ಬೀದರ್:ಸುಳ್ಳು ಜಾತಿ ಪ್ರಮಾಣ ಪತ್ರಗಳು ಐದು ನಿಮಿಷಗಳಲ್ಲಿ ಸಿದ್ಧವಾಗುತ್ತಿದ್ದು, ರದ್ದತ್ತಿಗಾಗಿ ವರ್ಷಗಳು ಹೋರಾಟ ನಡೆಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಅಧಿಕಾರಿಗಳ ಕಾರ್ಯವೈಖ್ಯರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
‘ಪರಿಶಿಷ್ಟ ಪಂಗಡಕ್ಕೆ ಸೇರದವರಿಗೆ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿದ ತಹಶೀಲ್ದಾರ್ ಮಂಜುನಾಥ ಪಂಚಾಳ್ ಅವರನ್ನು ತಕ್ಷಣ ಅಮಾನತು ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ವಳಖಿಂಡಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,’ಈ ಹಿಂದೆ ಮಂಜುನಾಥ ಪಂಚಾಳ್ ಅವರು ಹುಮನಾಬಾದ್ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಕಲಬುರಗಿ ಮೂಲದ ರೇವಣಸಿದ್ದಪ್ಪ ಪೂಜಾರಿ ಎಂಬುವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿದ್ದಾರೆ’ ಎಂದು ದೂರಿದರು.
‘ಗುತ್ತಿಗೆದಾರರಾಗಿರುವ ರೇವಣಸಿದ್ದಪ್ಪ ಪೂಜಾರಿ ಹಾಗೂ ತಹಶೀಲ್ದಾರ್ ಮಂಜುನಾಥ ಪಂಚಾಳ್ ಗೆಳೆಯರಾಗಿದ್ದಾರೆ. ಹೀಗಾಗಿ ತಹಶೀಲ್ದಾರ್ ಅವರು ಹೇಳಿದಂತೆ ರೇವಣಸಿದ್ದಪ್ಪ ಪೂಜಾರಿ ನಕಲಿ ದಾಖಲೆ ಸೃಷ್ಟಿ.
ಮಾಡಿ ಕಲಬುರಗಿಯ ಆಳಂದ ಕಾಲೊನಿಯ ನಿವಾಸಿಯಾದ್ದರೂ ಹುಮನಾಬಾದ್ ತಾಲ್ಲೂಕಿನ ಕಠಳ್ಳಿ ಗ್ರಾಮದ ನಿವಾಸಿ ಎಂದು ಸುಳ್ಳು ಹೇಳಿ ಸರ್ಕಾರಕ್ಕೆ ಮೋಸ ಮಾಡಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ’ ಎಂದು ಆರೋಪಿಸಿದರು.
ತಹಶೀಲ್ದಾರ್ ಮಂಜುನಾಥ ಪಂಚಾಳ್ ಅವರು ಸದ್ಯ ಚಿಟಗುಪ್ಪ ತಾಲ್ಲೂಕಿನ ಗ್ರೇಡ್ -1 ತಹಶೀಲ್ದಾರ್‌ರಾಗಿದ್ದಾರೆ.ಅವರನ್ನು ಅಮಾನತು ಮಾಡಬೇಕು.ಪಂಚಾಳ ಹಾಗೂ ರೇವಣಸಿದ್ದಪ್ಪ ಪೂಜಾರಿ ಅವರ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.