ಬೀದರ್: ನೆರೆಯ ತೆಲಂಗಾಣದ ಧಾರೂರಿನಲ್ಲಿ ನಡೆಯಲಿರುವ ಜಾತ್ರೆ ಪ್ರಯುಕ್ತ ನವೆಂಬರ್ 12 ರಿಂದ 17 ರ ವರೆಗೆ ಬೀದರ್‍ನಿಂದ ಧಾರೂರಿಗೆ ವಿಶೇಷ ಬಸ್ ಓಡಿಸಬೇಕು ಎಂದು ಇಂಡಿಯನ್ ಕಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ಜಿಲ್ಲಾ ಘಟಕ ಆಗ್ರಹಿಸಿದೆ.
ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.ಜಾತ್ರೆಗೆ ತೆರಳುವ ಕ್ರೈಸ್ತ ಸಮುದಾಯದವರಿಗೆ ಅನುಕೂಲ ಮಾಡಿಕೊಡಲು 50 ಕ್ಕೂ ಹೆಚ್ಚು ಪ್ರಯಾಣಿಕರಿರುವ ಸ್ಥಳದಿಂದಲೇ ಬಸ್ ವ್ಯವಸ್ಥೆ ಮಾಡಬೇಕು ಎಂದು ಪ್ರದೀಪಕುಮಾರ್ ಬೇಡಿಕೆ ಮಂಡಿಸಿದರು.
ಇದಕ್ಕೆ ಸ್ಪಂದಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿ ವಿಶೇಷ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು.ಅಸೋಸಿಯೇಷನ್ ಪದಾಧಿಕಾರಿಗಳು ಬೀದರ್ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಹಾಗೂ ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕರಿಗೂ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಬೀದರ್‍ನಿಂದ ಧಾರೂರು ಮಾರ್ಗವಾಗಿ ಹೋಗುವ ಎಲ್ಲ ರೈಲುಗಳನ್ನು ಧಾರೂರಿನಲ್ಲಿ ನಿಲುಗಡೆ ಮಾಡಬೇಕು. ನವೆಂಬರ್ 15 ರಿಂದ 17 ರ ವರೆಗೆ ಬೀದರ್‍ನ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಣಿ ದಿಲೀಪಕುಮಾರ, ಪ್ರಮುಖರಾದ ಸಾಲೋಮನ್ ಡಿ.ಕೆ, ರಾಜಕುಮಾರ ಭೂಸ್ಸಾ, ದೇವದಾಸ ಚಿದ್ರಿ, ಮಿಥುನ್ ಸರ್ಸಿನೋರ್, ಸ್ಟೇಫನ್, ಸುಮಂತ ಸಾಧು, ಇಮ್ಯಾನುವೆಲ್, ಸುಧಾಕರ್ ಮತ್ತಿತರರು ಇದ್ದರು.