ಬೆಂಗಳೂರು: ಏ.21: ಚುನಾವಣೆ ಸಮಯದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಬಿಗ್ ಶಾಕ್ ಎದುರಾಗಿದೆ. ಶಾಸಕ ಜಮೀರ್ ನಾಮಪತ್ರ ತಿರಸ್ಕರಿಸುವಂತೆ ಒತ್ತಾಯಿಸಿ ನವಭಾರತ ಸೇನಾ ಪಾರ್ಟಿ ಅಭ್ಯರ್ಥಿ ರುಕ್ಮಂಗದ ಜಮೀರ್ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಮೀರ್ ಅಹ್ಮದ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ನವಭಾರತ ಸೇನಾ ಪಾರ್ಟಿ, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ನಾಮಪತ್ರದಲ್ಲಿ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ಕೆಲವು ಲೋಪಗಳನ್ನು ಮಾಡಿದ್ದಾರೆ. ನಿಯಮಗಳ ಪ್ರಕಾರ, ಯಾವುದೇ ಅಭ್ಯರ್ಥಿಯು ತನಗೆ ಸಂಬಂಧಿಸಿದ ಮಾಹಿತಿಗಳನ್ನು ಮರೆಮಾಚಬಾರದು ಅಥವಾ ಅರ್ದಂಬರ್ಧ ನೀಡಬಾರದು. ಆದರೆ, ಜಮೀರ್ ಅವರು ಇಂಥ ತಪ್ಪುಗಳನ್ನು ತಮ್ಮ ನಾಮಪತ್ರದಲ್ಲಿ ಮಾಡಿದ್ದಾರೆ. ಜೊತೆಗೆ, ಒಂದು ಕಾಲಂ ಖಾಲಿ ಬಿಟ್ಟಿದ್ದಾರೆ. ಇದು ಕೂಡ ತಪ್ಪು. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ನವಭಾರತ ಸೇನಾ ಪಾರ್ಟಿ ಆಗ್ರಹಿಸಿದೆ.
ಮಾಹಿತಿ ಮುಚ್ಚಿಟ್ಟಿದ್ದಾರಾ ಶಾಸಕ ಜಮೀರ್?

ಜಮೀರ್ ಅಹ್ಮದ್ ನಾಮಪತ್ರ ತಿರಸ್ಕರಿಸಬೇಕು ಎಂದು ನವಭಾರತ ಸೇನಾ ಪಾರ್ಟಿಯ ಪರವಾಗಿ ರುಕ್ಮಾಂಗದ ಆಗ್ರಹಿಸಿದ್ದಾರೆ. ಅವರ ಹೇಳುವ ಪ್ರಕಾರ, ಶಾಸಕ ಜಮೀರ್ ಅಹ್ಮದ್ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಮ್ಮನ್ನು ಆಧರಿಸಿರುವ ತಮ್ಮ ಕುಟುಂಬ ಸದಸ್ಯರ ಪಟ್ಟಿಯಲ್ಲಿ ತಮ್ಮ ತಾಯಿಯ ಹೆಸರನ್ನು ಸೇರಿಸಿದ್ದರು. ಆದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ತಾಯಿಯ ಹೆಸರನ್ನು ಸೇರಿಸಿಲ್ಲ. ಇದು ಮೊದಲನೇ ಲೋಪವಾಗಿದೆ ಎಂದಿದ್ದಾರೆ.
ಇನ್ನು ಮುಂದುವರೆದು ಮಾತನಾಡಿರುವ ರುಕ್ಮಾಂಗದ, ಸುಪ್ರೀಂ ಕೋರ್ಟ್ ಕೂಡ, ಅಭ್ಯರ್ಥಿಗಳು ನಾಮಪತ್ರದಲ್ಲಿ ಯಾವುದೇ ಮಾಹಿತಿಗಳನ್ನು ಮರೆಮಾಚಬಾರದು ಮಾಡಬಾರದು ಎಂದು ಹೇಳಿದೆ. ಈಗ, ಜಮೀರ್ ಅವರು ತಮ್ಮ ತಾಯಿಯ ಹೆಸರನ್ನು ಮರೆಮಾಚಿರುವುದು ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ರುಕ್ಮಾಂಗದ ಹೇಳಿದ್ದಾರೆ.

ಇನ್ನುಳಿದಂತೆ, ನಾಮಪತ್ರದಲ್ಲಿ ಒಂದು ಕಾಲಂ ಖಾಲಿ ಬಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಾಮಪತ್ರದಲ್ಲಿರುವ ಯಾವುದೇ ಕಾಲಂ ಅನ್ನು ಖಾಲಿ ಬಿಡುವಂತಿಲ್ಲ. ಇದೂ ಸಹ ನಾಮಪತ್ರ ಸಲ್ಲಿಕೆಯ ನಿಯಮಗಳಿಗೆ ವಿರುದ್ಧವಾಗಿದ್ದು ಇದನ್ನೂ ಪರಿಗಣಿಸಿ ಜಮೀರ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ರುಕ್ಮಾಂಗದ ರಾಜ್ಯ ಚುನಾವಣಾ ಆಯೋಗವನ್ನ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಹೇಳಿದ್ದೇನು?
ಈ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿದಿರುವ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದಾರೆ. ನವಭಾರತ ಸೇನೆಯು ಹೇಳಿರುವಂತೆ ಜಮೀರ್ ಅವರ ನಾಮಪತ್ರದಲ್ಲಿ ಲೋಪಗಳಿವೆ. ಅಪೂರ್ಣ ಮಾಹಿತಿ ಕೊಡೋದು, ಸುಳ್ಳು ಮಾಹಿತಿ ಕೊಡೋದು ಲೋಪವೇ. ಹಾಗಾಗಿ, ಜಮೀರ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.