ಬೆಂಗಳೂರು :ಸ್ವಕ್ಷೇತ್ರ ಕನಕಪುರದಲ್ಲಿ ನಾಮಪತ್ರ ತಿರಸ್ಕೃತಗೊಳ್ಳಬಹುದು ಎಂಬ ಭೀತಿಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಿದೆ.ರಾಜ್ಯ ಚುನಾವಣಾ ಆಯೋಗ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ನಾಮಪತ್ರ ಅಂಗೀಕರಿಸಿದ್ದು ಕನಕಪುರದಲ್ಲಿ ಬಂಡೆ ಸ್ಪರ್ಧೆ ಕನ್ಫರ್ಮ್ ಆಗಿದೆ.
ನಾಮಪತ್ರ ಸಲ್ಲಿಕೆ ಮಾಡುವಾಗ ಆದಾಯದ ವಿವರ ಹಾಗೂ ಕ್ರಿಮಿನಲ್ ಕೇಸ್ಗಳನ್ನು ಸರಿಯಾಗಿ ನಮೂದಿಸಬೇಕು. ಸಣ್ಣ ವ್ಯತ್ಯಾಸ ಕಂಡು ಬಂದರೂ ಸಹ ನಾಮಪತ್ರ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಎಲ್ಲಿ ತಮ್ಮ ನಾಮಪತ್ರ ತಿರಸ್ಕತಗೊಳ್ಳುತ್ತದೆಯೋ ಎಂಬ ಭೀತಿಯಲ್ಲಿ ಡಿಕೆಶಿ ನಿನ್ನೆ ತಮ್ಮ ಸಹೋದರ ಡಿ.ಕೆ ಸುರೇಶ್ರಿಂದಲೂ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದರು .
ಡಿ.ಕೆ ಶಿವಕುಮಾರ್ ನಾಮಪತ್ರ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಇದೇ ಪಕ್ಷದಿಂದ ನಾಮಪತ್ರ ಸಲ್ಲಿಸಿರುವ ಡಿ.ಕೆ ಸುರೇಶ್ ಉಮೇದುವಾರಿಕೆ ತಿರಸ್ಕೃತಗೊಂಡಿದೆ ಎಂದು ಅಂದಾಜಿಸಬಹುದಾಗಿದೆ. ಒಂದು ವೇಳೆ ಡಿಕೆಶಿ ನಾಮಪತ್ರ ತಿರಸ್ಕೃತಗೊಂಡರೆ ಕನಕಪುರದಲ್ಲಿ ಆರ್. ಅಶೋಕ್ ಗೆಲುವು ಸುಲಭವಾಗುತ್ತದೆ. ಒಮ್ಮೆ ಕನಕಪುರ ಬಿಜೆಪಿ ಪಾಲಾದರೆ ಮರಳಿ ಪಡೆಯೋದು ಕಷ್ಟ ಎಂಬ ಭೀತಿಯಲ್ಲಿ ಡಿಕೆಶಿ ಸಹೋದರನನ್ನು ಕಣಕ್ಕಿಳಿಸುವ ಬಗ್ಗೆ ಪ್ಲಾನ್ ಮಾಡಿದ್ದರು.