ನವದೆಹಲಿ : ಸಬ್ಸಿಡಿ ಸಹಿತ ಅಡುಗೆ ಅನಿಲ ಪಡೆಯುವ ಗೃಹಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಷರತ್ತು ವಿಧಿಸಿದ್ದು, 2026ರ ಅಕ್ಟೋಬರ್ 1 ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಅಡುಗೆ ಅನಿಲದ ವಾಣಿಜ್ಯ ಬಳಕೆಯನ್ನು ತಡೆಯುವುದು, ನಕಲಿ ಸಂಪರ್ಕಗಳನ್ನು ರದ್ದುಪಡಿಸುವುದು ಹಾಗೂ ಸಬ್ಸಿಡಿಯು ಅರ್ಹ ಗ್ರಾಹಕರಿಗೆ ಮಾತ್ರ ತಲುಪುವಂತೆ ಪಾರದರ್ಶಕತೆ ತರುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.
ಸೆಪ್ಟೆಂಬರ್ 19ರ ವರೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಸಕ್ರಿಯ ಗೃಹಬಳಕೆದಾರರ ಪೈಕಿ ಶೇಕಡಾ 89.9 ರಷ್ಟು ಮಂದಿ, ಅಂದರೆ ಬರೋಬ್ಬರಿ 27.43 ಕೋಟಿ ಗ್ರಾಹಕರು ಈಗಾಗಲೇ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ ದೃಢೀಕರಣ ಮುಗಿಸಿದ ಗ್ರಾಹಕರಿಗೆ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಆದರೆ, ಗಡುವಿನೊಳಗೆ ಪ್ರಕ್ರಿಯೆ ಮುಗಿಸದ ಗ್ರಾಹಕರ ಸಬ್ಸಿಡಿ ಸಹಿತ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಲಿದ್ದು, ದೃಢೀಕರಣ ಪೂರ್ಣಗೊಂಡ ತಕ್ಷಣ ಸೇವೆಗಳು ಎಂದಿನಂತೆ ಮರುಸ್ಥಾಪನೆಯಾಗಲಿವೆ.

ಗ್ರಾಹಕರ ಅನುಕೂಲಕ್ಕಾಗಿ ತೈಲ ಮಾರುಕಟ್ಟೆ ಕಂಪನಿಗಳು ದೃಢೀಕರಣಕ್ಕೆ ಹಲವು ಸುಲಭ ಮಾರ್ಗಗಳನ್ನು ಒದಗಿಸಿವೆ. ಸಿಲಿಂಡರ್ ಡೆಲಿವರಿ ಮಾಡಲು ಮನೆಗೆ ಬರುವ ಸಿಬ್ಬಂದಿ ಮೂಲಕ ಮೊಬೈಲ್ ಆ್ಯಪ್ ಬಳಸಿ ಸ್ಥಳದಲ್ಲೇ ಪರಿಶೀಲನೆ ಮಾಡಿಸಿಕೊಳ್ಳಬಹುದು ಅಥವಾ ಸಮೀಪದ ಅನಿಲ ವಿತರಕರ ಕಚೇರಿಗೆ ತೆರಳಿ ಇ-ಕೆವೈಸಿ ಮುಗಿಸಬಹುದು. ಸ್ವತಂತ್ರವಾಗಿ ಮನೆಯಲ್ಲೇ ಪ್ರಕ್ರಿಯೆ ಮುಗಿಸಲು ಬಯಸುವ ಗ್ರಾಹಕರು ತಮ್ಮ ಅನಿಲ ಸಂಪರ್ಕಕ್ಕೆ ಅನುಗುಣವಾಗಿ ಇಂಡಿಯನ್ ಆಯಿಲ್ ಒನ್, ಹಲೋ ಬಿಪಿಸಿಎಲ್ ಅಥವಾ ಎಚ್‌ಪಿ ಪೇ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಬಹುದು. ಗ್ರಾಹಕರಿಗೆ ಡಿಜಿಟಲ್ ಪರಿಶೀಲನೆ ಸುಲಭವಾಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ಪೋರ್ಟಲ್‌ನಲ್ಲಿ ಪ್ರತ್ಯೇಕ ವಿಡಿಯೊ ಮಾರ್ಗದರ್ಶಿಯನ್ನು ಪ್ರಕಟಿಸಲಾಗಿದೆ.

ಒಂದು ವೇಳೆ ಯಾವುದೇ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಇಷ್ಟಪಡದಿದ್ದರೆ, ಅವರು ಅಡುಗೆ ಅನಿಲ ಸಂಪರ್ಕದಿಂದ ಸಂಪೂರ್ಣವಾಗಿ ವಂಚಿತರಾಗುವುದಿಲ್ಲ. ಇಂತಹ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್, ಮೊಬೈಲ್ ಆ್ಯಪ್, ವಾಟ್ಸಾಪ್ ಅಥವಾ ಐವಿಆರ್‌ಎಸ್ ಮೂಲಕ ತಮ್ಮ ಆಯ್ಕೆಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅಂತಹ ಕುಟುಂಬಗಳಿಗೆ ಯಾವುದೇ ಸರ್ಕಾರಿ ಸಬ್ಸಿಡಿ ಸಿಗುವುದಿಲ್ಲ ಮತ್ತು ಅಂದಿನ ಮಾರುಕಟ್ಟೆ ದರದಲ್ಲಿ ಲಭ್ಯತೆಗೆ ಅನುಗುಣವಾಗಿ ಕೇವಲ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳನ್ನು ಮಾತ್ರ ಪೂರೈಸಲಾಗುತ್ತದೆ.

ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಜೂನ್ 30ರಿಂದ ಆರಂಭಿಸಿ ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿತ್ತು. ಅಕ್ಟೋಬರ್ 2023ರಿಂದ ಸಾರ್ವಜನಿಕ ತೈಲ ಕಂಪನಿಗಳು 12 ಕೋಟಿಗೂ ಹೆಚ್ಚು ಎಸ್‌ಎಂಎಸ್ ಹಾಗೂ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದರ ಜೊತೆಗೆ ಮನೆ ಮನೆ ಭೇಟಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಿ ಜಾಗೃತಿ ಮೂಡಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಏರಿಕೆಯಾಗುತ್ತಿದ್ದರೂ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ರಿಯಾಯಿತಿ ದರದಲ್ಲೇ ಸಿಲಿಂಡರ್ ಪೂರೈಸುತ್ತಿದೆ. ಸೆಪ್ಟೆಂಬರ್ 2026ರ ಹೊತ್ತಿಗೆ ಪ್ರತಿ 14.2 ಕೆಜಿ ಸಿಲಿಂಡರ್‌ಗೆ ಅಂದಾಜು 210 ರೂಪಾಯಿಗಳಷ್ಟು ಪರೋಕ್ಷ ಸಬ್ಸಿಡಿ ನೀಡಲಾಗುತ್ತಿದ್ದು, ಜೂನ್ ತಿಂಗಳಲ್ಲಿ ಈ ಮೊತ್ತ 721 ರೂಪಾಯಿಗಳ ಗರಿಷ್ಠ ಮಟ್ಟ ತಲುಪಿತ್ತು. ಮಾರುಕಟ್ಟೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರವು 2022-23ರ ಆರ್ಥಿಕ ವರ್ಷದಲ್ಲಿ 22,000 ಕೋಟಿ ರೂಪಾಯಿ ಮತ್ತು 2025-26 ಹಾಗೂ 2026-27ರ ಸಾಲಿನಲ್ಲಿ 30,000 ಕೋಟಿ ರೂಪಾಯಿಗಳ ಆರ್ಥಿಕ ಪರಿಹಾರವನ್ನು ಕಂಪನಿಗಳಿಗೆ ಒದಗಿಸುತ್ತಿದೆ. ಹೀಗಿದ್ದರೂ, ಸಾರ್ವಜನಿಕ ತೈಲ ಕಂಪನಿಗಳ ನಷ್ಟದ ಪ್ರಮಾಣ ಆಗಸ್ಟ್ 31ರ ವೇಳೆಗೆ 62,000 ಕೋಟಿ ರೂಪಾಯಿಗಳನ್ನು ಮೀರಿದ್ದು, ಸಬ್ಸಿಡಿ ಸೋರಿಕೆಯನ್ನು ತಡೆಗಟ್ಟುವುದು ಸರ್ಕಾರದ ಪಾಲಿಗೆ ಅತ್ಯಂತ ಅನಿವಾರ್ಯವಾಗಿದೆ.

ಬಯೋಮೆಟ್ರಿಕ್ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ನೆರವು ಅಗತ್ಯವಿದ್ದಲ್ಲಿ ಗ್ರಾಹಕರು ರಾಷ್ಟ್ರೀಯ ಉಚಿತ ಸಹಾಯವಾಣಿ ಸಂಖ್ಯೆ 1800 2333 555 ಅನ್ನು ಸಂಪರ್ಕಿಸಬಹುದಾಗಿದೆ.






