ಹುಬ್ಬಳ್ಳಿ, ಸೆ.19: ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಜಾ ಸೇವಾ ಇಲಾಖೆಯನ್ನು ಆರಂಭಿಸಲಾಗಿದೆ. ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಕಾರ್ಮಿಕ, ಉದ್ಯೋಗ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಕುಂದಗೋಳದ ಜೆ.ಎಸ್.ಎಸ್. ವಿದ್ಯಾಪೀಠ ಶ್ರೀ ಶಿವಾನಂದಮಠದ ಆವರಣದಲ್ಲಿ ಪ್ರಜಾ ಸೇವಾ ಇಲಾಖೆ ವತಿಯಿಂದ ಕುಂದಗೋಳ ತಾಲೂಕಿನ ಪ್ರಜಾ ಸೇವಾ ಆಂದೋಲನ ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಸಾದ ಪ್ರಜಾ ಸೇವಾ ಇಲಾಖೆಯನ್ನು ಆರಂಭಿಸಲಾದೆ. ಜನರ ಸಮಸ್ಯೆಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಲು ಪ್ರಜಾ ಸೇವಾ ಆಂದೋಲನ ಸಭೆಗಳನ್ನು ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳನ್ನು ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು.
ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳಿಗೆ ಲಿಖಿತ ರೂಪದಲ್ಲಿ ಸ್ಪಂದಿಸಬೇಕು. ಅರ್ಜಿ ವಿಲೇವಾರಿ ಮಾಡಲು ಯಾವುದೇ ರೀತಿಯಲ್ಲಿ ಕಾಲಹರಣ ಮಾಡಬಾರದು. ಅಧಿಕಾರಿಗಳು ಖುದ್ದಾಗಿ ಹಳ್ಳಿಗಳಿಗೆ ಭೇಟಿ ನೀಡಬೇಕು. ಒಂದು ವೇಳೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾನೂನಿನ ಅಡಿಯಲ್ಲಿ ನಾವು ಕೆಲಸ ಮಾಡಬೇಕಿದೆ. 100 ವರ್ಷಗಳ ಹಿಂದೆ ಎದುರಿಸಿದ ಬರಗಾಲ ಪರಿಸ್ಥಿತಿಯನ್ನು ಇಂದು ನಾವು ಎದುರಿಸುತ್ತಿದ್ದೇವೆ. ತಾಂತ್ರಿಕ ಮಾನದಂಡಗಳನ್ನು ಸರಿಪಡಿಸಿ ಬರಗಾಲ ಘೋಷಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಕುಂದಗೋಳ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬಹುದು. ರೈತರ ಸಹಕಾರ ಬಹಳ ಅವಶ್ಯ. ರೈತರ ಪರವಾಗಿ ನಾವು ಇದ್ದೇವೆ ಎಂದರು.

ಕುಂದಗೋಳ ತಾಲೂಕನ್ನು ಹಸಿರು ಬರಗಾಲ ಎಂದು ಗುರುತಿಸಿ ವರದಿ ಸಲ್ಲಿಸಲಾಗಿದೆ. ಸೆಪ್ಟೆಂಬರ್ 21 ರಂದು ವಿಶೇಷ ಅಧಿವೇಶನ ಆರಂಭವಾಗಲಿದೆ. ರೈತರು ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗುವುದು. ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಕ್ರಮ ವಹಿಸಲಿದೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ಎಂ.ಆರ್.ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ವೃದ್ಧಾಪ್ಯ ವೇತನ, ಹೊಸ ಮನೆ, ಶೌಚಾಲಯ ನಿರ್ಮಾಣ, ಕೆರೆ ಹೂಳು ತೆಗೆಯುವುದು, ಕುಡಿಯುವ ನೀರು, ರಸ್ತೆ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಕೆ ಮಾಡಿದರು. ಒಟ್ಟು 147 ಅರ್ಜಿಗಳು ಸಲ್ಲಿಕೆಯಾದವು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರೀಯಾ ಸಾಕ್ಯಾ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಜಿಲ್ಲಾ ಪಂಚಾಯತ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಕುಂದಗೋಳ ತಹಶೀಲ್ದಾರ ರಾಜು ಮಾವರಕರ, ಕುಂದಗೋಳ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರೇಖಾ ಗಡದವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೀನಾಕ್ಷಿ ಗುದಗಿಯವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗಿ, ಸಿಪಿಐ ಸಮೀರ ಮುಲ್ಲಾ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.






