ಭಾಗ 1
1980ರ ದಶಕದ ನಂತರ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಕವಲು ಹಾದಿಯಲ್ಲಿ ಕ್ರಮಿಸುತ್ತಿದ್ದ ಭಾರತ, ಡಿಜಿಟಲ್ ಯುಗದಲ್ಲಿ ಹೊರಳು ಹಾದಿಯಲ್ಲಿ ನಡೆಯಲಾರಂಭಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಚೌಕಟ್ಟಿನೊಳಗೇ ಆಗುತ್ತಿರುವ ಈ ಮನ್ವಂತರವನ್ನು ಎಲ್ಲ ಆಯಾಮಗಳಲ್ಲೂ ಪರಾಮರ್ಶಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ.
ನವ ಉದಾರವಾದ ಜನಸಾಮಾನ್ಯರ ನಿತ್ಯ ಬದುಕಿನ ಜೀವನೋಪಾಯಗಳನ್ನು ನಿರ್ಧರಿಸುವ ಹಂತಕ್ಕೆ ತಳಸಮಾಜದ ಒಳಗೂ ಹೊಕ್ಕಿರುವುದು ಒಂದು ಮಗ್ಗುಲಾದರೆ, ಮತ್ತೊಂದೆಡೆ ಈ ಮಾರುಕಟ್ಟೆ ಕ್ರೌರ್ಯಕ್ಕೆ ಒಳಗಾಗಿರುವ ಅದೇ ತಳಮಟ್ಟದ ಸಮಾಜಗಳು ಸಾಂಸ್ಕೃತಿಕ ಹಿಂಚಲನೆಯನ್ನು ಕಾಣುತ್ತಿವೆ. ಇದಕ್ಕೆ ತೊಡಿಸಲಾಗಿರುವ ಜಾತಿ, ಧರ್ಮ ಮತ್ತು ರಾಷ್ಟ್ರೀಯವಾದದ ಮುಸುಕುಗಳು, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಡತನ, ನಿರುದ್ಯೋಗ, ನಿರ್ವಸತಿ ಹಾಗೂ ಶ್ರಮಿಕರ ಬದುಕಿನ ತಲ್ಲಣಗಳನ್ನು ವ್ಯವಸ್ಥಿತವಾಗಿ ಮರೆಮಾಚುತ್ತಿವೆ.

ಬಹುಶಃ ಹಿಂತಿರುಗಿ ನೋಡಲೂ ಸಾಧ್ಯವಾಗದ ಈ ಹೊರಳು ಹಾದಿಯ ಪಯಣದಲ್ಲಿ, ಏಳು ದಶಕಗಳ ಕಾಲ ಭಾರತದ ಸಾಮಾನ್ಯ ಜನತೆ ಕಂಡಿದ್ದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಶಿಥಿಲವಾಗುತ್ತಿವೆ. ವಿಪರ್ಯಾಸವೆಂದರೆ, ಈ ಮೌಲ್ಯಗಳ ಕುಸಿತ ಯಾವ ಸಮಾಜಗಳನ್ನು ಬಾಧಿಸುವುದೋ, ಅದೇ ಸಮಾಜಗಳು ವಿಭಿನ್ನ ಕಾರಣಗಳಿಗಾಗಿ, ಈ ಬದಲಾವಣೆಗೆ ಕಾರಣವಾಗುವ ರಾಜಕೀಯ ವ್ಯವಸ್ಥೆಯನ್ನು, ಸಾಂಸ್ಕೃತಿಕ ಶಕ್ತಿಗಳನ್ನು ಹಾಗೂ ಮಾರುಕಟ್ಟೆ ಬಂಡವಾಳವನ್ನು ಸ್ವೀಕರಿಸಿ, ಹಿಂಬಾಲಿಸುತ್ತಿವೆ. ಈ ಬೆಳವಣಿಗೆಯ ಕಾರಣಗಳನ್ನು ಶೋಧಿಸಬೇಕಿದೆ. ಸಾಮಾನ್ಯ ಜನತೆ ಎದುರಿಸುತ್ತಿರುವ ನಿರುದ್ಯೋಗ ಮತ್ತಿತರ ಸಂಕಟಗಳನ್ನು ಮರೆಮಾಚುವಂತಹ ಕಲ್ಯಾಣ ಆರ್ಥಿಕತೆಯ ಪರಿಣಾಮಗಳನ್ನೂ ಮರುವಿಮರ್ಶೆ ಮಾಡಬೇಕಿದೆ. ಸುಸ್ಥಿರ ಬದುಕು ಮತ್ತು ಸುಭದ್ರ ಭವಿಷ್ಯದ ಕಲ್ಪನೆಗಳನ್ನು ಅಪಮೌಲ್ಯಗಳಿಸುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಬಿಹಾರದ ಅಚ್ಚರಿ ಫಲಿತಾಂಶಗಳು
ಬಿಹಾರದ ಚುನಾವಣಾ ಫಲಿತಾಂಶಗಳು ಈ ದೃಷ್ಟಿಯಿಂದ ಬದಲಾದ ರಾಜಕೀಯ ಭೂ ದೃಶ್ಯದ (Political Land) ಸೂಚಕವಾಗಿ ಕಂಡರೆ ಮತ್ತೊಂದೆಡೆ ಭವಿಷ್ಯ ಭಾರತದಲ್ಲಿ ಅಧಿಕಾರ ರಾಜಕಾರಣ-ಚುನಾವಣಾ ರಾಜಕಾರಣದ ಪ್ರಕ್ರಿಯೆಗಳನ್ನು ಪುನರ್ ನಿರ್ವಚಿಸಿ ಮುನ್ನಡೆಯಬೇಕಾದ ದಿಕ್ಸೂಚಿಯಾಗಿ ಕಾಣುತ್ತದೆ. ತತ್ವ, ಸಿದ್ಧಾಂತ ಹಾಗೂ ಪ್ರಜಾಸತ್ತಾತ್ಮಕ ಮಾದರಿಗಳ ದೃಷ್ಟಿಯಿಂದ ನೋಡಿದಾಗ, ಬಂಡವಾಳ, ಮಾರುಕಟ್ಟೆ ಹಾಗೂ ನವ ಉದಾರವಾದ ಸೃಷ್ಟಿಸಿರುವ ಭ್ರಮಾಧೀನ ಕಲ್ಪನೆಗಳು ಮೇಲುಗೈ ಪಡೆದಿರುವುದಕ್ಕೂ ಇದು ಸಾಕ್ಷಿಯಾಗಿ ಕಾಣುತ್ತದೆ. ಭಾರತ ಸ್ವಾತಂತ್ರ್ಯಪೂರ್ವದಿಂದಲೂ ಪಾಲಿಸುತ್ತಾ ಬಂದಿರುವ ತಾತ್ವಿಕ ಚೌಕಟ್ಟುಗಳು ಹಾಗೂ ಸೈದ್ಧಾಂತಿಕ ಭೂಮಿಕೆಗಳು ರೂಪಾಂತರಗೊಂಡು, ತತ್ವಾಂತರ-ಪಕ್ಷಾಂತರ ಕಲ್ಪನೆಗಳ ನಡುವೆ ಇದ್ದ ತೆಳುವಾದ ಗೆರೆಯೂ ಅಳಿಸಿಹೋಗಿರುವುದನ್ನು ಈ ಚುನಾವಣೆಗಳು ಸೂಚಿಸಿವೆ.
ಮತ್ತೊಂದು ದೃಷ್ಟಿಯಲ್ಲಿ ನೋಡಿದಾಗ, ಭಾರತದ ರಾಜಕೀಯ ಪಕ್ಷಗಳು, ತಮ್ಮ ತತ್ವ-ಸಿದ್ದಾಂತಗಳ ಚೌಕಟ್ಟಿನಲ್ಲಿ ರೂಪಿಸಿಕೊಂಡು, ಕಾಪಾಡಿಕೊಂಡು ಬಂದಿದ್ದ ಮತಬ್ಯಾಂಕುಗಳು ತಮ್ಮ ಅಂತಃಸತ್ವವನ್ನು ಕಳೆದುಕೊಂಡು, ಬಾಹ್ಯರೂಪದ ಅವತರಣಿಕೆಗಳಾಗಿ ಪರಿವರ್ತನೆಯಾಗಿರುವುದನ್ನು ಈ ಚುನಾವಣೆಗಳು ಎತ್ತಿ ತೋರಿಸಿವೆ. ದಲಿತ, ಅಲ್ಪಸಂಖ್ಯಾತ, ಮಹಿಳೆಯರು, ಅತಿ ಹಿಂದುಳಿದ ವರ್ಗಗಳು (EBC) ಪ್ರತಿನಿಧಿಸುತ್ತಿದ್ದ ಮತಬ್ಯಾಂಕುಗಳು ಹೊಸ ಆಯಾಮವನ್ನು ಪಡೆದುಕೊಂಡಿದ್ದು, ಸಾಮಾಜಿಕ-ಆರ್ಥಿಕ ಶೋಷಣೆಗಳನ್ನು ಅನುಭವಿಸುತ್ತಲೇ, ಈ ಶೋಷಕ ವ್ಯವಸ್ಥೆಯ ಪೋಷಕ ಶಕ್ತಿಗಳನ್ನು ಬೆಂಬಲಿಸುವಂತಾಗಿವೆ. ಈ ಮನ್ವಂತರ ಪ್ರಕ್ರಿಯೆಯಲ್ಲಿ ಸರ್ಕಾರಗಳ ಸಾಧನೆ ಅಥವಾ ಸಾಫಲ್ಯಗಳಿಗಿಂತಲೂ, ರಾಜಕೀಯ ಆಶ್ವಾಸನೆಗಳೇ ಹೆಚ್ಚು ಪ್ರಭಾವಶಾಲಿಯಾಗಿರುವುದನ್ನು ಗಮನಿಸಬೇಕಿದೆ.

ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಗಳು ಮಾರುಕಟ್ಟೆಯ ಪ್ರಭಾವಕ್ಕೊಳಗಾಗುತ್ತಿರುವಂತೆ, ಚುನಾಯಿತ ಶಾಸಕರನ್ನು ಖರೀದಿಸುವ ಹಂತದಿಂದ, ಇಡೀ ಪ್ರಕ್ರಿಯೆಯನ್ನೇ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿದೆ. ರಾಜಕೀಯ ಭೂ ದೃಶ್ಯದ (Political Landscape) ಮತ್ತು ಸಾಂವಿಧಾನಿಕ ಮೌಲ್ಯಗಳ ಮಾರುಕಟ್ಟೇಕರಣ (Marketisation) ತನ್ನ ಹೊಸ ರೂಪವನ್ನು ಬಿಹಾರದ ಚುನಾವಣೆಗಳಲ್ಲಿ ಪ್ರದರ್ಶಿಸಿದೆ.
ಈ ನಡುವೆ ತಳಮಟ್ಟದಲ್ಲಿರುವ ಸಮಾಜಗಳು ಹಾಗೂ ಇದನ್ನು ಪ್ರತಿನಿಧಿಸುವ ಶೋಷಿತ ವರ್ಗಗಳು, ತಮ್ಮ ಸುಭದ್ರ ಭವಿಷ್ಯಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳಿಂದ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ವಸತಿ ಇತ್ಯಾದಿ, ವಂಚಿತರಾಗುತ್ತಿದ್ದರೂ , ಈ ಪರಿಸರದಲ್ಲಿ ನಿತ್ಯ ಅನುಭವಿಸುವ ಸಂಕಷ್ಟಗಳಿಗೆ ಪರಿಹಾರವಾಗಿ ಪರ್ಯಾಯ ಆಡಳಿತ ಮಾದರಿಗಳನ್ನು ಅಪೇಕ್ಷಿಸುವ , ಒತ್ತಾಯಿಸುವ ಹಾದಿಯಿಂದ ವಿಮುಖವಾಗಿವೆ. ಅಸಮಾನತೆಗಳನ್ನು ತೊಡೆದುಹಾಕಿ, ಸಮ ಸಮಾಜದ ಕನಸು ಕಾಣುವ ದಾರಿಯಿಂದ ಹೊರಳಿದಂತೆ ಕಾಣುತ್ತಿದೆ. ತತ್ಪರಿಣಾಮವಾಗಿ ಕಲ್ಯಾಣ ಆರ್ಥಿಕತೆಯ ಚೌಕಟ್ಟಿನಲ್ಲಿ ಆಳ್ವಿಕೆಗಳು ಒದಗಿಸುವ ತಾತ್ಕಾಲಿಕ, ಶಮನಕಾರಿ ಸವಲತ್ತುಗಳು, ಸೌಲಭ್ಯಗಳು ಮತ್ತು ಹಣಕಾಸು ನೆರವುಗಳನ್ನು ಸ್ವಾಗತಿಸಲಾಗುತ್ತಿದೆ.

ಜನಕಲ್ಯಾಣ ಆರ್ಥಿಕತೆ- ಸಮ ಸಮಾಜದ ಕಲ್ಪನೆ
ಒಂದು ದಶಕದ ಹಿಂದೆ ರೇವ್ಡಿ (ಕುರುಕಲು ತಿಂಡಿ) ಎಂದು ಲೇವಡಿ ಮಾಡಲಾಗುತ್ತಿದ್ದ, ಉಚಿತ ಎಂದು ಮೂದಲಿಸಲಾಗುತ್ತಿದ್ದ, ಸೌಕರ್ಯಗಳು, ಸೇವೆಗಳು ಮತ್ತು ಅವಕಾಶಗಳು ಈಗ ಮಾರುಕಟ್ಟೆ ಆರ್ಥಿಕತೆಯ ಒಂದು ಅಸ್ತ್ರವನ್ನಾಗಿ ಪರಿವರ್ತನೆಯಾಗಿದೆ. ಮೂಲ ಸಾಂವಿಧಾನಿಕ ಅವಕಾಶ-ಸವಲತ್ತುಗಳಿಗಾಗಿ ನಡೆಸಬೇಕಾದ ಹೋರಾಟದಿಂದ ವಿಮುಖವಾಗಿರುವ ಶೋಷಿತ ಸಮಾಜಗಳೇ ಇದನ್ನು ಸ್ವೀಕರಿಸಿರುವುದನ್ನು, ಬಿಹಾರದ ಫಲಿತಾಂಶಗಳು ನಿರೂಪಿಸಿವೆ.
ತತ್ಪರಿಣಾಮವಾಗಿ ಅನ್ನ ನೀರು ಬಟ್ಟೆ ವಸತಿ ಎಂಬ ಮೂಲಭೂತ ಅವಶ್ಯಕತೆಗಳಿಗಾಗಿ ಹೋರಾಡುವ ಧೋರಣೆ ಶೋಷಿತ ಸಮುದಾಯಗಳಲ್ಲೂ ಕ್ಷೀಣಿಸುತ್ತಿದ್ದು, ಆರ್ಥಿಕವಾಗಿ ಮುಂದುವರೆದ ವರ್ಗಗಳು ಈ ಪ್ರಕ್ರಿಯೆಯ ಪ್ರಮುಖ ಫಲಾನುಭವಿಗಳಾಗಿವೆ. ಈ ವರ್ಗಗಳೇ ರಾಜಕೀಯ ಸೂತ್ರವನ್ನು ಹಿಡಿದಿದ್ದು, ಕೆಳಸ್ತರದ ವರ್ಗಗಳನ್ನು ನಿರ್ದೇಶಿಸುತ್ತಿವೆ. ಕಾಂಗ್ರೆಸ್, ಬಿಜೆಪಿ, ಆರ್‌ಜೆಡಿ ಮತ್ತಿತರ ರಾಜಕೀಯ ಪಕ್ಷಗಳಿಗೆ ಈ ವರ್ಗಗಳೇ ಪ್ರಧಾನ ಅಡಿಪಾಯಗಳೂ ಆಗಿವೆ.
ಇದರ ಕಾರಣವನ್ನು ಕಾರ್ಪೋರೇಟ್ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಗುರುತಿಸಬಹುದಾದರೂ, ಮತ್ತೊಂದು ಮಗ್ಗುಲಿನಿಂದ ನೋಡಿದಾಗ, ನವ ಉದಾರವಾದದ ಈ ಹೊಸ ಮಾದರಿಯನ್ನು ಒಪ್ಪಿಕೊಂಡು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ರಾಜಕೀಯ ಪಕ್ಷಗಳು ಸಮ ಸಮಾಜದ ಕಲ್ಪನೆಯನ್ನೇ ಮೂಲೆಗುಂಪು ಮಾಡಿರುವುದು ಎದ್ದು ಕಾಣುತ್ತದೆ. ಮತ್ತೊಂದು ಗಂಭೀರವಾದ ಅಂಶವೆಂದರೆ, ಈ ಫಲಾನುಭವಿ ಜನಸಮುದಾಯಗಳನ್ನು ತಳಮಟ್ಟದವರೆಗೂ ತಲುಪಿ, ಅವರಲ್ಲಿ ಸಮ ಸಮಾಜದ ನೈಜ ಕಲ್ಪನೆಯ ಬಗ್ಗೆ ಅರಿವು ಮೂಡಿಸಿ, ಮಾರುಕಟ್ಟೆಯ ಈ ʼ ಜನ ಕಲ್ಯಾಣ ಆರ್ಥಿಕತೆ-ಯೋಜನೆಗಳು ʼ ಅವರ ಸುಸ್ಥಿರ ಭವಿಷ್ಯವನ್ನು ರೂಪಿಸುವುದಿಲ್ಲ ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ , ಎಡಪಕ್ಷಗಳಿಂದಲೂ ವ್ಯಾಪಕ ಪ್ರಯತ್ನಗಳು ನಡೆದಿಲ್ಲ. ವಿಚಾರ ಸಂಕಿರಣಗಳಲ್ಲಿ ಹೇರಳವಾಗಿ ಧ್ವನಿಸುವ ಈ ಅಭಿಪ್ರಾಯಗಳನ್ನು, ತಳಮಟ್ಟದವರೆಗೂ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಮಾಜಿಕ ಸಂಘಟನೆಗಳು, ರಾಜಕೀಯ ಪಕ್ಷಗಳು , ಬಹುಮಟ್ಟಿಗೆ ವಿಫಲವಾಗಿರುವುದನ್ನು ಇನ್ನಾದರೂ ಗಂಭೀರವಾಗಿ ನೋಡಬೇಕಿದೆ.

ಎಡಪಕ್ಷಗಳನ್ನು ಹೊರತುಪಡಿಸಿ ಮತ್ತಾವುದೇ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳೂ ಬಿಜೆಪಿ ಅನುಸರಿಸುತ್ತಿರುವ ಆರ್ಥಿಕ ನೀತಿಯಿಂದ ಭಿನ್ನವಾಗಿ ಯೋಚಿಸುವುದಿಲ್ಲ, ಇದು ವರ್ತಮಾನದ ದುರಂತ. ʼ ಕಲ್ಯಾಣ ಆರ್ಥಿಕತೆ ʼಯ ಚೌಕಟ್ಟಿನೊಳಗೆ ತಾವು ಅಧಿಕಾರಕ್ಕೆ ಬಂದರೆ ಎಷ್ಟು ಪ್ರಮಾಣದ ಸೌಲಭ್ಯಗಳನ್ನು, ಗ್ಯಾರಂಟಿಗಳನ್ನು, ನಗದು ಪಾವತಿಯನ್ನು ಒದಗಿಸುತ್ತೇವೆ ಎನ್ನುವುದೇ ಎಲ್ಲ ಪಕ್ಷಗಳ ಮೂಲ ಪ್ರಣಾಳಿಕೆಗಳಾಗಿರುತ್ತವೆ. ಸಹಜವಾಗಿಯೇ ಸಾಮಾನ್ಯ ಮತದಾರರು, ಫಲಾನುಭವಿಗಳಾಗಿ ಈ ದೃಷ್ಟಿಯಿಂದಲೇ ಚುನಾಯಿಸಬೇಕಾದ ಪಕ್ಷಗಳನ್ನು ಮಾಪನ ಮಾಡುತ್ತಾರೆ. ಬಿಜೆಪಿಯ ಹಿಂದುತ್ವ-ಕಾರ್ಪೋರೇಟ್-ಬಂಡವಾಳಸ್ನೇಹಿ ಸರ್ಕಾರವನ್ನು ಚುನಾವಣೆಗಳಲ್ಲಿ ಪರಾಭವಗೊಳಿಸಬೇಕಾದರೆ, ರಾಜಕೀಯ ಪರ್ಯಾಯ ಅಗತ್ಯವೇ ಹೊರತು, ಪರ್ಯಾಯ ರಾಜಕಾರಣ ಅಲ್ಲ. ಈ ಎರಡರ ನಡುವಿನ ತಾತ್ವಿಕ ವ್ಯತ್ಯಾಸವನ್ನು ಮರುನಿರ್ವಚಿಸುವುದು ವರ್ತಮಾನದ ತುರ್ತು.
ಪರ್ಯಾಯ ಚಿಂತನೆಯ ವ್ಯತ್ಯಯಗಳು
ಪರ್ಯಾಯ ರಾಜಕಾರಣ ಎನ್ನುವುದು ಚುನಾವಣೆಗಳಿಗೆ ಸೀಮಿತವಾದ, ವಿರೋಧ ಪಕ್ಷಗಳ ಮೈತ್ರಿಕೂಟಗಳಲ್ಲಿ ಕೊನೆಯಾಗುತ್ತದೆ. ತತ್ವಾಂತರ-ಪಕ್ಷಾಂತರದ ನಡುವಿನ ಅಂತರ ಕಡಿಮೆಯಾಗುತ್ತಿದ್ದಷ್ಟೂ, ಪ್ರಾದೇಶಿಕ ಪಕ್ಷಗಳ ಧೋರಣೆ ಬದಲಾಗುತ್ತಲೇ ಹೋಗುತ್ತದೆ. ಬಿಹಾರದ ಜೆಡಿಯು, ಎಲ್‌ಜೆಪಿ, ಆಂಧ್ರದ ಟಿಡಿಪಿ, ಕರ್ನಾಟಕದ ಜೆಡಿಎಸ್ ಇದಕ್ಕೆ ನೇರ ಸಾಕ್ಷಿ. ಹಾಗಾಗಿ ಬಿಜೆಪಿಯ ಆರ್ಥಿಕ ನೀತಿಗಳನ್ನು ಹಾಗೂ ಇದರಿಂದಲೇ ಪೋಷಿಸಲ್ಪಡುವ ಹಿಂದುತ್ವ ರಾಜಕಾರಣವನ್ನು ಎದುರಿಸಲು, ರಾಜಕೀಯ ಪರ್ಯಾಯ ಅಗತ್ಯವಾಗಿ ಬೇಕಿದೆ. ಈ ಪರ್ಯಾಯದ ನೆಲೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಅಥವಾ ವೇದಿಕೆಯು, ಜನಸಾಮಾನ್ಯರ ಮುಂದೆ ಸ್ಪಷ್ಟವಾದ ಆರ್ಥಿಕ ನೀತಿಗಳನ್ನು, ರೈತ-ಕಾರ್ಮಿಕರ ನೀತಿಗಳನ್ನು, ಭೂ ಸಂಬಂಧಿತ ಕಲ್ಪನೆಗಳನ್ನು ಹಾಗೂ ಸಾಂಸ್ಕೃತಿಕ ನೀತಿಗಳನ್ನು ಮಂಡಿಸಬೇಕಾಗುತ್ತದೆ.
ನವ ಉದಾರವಾದದ ಅಪಾಯಗಳನ್ನು ತಪ್ಪಿಸುವುದೇ ಅಲ್ಲದೆ, ತಳಮಟ್ಟದ ಅಸಮಾನತೆಗಳನ್ನು ಹೋಗಲಾಡಿಸುವ, ಮಹಿಳೆ, ರೈತ ಕಾರ್ಮಿಕ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವ, ಭೂ ಹಂಚಿಕೆಯನ್ನು ಶಾಸನಬದ್ಧವಾಗಿ ಕೈಗೊಳ್ಳುವ, ಮಹಿಳೆಯರ ರಕ್ಷಣೆಗೆ ಚಾಲ್ತಿಯಲ್ಲಿರುವ ಕಾನೂನುಗಳ ಅನುಷ್ಠಾನವನ್ನು ಬಲಪಡಿಸುವ, ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡುವ, ಅಪರಾಧಿಕ ಜಗತ್ತನ್ನು ನಿಯಂತ್ರಿಸುವ, ಸಾರ್ವತ್ರಿಕ ಶಿಕ್ಷಣದ ಸಾಂವಿಧಾನಿಕ ಕನಸನ್ನು ನನಸು ಮಾಡುವ, ಶಿಕ್ಷಣವನ್ನು ಕಾರ್ಪೋರೇಟ್ ಹಿಡಿತದಿಂದ ಬಿಡಿಸುವ, ಸಾರ್ವಜನಿಕ ಉದ್ದಿಮೆಗಳನ್ನು ಕಾಪಾಡುವ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಆಡಳಿತ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸುವ, ಲೋಕಪಾಲ್ ಲೋಕಾಯುಕ್ತ ಆರ್‌ಟಿಐ ಮೊದಲಾದ ಜನಪರ ಸಂಸ್ಥೆಗಳನ್ನು ಕಾಪಾಡುವ , ಭರವಸೆಗಳೊಂದಿಗೆ ಈ ರಾಜಕೀಯ ಪರ್ಯಾಯ ಶಕ್ತಿಯಾಗಿ ಜನರ ಮನ್ನಣೆ ಗಳಿಸುವುದು ಸಾಧ್ಯ.
ಆದರೆ ಪರ್ಯಾಯ ರಾಜಕಾರಣದ ಕಲ್ಪನೆ ಕ್ರಿಯಾಶೀಲವಾಗಿ ಚುನಾವಣಾ ರಾಜಕೀಯದಲ್ಲಿ ಉಗಮವಾದ ಕಾಲದಿಂದಲೂ, ಈ ಮಾದರಿಯ ರಾಜಕೀಯ ಪರ್ಯಾಯ ವೇದಿಕೆ ರೂಪುಗೊಂಡಿಲ್ಲ. ಇದಕ್ಕೆ ಕಾರಣ ತತ್ವ ಸಿದ್ಧಾಂತಗಳು ಒಂದೇ ಆಗಿದ್ದರೂ, ಅಧಿಕಾರ ರಾಜಕಾರಣದ ಫಲಾನುಫಲಗಳು ನಿರ್ಣಾಯಕವಾಗಿರುವುದು. ಸಮಾಜವಾದಿ, ಅಂಬೇಡ್ಕರ್‌ವಾದಿ ಎಂಬ ಬ್ಯಾನರ್ ಹೊತ್ತ ರಾಜಕೀಯ ಪಕ್ಷಗಳು ಅಷ್ಟ ದಿಕ್ಕುಗಳಲ್ಲಿ ಚದುರಿಹೋಗಿರುವುದು ಈ ಬೆಳವಣಿಗೆಗೆ ಒಂದು ಕಾರಣವಾಗಿದೆ. ಮತ್ತೊಂದು ಕಾರಣ ಎಡಪಕ್ಷಗಳ ಐಕ್ಯತೆಯ ಬಗ್ಗೆ ಇರುವ ನಿರಾಸಕ್ತಿ. ಪರ್ಯಾಯ ರಾಜಕಾರಣದ ಒಂದು ವೇದಿಕೆಯಲ್ಲಿ ಒಂದಾಗಿ ನಿಲ್ಲುವುದಕ್ಕೂ, ಮಾರ್ಕ್ಸ್‌ವಾದ-ಲೆನಿನ್‌ವಾದವನ್ನು ಅನುಸರಿಸುವ ಎಡಪಕ್ಷಗಳು ತಮ್ಮ ನಡುವಿನ ಭಿನ್ನ ಭೇದಗಳನ್ನು ಮರೆತು, ಒಂದು ಪಕ್ಷವಾಗಿ ರೂಪುಗೊಳ್ಳುವುದಕ್ಕೂ ಅಪಾರ ಅಂತರವಿದೆ. ಎಡಪಕ್ಷಗಳು ಇನ್ನಾದರೂ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.

ಈ ಅನೈಕ್ಯತೆಯ ಪ್ರಮುಖ ಫಲಾನುಭವಿಯಾಗಿ, ಬಿಜೆಪಿ ತನ್ನ ಬಾಹುಗಳನ್ನು ದೇಶವ್ಯಾಪಿಯಾಗಿ ಚಾಚುತ್ತಿದೆ. ಪ್ರಾದೇಶಿಕ ಪಕ್ಷಗಳಲ್ಲೂ ಅಪಾರ ಸಂಖ್ಯೆಯಲ್ಲಿರುವ ಅಪರಾಧಿಗಳು, ಕ್ರಿಮಿನಲ್ ಮೊಕದ್ದಮೆ ಹೊತ್ತವರು, ಭ್ರಷ್ಟಾಚಾರಿಗಳು, ಯಾವುದೇ ಪರ್ಯಾಯಕ್ಕೆ ಬಹುದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ಕೇಂದ್ರ ಸಂಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ತನ್ನೊಡನೆ ಕೈಜೋಡಿಸಿದ ಭ್ರಷ್ಟ ರಾಜಕಾರಣಿಗಳನ್ನು ಸ್ವಚ್ಛಗೊಳಿಸುವ ಬಿಜೆಪಿಯ ತಂತ್ರ ಫಲಿಸಿದ್ದು, ಇದು ಆಡಳಿತ ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತಿನ ಕ್ರೋಢೀಕರಣಕ್ಕೆ ಸುಗಮ ಹಾದಿಯನ್ನು ಸೃಷ್ಟಿಸಿದೆ. ಈ ವಾತಾವರಣದಲ್ಲಿ ಮತದಾರರ ಮುಂದೆ ಪರ್ಯಾಯ ಮತ್ತು ಸ್ವಚ್ಚ ಶಾಸನಬದ್ದ ರಾಜಕಾರಣದ ನೀಲನಕ್ಷೆಯನ್ನು ಪ್ರಸ್ತುತಪಡಿಸುವುದು ವಿರೋಧ ಪಕ್ಷಗಳ, ಎಡಪಕ್ಷಗಳ ಆದ್ಯತೆಯಾಗಬೇಕಿದೆ. ಬಿಹಾರದಲ್ಲಿ ಹೀನಾಯ ಸೋಲನುಭವಿಸಿದ ʼ ಮಹಾಘಟಬಂಧನ್ ʼ ಈ ಲಕ್ಷಣಗಳನ್ನು ಹೊಂದಿರಲಿಲ್ಲ ಎನ್ನುವುದು ವಾಸ್ತವ.
ವಿರೋಧಿ ಒಕ್ಕೂಟದ ದಿಕ್ಸೂಚಿಗಳು
ಮತ್ತೊಂದು ಲೋಪ ಮಹಾಘಟ್‌ಬಂಧನ್ ಅಥವಾ ಎಡಪಕ್ಷಗಳ ಪ್ರಣಾಳಿಕೆಗಳಲ್ಲಿ ಭೂಮಿಯ ಪ್ರಶ್ನೆ ಪ್ರಧಾನವಾಗಿ ಇಲ್ಲದಿರುವುದು. ಬಿಹಾರದ ಯುವ ಸಮೂಹದ ಮೂಲ ಸಮಸ್ಯೆ ಇರುವುದೇ ಭೂಮಿಯ ಪ್ರಶ್ನೆಯಲ್ಲಿ. ಉತ್ಪಾದನಾ ಕೈಗಾರಿಕೆಗಳಿಲ್ಲದೆ, ಗ್ರಾಮೀಣ ಬದುಕಿನಲ್ಲಿ ಭವಿಷ್ಯ ಕಟ್ಟಿಕೊಳ್ಳಲಾಗದ ಬಿಹಾರದ ಯುವ ಸಮೂಹಕ್ಕೆ ಉದ್ಯೋಗಕ್ಕಾಗಿ , ಅನ್ಯ ರಾಜ್ಯ ಅಥವಾ ದೇಶಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ.
ಈ ಜನತೆ ಬಿಹಾರದಲ್ಲೇ ಬದುಕು ಕಟ್ಟಿಕೊಳ್ಳಬೇಕಾದರೆ, ಭೂ ಹಂಚಿಕೆಯಾಗಬೇಕು.ಈಗಲೂ ಭೂಮಾಲೀಕರ ದಬ್ಬಾಳಿಕೆ, ಶೋಷಣೆಗೊಳಗಾಗಿರುವ ತಳಸಮುದಾಯಗಳು ಹಾಗೂ ಮಹಿಳಾ ಸಮೂಹಕ್ಕೆ ಸ್ವಾವಲಂಬಿ ಬದುಕು ಸಾಧ್ಯವಾಗುವುದು ಕೃಷಿ ವಲಯದಿಂದ ಮಾತ್ರ ಸಾಧ್ಯ. ಅದರೆ ವಿರೋಧ ಪಕ್ಷಗಳು ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಬಿಹಾರದ ನಿರುದ್ಯೋಗ, ಯವ ಸಮೂಹದ ಅನಿಶ್ಚಿತತೆಯನ್ನು ನಿವಾರಿಸಬೇಕಾದರೆ, ಭೂಮಿಯ ಪ್ರಶ್ನೆಯನ್ನೇ ಪ್ರಧಾನ ಕಾರ್ಯಸೂಚಿಯಾಗಿ ಕೈಗೆತ್ತಿಕೊಳ್ಳಬೇಕು.

ಒಂದು ವೇಳೆ ಈ ದಿಕ್ಕಿನಲ್ಲಿ ಸಾಗಿದ್ದರೆ, ಐದು ವರ್ಷಗಳ ಎನ್‌ಡಿಎ ಆಳ್ವಿಕೆಯ ವೈಫಲ್ಯಗಳನ್ನು ಬಿಡಿಬಿಡಿಯಾಗಿ ಜನರ ಮುಂದಿಡಲು ಸಾಧ್ಯವಾಗುತ್ತಿತ್ತು. ಈ ಪ್ರಮಾಣದ ಕಳಪೆ ಸಾಧನೆ ಇರುವ ಸರ್ಕಾರವೊಂದು ಪುನರಾಯ್ಕೆಯಾಗುವುದಕ್ಕೆ ಜಾತಿ ಸಮೀಕರಣ ಅಥವಾ ಹಿಂದುತ್ವದ ಆಕರ್ಷಣೆಯೊಂದೇ ಕಾರಣವಾಗಿರುವುದು ಸಾಧ್ಯವಿಲ್ಲ. ಮೇಲಾಗಿ ಈ ಚುನಾವಣೆಗಳಲ್ಲಿ ಬಿಜೆಪಿ ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುನ್ನಲೆಗೆ ತರಲೇ ಇಲ್ಲ. ವಿಶ್ಲೇಷಕರು ಹೇಳುವ ಹಾಗೆ, ಮುಸ್ಲಿಂ-ಯಾದವ್ ಸಂಯೋಜನೆಯೂ ಸಹ ವಿರೋಧ ಪಕ್ಷಗಳ ಒಕ್ಕೂಟಕ್ಕೆ ನೆರವಾಗಿಲ್ಲ. ಮತ್ತೊಂದೆಡೆ ಮತಗಳ್ಳತನ, ಎಸ್‌ಐಆರ್ ಮೊದಲಾದ ಆಡಳಿತಾತ್ಮಕ ಕ್ರಮಗಳ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿ ತನ್ನ ಗುರಿ ಸಾಧಿಸಿದೆ. ಇದನ್ನೇ ಸೋಲಿಗೆ ಪ್ರಧಾನ ಕಾರಣ ಎಂದು ಬಿಂಬಿಸುವುದು ಆತ್ಮವಂಚನೆಯಾಗುತ್ತದೆ.
ನೀತಿಶ್ ಕುಮಾರ್ ನೇತೃತ್ವದ ಐದು ವರ್ಷದ ಆಡಳಿತದ ಮೌಲ್ಯ ಮಾಪನ ಮಾಡಿದಾಗ, ಎನ್‌ಡಿಎ ಗೆಲುವು ಅಚ್ಚರಿದಾಯಕವಾಗಿ ಕಾಣುವುದು ಸಹಜ. ಆದರೂ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿರುವುದು, ಕಾಂಗ್ರೆಸ್, ಆರ್‌ಜೆಡಿ, ಎಡಪಕ್ಷಗಳೂ ಸೇರಿದಂತೆ ವಿರೋಧಿ ಒಕ್ಕೂಟದ ಎಲ್ಲ ಪಕ್ಷಗಳೂ ಹೀನಾಯ ಸೋಲು ಅನುಭವಿಸಿರುವುದು ಆತ್ಮವಿಮರ್ಶೆಗೆ ದಾರಿಮಾಡಿಕೊಡಬೇಕಾದ ವಿದ್ಯಮಾನ. ವಿಶೇಷವಾಗಿ ಪಾರಂಪರಿಕವಾಗಿ ಬಿಹಾರದಲ್ಲಿ ತನ್ನ ಸೈದ್ಧಾಂತಿಕ ಬೇರುಗಳನ್ನು ಹೊಂದಿರುವ ಎಡ ಪಕ್ಷಗಳು, ಆಳವಾದ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇದರಿಂದ ಹೊರಬರುವ ನಿರ್ಣಾಯಕ ಫಲಿತಾಂಶಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂದು ಯೋಚಿಸಬೇಕಿದೆ. ಈ ಪ್ರಕ್ರಿಯೆಯ ಜೊತೆಗೆ, ಎನ್‌ಡಿಎ ಬೆಂಬಲಿಸದಿರುವ ಶೇಕಡಾ 50ಕ್ಕೂ ಹೆಚ್ಚು ಮತದಾರರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸುವ ಕ್ರಿಯಾಶೀಲ ಚಟುವಟಿಕೆಗಳನ್ನು ರೂಪಿಸಬೇಕಿದೆ.
(ಬಿಹಾರ ಸರ್ಕಾರದ ಸಾಧನೆ-ಮತದಾರರ ಸಂಪರ್ಕ ಕುರಿತು ವಿಶ್ಲೇಷಣೆ ಮುಂದಿನ ಭಾಗದಲ್ಲಿ )










