ಬೆಂಗಳೂರು: ಬೆಂಗಳೂರು–ತುಮಕೂರು ಮೆಟ್ರೋ ರೈಲು ಯೋಜನೆಗೆ ಅಧಿಕೃತ ರೂಪ ದೊರೆತಿದ್ದು, ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಸಿದ್ಧತೆ ಆರಂಭವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಹತ್ವಾಕಾಂಕ್ಷೆಯ ಅಂತರ್‌ಜಿಲ್ಲಾ ಕಾರಿಡಾರ್‌ಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಾಗಿದೆ.

ಬೆಂಗಳೂರು–ತುಮಕೂರು ಮೆಟ್ರೋ ಯೋಜನೆಯ ಡಿಪಿಆರ್ ಸಲಹಾ ಕಾರ್ಯವನ್ನು ಬಿಎಂಆರ್‌ಸಿಎಲ್ ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಸಂಸ್ಥೆಗೆ ವಹಿಸಿದೆ. 59.60 ಕಿಲೋಮೀಟರ್ ಉದ್ದದ ಈ ಮೆಟ್ರೋ ಮಾರ್ಗಕ್ಕಾಗಿ ಸುಮಾರು 1.2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಇದರ ಟೆಂಡರ್‌ಗಳನ್ನು ನವೆಂಬರ್ 2025ರಲ್ಲಿ ಆಹ್ವಾನಿಸಲಾಗಿತ್ತು. ಪ್ರಸ್ತುತ ಅಧಿಕಾರಿಗಳು ಹಾಗೂ ತಜ್ಞರು ಕ್ಷೇತ್ರಮಟ್ಟದ ಅಧ್ಯಯನ ಕಾರ್ಯ ಆರಂಭಿಸಿದ್ದು, ಸಂಚಾರ ಹಾಗೂ ಪ್ರಯಾಣ ಮಾದರಿಗಳ ಕುರಿತ ದತ್ತಾಂಶ ಸಂಗ್ರಹಣೆ ನಡೆಸಲಾಗುತ್ತಿದೆ.

ಯೋಜನೆಯ ಭಾಗವಾಗಿ ಪ್ರಾಥಮಿಕ ಜೋಡಣೆ ಪರಿಶೀಲನೆ, ವಿವಿಧ ತಾಂತ್ರಿಕ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮಾರ್ಗದ ವಿಸ್ತರಣೆ ಕುರಿತು ಚರ್ಚೆಗಳೂ ನಡೆದಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿನ ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಲಿದೆ.

ಈ ಕುರಿತು ಮಾಹಿತಿ ನೀಡಿದ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಅವರು, ಬೆಂಗಳೂರು–ತುಮಕೂರು ಮೆಟ್ರೋ ಯೋಜನೆಗೆ ಸುಮಾರು 20,649 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಇದರಲ್ಲಿ ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿದ ಎಂದು ತಿಳಿಸಿದ್ದಾರೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಬೆಂಗಳೂರು–ತುಮಕೂರು ನಡುವಿನ ಸಂಚಾರ ವ್ಯವಸ್ಥೆಗೆ ಹೊಸ ಆಯಾಮ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.












