ಬೀದರ್: ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಸತಿ ನಿಲಯದ ಮೇಲ್ವಿಚಾರಕರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಔರಾದ್ ತಾಲ್ಲೂಕಿನ ಸಂತಪುರ್ ನಲ್ಲಿ ನಡೆದಿದೆ.
ಮೇಲ್ವಿಚಾರಕ ಶಿವಕುಮಾರ್ ಮತ್ತು ಮುಖ್ಯೋಪಾಧ್ಯಾಯ ಭಗವಂತ ಕಾಂಬಳೆ ಸೇರಿ ಒಬ್ಬ ವಿದ್ಯಾರ್ಥಿಯ ಬೆನ್ನಿನ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದರೆ, ಇನ್ನೊಬ್ಬ ವಿದ್ಯಾರ್ಥಿಯ ಕೈ ಮೇಲೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯನ್ನು ಖಂಡಿಸಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ನಮಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿದ್ದಾರೆ.
ಪೌಷ್ಠಿಕಾಂಶವಿಲ್ಲದ ಆಹಾರ ನೀಡಲಾಗುತ್ತಿದ್ದು, ಆಹಾರದಲ್ಲಿ ಹುಳಗಳು ಸಿಗುತ್ತಿರುವುದನ್ನು ಪ್ರಶ್ನೆ ಮಾಡಿದರೆ, ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಯಾಕೆ ಹಲ್ಲೆ ಮಾಡಿದ್ದೀರಿ ಎಂದು ಕೇಳಿದರೆ ವರ್ಗಾವಣೆ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ.ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ ತೆಗೆದುಕೊಂಡು ಎಲ್ಲಿಗೆ ಹೋಗಬೇಕು ಎಂದು ಪೋಷಕರು ಶಾಲಾ ಶಿಕ್ಷಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಕ್ಕಳ ಮೇಲೆ ಹಲ್ಲೆ ಮಾಡಿದ ಇಬ್ಬರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.