ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada) ಅಂತಿಮ ದಿನಗಳ ಲೆಕ್ಕಾಚಾರದಲ್ಲಿದೆ. ಮೊದಲು 19 ಸ್ಪರ್ಧಿಗಳು ಬಳಿಕ 3 ವಲ್ಡ್ ಕಾರ್ಡ್ ಸ್ಪರ್ಧಿಗಳು ಸೇರಿದಂತೆ ಒಟ್ಟು 22 ಸ್ಪರ್ಧಿಗಳ ಈ ಸುಂದರ ಪಯಣದಲ್ಲಿ ಈಗ ಕೇವಲ ಎಂಟು ಸ್ಪರ್ಧಿಗಳು ಉಳಿದುಕೊಂಡಿದ್ದು, ಈ ವಾರ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ. ಈ ಮೂಲಕ ಟಾಪ್ ಆರು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಫಿನಾಲೆ ವಾರ ಸಮೀಪಿಸುತ್ತಿದ್ದಂತೆ ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎನ್ನುವ ಕುತೂಹಲ ಕನ್ನಡಿಗರಲ್ಲಿದೆ.

ಈ ಬಾರಿ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಇಂದಿನವರೆಗೂ ವಿನ್ನರ್ ಪಟ್ಟಿಯಲ್ಲಿ ಬದಲಾಗದ ಹೆಸರೆಂದರೆ ಅದು ಗಿಲ್ಲಿ.. ಸದ್ಯ ಎಲ್ಲೆಲ್ಲಿಯೂ ಗಿಲ್ಲಿ ಎನ್ನುವ ಮಟ್ಟಿಗೆ ಗಿಲ್ಲಿ ನಟ ತಮ್ಮ ಹವಾ ಸೃಷ್ಟಿಸಿಕೊಂಡಿದ್ದಾರೆ. ಚಿಕ್ಕವರಿಂದ ವಯಸ್ಕರ ತನಕ ಎಲ್ಲರೂ ಇಷ್ಟಪಡುವ ವ್ಯಕ್ತಿತ್ವ ಗಿಲ್ಲಿಯದು. ಮಾತು ನಡೆ, ನುಡಿ, ತಮಾಷೆ ಎಲ್ಲದರಲ್ಲಿಯೂ ತಮ್ಮದೇ ಆದ ವಿಭಿನ್ನ ಸ್ಟೈಲ್ ಹೊಂದಿರುವ ಗಿಲ್ಲಿ ಎಂತವರಿಗಾದರೂ ಇಷ್ಟವಾಗುತ್ತಾರೆ.

ಹೀಗಾಗಿ ಮೊದಲ ದಿನದಿಂದಲೂ ಗಿಲ್ಲಿ ಹವಾ ಜೋರಾಗಿದ್ದು, ಮೊದಲ ಐವತ್ತು ದಿನಗಳು ಬಿಗ್ ಬಾಸ್ ಸಂಪೂರ್ಣವಾಗಿ ಒನ್ ಮ್ಯಾನ್ ಶೋನಂತೆ ಇತ್ತು. ಅಷ್ಟರ ಮಟ್ಟಿಗೆ ಗಿಲ್ಲಿ ಬಿಗ್ ಬಾಸ್ ಶೋ ಆವರಿಸಿಕೊಂಡಿದ್ದರು. ಸೀರಿಯಲ್ ಸೆಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಅಭಿಮಾನಿಯ ಮೈ ಮೇಲೆ ಹಚ್ಚೆಯಾಗುವುದರೆಂದರೆ ಅದು ಸುಲಭದ ಮಾತಲ್ಲ. ಅದರ ಹಿಂದೆ ಅದೆಷ್ಟೋ ಊಟ ತಿಂಡಿ ನಿದ್ದೆ ಕಾಣದ ದಿನಗಳಿವೆ. ಸದ್ಯ ಕರ್ನಾಟಕದ ಮನೆ ಮನೆಯ ಮಗನಾಗಿರುವ ಗಿಲ್ಲಿ ನಟ ಅವರ ಹಿನ್ನೆಲೆ ಏನು..? ಈ ಮನೋರಂಜನಾ ಕ್ಷೇತ್ರದಲ್ಲಿ ಗಿಲ್ಲಿಯ ಪಯಣ ಹೇಗಿತ್ತು..? ಎನ್ನುವುದರ ಸಣ್ಣ ಪರಿಚಯ ಇಲ್ಲಿದೆ ನೋಡಿ.

ಮೂಲತಃ ಮಂಡ್ಯ ಮೂಲದ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ ನಟ ಮೊದಲು ಫೇಮಸ್ ಆಗಿದ್ದೇ ಫೇಸ್‌ಬುಕ್, ಯುಟ್ಯೂಬ್ ವಿಡಿಯೋಗಳಿಂದ.. ಎಲ್ಲರಂತೆ ವಿಡಿಯೋ ಮಾಡದೇ ಏನಾದರೂ ಡಿಫರೆಂಟ್ ಆಗಿ ಮಾಡಬೇಕೆಂದು ಕೊಂಡ ಗಿಲ್ಲಿ ಹಳ್ಳಿಯಲ್ಲಿ ಒಂದಿಷ್ಟು ಜನರನ್ನು ಸೇರಿಸಿಕೊಂಡು, ಹದಿನೈದು, ಇಪ್ಪತ್ತು ನಿಮಿಷ ನಿರಂತರವಾಗಿ ಡೈಲಾಗ್ ಹೇಳುತ್ತಿದ್ದರು. ಅದು ಫೇಸ್‌ಬುಕ್, ಯುಟ್ಯೂಬ್‌ನಲ್ಲಿ ಲೈವ್ ವಿಡಿಯೋ ಆಗುತ್ತಿತ್ತು. ನಲ್ಲಿ ಮೂಳೆ ಎನ್ನುವ ವಿಡಿಯೋವೊಂದು ನಟರಾಜ ಎನ್ನುವ ಯುವಕನನ್ನು ಗಿಲ್ಲಿ ನಟನಾಗಿ ಬದಲಾಯಿಸಿತ್ತು.

ಹೇಗಾದರೂ ಸರಿ ಈ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಗೆ ಬರಬೇಕು ಎಂದುಕೊಂಡ ಗಿಲ್ಲಿ ಮೊದಲು ರಿಯಾಲಿಟಿ ಶೋ, ಸೀರಿಯಲ್ ಸೆಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಹೊಟ್ಟೆಪಾಡಿಗೋಸ್ಕರ ಬೆಂಗಳೂರಿನಂತಹ ಮಹಾ ನಗರದಲ್ಲಿ ನಾನಾ ಕೆಲಸ ಮಾಡಿದ್ದರು. ಕೆಲವೊಮ್ಮೆ ಊರಿಗೆ ವಾಪಸ್ ಹೋಗಿ ಬಿಡಬೇಕು ಎನ್ನುವ ಪರಿಸ್ಥಿತಿಗಳು ಕೂಡ ಅವರ ಮುಂದಿದ್ದವು. ಆದರೆ ಗಿಲ್ಲಿಯೊಳಗಿನ ನಟ ಯಾವ ಸಂದರ್ಭದಲ್ಲಿಯೂ ಗಿಲ್ಲಿ ಈ ಇಂಡಸ್ಟ್ರಿಯನ್ನು ಬಿಡದಂತೆ ಜಾಗ್ರತೆಗೊಳಿಸಿತ್ತು.

ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಿಲ್ಲಿಯ ಪ್ರತಿಭೆಗೆ ಮಣೆ ಹಾಕಿದ್ದೇ ಜೀ ಕನ್ನಡ. ಕಾಮಿಡಿ ಕಿಲಾಡಿಗಳು ಮೂಲಕ ಎಂಟ್ರಿ ಕೊಟ್ಟ ಗಿಲ್ಲಿ ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾದರು. ಎಲ್ಲಾ ವಿಚಾರದಲ್ಲಿಯೂ ತಮ್ಮದೇ ಆದ ಡಿಫರೆಂಟ್ ಶೈಲಿ ಹೊಂದಿರುವ ಗಿಲ್ಲಿ ಕಾಮಿಡಿಯಲ್ಲೂ ತಮ್ಮದೇ ಜೋನ್ ಕ್ರಿಯೆಟ್ ಮಾಡಿಕೊಂಡು ಪ್ರಾಪರ್ಟಿ ಕಾಮಿಡಿ ಮಾಡಲು ಆರಂಭಿಸಿದರು. ಇದು ಸಖತ್ ಫೇಮಸ್ ಆಗಿದ್ದು, ರಿಯಾಲಿಟಿ ಶೋ ಜಡ್ಜ್‌ಗಳು ಹಾಗೂ ಪ್ರೇಕ್ಷಕರಿಗೆ ಬಹಳ ಇಷ್ಟವಾಯಿತು.

ಕಾಡಿಮಿ ಶೋಗಳ ಮೂಲಕ ಸಖತ್ ಫೇಮಸ್ ಆದ ಗಿಲ್ಲಿ ನಟ ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದಲ್ಲಿ ಸಿಬಿಐ ಶಂಕರ್ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ಒಂದಾದ ಮೇಲೊಂದು ಸಿನಿಮಾ ಆಫರ್ ಪಡೆಯುತ್ತಿದ್ದ ಗಿಲ್ಲಿಗೆ ವರವಾಗಿ ಬಂದ ಮತ್ತೊಂದು ಅವಕಾಶವೇ ಬಿಗ್ ಬಾಸ್ ಕನ್ನಡ ಸೀಸನ್ 12. ಆರು ತಿಂಗಳ ಮುಂಚೆಯೇ ಬಿಗ್ ಬಾಸ್‌ಗೆ ಬರಲು ಒಪ್ಪಂದ ಮಾಡಿಕೊಂಡಿದ್ದ ಗಿಲ್ಲಿ ಮೊದಲ ದಿನ ಕಾವ್ಯ ಜೊತೆ ಜಂಟಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟರು. ಬಂದ ಮೊದಲ ದಿನದಿಂದಲೂ ತಮ್ಮದೇ ಆದ ಸೈಲ್‌ನಲ್ಲಿ ಆಡುತ್ತಿರುವ ಗಿಲ್ಲಿ ಇದೀಗ ಈ ಬಾರಿಯ ಬಿಗ್ ಬಾಸ್ ಕಪ್ ಎತ್ತುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕದಾದ್ಯಂತ ಗಿಲ್ಲಿ ಕ್ರೇಜ್ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ ಬ್ಯಾನರ್, ಆಟೋಗಳ ಹಿಂದೆ ಸಹ ಗಿಲ್ಲಿಯ ಫೋಟೋ ಹಾಕಿ ಅಭಿಮಾನಿಗಳು ಗೆಲುವಿಗೆ ಹಾರೈಸುತ್ತಿದ್ದಾರೆ. ಗಿಲ್ಲಿ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಿದ್ದು, ಇದೀಗ ಅವರ ಅಭಿಮಾನಿಯೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಿಲ್ಲಿ ಭಾವ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಟ್ಯಾಟೂ ಗೋಸ್ಟ್ ಅವ ಬಳಿ ಗಿಲ್ಲಿ ಅಭಿಮಾನಿ ಟ್ಯಾಟೂ ಹಾಕಿಸಿಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ಫೋಟೋವನ್ನು ಅಭಿಮಾನಿ ಟ್ಯಾಟೂ ಹಾಕಿಸಿಕೊಂಡಿರುವುದು ಇದೇ ಮೊದಲಾಗಿದ್ದು, ಇದು ಗಿಲ್ಲಿ ಕ್ರೇಜ್ಗೆ ಹಿಡಿದ ಕೈಗನ್ನಡಿ ಆಗಿದೆ. ಒಟ್ಟಾರೆ ಕನ್ನಡಿಗರ ಮನಗೆದ್ದಿರುವ ಗಿಲ್ಲಿ ಬಿಗ್ ಬಾಸ್ ಕಪ್ ಗೆಲ್ಲಲಿ ಎನ್ನುವುದೇ ಕೋಟ್ಯಂತರ ಕನ್ನಡಿಗರ ಆಶಯವಾಗಿದೆ.











