ಬಿಲ್ಕಿಸ್ ಬಾನೋ ಅವರ ಮನೆಯಿಂದ ರಸ್ತೆಗೆ ಅಡ್ಡಲಾಗಿ, ದೀಪಾವಳಿಗಾಗಿ ಬಿರುಸಿನ ವ್ಯಾಪಾರ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವ ಸ್ಟಾಲ್ ಇದೆ. ಇದು, ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬ ಸದಸ್ಯರನ್ನು ಕೊಂದ ದುಷ್ಕರ್ಮಿಗಳಲ್ಲಿ ಒಬ್ಬನಾದ ರಾಧೇಶ್ಯಾಮ್ ಶಾಗೆ ಸೇರಿದ್ದು. ಆದರೆ, ಬಿಲ್ಕಿಸ್ ಇಲ್ಲಿ ವಾಸಿಸುವುದಿಲ್ಲ.
ಇಂದಿಗೂ ಭಯದಿಂದ ಬದುಕುತ್ತಿರುವ ಆಕೆ, ಹಳ್ಳಿಯಿಂದ ದೂರ ಹೊರಟಿದ್ದಾರೆ. ಅಪಾಯವನ್ನು ತಪ್ಪಿಸುವ ಸಲುವಾಗಿ ತಮ್ಮ ಹಳ್ಳಿ ಬಿಟ್ಟಿದ್ದಾರೆ. ಗುಜರಾತ್‌ನ ದಾಹೋದ್ ಜಿಲ್ಲೆಯ ರಂಧಿಕ್‌ಪುರ ಎಂಬ ಹಳ್ಳಿಯಲ್ಲಿ ಕೇವಲ 4,000 ನಿವಾಸಿಗಳಿದ್ದಾರೆ. ಸಂತ್ರಸ್ತೆ ಬಿಲ್ಕಿಸ್ ಬಾನು ಹಾಗೂ ಅತ್ಯಾಚಾರಿ ಮತ್ತು ಕೊಲೆಗಾರರೂ ಅದೇ ಹಳ್ಳಿಯ ನಿವಾಸಿಗಳು.
2002 ರಲ್ಲಿ, ಗಲಭೆಯ ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ಕುಟುಂಬದ ಸದಸ್ಯರನ್ನು ಭೀಕರವಾಗಿ ಕೊಂದ 11 ಜೀವಾವಧಿ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಸರ್ಕಾರ ಬಿಡುಗಡೆ ಮಾಡಿದೆ. ಇದು ಬಿಲ್ಕಿಸ್ ಬಾನು ಭಯ ಹೆಚ್ಚಾಗಲು ಕಾರಣವಾಗಿದೆ.

ಅಪರಾಧಿಗಳಲ್ಲಿ ಒಬ್ಬನಾದ ಗೋವಿಂದ್ ನಾಯ್ ಮತ್ತು ಈ ವ್ಯಕ್ತಿಗಳಲ್ಲಿ ಕೆಲವರು ಪೆರೋಲ್‌ನಲ್ಲಿ ಹೊರಬಂದಾಗ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅದಾಗ್ಯೂ ಉತ್ತಮ ನಡವಳಿಕೆಗಾಗಿ ಅವರನ್ನು ಬಿಡುಗಡೆಗೊಳಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿಯವರು ತಮ್ಮ ಕೆಂಪುಕೋಟೆಯ ಭಾಷಣದಲ್ಲಿ “ಮಹಿಳೆಯರನ್ನು ಗೌರವಿಸುವ” ಕುರಿತು ಮಾತನಾಡಿದ ದಿನದಂದೇ ಸಾ,ಊಹಿಕ ಅತ್ಯಾಚಾರಿಗಳು ಬಿಡುಗಡೆ ಹೊಂದಿರುವುದು ವಿಪರ್ಯಾಸ.
ಜುಲೈ 2017 ರಲ್ಲಿ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ತನ್ನ ವಿರುದ್ಧ ಸಾಕ್ಷಿ ಹೇಳಿದ್ದ ಇಬ್ಬರು ವ್ಯಕ್ತಿಗಳಿಗೆ ಗೋವಿಂದ್ ನಾಯ್ ಅವರು ಬೆದರಿಕೆ ಹಾಕಿದ್ದರು.
2002 ರಲ್ಲಿ ಭೀಕರ ಅತ್ಯಾಚಾರಕ್ಕೊಳಗಾಗಿ ತನ್ನ ಪುಟ್ಟ ಮಗು ಸೇರಿದಂತೆ ಕುಟುಂಬದ ಏಳು ಮಂದಿಯ ಹತ್ಯಾಕಾಂಡವನ್ನು ಕಂಡ ಆ ರಾತ್ರಿಯಿಂದ ಬಿಲ್ಕಿಸ್ ಬಾನೋ ಹಳ್ಳಿಯಲ್ಲಿ ವಾಸಿಸಲು ಬಂದಿಲ್ಲ. ಆಕೆಯ ಮನೆ ಈಗ ಅಂಗಡಿಯಾಗಿದೆ, ಆಕೆಯ ಕುಟುಂಬವು ಬಟ್ಟೆಗಳನ್ನು ಮಾರಾಟ ಮಾಡುವ ಹಿಂದೂ ಮಹಿಳೆಗೆ ಬಾಡಿಗೆಗೆ ನೀಡಿದೆ. ಆದರೆ, ಆಕೆಯ ಮೇಲೆ ಸಾಮೂಹಿಕವಾಗಿ ಎರಗಿದವರು, ಹತ್ಯಾಕಾಂಡ ನಡೆಸಿದವರು ಆ ಹಳ್ಳಿಯಲ್ಲೇ ಬದುಕು ಸಾಗಿಸುತ್ತಿದ್ದಾರೆ.