಮೋದಿಗೆ ವರದಿ ನೀಡಿತ್ತು.
ಕೇಂದ್ರ ಸರ್ಕಾರಕ್ಕೆ ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಈ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ಅಲ್ಲದೇ ರಾಜಕೀಯವಾಗಿ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಎಲ್ಲಿಂದ ಆರಂಭವಾಯ್ತು ಅನ್ನೋದರ ಬಗ್ಗೆ ಪ್ರತಿಧ್ವನಿಗೆ ಕಂಪ್ಲೀಟ್ ಮಾಹಿತಿ ಸಿಕ್ಕಿದೆ.
ಬಿಟ್ ಕಾಯಿನ್ ಕೇಸ್ ಮೂಲ ಎಲ್ಲಿಯದ್ದು?
ಜಾರಿ ನಿರ್ದೇಶನಾಲಯದ ತನಿಖಾ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕೇಸ್ ಮೂಲವನ್ನ ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕೇಸಿನ ಗಂಭೀರತೆಯನ್ನ ಅರಿಯದ ರಾಜ್ಯ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನೋದು ಎದ್ದು ಕಾಣ್ತಿದೆ. 2 ವರ್ಷದ ಹಿಂದೆಯೇ ಆರೋಪಿಗಳ ಹೆಡೆಮುರಿ ಕಟ್ಟದೇ ಬಿಡಲಾಗಿತ್ತು. ಕೇಸ್ ದಾಖಲಿಸಿ ಬೇಕಾಬಿಟ್ಟಿ ತನಿಖೆ ಮಾಡಿದ ಪರಿಣಾಮ ಇಂದು ಕೋಟಿ ಲೆಕ್ಕದ ಕೇಸ್ ಆಗಿದೆ.
ಆತಂಕ ವ್ಯಕ್ತಪಡಿಸಿದ್ದ ನ್ಯಾಯಾಧೀಶರು..!
ಅದರಂತೆ ಇಡಿ ಅಧಿಕಾರಿಗಳಿಗೆ ಸಿಕ್ಕ ದಾಖಲೆಗಳೂ ಕೂಡ ಲಭ್ಯವಾಗಿದೆ. ಅಂದು ಪೊಲೀಸರು ಕೇಸ್ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದ ಪ್ರತಿ ಸಿಕ್ಕಿದೆ. ಸಾಮಾನ್ಯ ಕೇಸ್ನಂತೆಯೇ ತನಿಖೆ ಮಾಡಿ ಪೊಲೀಸರು ಕೈಬಿಟ್ಟಿರೋದು ಗೊತ್ತಾಗಿದೆ. ಕೇಸ್ಗೆ ಸಂಬಂಧಿಸಿ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ಗೆ ನ್ಯಾಯಾಧೀಶರು ಕೂಡ ಪೊಲೀಸರ ತನಿಖೆ ಸರಿಯಾಗಿಲ್ಲವೆಂದು ಅಸಮಾಧಾನ ಹೊರಹಾಕಿದ್ದರಂತೆ. ಬಳಿಕ ಪ್ರಕರಣದ ಮರು ತನಿಖೆ ಮಾಡಿ, ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಲು ಜಡ್ಜ್ ಸೂಚನೆ ನೀಡಿದ್ದರು. ಕೋರ್ಟ್ ಮರು ತನಿಖೆಗೆ ಆದೇಶ ಮಾಡಿದ್ದರೂ ಪೊಲೀಸರು ಕ್ರಮಕೈಗೊಳ್ಳಲಿಲ್ಲ ಎನ್ನಲಾಗಿದೆ. ಇದೀಗ ಇಡಿ ಹಳೆ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡು ತನಿಖೆಯನ್ನ ಆರಂಭಿಸಿದೆ.
ಬಿಟ್ ಕಾಯಿನ್ ಮೂಲ ಬೀದರ್
ಬಿಟ್ ಕಾಯಿನ್ ಮೂಲ ಬೀದರ್ ಅನ್ನೋದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಬಹಿರಂಗಗೊಂಡಿದೆ. ಬಿಟ್ ಕಾಯಿನ್ ಮೂಲ ಕೇಸ್ ದಾಖಲಾಗಿರೋದು ಬೀದರ್‌ನಲ್ಲಿ. ಬೀದರ್‌ನ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ 2019 ರ ಜುಲೈ 9ರಂದು ಈ ಕೇಸ್ ದಾಖಲಾಗುತ್ತದೆ. ಸ್ವತಃ ಡಿಬಿಎ ಇನ್ಸ್ಪೆಕ್ಟರ್ ಶರಣ ಬಸವೇಶ್ವರ ದೂರು ನೀಡಿದ್ದರು ಅನ್ನೋದು ಗೊತ್ತಾಗಿದೆ.
₹40 ಕೋಟಿ ಹಣ ಅಕ್ರಮ ವರ್ಗಾವಣೆ
ಇಲ್ಲಿ ಅಮಾಯಕ ಜನರನ್ನ ಟಾರ್ಗೆಟ್ ಮಾಡಲಾಗಿತ್ತು. ಖಾಸಗಿ ಕಂಪನಿಗಳು ಒಬ್ಬ ವಿದ್ಯಾರ್ಥಿಯನ್ನ ಬಳಸಿಕೊಂಡಿದ್ದವು. ಅವರ ಆಧಾರ್ ಕಾರ್ಡ್ಗಳನ್ನ ಕಲೆಕ್ಟ್ ಮಾಡಿ ಅಕೌಂಟ್ ಓಪನ್ ಮಾಡಿತ್ತು.
ಜೊತೆಗೆ ಅಮಾಯಕರ ಫೋಟೋಗಳನ್ನು ಸಂಗ್ರಹಿಸಿ ಅಕೌಂಟ್ ಬಳಕೆ ಮಾಡಲಾಗಿದೆ. ಒಂದು ಅಕೌಂಟ್ಗೆ 500 ರೂಪಾಯಿ ಕಮಿಷನ್ ಆಸೆ ತೋರಿಸಲಾಗಿತ್ತು. ಈ ಮೂಲಕ ಒಂದೆಡೆ ಅಮಾಯಕರಿಗೆ ವಂಚನೆ ಮಾಡುವುದರ ಜೊತೆಗೆ ಭಾರತ ಸರ್ಕಾರಕ್ಕೂ ವಂಚನೆ ಆಗಿರೋದು ಬೆಳಕಿಗೆ ಬಂದಿದೆ. ಬರೋಬ್ಬರಿ 120 ಮಂದಿಯ ಹೆಸರಲ್ಲಿ ಅಕೌಂಟ್ ಓಪನ್ ಮಾಡಲಾಗಿತ್ತು. ಆ ಅಕೌಂಟ್ಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿ ದುರುಪಯೋಗ ಮಾಡಿಕೊಳ್ಳಲಾಗಿದೆ. ತನಿಖೆಯಿಂದ ಗೊತ್ತಾಗಿರುವ ಮಾಹಿತಿ ಪ್ರಕಾರ ಬರೋಬ್ಬರಿ 40 ಕೋಟಿ ಹಣ ಅಕ್ರಮ ವರ್ಗಾವಣೆ ಆಗಿದೆ ಎನ್ನಲಾಗಿದೆ.
ಹೈದರಾಬಾದ್ನಲ್ಲಿ ಹಣ ಡ್ರಾ..
ಹಣ ದುರುಪಯೋಗದ ಬಗ್ಗೆ ಮಾಹಿತಿ ಪಡೆದ ಗಾಂಧಿ ಗಂಜ್‌ಪೊಲೀಸರು ಮಹಮ್ಮದ್ ಅಬ್ದುಲ್ ಪರವೇಜ ಎಂಬುವವರ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 12 ಕವರ್ ದಾಖಲೆಗಳನ್ನ ಪೊಲೀಸರು ಸೀಜ್ ಮಾಡಿದ್ದರು. ಅದರಲ್ಲಿ 120 ಮಂದಿಯ ಬ್ಯಾಂಕ್ ಪಾಸ್ಬುಕ್, ಚೆಕ್ ಬುಕ್ಗಳನ್ನೂ ಸೀಜ್ ಮಾಡಲಾಗಿತ್ತು. ಅದರಲ್ಲಿ ಡೆಬಿಟ್ ಕಾರ್ಡ್ & ಎಟಿಎಂ ಪಿನ್ ಕೂಡ ಇತ್ತು.
ಮೂರು ಭಾರತೀಯ ಮೂಲದ ಅಂತಾರಾಷ್ಟ್ರೀಯ ಕಂಪನಿಗಳಿಂದ ಈ 120 ಖಾತೆಗಳಿಗೆ ಹಣ ಟ್ರಾನ್ಸ್ಫರ್ ಆಗುತ್ತಿತ್ತು. ಮೂರು ಆನ್ಲೈನ್ ರಮ್ಮಿ ಗೇಮ್ ಕಂಪನಿಗಳಿಂದ ಹಣ ವರ್ಗಾವಣೆ ಆಗಿರೋದು ಗೊತ್ತಾಗಿತ್ತು. 120 ಅಕೌಂಟ್ಗಳಿಗೆ ಲಕ್ಷಾಂತರ ರೂಪಾಯಿ ಹಣ ಸಂದಾಯ ಆಗಿರೋದು ಬೆಳಕಿಗೆ ಬಂದಿತ್ತು.
ಯಾವೆಲ್ಲಾ ಕಂಪನಿಗಳಿಂದ ಹಣ ವರ್ಗಾವಣೆ..?
ಕಂಪನಿ 1: ಡೆಕ್ಕನ್ ಗೇಮ್ಸ್
ಕಂಪನಿ 2: ಶೊವಲೈನ
ಕಂಪನಿ 3: ವೇಬಾ
ಬೆಂಗಳೂರಿನ ವಿವಿಧೆಡೆ ಇರುವ ಈ ಕಂಪನಿಗಳಿಂದ ಹಣ ವರ್ಗಾವಣೆ ಆಗಿತ್ತು. ಪ್ರತಿ ಅಕೌಂಟ್ಗೆ 4 ರಿಂದ 7 ಲಕ್ಷದವರೆಗೆ ಹಣ ವರ್ಗಾವಣೆ ಆಗಿರೋದು ಪತ್ತೆಯಾಗುತ್ತದೆ. ಈ ವೇಳೆ ಪೊಲೀಸರು ಕೇವಲ ಅಕೌಂಟ್ಗಳನ್ನ ಫ್ರೀಜ್ ಮಾಡಿಸುತ್ತಾರೆ. ಬಳಿಕ ಆ ಹಣ ಹೈದ್ರಾಬಾದ್ನಲ್ಲಿ ಸಂಪೂರ್ಣ ಡ್ರಾ ಆಗುತ್ತಿತ್ತು. ಆ ಅಕೌಂಟ್ಗೆ ಬಂದ ಹಣವನ್ನು ಬೇರೆ 8 ಅಕೌಂಟ್ಗಳಿಗೆ ವರ್ಗಾವಣೆ ಆಗುತ್ತಿತ್ತು ಅನ್ನೋದು ತನಿಖೆಯಿಂದ ಗೊತ್ತಾಗಿದೆ.
ಹಣ ಎಲ್ಲಿಗೆ ಹೋಯ್ತು..?
ಆರೋಪಿಗಳ 8 ಅಕೌಂಟ್ನ ಕೋಟ್ಯಾಂತರ ಹಣ ಎಲ್ಲೋಯ್ತು? ಅನ್ನೋ ಪ್ರಶ್ನೆ ತನಿಖಾಧಿಕಾರಿಗಳಿಗೆ ಬರುತ್ತೆ. ಪ್ರಕರಣದಲ್ಲಿ 4 ಮಂದಿ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ. ಆದರೆ ಕೇವಲ ಇಬ್ಬರ ಮೇಲೆ ಮಾತ್ರ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸುತ್ತಾರೆ. ಮಹಮ್ಮದ್ ಅಬ್ದುಲ್ ಪರವೇಜ್ & ಇಮ್ರಾನ್ ಶೇಕ್ @ ಶೇಕ್ ಇಫ್ತಿ ಎಫ್ಐಆರ್ ದಾಖಲಿಸುತ್ತಾರೆ. ಆದರೆ ಸೈಯದ್ ಅರ್ಸಂದ್ & ಪ್ರಶಾಂತ್ ಎಂಬುವವರನ್ನ ಪೊಲೀಸರು ಕೈಬಿಡುತ್ತಾರೆ ಅನ್ನೋ ವಿಚಾರ ಇಡಿ ತನಿಖೆಯಿಂದ ತಿಳಿದುಬಂದಿದೆ.
ಬೀದರ್ ಗಾಂಧಿ ಗಂಜ ಪೊಲೀಸರು ನಡೆಸಿದ್ದ ತನಿಖೆಯ ದಾಖಲೆಗಳೂ ಕೂಡ ಲಭ್ಯವಾಗಿವೆ. ಕೇಸ್ನಲ್ಲಿ ಲೀಡ್ ಇದ್ದರೂ ಗಾಂಧಿ ಗಂಜ ಪೊಲೀಸ್ರು ತನಿಖೆ ಮಾಡಿಲ್ಲ. ಆರೋಪಿಗಳ ರಕ್ಷಣೆ ಮಾಡಿ ಗಾಂಧಿ ಗಂಜ ಪೊಲೀಸರು ಯಡವಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿಯೇ ಕೋರ್ಟ್ ಕೂಡ ಪೊಲೀಸರ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸುವಂತೆ ಹೇಳಿತ್ತು. ಆದರೆ ಈ ಬಗ್ಗೆ ಗಾಂಧಿ ಗಂಜ ಪೊಲೀಸರು ಕ್ಯಾರೇ ಎನ್ನಲಿಲ್ಲ ಎನ್ನಲಾಗಿದೆ.
ಕೇಸ್ಗೆ ಬಿಗ್ ಟ್ವಿಸ್ಟ್
ಸದ್ಯ ಈ ಕೇಸ್ಗೆ ಬಿಗ್ & ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಡಿ ತನಿಖೆಯಲ್ಲಿ ಈ ಕಂಪನಿಗಳಿಗೂ ಬಿಟ್ ಕಾಯಿನ್ ಕೇಸ್ಗೂ ಲಿಂಕ್ ಇದೆ. ಇದೇ ಕಂಪನಿಯ ಮಾಲೀಕರಿಂದ ಕ್ರೀಪ್ಟೋ ಕರೆನ್ಸಿ ಕಂಪನಿ ಓಪನ್ ಆಗಿರುತ್ತಂತೆ. ಅವರಿಂದಲೇ ಸದ್ಯ ರಾಜ್ಯದ ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ಮಾಹಿತಿ ಇಡಿಗೆ ಸಿಕ್ಕಿದೆ ಅನ್ನೋ ವಿಚಾರ ತಿಳಿದುಬಂದಿದೆ.
ಅಂದ್ಹಾಗೆ ಶ್ರೀಕಿ ಈ ಕೇಸ್ನಲ್ಲಿ ಮಾಸ್ಟರ್ ಮೈಂಡ್ ಅಲ್ಲವೇ ಅಲ್ಲ. ಶ್ರೀಕಿ @ ಶ್ರೀ ಕೃಷ್ಣ ನ ಮೇಲೆ ಇದ್ದಾರೆ ಇಬ್ಬರು ಮಾಸ್ಟರ್ ಮೈಂಡ್ಸ್. ಅವರಿಂದಲೇ ಸದ್ಯ ದೇಶದಲ್ಲಿ ಬಿಟ್ ಕಾಯಿನ್ ಆರಂಭಕ್ಕೆ ಕಾರಣವಾಗಿದ್ಯಂತೆ. ಬೆಂಗಳೂರು ಮೂಲದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ಸ್ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಅವರ ಮೂಲಕವೇ ರಾಜಕಾರಣಿಗಳ ಹಣ ಇದರಲ್ಲಿ ಹೂಡಿಕೆಯಾಗಿದೆ. ಹೀಗಾಗಿ ಕೇಸ್ ದೊಡ್ಡದಾದಷ್ಟು ಹಣ ಕಳೆದುಕೊಳ್ಳುವ ಭೀತಿ ಆರಂಭವಾಗಿದೆ ಅಂತಾ ಹೇಳಲಾಗಿದೆ.
ರಾಜಕಾರಣಿಗಳಿಗೆ ಯಾಕೆ ನಡುಕ..?
ಇಡಿ ಮೂಲಗಳ ಮಾಹಿತಿ ಪ್ರಕಾರ.. ಇದು ಶ್ರೀಕಿಯಿಂದ ಬಿಟ್ ಕಾಯಿನ್ ಹ್ಯಾಕ್ ಆಗಿದೆ ಅನ್ನೋದಲ್ಲ. ಇದರ ಜೊತೆ ಇಲ್ಲಿ ಅನೇಕ ರಾಜಕಾರಣಿಗಳ ಬಂಡವಾಳ ಬಯಲಾಗಿದ್ಯಂತೆ. ತಮ್ಮ ಬ್ಲಾಕ್ ಮನಿ ವೈಟ್ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ. ರಾಜ್ಯದ ಅನೇಕ ರಾಜಕಾರಣಿಗಳ ಬ್ಲಾಕ್ ಮನಿ ಇವರ ಬಳಿ ಲಾಕ್ ಆಗಿದೆ. ಯಾವಾಗ ಈ ಕೇಸ್ ದೊಡ್ಡ ರೂಪ ಪಡೆಯಿತೋ ಈಗ ಎಲ್ಲರಲ್ಲಿಯೂ ಆತಂಕ ಶುರುವಾಗಿದೆ. ಎಲ್ಲಿ ಕೋಟಿ ಕೋಟಿ ಹಣ ಕೈತಪ್ಪಿ ಹೋಗುತ್ತೆ ಅನ್ನೋ ಗಾಬರಿ ಆಗಿದ್ಯಂತೆ.
ರಾಜ್ಯದಿಂದ ಮೋದಿಗೆ ಮಾಹಿತಿ ನೀಡಿದ್ದು ಯಾರಿಗೆ..?
ರಾಜ್ಯದಿಂದ ಪ್ರಮುಖ ರಾಜಕಾರಣಿಯಿಂದಲೇ ಪ್ರಧಾನಿ ಮೋದಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಧ್ಯ ಕರ್ನಾಟಕದ ಪ್ರಮುಖ ರಾಜಕಾರಣಿ ಒಬ್ಬರು ಈ ಬಗ್ಗೆ ಸುಳಿವು ನೀಡುತ್ತಾರೆ. ತಾನು ಈ ಹೂಡಿಕೆ ಮಾಡಿ 8 ಕೋಟಿ ಕಳೆದುಕೊಂಡಿದ್ದೇನೆ ಎಂದಿದ್ದಾರಂತೆ. ಪ್ರಧಾನಿ ಮೋದಿ ಗಮನಕ್ಕೆ ಬರುತ್ತಿದ್ದಂತೆಯೇ ತನಿಖೆ ಶುರುವಾಗಿದೆ. ಈ ಮೂಲಕ ಕೇಸ್ನಲ್ಲಿ ದೊಡ್ಡವರ ಕೈವಾಡ & ಬಂಡವಾಳ ಬಯಲಾಗಿದೆ ಎನ್ನಲಾಗಿದೆ.