ರಾಜ್ಯದ ಜನತೆ ಅತ್ಯಂತ ಕುತೂಹಲದಿಂದ ಕಾಣುತ್ತಿದ್ದ ರಾಜ್ಯ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ . ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆಯಲಿದೆ ಎಂದು ಘೋಷಿಸಿದ್ದಾರೆ, ಮೇ 13ರಂದು ರಾಜ್ಯ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ವಾಗಿದೆ. ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆಗೆ ಕೊನೆಯ ದಿನಾಂಕವಾಗಿದೆ, ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್, 2023ರ ಮೇಲ 24ರಂದು ಕರ್ನಾಟಕದ 15ನೇ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ, ಹೀಗಾಗಿ ನಾವು ಮೇ 23ರ ಒಳಗಾಗಿ ಹೊಸ ಸರ್ಕಾರವನ್ನು ರಚನೆ ಮಾಡೋಕೆ ಅವಕಾಶ ಮಾಡಿಕೊಡಬೇಕಾಗಿದೆ. ಪ್ರಾಕೃತಿಕವಾಗಿ ವೈವಿಧ್ಯವನ್ನು ಹೊಂದಿರುವಂತಹ ಕರ್ನಾಟಕಕ್ಕೆ ನಾವು ಒಂದೇ ಹಂತದಲ್ಲಿ ಚುನಾವಣೆ ಮಾಡಲು ನಿರ್ಧರಿಸಿದ್ದೇವೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳಲಿದೆ. ಈ ಬಾರಿ ವಿಶೇಷ ಎಂಬಂತೆ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡೋಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 5 ಕೋಟಿ 21 ಲಕ್ಷ ಮತದಾರರಿದ್ದು. ಇವರಲ್ಲಿ ಪುರುಷ ಮತದಾರರ ಸಂಖ್ಯೆ 2 ಕೋಟಿ 62 ಲಕ್ಷ ಹಾಗೂ ಮಹಿಳಾ ಮತದಾರರ ಸಂಖ್ಯೆ 2 ಕೋಟಿ 59 ಲಕ್ಷ ಇದೆ. 4699 ತೃತೀಯ ಲಿಂಗಿ ಮತದಾರರು ಇದ್ದಾರೆ ಹಾಗೂ 12.11 ಲಕ್ಷ ಯುವ ಮತದಾರರು ಇದ್ದಾರೆ. ರಾಜ್ಯದಲ್ಲಿ ಜೇನುಕುರುಬ ಮತ್ತು ಕಾಡುಕುರುಬ ಎಂಬ ಎರಡು ಜನಾಂಗಕ್ಕೆ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಲಾಗುತ್ತೆ ಎಂದು ಚುನಾವಣಾ ಆಯೋಗ ತಿಳಿಸಿದೆ.