ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಬೃಹನ್ನಾಟಕದ ವೇದಿಕೆಯಲ್ಲಿ ಬಿಜೆಪಿ ಶಾಸಕ ಮತ್ತು ಬಿಹಾರ ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ಪಾತ್ರವೂ ಜನಮೆಚ್ಚುಗೆ ಗಳಿಸಿದೆ. ನಿತೀಶ್ ಕುಮಾರ್ ಮೈತ್ರಿಕೂಟವನ್ನು ಬದಲಾಯಿಸುವ ನಿರ್ಧಾರ ಪ್ರಕಟಿಸಿದ ಕೂಡಲೇ ವಿಜಯ್ ಕುಮಾರ್ ಅವರು ಕೋವಿಡ್’ನಿಂದ ಗುಣಮುಖರಾಗಿದ್ದಾರೆ. ಅದೂ ಕೂಡಾ ಕೇವಲ ಒಂದು ದಿನದಲ್ಲಿ.
ಇದು ಆಶ್ಚರ್ಯವೆನಿಸಿದರೂ ಸತ್ಯ. ಜನಸಾಮಾನ್ಯರಿಗೆ ಕೋವಿಡ್ ತಗುಲಿದರೆ ಒಂದು ವಾರ ಐಸೋಲೇಷನ್, ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ಮುಂಜಾಗ್ರತಾ ನಿಯಮಗಳ ಪಟ್ಟಿಯನ್ನು ಸರ್ಕಾರ ಈಗಾಗಲೇ ನೀಡಿದೆ. ಆದರೆ, ಇವೆಲ್ಲಾ ನಿಯಮಗಳು ರಾಜಕಾರಣಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ ಎಂಬುದನ್ನು ಬಿಹಾರದ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ.
ಆದದ್ದೇನೆಂದರೆ, ಆಗಸ್ಟ್ 7ರಂದು ಸಂಜೆ ಮೂರು ಗಂಟೆಯ ವೇಳೆಗೆ ವಿಜಯ್ ಕುಮಾರ್ ಸಿನ್ಹಾ ಅವರು ಟ್ವೀಟ್ ಮಾಡಿ, ನಾನು ಅಸ್ವಸ್ಥನಾಗಿರುವ ಕಾರಣ ಕೋವಿಡ್ ಪರೀಕ್ಷೆ ಮಾಡಿದ್ದೆ. ಅದರ ವರದಿಯ ಪ್ರಕಾರ ನನಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ನಿಯಮಗಳ ಪ್ರಕಾರ ನಾನು ಐಸೋಲೇಷನ್’ಗೆ ತೆರಳುತ್ತಿದ್ದೇನೆ. ನನ್ನ ಜೊತೆ ಯಾರೆಲ್ಲಾ ಸಂಪರ್ಕದಲ್ಲಿ ಇದ್ದೀರಿ ದಯವಿಟ್ಟು ನೀವೂ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಕಳಕಳಿ ವ್ಯಕ್ತಪಡಿಸಿದ್ದರು.
ಆದರೆ, ಆಗಸ್ಟ್ 8ರಂದು ಸಂಜೆ ಏಕಾಏಕಿ ಮತ್ತೆ ಕೋವಿಡ್ ಪರೀಕ್ಷೆ ನಡೆಸಿರುವ ವಿಜಯ್ ಕುಮಾರ್ ಸಿನ್ಹಾ, ಕೋವಿಡ್ ನೆಗೆಟಿವ್ ವರದಿ ತರಿಸಿಕೊಂಡಿದ್ದಾರೆ.
ಈ ಕುರಿತಾಗಿ ಮತ್ತೆ ಟ್ವೀಟ್ ಮಾಡಿರುವ ಅವರು, “ದೇವರ ಅದಮ್ಯ ಕೃಪೆಯಿಂದ ಹಾಗು ನನ್ನ ಹಿತೈಷಿಗಳ ಹಾರೈಕೆಯಿಂದ ಇವತ್ತಿನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ನಾನು ಮತ್ತೆ ‘ಕರ್ಮಪಥ’ಕ್ಕೆ ಮರಳುತ್ತಿದ್ದೇನೆ,” ಎಂದಿದ್ದಾರೆ.
ಬಿಜೆಪಿಯ ಮಂಗಲ್ ಪಾಂಡೆ ಬಿಹಾರ ರಾಜ್ಯದ ಆರೋಗ್ಯ ಮಂತ್ರಿಯಾಗಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರೇ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ಜೆಡಿಯು ಮತ್ತಿ ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳುವ ಸಂದರ್ಭದಲ್ಲಿ ವಿಜಯ್ ಕುಮಾರ್ ಸಿನ್ಹಾ ಅವರ ಪಾತ್ರ ಮಹತ್ವದ್ದಾಗಿದೆ. ಮಹಾಘಟಬಂಧನ್ ಸರ್ಕಾರ ಮತ್ತೆ ಅಸ್ಥಿತ್ವಕ್ಕೆ ಬರಬೇಕಾದರೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ, ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಅವರು ಕೋವಿಡ್ ನೆಪವೊಡ್ಡಿ ಮನೆಯಲ್ಲಿ ಕುಳಿತುಕೊಂಡರೆ, ಅವರ ಸ್ಥಾನದಲ್ಲಿ ಉಪಸಭಾಪತಿಯಾದ ಜೆಡಿಯುನ ಮಹೇಶ್ವರ್ ಹಝಾರಿ ಬರಲಿದ್ದಾರೆ.
ಈ ಕಾರಣಕ್ಕೆ ಸ್ಪೀಕರ್ ಸ್ಥಾನವನ್ನು ಮುಂದಿಟ್ಟುಕೊಂಡು ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಮುಂದಿವರೆಸಲು ಪ್ರಯತ್ನಿಸುತ್ತಿದೆ. ಹಾಗಾಗಿ ಕೋವಿಡ್ ಪೀಡಿತ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಏಕಾಏಕಿ ಕೋವಿಡ್ ಮುಕ್ತರನ್ನಾಗಿಸಿದೆ ಎಂಬುದಂತು ಸ್ಪಷ್ಟ.
ಈಗಾಗಲೇ ಆರ್ ಜೆಡಿಯ 18 ಶಾಸಕರು ಸದನದಲ್ಲಿ ಅತಿರೇಕದ ವರ್ತನೆ ತೋರಿದ ಆರೋಪಕ್ಕೆ ಗುರಿಯಾಗಿದ್ದಾರೆ. ಅವರ ವಿರುದ್ದ ಶಿಸ್ತು ಸಮಿತಿ ವರದಿಯನ್ನೂ ನೀಡಿದೆ. ಈ ವರದಿಯ ಆಧಾರದ ಮೇಲೆ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿ ಬಹುಮತ ಸಾಬೀತು ಪ್ರಕ್ರಿಯೆಯಿಂದ ಹೊರಗಿರಿಸುವ ಸಾಧ್ಯತೆಗಳೂ ಇವೆ.