ಬೆಂಗಳೂರು : ದೇಶದ ರಾಜಕಾರಣದಲ್ಲಿ ಬಿಹಾರ ಪ್ರಮುಖ ಪಾತ್ರ ವಹಿಸುತ್ತಲೇ ಬರುತ್ತಿದೆ. ಕೇಂದ್ರ ಸರ್ಕಾರಗಳ ರಚನೆಯ ಸಂದರ್ಭದಲ್ಲಿ ಬಿಹಾರದ ಪಾಲುದಾರಿಕೆ ಇಲ್ಲದಿದ್ದರೆ ಅದು ಅಪೂರ್ಣ ಸರ್ಕಾರ ಎಂಬ ಮಾತಿದೆ. ಅಷ್ಟರ ಮಟ್ಟಿಗೆ ದೇಶದ ರಾಜಕೀಯದಲ್ಲಿ ಬಿಹಾರ ತನ್ನ ಪ್ರಾಬಲ್ಯ ಸಾಧಿಸುತ್ತಲೇ ಬರುತ್ತಿದೆ.

ಅದರಲ್ಲೂ ಬಿಹಾರವನ್ನು ಸತತ ಎರಡು ದಶಕಗಳ ಕಾಲ ಆಳಿ, 9 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ನಿತೀಶ್ ಕುಮಾರ್ 10ನೇ ಸಲ ಸಿಎಂ ಆಗಿ ಕಳೆದ ನವೆಂಬರ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆರ್‌ಜೆಡಿ ಸಖ್ಯದಿಂದ ಹೊರಬಂದು ಎನ್‌ಡಿಎ ಮಿತ್ರಕೂಟದ ಭಾಗವಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆಯಾಗಿ 85 ಸ್ಥಾನಗಳನ್ನು ಪಡೆದು ಅಧಿಕಾರ ನಡೆಸುತ್ತಿದ್ದಾರೆ.
ಆದರೆ ಇದೇ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟ (National Democratic Alliance) ದಲ್ಲಿ ಇದೀಗ ಬಿರುಸಿನ ರಾಜಕೀಯ ಚಟುವಟಿಕೆಗಳು ಮುಂದುವರೆದಿವೆ. ಸುದೀರ್ಘ ಕಾಲ ಬಿಹಾರದ ಮೇಲೆ ಹಿಡಿತವಿಟ್ಟುಕೊಂಡು ಯಾವುದೇ ಪಕ್ಷವಾಗಿರಲಿ ಅದರೊಂದಿಗೆ ಕೈಜೋಡಿಸಿ ಸಿಎಂ ಸ್ಥಾನ ಗಿಟ್ಟಿಕೊಳ್ಳುತ್ತಿದ್ದ ಜೆಡಿಯು ನಾಯಕ ಹಾಗೂ ಸಿಎಂ ನಿತೀಶ್ ಕುಮಾರ್ ರಾಜ್ಯಸಭೆಯ ಸದಸ್ಯರಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ : ಖಮೇನಿ ಹತ್ಯೆ ಖಂಡಿಸಿದ ಭಾರತ : ಇರಾನ್ ರಾಯಬಾರಿ ಕಚೇರಿ ಬುಕ್‌ನಲ್ಲಿ ವಿಕ್ರಂ ಮಿಸ್ರಿ ಬರೆದಿದ್ದೇನು..?
ಈ ಮೂಲಕ ನಿತೀಶ್ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಕಳೆದ 2022ರಲ್ಲಿ ಈ ರೀತಿಯಾದ ಒಂದು ಆಸೆಯನ್ನು ನಿತೀಶ್ ಕುಮಾರ್ ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದರು. ಬಿಹಾರದ ಎರಡೂ ಸದನಗಳು ಹಾಗೂ ಸಂಸತ್ತಿನ ಉಭಯ ಸದನಗಳ ಸದಸ್ಯನಾಗಬೇಕೆಂಬುದು ನನ್ನ ಬಯಕೆಯಾಗಿದೆ. ಲೋಕಸಭೆಗಿಂತ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ಹೇಳಿಕೊಂಡಿದ್ದರು. ಹೀಗಾಗಿ ಬಿಹಾರ ಸಿಎಂ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ನಿತೀಶ್ ಜೊತೆಗೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ನಬಿನ್ ಕೂಡ ರಾಜ್ಯಸಭೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಬಹುದಿನಗಳ ಕನಸು ಈಡೇರಿಸಿಕೊಳ್ಳುವತ್ತ ಬಿಜೆಪಿ ನಾಯಕರು..
ಇನ್ನೂ 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಸ್ವಂತ ಬಲದ ಸರ್ಕಾರ ರಚಿಸಿ, ಬಿಜೆಪಿಯ ಮುಖ್ಯಮಂತ್ರಿಯ ಆಯ್ಕೆ ಮಾಡಬೇಕೆಂಬ ಕಮಲ ಕಲಿಗಳ ಬಹುದಿನಗಳ ಕನಸು ಕನಸಾಗಲಿದೆ. ಅದರ ಈಡೇರಿಕೆಗಾಗಿ ರಾಜ್ಯಸಭೆಗೆ ಸ್ಫರ್ಧಿಸುವ ಮೂಲಕ ಖುದ್ದು ನಿತೀಶ್ ಕುಮಾರ್ ಅವರೇ ದಾರಿ ಮಾಡಿಕೊಟ್ಟಂತಾಗಿದೆ. ಹಾಲಿ ಸಿಎಂ ಆಗಿರುವ ನಿತೀಶ್ ಬಳಿಕ ಬಿಹಾರ, ಕಮಲ ನಾಯಕನ ಅಧಿಪತ್ಯಕ್ಕೆ ಒಳಪಡಲಿದೆ ಎಂಬುವುದು ಬಹುತೇಕ ನಿಶ್ಚಿತವಾಗಿದೆ.
ಬಿಜೆಪಿಗೆ ಸಿಎಂ ಪಟ್ಟ ಫಿಕ್ಸ್..!
ಈ ನಿಟ್ಟಿನಲ್ಲಿ ಜಾಣ ನಡೆ ಅನುಸರಿಸಿರುವ ಬಿಜೆಪಿ ನಾಯಕರು ಈಗಾಗಲೇ ಜೆಡಿಯು ಪಕ್ಷದಲ್ಲಿನ ಗೊಂದಲ ಬಗೆಹರಿಸಿ ಒಂದೊಂದಾಗಿ ಹೆಜ್ಜೆ ಇಡುತ್ತಿದ್ದಾರೆ. ಹೀಗಾಗಿ ಸದ್ಯದಲ್ಲೇ ನಿತೀಶ್ ಕುಮಾರ್ ತಮ್ಮ ಪದತ್ಯಾಗಕ್ಕೆ ಮುಂದಾಗುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿಗೆ ಮುಖ್ಯಮಂತ್ರಿ, ಜೆಡಿಯುಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಒಪ್ಪಂದವಾಗಿದೆ. ಅದರಲ್ಲೂ ಯಾವುದೇ ಬೇಸರ, ಅಸಮಾಧಾನವಿಲ್ಲದೆ ಮನಃಪೂರ್ವಕವಾಗಿಯೇ ನಿತೀಶ್ ಕುಮಾರ್ ಈ ನಿರ್ಧಾರಕ್ಕೆ ಒಪ್ಪಿರುವುದರ ಹಿಂದೆ ಬಲವಾದ ಕಾರಣವೂ ಇರುವುದನ್ನು ತಳ್ಳಿ ಹಾಕುವಂತಿಲ್ಲ.

ಕುಟುಂಬ ರಾಜಕೀಯದ ದಾಳಕ್ಕೆ ಮನಸೋತ ನಿತೀಶ್..
ಅಧಿಕಾರಕ್ಕಾಗಿ ಯಾರೊಂದಿಗಾದರೂ ಮೈತ್ರಿ ಮಾಡಿಕೊಳ್ಳುತ್ತಿದ್ದ, ಪಲ್ಟು ರಾಮ್ (ಉಲ್ಟಾ ಹೊಡೆಯುವುದು ) ಎಂಬ ಖ್ಯಾತಿಯನ್ನು ಪಡೆದಿದ್ದ ನಿತೀಶ್ ಕುಮಾರ್ ಮನಗೆಲ್ಲುವಲ್ಲಿ ಬಿಜೆಪಿ ನಾಯಕರು ಯಶಸ್ವಯಾಗಿದ್ದಾರೆ. ಅದಕ್ಕೆ ಕಾರಣ, ಬಿಜೆಪಿ ನಾಯಕರು ಉರುಳಿಸಿರುವ ಕುಟುಂಬ ರಾಜಕೀಯದ ದಾಳ, ನಿತೀಶ್ ಕುಮಾರ್ ಪುತ್ರ ನಿಶಾಂತ್‌ಗೆ ಬಿಹಾರ ಸರ್ಕಾರದಲ್ಲಿ ಡಿಸಿಎಂ ಪಟ್ಟ ಕಟ್ಟುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಹಾಲಿ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ, ಸಚಿವ ದಿಲೀಪ್ ಕುಮಾರ್ ಜೈಸ್ವಾಲ್ ಹಾಗೂ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, ಇವರಲ್ಲಿ ಯಾರಾದರು ಒಬ್ಬರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಇನ್ನೂ ಸಿಎಂ ರೇಸ್‌ನಲ್ಲಿರುವ ಈ ಮೂವರು ಬಿಹಾರದ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಗಮನಾರ್ಹ
ಇನ್ನೂ ಈ ಎಲ್ಲ ರಾಜಕೀಯ ತಂತ್ರಗಾರಿಕೆಗಳಿಂದ ಬಿಜೆಪಿ ತನ್ನ ಪಕ್ಷಕ್ಕೆ ಅಹಿಂದ ಸಮುದಾಯವೇ ಅಧಿಕವಾಗಿರುವ ಬಿಹಾರದ ಮುಖ್ಯಮಂತ್ರಿ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಎಲ್ಲ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಹಾರ ಸೇರಿದಂತೆ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದ್ದು, ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ.






